Friday 27 July, 2007

ಇಣುಕಿ ನೋಡೋಣ

ಮೋಟುಗೋಡೆ ಓದಿದ ಮೇಲೆ ನೀವುಗಳು ಖಂಡಿತವಾಗಿಯೂ ಉಲ್ಲಸಿತರಾಗುತ್ತೀರ.
ಈ ಬ್ಲಾಗಿಗೆ ಹೆಚ್ಚಿನ ಪೀಠಿಕೆ ಬೇಕಿಲ್ಲ ಓದಿ ನೋಡಿ.

ಮೋಟು ಗೋಡೆ ಇಣುಕಲು ಇಲ್ಲಿ ಕ್ಲಿಕ್ಕಿಸಿ

ಬಾಗಿಲಿಂದಾಚೆ...

ಅಂತರ್ಜಾಲದಲ್ಲಿ ವಿಹರಿಸುತ್ತಿದ್ದಾಗ ದೊರೆತದ್ದು ಇದು. ಶ್ರೀ.ವಸುದೇಂಧ್ರರವರ 'ಬಾಗಿಲಿಂದಾಚೆ ಪೊಗದಿರೆಲೋ ರಂಗ' ಎಂಬ ಈ ಕತೆಯನ್ನೋಮ್ಮೆ ಓದಿ. ಇದನ್ನು ಓದಿದ ಮೇಲೆ ನನಗೆ ಅನ್ನಿಸಿದ್ದು ಇದು...

ನಾನು ೫ನೇ ಕ್ಲಾಸಿನಲ್ಲಿ ನಮ್ಮ ದೊಡ್ಡಮ್ಮನ ಮನೆಯಿಂದ ಒಬ್ಬನೆ ವಾಪಸ್ ಬಂದಿದ್ದೆ. ನಾನು ಮನೆ ತಲುಪಿದಾಗ ನಮ್ಮ ಕೆಳಗಿನ ಮನೆ ಆಂಟಿ ನಮ್ಮಮ್ಮನ ಹತ್ರ ಮಾತಾಡುತಿದ್ರು. ಅವರಿಗೆ ನಾನು ಒಬ್ಬನೆ ಬಸ್ಸಿನಲ್ಲಿ ಬಂದೆ ಅಂತ ನಂಬೊಕೆ ಸಾದ್ಯಾನೇ ಆಗ್ತಿರಲಿಲ್ಲ. ಕಾರಣ - ಅದರ ಹಿಂದಿನ ವಾರ ೧೨ನೇ ತರಗತಿಯಲ್ಲಿ ಓದುತಿದ್ದ ಅವರ ಮಗನ್ನು ಅವನ ಚಿಕ್ಕಮ್ಮ ಬಸ್ಸಿನಲ್ಲಿ ಕಳಿಸಿ ನಂತರ ಅವನ ಕ್ಷೇಮಕ್ಕೆ ಹೆದರಿ ಹಿಂದಿನ ಬಸ್ಸಿನಲ್ಲೇ ಬಂದಿದ್ದರು.
ನಾನು ರಜಾ ದಿನಗಳಲ್ಲಿ ಕಥೆ ಪುಸ್ತಕಗಳನ್ನ ಓದುವುದನ್ನ ನೊಡಿ ಅವರ ಮಕ್ಕಳಿಗೆ ನೀವು ಯಾಕೆ ಓದಲ್ಲ ಎಂದು ತಾಕೀತು ಮಾಡುತಿದ್ದ ತಾಯಿಯರ ಮಧ್ಯೆ ನನ್ನ ಬಾಲ್ಯವನ್ನ ಅದರಂತೆಯ ಬಿಟ್ಟ ನನ್ನ ತಂದೆ ತಾಯಿಯನ್ನು ಅಣ್ಣಂದಿರನ್ನು ನೆನೆಸಿಕೊಂಡೆ. ವಸುಧೇಂದ್ರರ ಕತೆ ಓದಿ ಸಂತೋಷ ಆಯಿತು.

ಕತೆ ಓದುವುದಕ್ಕೆ ಇಲ್ಲಿ ಕ್ಲಿಕ್ಕಿಸಿ.

Tuesday 24 July, 2007

ಚಿಕ್ಕವನು

ಇವನ ಹೆಸರು ಜಯಂತ ಎಂದಿದ್ದರೂ ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವನಾಗಿದ್ದ ಕಾರಣ ಎಲ್ಲರೂ ಇವನನ್ನು ಚಿಕ್ಕವನೇ, ಚಿಕ್ಕವನೇ ಎಂದೇ ಕರೆಯುತಿದ್ದರು. ಬರು ಬರುತ್ತಾ ಚಿಕ್ಕವನಾದ ಜಯಂತನ ಹೆಸರು ಚಿಕ್ಕದಾಗುತ್ತಾ 'ಚಿಕ್ಕ' ಎನ್ನುವಲ್ಲಿಗೆ ನಿಂತಿತ್ತು. ಮಳೆಗಾಲವಾದ್ದರಿಂದ ಚಿಕ್ಕನ ಅಮ್ಮನಾದ ವಿಶಾಲಕ್ಷಮ್ಮನವರು ಇವನನ್ನು ಹೊರಗೆ ಆಡಲು ಹೊಗಲು ಬಿಡದೆ, ಓದುವುದಕ್ಕೆ ಕೂರಿಸಿದ್ದರು. ಚಿಕ್ಕ, ಗೆಳೆಯರೊಂದಿಗೆ ಹೊರಗೆ ಆಡಲು ಹೊದನೆಂದರೆ ಸಂಜೆ ಏಳರ ಮುಂಚೆ ತಿರುಗಿ ಬಂದವನಲ್ಲ. ಅದರಲ್ಲೂ ಮಳೆಯಿಂದಾಗಿ ತನ್ನ ಶನಿವಾರ ಮಧ್ಯಾಹ್ನದ ವಾಲಿಬಾಲ್ ಮ್ಯಾಚ್ ತಪಿದ್ದಕ್ಕೆ ಮಳೆಯ ಮೇಲೂ ಹಾಗೂ ಶಾಲೆಯಿಂದ ಬಂದು ಊಟವಾದೊಡನೆ ಓದಲು ಕೂರಿಸಿದ್ದ ಅಮ್ಮನ ಮೇಲೂ ಸಿಟ್ಟಾಗಿದ್ದ. ಚಿಕ್ಕ 'ಪುರದ ಪುಣ್ಯಂ ಪುರುಷ ರೂಪಿಂದೆ ಪೊಗುತಿದೆ' ಪದ್ಯ ಓದುತಿದ್ದಾಗ ಅಜ್ಜ, ಕಾಲೇಜಿಗೆ ಹೊಗುವ ತನ್ನ ಹಿರಿಯ ಮೊಮ್ಮಗನ ಕೈಯಲ್ಲಿ ತರಿಸಿಕೊಂಡು ಬಿ.ಪಿ.ಎಲ್ 2-ಇನ್-1 ನಲ್ಲಿ ಹಾಕಿದ್ದ ಶ್ರೀ. ಗುರುರಾಜಲು ನಾಯ್ಡುರವರ ಭೀಮ ಜರಾಸಂಧ ಹರಿಕಥೆ ಕಿವಿ ಮೇಲೆ ಬಿದ್ದಿತ್ತು. ಹರಿಕಥೆ ಕೇಳುತಿದ್ದ ಅಜ್ಜನೆಡೆಗೆ ಮೆಲ್ಲನೆ ಸರಿದ ಚಿಕ್ಕ, ಪದ್ಯ ಓದುತಿದ್ದಂತೆ ನಟಿಸುತಿದ್ದರೂ ಕಿವಿ ಮತ್ತು ಮನಸ್ಸೆಲ್ಲಾ ಭೀಮ ಜರಾಸಂದರ ಯುದ್ದದಲ್ಲೇ ಮುಳುಗಿ ಹೊಗಿದ್ದವು.

ಗುರುರಾಜುಲು ನಾಯ್ಡುರವರ ಕಂಠ ಸಿರಿಯಿಂದ ಜೊಗುಳದಂತೆ ಹರಿಯುತ್ತಿದ್ದ ಹರಿಕಥೆಯ ಮದ್ಯದಲ್ಲಿ, ಧುತ್ತನೆ ಜೋರಾದ ಹಿಮ್ಮೇಳದೊಂದಿಗೆ 'ಮೆರೆವ ಪುರದೊಳಗೆ ಪಿರಿಯವನೆನಿಸಿದ ಹರಿಯ ಮಹಿಮೆಯನು ಪಾಡಿ ಪೊಗಳಲು...' ಎಂದು ಶುರುವಾದ ಹಾಡಿಗೆ ಚಿಕ್ಕನು ಅಡುಗೆ ಮನೆಯಲ್ಲಿಟ್ಟ ಬಾಟಲಿಯಿಂದ ಕದ್ದು ಹಾರ್ಲಿಕ್ಸ್ ತಿನ್ನುತ್ತಿದ್ದಾಗ ಹಿಂದಿನಿಂದ ಅಮ್ಮನ ಧ್ವನಿ ಕೇಳಿದಾಗ ನಡುಗುವಂತೆ ನಡುಗಿದ. ಚಿಕ್ಕನು ನಡುಗಿದಾಗ ಅವನೆಡೆಗೆ ನೋಡಿದ ಅಜ್ಜ, ಚಿಕ್ಕನನ್ನು ಅವನೊಟ್ಟಿಗೆ ಮಂಚದ ಮೇಲೆ ಬಂದು ಕೂರುವಂತೆ ಸನ್ನೆ ಮಾಡಿ ಕರೆದ. ಪುರದ ಪುಣ್ಯವನ್ನು ಅಲ್ಲೇ ಬಿಟ್ಟ ಚಿಕ್ಕ, ಮೆಲ್ಲನೆ ಎದ್ದು ಅಜ್ಜನ ಶಾಲಿನೊಳಗೆ ತೂರಿಕೊಂಡ. ಕಿವಿಯೆಲ್ಲಾ ಹರಿಕಥೆಯ ಮೇಲಿದ್ದರೂ ದೃಷ್ಟಿ ಮಾತ್ರ ಅಮ್ಮ ಏಲ್ಲಿ ಬಂದು ಬಿಡುವಳೋ ಎಂಬ ಆತಂಕದಿಂದ ಬಾಗಿಲಿನ ಮೇಲೇ ನೆಟ್ಟಿದ್ದವು. ಗುರುರಾಜಲುರವರ ಸ್ವರದೊಳಗೆ ಲೀನವಾದ ಚಿಕ್ಕ ಅಮ್ಮನನ್ನಷ್ಟೇ ಅಲ್ಲದೇ ಪಕ್ಕದಲ್ಲಿದ್ದ ಅಜ್ಜನನ್ನೂ ಮರೆತಿದ್ದ.

ಯಾಂತ್ರಿಕವಾಗಿ ಬಾಗಿಲಿನೆಡೆಗೆ ನೆಟ್ಟಿದ್ದ ದೃಷ್ಟಿ ಈಗ ಗೊಡೆಯ ಮೇಲೆ ಮಳೆಯ ನೀರಿನಿಂದಾಗಿದ್ದ ಕಲೆಗಳೆಡೆಗೆ ಹೊರಳಿತ್ತು. ದಕ್ಷಿಣದ ಕಡೆಗಿದ್ದ ಗೋಡೆಗೆ ಒರಗಿ ಕುಳಿತಿದ್ದ ಚಿಕ್ಕನ ಎದುರಿಗೆ ಉತ್ತರಾಭಿಮುಖವಾಗಿ ಬಾಗಿಲಿದ್ದರೆ ಅದರ ಪಕ್ಕದಲ್ಲಿ ಪಶ್ಚಿಮಾಭಿಮುಖವಾಗಿ ಗೋಡೆ ಇತ್ತು. ತೀರ ಸಾಗರಗಳಿಂದ ಬಂದು ಅಪ್ಪಳಿಸುವ ಮಳೆಗೆ ಮೈಕೊಟ್ಟು ನೆನೆದು ಮತ್ತೆ ಬಿಸಿಲಲ್ಲಿ ಒಣಗಿ, ಕಳೆದ ಬೇಸಿಗೆಯಲ್ಲಷ್ಟೇ ಸುಣ್ಣ ಕಂಡಿದ್ದ ಗೋಡೆಯ ಮೇಲೆಲ್ಲಾ ಕಪ್ಪು ಕಲೆಗಳ ಚಿತ್ತಾರಗಳಾಗಿದ್ದವು. ಇವುಗಳನ್ನೇ ದಿಟ್ಟಿಸುತ್ತಿದ್ದ ಚಿಕ್ಕನಿಗೆ ಕೆಲವು ಕಲೆಗಳು ಹಾರುವ ಹಕ್ಕಿಗಳಂತೆ ಕಂಡರೆ ಕೆಲವು ಬಾಯಿ ತೆಗೆದ ಆಕಳಿನ ರುಂಡದಂತೆ ಕಂಡವು. ಕೆಲವಕ್ಕೆ ಕೊಂಬು ನೆಟ್ಟಗಿದ್ದರೆ ಕೆಲವಕ್ಕೆ ಗಿಡ್ಡ ಕೊಂಬು, ಇನ್ನೂ ಕೆಲವಕ್ಕೆ ಕೊಂಬೇ ಇಲ್ಲವೆಂದು ಗಮನಿಸಿದ. ಇವುಗಳ ಮೇಲೆಲ್ಲೋ ಒಂದು ಆಕೃತಿ ಕೊಳಲು ಹಿಡಿದು ದನ ಮೇಯಿಸುತ್ತಿರುವಂತೆ ಕಂಡಿತು. ಅವುಗಳ ಬದಿಯಲ್ಲೇ ಭೀಮ ಜರಾಸಂದರಂತೆ ಎರಡು ದೊಡ್ಡ ದೇಹಗಳು ಕಾಣಿಸಿದವು. ಅಜ್ಜನ 2-ಇನ್-1 ನಿಂದ ಹೊರಡುತಿದ್ದ ಹರಿಕಥೆ ಈಗ ಚಿಕ್ಕನಿಗೆ ತಮ್ಮ ಮನೆಯ ಗೋಡೆಯ ಮೇಲೆ ನಡೆಯುತ್ತಿರುವಂತೆ ಭಾಸವಾಗುತಿತ್ತು. ಗೋಡೆಯಿಂದ ಹೊರಬಂದ ಭೀಮ ಜರಾಸಂದರಿಬ್ಬರೂ ತಮ್ಮ ನಡುಮನೆಯಲ್ಲೇ ಮಲ್ಲಯುದ್ಧ ಮಾಡುತ್ತಿರುವಂತೆ ತೋರಿತು. ನೋಡು ನೋಡುತ್ತಿದ್ದಂತೆ ಭೀಮ ಜರಾಸಂದನನ್ನು ಇಬ್ಭಾಗವಾಗಿ ಸಿಗಿದು ಹಾಕಿ ಗೋಡೆಯೊಳಗಿದ್ದ ಕೃಷ್ಣನೆಡೆಗೆ ನೊಡಿದ. ಅಷ್ಟರಲ್ಲಿ ಇಬ್ಬಾಗವಾಗೊದ್ದ ಜರಾಸಂದನ ದೇಹ ಮತ್ತೆ ಕೂಡಿಕೊಳ್ಳುವುದನ್ನು ನೋಡತಿದ್ದ ಚಿಕ್ಕನು ಸಣ್ಣಗೆ ಬೆದರಿ ಅಜ್ಜನ ತೋಳಿನೊಳಗೆ ಕೈಹಾಕಿ ಗಟ್ಟಿಯಾಗಿ ಹಿಡಿದುಕೊಂಡ. ಕೃಷ್ಣನು ಧರ್ಬೆಯನ್ನು ಸಿಗಿದು ವಿರುದ್ಧ ದಿಕ್ಕಿಗೆ ಎಸೆದು ತೋರಿಸಿ ಕೊಟ್ಟಂತೆಯೇ ಭೀಮ ಜರಾಸಂದನನ್ನು ಸಿಗಿದು ದೇಹಗಳನ್ನು ವಿರುದ್ಧ ದಿಕ್ಕಿನಲ್ಲಿ ಎಸೆದ.

ಜರಾಸಂದನ ದೇಹಗಳು ವಿರುದ್ದ ದಿಕ್ಕಿನಿಂದ ಒಂದಕ್ಕೋಂದು ಹತ್ತಿರ ಬಂದು ಕೂಡಿಕೊಳ್ಳಲಾಗದೆ ಪ್ರಾಣವನ್ನು ಬಿಡುತ್ತಿರುವಾಗ ವಿಷಾಲಾಕ್ಷಮ್ಮನವರ ಆಗಮನವಾಯಿತು. ಮಗ ಓದುತ್ತಾ ಇದ್ದಾನೆ ಎಂದು ಭಾವಿಸಿ ಅವನಿಗೆ ತಿನ್ನಲು ಮರಳಿನಲ್ಲಿ ಹುರಿದ ಕಡಲೇ ಕಾಯಿ ತಂದ ವಿಷಾಲಾಕ್ಷಮ್ಮನವರು ಮಗ ಪುಸ್ತಕ ಕೆಳಗೆ ಬಿಟ್ಟು ಅಜ್ಜನೊಡನೆ ಬೆಚ್ಚಗೆ ಹರಿಕಥೆ ಕೇಳುತ್ತಿರುವುದನ್ನು ನೋಡಿ ಮಗನನ್ನು ಕಣ್ಣಿನಲ್ಲೇ ಗದರಿಕೊಂಡರು. ನಮ್ಮ ಚಿಕ್ಕನಿಗೆ ಅವನ ಅಜ್ಜನದೇ ಮುದ್ದು, ಹೊದಸಾರಿ ಇವರು ಚಿಕ್ಕನ ಪರೀಕ್ಷೆಯ ವೇಳೆಯಲ್ಲಿ ಯಾವಾಗಲೂ ಟಿ.ವಿ. ಹಾಕುತ್ತಿದ್ದುದರಿಂದಲೆ ಚಿಕ್ಕನಿಗೆ ಡಿಸ್ಟಿಂಕ್ಷನ್ ಬರಲಾಗಲಿಲ್ಲ ಎಂದು ಕರುಬಿದರು. ಅಜ್ಜನಿಗೆ ಏನೂ ಹೇಳಲಾಗದೆ ನಡುಮನೆಯಿಂದ ಜಗುಲಿಗೆ ನಡೆದು ಮನೆಯ ಮೈನ್ ಸ್ವಿಚ್ ಆರಿಸಿ ಬಿಟ್ಟರು. ಹರಿಕಥೆಯ ಮದ್ಯದಲ್ಲೇ ಕರೆಂಟ್ ಹೋದದ್ದರಿಂದ ಅಜ್ಜನೇ 'ಮಂಗಳವಾಗಲಿ ಸರ್ವರಿಗೆ ಶುಭಮಂಗಳವಾಗಲಿ ...' ಎಂದು ಮಂಗಳವಾಡಿ ಮುಗಿಸಿದರು.

Monday 23 July, 2007

ಚದುರಂಗ... ಇಲ್ಲ ರಣರಂಗ?

ಮಳೆಗಾಲದ ಒಂದು ಶನಿವಾರ. ಜುಲೈ ತಿಂಗಳು ಶುರುವಾದರೂ ಬೆಂಗಳೂರಿನಲ್ಲಿ ಮಳೆ ಸರಿಯಾಗಿ ಆಗಿಲ್ಲ. ಮೋಡಗಳ ಆಟ ದಿನವೂ ಇದ್ದದ್ದೆ, ಮಳೆ ಮಾತ್ರ ಇಲ್ಲ! ಬೆಳಗಿನ ಚುಮು ಚುಮು ಚಳಿಯಲ್ಲಿ ಹೊದ್ದು ಮಲಗಿದರೆ ಏಳುವುದೇ ಕಷ್ಟ, ಅದರಲ್ಲೂ ವೀಕೆಂಡ್ ಆದರಂತೂ ಮಲಗೋಕೆ ಯಾವ ಅಡ್ಡೀನು ಇರೊಲ್ಲ.
ಚೆನ್ನಾಗಿ ಮಲಗುವುದಕ್ಕೆ ರಂಗ ಸಜ್ಜಾಗಿತ್ತು. ಅಂತಹ ಶನಿವಾರದ ದಿನ ಬೆಳಿಗ್ಗೆ ಏಳಕ್ಕೇ ಫೊನಾಯಿಸಿದ ಶನಿರಾಯನಾರಪ್ಪ ಇದು ಎಂದು ಫೊನೆತ್ತಿದ್ದಾಗ, ದಿನದ ಪ್ಲಾನ್ ಕೇಳುತಿತ್ತು ಆ ತುದಿಯಲ್ಲಿ ಗೆಳೆಯನ ದ್ವನಿ. ಹಿಂದಿನ ದಿನ ಮೈಲ್ ಮಾಡಿ ಎಲ್ಲರಿಗೂ ಪ್ಲಾನ್ ಮಾಡೊಣ ಅಂದವನು ಇನ್ನೂ ಹಾಸಿಗೆ ಮೇಲೆ ಇದ್ದೆ. ಢಡಕ್ಕನೆ ಎದ್ದೆ, ೧೦ ಗಂಟೆಗೆ ಅವನ ಮನೆ ಹತ್ತಿರ ಸಿಗುತ್ತೇನೆ ಎಂದು ಹೇಳಿದೆ. ಚಿಕ್ಕನ ಗಾಡಿಯಲ್ಲಿ ಅರ್ದ ಬೆಂಗಳೂರು ನೊಡಲಿದ್ದೆವು ನಾವು. ಹತ್ತಕ್ಕೆ ನಮ್ಮ ಪ್ರಯಾಣ ಶುರುವಾದದ್ದು ವಿಜಯನಗರದಿಂದ. ಇಲ್ಲಿಂದ ಮಹಾಲಕ್ಷ್ಮೀ ಲೇಔಟಿನಲ್ಲಿ ಕರಿಯನ್ನು ಹತ್ತಿಸಿಕೊಂಡ್ವಿ. ಮುಂದೆ ಜೆ.ಸಿ.ನಗರದಲ್ಲಿ ಜಾನಕಿರಾಮ ಹತ್ತಿದಾಗ ಕಾರು ಪೂರ್ತಿಯಾಯಿತು.

ಹೆಬ್ಬಾಳದ ಜಾನಕಿರಾಮ ಕಳೆದವಾರ ತನ್ನ ೮೭ನೇ ಇಸವಿಯ ಯಮಹ ಬೈಕಿಗೆಂದು ಹೊಸ ಪೆಟ್ರೋಲ್ ಟ್ಯಾಂಕ್ ಕೊಂಡಿದ್ದ. ಶಿವಾಜಿ ನಗರದಲ್ಲಿ ೩೦೦ ರೂಪಾಯಿಗೆ ಕೊಂಡ ಟ್ಯಾಂಕಿಗೆ ಜೆ.ಸಿ.ನಗರದಲ್ಲಿ ೫೦೦ ರೂಪಾಯಿಯ ಬಣ್ಣ ಹೊಡೆಸುತ್ತಿದ್ದಕ್ಕೆ ಕರಿ ಅವನನ್ನು ಚೆನ್ನಾಗಿ ರೇಗಿಸುತಿದ್ದ. "ಏನೇ ಬಣ್ಣ ಹೊಡೆಸಿದರೂ ಮುದುಕಿಯಾದ ನಿನ್ನ ಬೈಕು ಹುಡುಗಿ ಆಗೊಲ್ಲ" ಎನ್ನುವುದು ಕರಿಯ ವಾದ. ಹೆಚ್ಚೆಸ್ಸಾರ್ ಲೇಔಟಿಗೆ ಹೊರಟಿದ್ದ ನಮಗೆ ಇವರಿಬ್ಬರ ಜಗಳದಿಂದಾಗಿ ಒಳ್ಳೆಯ ಟೈಮ್ ಪಾಸ್ ಆಗಿತ್ತು. ನಾವು ಜೆ.ಸಿ.ನಗರದಿಂದ ಹೆಚ್ಚೆಸ್ಸಾರ್ ಲೇಔಟಿಗೆ ಕ್ವೀನ್ಸ್ ರಸ್ತೆ, ಎಮ್.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೊರಮಂಗಲದ ಮೂಲಕ ಹಾದು ಹೊಗುವವರಿದ್ದೆವು.

ಎಲ್ಲೆಲ್ಲೂ ಟ್ರಾಫಿಕ್ ಇತ್ತು ಎಂದು ನಾನೇನು ಹೇಳ ಬೇಕಾಗಿಲ್ಲ. ಇದು ಇದ್ದದ್ದೇ, ಆದರೆ ನನ್ನ ಗಮನಕ್ಕೆ ಬಂದದ್ದು ಜನರ ತುರಾತುರಿ. ಯಾರೊಬ್ಬರೂ ಬೆರೆಯವರಿಗೆ ದಾರಿ ಬಿಟ್ಟು ಕೊಡರು. ರಸ್ತೆಯ ಮೇಲೆ ಒಂದೊಂದು ಇಂಚಿಗೂ ಜಗ್ಗಾಟ. ಎಲ್ಲರೂ ಯುದ್ಧದಲ್ಲಿನ ಸೈನಿಕರಂತೆ "holding the fort" ಅಂತ ಹೇಳುತ್ತಾರಲ್ಲ ಹಾಗೆ ಪ್ರತಿಯೊಂದು ಇಂಚನ್ನೂ ಬಿಟ್ಟು ಕೊಡದೆ ಮುನ್ನುಗ್ಗುವವರು.
ನಾವು ಹೊರಟಿದ್ದು ಹೆಚ್ಚೆಸ್ಸಾರಿಗಾದರೂ ನನ್ನ ಯೊಚನಾ ಲಹರಿ ಹೀಗೆ ಹೊರಟಿತ್ತು- ಇಡೀ ಟ್ರಾಫಿಕ್ ವ್ಯವಸ್ತೆಯನ್ನ ಯುದ್ದಕ್ಕೆ ಹೊಲಿಸಬಹುದು. ಬೈಕಿನವರು ಕಾಲಾಳುಗಳು -ಪದಾತಿದಳ ಅಂತಲೂ ಕರೆಯಬಹುದು. ಇವು ಎಲ್ಲಾ ಸಂದಿ ಗೊಂದಿಗಳಲ್ಲೂ ನುಗ್ಗುತ್ತವೆ, ಸಣ್ಣಪುಟ್ಟ ಗುಂಡಿಗಳನ್ನೆಲ್ಲಾ ಹಾರುತ್ತವೆ ಹಾಗು ಎಲ್ಲಾ ಸಿಗ್ನಲ್ ಗಳಲ್ಲೂ ಮುಂದಿನ ಸಾಲಿನಲ್ಲಿರುತ್ತವೆ. ಕಾಲ್ ಸೆಂಟರ್ ಕ್ಯಾಬ್ ಗಳದ್ದೇ ಒಂದು ಗುಂಪು ಇದೆ. ಟಾಟಾ ಸುಮೋ, ಕ್ವಾಲಿಸ್, ಟೆಂಪೊ ಟ್ರಾವೆಲ್ಲರ್ ಇವುಗಳನ್ನೆಲ್ಲ ಈ ಜಾತಿಗೆ ಸೇರಿಸ ಬಹುದು. ಕಾಲ್ ಸೆಂಟರ್ ಕ್ಯಾಬ್ ಮತ್ತು ಆಟೊಗಳು ಸೇರಿದರೆ ಅಶ್ವದಳ. ಇವು ಅಶ್ವದಳವೇ ಯಾಕೆ ಎಂದರೆ ರಸ್ತೆ ಮೇಲೆ ನೆಗೆಯುವ ಮತ್ತು ಕೆನೆಯುವ ಸಾಮರ್ಥ್ಯ ಇರುವುದು ಇವಕ್ಕೇ. ಇನ್ನು ಬಿ.ಎಮ್.ಟಿ.ಸಿ ಬಸ್ಸುಗಳಲ್ಲಿ ವೊಲ್ವೊ ಒಂದನ್ನ ಹೊರತುಪಡಿಸಿ ಉಳಿದೆಲ್ಲವನ್ನೂ ಒಂಟೆ ಸೈನ್ಯ ಎಂದು ಕರೆಯಬಹುದು. ಇವುಗಳು ಪೂರ್ತಿಯಾಗಿ ತುಂಬಿದ್ದಾಗ ಒಂದು ಕಡೆಗೆ ವಾಲಿಕೊಂಡು ಹೊಗೊ ದೃಶ್ಯ ಎಲ್ಲರಿಗೂ ಕಣ್ಣು ಕಟ್ಟಿದ ಹಾಗಿರಬೇಕು. ಭಾರದ ಸೆಳೆತಕ್ಕೆ ಚದುರಂಗದಾಟದಲ್ಲಿನ ಒಂಟೆಯ ನಡಿಗೆಯಂತೆಯೆ ಬಿ.ಎಮ್.ಟಿ.ಸಿ ಬಸ್ಸುಗಳ ನಡಿಗೆ ಒಂದು ದಿಕ್ಕಿಗೆ ವಾಲಿ ಕೊಂಡಿರುತ್ತದೆ. ರಸ್ತೆಯಲ್ಲಿ ಸುಂದರವಾಗಿ ಕಾಣೊ ಕಾರುಗಳು ಹೋಸ ಸಾರೋಟುಗಳಾದರೆ, ಹಳೆಯ ಮಾರುತಿ ಮತ್ತು ಫಿಯಟ್ ಕಾರುಗಳನ್ನ ಏನೇಂದು ಕರೆಯೊಣ? ಹಳೆಯ ಮತ್ತು ಹೊಸಬಗೆಯ ಲಾರಿಗಳೆಲ್ಲವೂ ಗಜದಳವಿದ್ದಂತೆ. ಈ ಟ್ರಾಫಿಕ್ ಸೈನ್ಯಕ್ಕೆ ಸೇನಾಧಿಪತಿ ಐರಾವತ. ಐರಾವತ - ವೊಲ್ವೊ ಬಸ್ಸು. ಈ ಬಸ್ಸಿನ ಗಾಂಭೀರ್ಯತೆ ಒಂದರಿಂದಲೇ ಇದಕ್ಕೆ ಸೇನಾಧಿಪತಿಯ ಸ್ಥಾನ ಕೊಡ ಬಹುದಾದರು ಇದರ ಗುಣಗಳು ಇನ್ನೂ ಇವೆ.

ಇದೆಲ್ಲಾ ಸೈನ್ಯವಾದರೆ ಯುದ್ದ ಎಲ್ಲಿ ಎನ್ನುವಿರ? ಯಾವುದೇ ನಾಲ್ಕು ರಸ್ತೆ ಕೂಡುವ ಜಾಗದಲ್ಲಿ ನೀವು ಯುದ್ದ ನೋಡ ಬಹುದು. ಸಿಗ್ನಲ್ ಹಾಳಾಗಿ ಪೋಲೀಸಿನವರೂ ಇಲ್ಲದಿದ್ದರೆ ಈ ಟ್ರಾಫಿಕ್ ಯುದ್ದವನ್ನು ಕುರುಕ್ಷೇತ್ರಕ್ಕೇ ಹೊಲಿಸಬಹುದು. ಸಿಲ್ಕ್ ಬೋರ್ಡ್, ನಾಗವರ ಸರ್ಕಲ್, ಮಾರತ ಹಳ್ಳಿ ಬ್ರಿಡ್ಜ್ ಹೀಗೆ ದಿನವೂ ಕುರುಕ್ಷೇತ್ರಗಳಾಗುವ ಜಾಗಗಳು ಬೆಂಗಳೂರಿನಲ್ಲಿ ಬಹಳಷ್ಟಿವೆ. ಪದಾತಿದಳವಾದ ಬೈಕು ಮತ್ತು ಅಶ್ವದಳ ಈ ಯುದ್ದದ್ದಲ್ಲಿ ಬಹು ಚಾಣಾಕ್ಷರು. ಆದರೂ ಸಾವು ನೋವುಗಳು ಹೆಚ್ಚಿಗೆ ಸಂಭವಿಸುವುದೂ ಈ ದಳದಲ್ಲೆ, ಅದರಲ್ಲೂ ಪದಾತಿದಳದಲ್ಲೇ ಹೆಚ್ಚು. -ಚಿಕ್ಕ ಧಢಕ್ಕನೆ ಬ್ರೇಕ್ ಹಾಕಿದಾಗ ನನ್ನ ಯೋಚನಾ ಲಹರಿಯಿಂದ ಹೊರಬಂದು ಇವನು ಬ್ರೇಕ್ ಹೊಡೆಯದಿದ್ದರೆ ಆಗುತಿದ್ದ ಅನಾಹುತದೆಡೆಗೆ ಮನ ಹರಿದಿತ್ತು.

Wednesday 11 July, 2007

ಮದುವೆ... ವಾದ್ಯ...

ಕಳೆದ ತಿಂಗಳು ಕೆಲಸದ ಮೇಲೆ ಕೆಲವು ದಿನಗಳಮಟ್ಟಿಗೆ ಕ್ಯಾಲಿಫೊರ್ನಿಯಕ್ಕೆ ಹೋಗಿದ್ದೆ. ಏರ್ ಪೊರ್ಟ್ನಲ್ಲಿ ಇಳಿದು ಹೊರಗೆ ಬರುವಾಗ ಸ್ನೇಹಿತ ಹೇಳಿದ- ನಾನು ಹೊದ ಸಾರಿ ಬಂದಾಗ ಒಬ್ಬ ಕ್ಯಾಬ್ ಡ್ರೈವರ್ ಸಿಕ್ಕಿದ್ದ ತುಂಬಾ ಚೆನ್ನಾಗಿ/ಸರಿಯಾಗಿ ಹೊಟೆಲ್ ತಲುಪಿಸಿದ. ಹೊರಗೆ ಬಂದರೆ ಹೊದಸಾರಿ ಸಿಕ್ಕ ಡ್ರೈವರ್ ಅಲ್ಲೆ ಹಾಜರ್ ಇದ್ದ. ಸರಿ ಚೆಸ್ಟರ್(ಡ್ರೈವರನ ಹೆಸರು) ಗಾಡಿನೆ ಹಿಡಿದ್ವಿ, ಸೌಕ್ಯವಾಗಿ ಹೊಟೆಲ್ ತಲುಪಿಕೊಂಡ್ವಿ. ನಮ್ಮ ಕಂಪನಿಯದೇ ಇನ್ನೊಂದು ತಂಡ ನಮಗಿಂತ ಒಂದು ದಿನ ಮುಂಚೆ ಬಂದು ಸೇರಿತ್ತು. ಅವರಿಗೂ ಚೆಸ್ಟರನೇ ಸವಾರಿ ಕೊಟ್ಟಿದ್ದ. ಅವ ನಮ್ಮಿಂದ ೨೦-೨೫ $ ಹೆಚ್ಚಿಗೆ ಕಿತ್ತಿದ್ದಾನೆ ಅಂತ ನಮ್ಮ ಅಲ್ಲಿಯ ದೇಸೀ ಸ್ನೇಹಿತರಿಂದ ಆಮೇಲೆ ತಿಳೀತು. ಅವನು ದಿನಾಲು ಭಾರತದಿಂದ ಹಾರೊ ಸಿಂಗಾಪುರ್ ಏರ್ಲೈನ್ಸ್ ಬಂದಿಳಿಯುವ ಹೊತ್ತಿಗೆ ಅಲ್ಲಿ ಇರೊ ಖ್ಹಾಯಂ ಗಿರಾಕಿ ಅಂತಲೂ ತಿಳಿತು! ಬೆಳ್ಳಗಿರೋದೆಲ್ಲ ಹಾಲಲ್ಲ ಅನ್ನೊ ಹಾಗೆ ಬೆಳ್ಳಗಿರೊರೆಲ್ಲ ಸಾಚಗಳಲ್ಲ ಅಂದುಕೊಂಡೆ. ಅಂದಹಾಗೆ ಬೆಳ್ಳಗಿರೊರೆಲ್ಲ ಸಾಚಗಳು ಅಂತ ನಾನೇನು ಅಂದುಕೊಂಡಿರಲಿಲ್ಲ... ಇರಲಿ ಬಿಡಿ ನಾನು ಅಮೇರಿಕ ತಲುಪಿದೆ ಅದು ಮುಖ್ಯ ಈಗ.

ನಾನು ಅಲ್ಲಿರುವಾಗ ಇಲ್ಲಿ, ದೇಶದಲ್ಲಿ ನಮ್ಮ ಅತ್ತೆಯ ಮಗನ ಮದುವೆ ನಡೀತಾಯಿತ್ತು. ನಮ್ಮಣ್ಣನಿಗೆ ಫೊನ್ ಹಾಯಿಸಿದೆ, ಹಿಮ್ಮೇಳದಲ್ಲಿ ಬ್ಯಾಂಡ್ ಸೆಟ್ಟಿನ ಸೌಂಡು. ತಟ್ಟಕ್ಕನೆ ಹೊಳೀತು... ಕರಿಯ ಐ ಲವ್ ಯು... ಕರುನಾಡ ಮೇಲಾಣೆ... ಹಾಡು ಇದು ಅಂತ. ಫೊನ್ ಮಾಡಿ ಆದ ಕೂಡಲೆ ಇನ್ಟರ್ನೆಟ್ ನಲ್ಲಿ ಈ ಹಾಡು ಕೇಳ್ಬೇಕು ಅಂದುಕೊಂಡೆ.
ನಮ್ಮಕಡೆ ಮದುವೆ, ರಾಜ್ಯೋತ್ಸವ, ಗಣಪತಿ ಹಬ್ಬ, ನಾಮಕರಣಗಳಲ್ಲಿ ಬ್ಯಾಂಡ್ ಸೆಟ್ಟು ಮತ್ತು ಮೈಕ್ ಸೆಟ್ಟು ಇವೆರಡೂ ಖಾತ್ರಿ ಆಗಿದ್ದಾವೆ. ಮದುವೆ ಸೆಟ್ ಆಗುತ್ತಿದ್ದ ಹಾಗೆ ಈ ಏರಡೂ ಸೆಟ್ಟುಗಳನ್ನ ಸೆಟ್ ಮಾಡಿಕೊಳ್ಳಬೇಕಾಗಿದೆ. ಮದುವೆ ಮಾಡಿಸೊ ಐನವರ ಹಾಗೆ ಇವೂ, ಮದುವೆಗೆ ಬೇಕೆ ಬೇಕಾಗಿವೆ. ಇದೆಲ್ಲ ಇವುಗಳ ತಾಂತ್ರಿಕ ಪ್ರಾಮುಖ್ಯತೆಗಳಾದರೆ ಇವುಗಳಿಂದ ಅಭಾಸ ಇಲ್ಲ ಮೊಜು ಏನಾದರು ಇರಬಹುದ?

ಕರಿಯ ಐ ಲವ್ ಯು... -ಬ್ಯಾಂಡ್ ಸೆಟ್ಟಿನವರು ಮದುಮಗ ಕಲ್ಯಾಣ ಮಂಟಪ ತಲುಪುತಿದ್ದಹಾಗೆ ಭಾರಿಸಿದರೆ, ಮದುಮಗ ನಿಜವಾಗಿಯೂ ಕಪ್ಪಗಿದ್ದರೆ, ಮದುವಣಗಿತ್ತಿ ಇಲ್ಲವೆ ಅವರ ಸ್ನೇಹಿತರು ನನ್ನ ಕೆಣಕಲಿಕ್ಕೆ ಈ ಹಾಡು ಭಾರಿಸಿಲಿಕ್ಕೆ ಹೇಳಿದ್ದರೇನೊ ಅಂತ ಅನ್ನಿಸಿದರೂ ಸಾಕು. ನಮ್ಮತ್ತೆಯ ಮಗ ಕಪ್ಪಗೇ ಇದ್ದಾನೆ, ಆದರೆ ಹೆಣ್ಣಿನ ಕಡೆಯವರು ಈ ಹಾಡು ಭಾರಿಸೊಕೆ ಹೆಳಿದ್ರೊ ಇಲ್ಲವೊ ಗೊತ್ತಿಲ್ಲ. ಬ್ಯಾಂಡ್ ಸೆಟ್ಟಿನವರು ಭಾರಿಸೊದು ಬರೀ ಸಿನಿಮಾ ಹಾಡುಗಳಾಗಿದ್ದಲ್ಲಿ "ಕರಿಯ ಐ ಲವ್ ಯು"ಗೆ ಪ್ರಥಮ ಸ್ಥಾನ ಕೊಡಬೇಕು, ಯಾಕೆ ಅಂದ್ರೆ ಅದು ಪ್ರಚಲಿತ. ಕೆಲವರು ಮುಂಗಾರು ಮಳೆಗೆ ಪ್ರಥಮ ಸ್ಥಾನ ಅನ್ನುಬಹುದು, ಇರಲಿ "ಕರಿಯ ಐ ಲವ್ ಯು"ಗೇ ಪ್ರಥಮ ಪ್ರಾಶಸ್ತ್ಯ ಕೊಡೋಣ. ಗಟ್ಟಿಮೇಳ ಅನ್ನುತಿದ್ದಹಾಗೆ ಗಟ್ಟಿಯಾಗಿ 'ಕರಿಯ ಐ ಲವ್ ಯು' ಭಾರಿಸಿದರೆ ಹೇಗಿರುತ್ತೆ. ಹಾಗಂತ ಮದುವೆಗೆ ಹೊಂದಿಕೊಳ್ಳೊ ಕನ್ನಡ ಸಿನಿಮಾ ಹಾಡುಗಳೇ ಇಲ್ಲ ಎಂದೇನಲ್ಲ. ಬಳೆ ಶಾಸ್ತ್ರಕ್ಕೆ 'ಹಸಿರು ಗಾಜಿನ ಬಳೆಗಳು...', ಆರತಕ್ಷತೆಗೆ 'ಕ್ಷಮಿಸಿ ನಾ ಹೇಳೊದೆಲ್ಲ ತಮಾಷೆಗಾಗಿ... ಮದುವೆಯಲ್ಲಿ ಬೀಗ ಹಾಡೊ ಸಂತೋಷಕ್ಕಾಗಿ...', ಊಟದ ಹೊತ್ತಿಗೆ ಮಾಯಾ ಬಜಾರ್ ಚಿತ್ರದ 'ವಿವಾಹ ಭೊಜನವಿದು, ವಿಚಿತ್ರ ಭಕ್ಶ್ಯಗಳಿವು...' ಹೀಗೆ ಇನ್ನೂ ಅನೇಕ. ಇನ್ನೂ ಹೊಂದಿಕೊಳ್ಳೊ ಹಾಡುಗಳು ನಿಮಗೆ ಹೊಳೆದರೆ ಕಮ್ಮೆಂಟಿನಲ್ಲಿ ಬರೆದು ತಿಳಿಸಿ.

ಬ್ಯಾಂಡ್ ಇಲ್ಲವೆ ಮೈಕ್ ಸೆಟ್ಟಿನಿಂದ ಬೇರೆ ಕಾರ್ಯಕ್ರಮಗಳಲ್ಲಿ ಆಭಾಸ ಉಂಟಾಗುವಂತಹ ಕೆಲವು ಹಾಡು ಹೇಳುತ್ತ ಈ ಅಧ್ಯಾಯ ಮುಗಿಸೊಣ...
ನಾಮಕರಣದಲ್ಲಿ- 'ಈ ದೇಹದಿಂದ ದೂರವಾದೆ ಏಕೆ ಆತ್ಮವೆ? ಈ ಸಾವು ನ್ಯಾಯವೆ?' ...ಸೆಟ್ಟಿನವರು ಇಲ್ಲಿ, ಹುಟ್ಟಿದವನು ಸಾಯಲೇ ಬೇಕು ಅನ್ನೋ ವೇದಾಂತ ಹೇಳುತ್ತಿದ್ದಾರ?
ಗಣಪತಿ ಹಬ್ಬದ ಪೆಂಡಾಲಿನಲ್ಲಿ 'ಹೊಡಿ ಮಗ ಹೊಡಿ ಮಗ ಬಿಡ ಬೇಡ ಅವುನ್ನ...' ಅನ್ನೊ ಹಾಡಿಗೆ ಡ್ಯಾನ್ಸ್ ಮಾಡುತಿದ್ದರೆ, ಕೂರಿಸಿರೊ ಗಣಪತಿನೇ ಹೆದರಬೇಕು.
ರಾಜ್ಯೊತ್ಸವದಲ್ಲಿ, ಚಿರಂಜೀವಿ ಇಲ್ಲವೇ ರಜನಿಕಾಂತ್ ಹಾಡಿಗೆ ಕುಣಿಯೊರನ್ನ ಏನು ರನ್ನ, ಚಿನ್ನ ಅಂತಿರಾ? ನಮ್ಮ ಇವತ್ತಿನ ಕನ್ನಡ ಪ್ರೀತಿ, ರಾಜ್ಯೊತ್ಸವ ಆಚರಿಸೊ ವಿಧ ವಿಧಾನಗಳ ಬಗ್ಗೆ, ನವೆಂಬರ್ ಕನ್ನಡ ಪ್ರೀತಿಯ ಬಗ್ಗೆ ಹೇಳೊಕೆ ಎಲ್ಲರ ಹತ್ರನೂ ತುಂಬಾ ವಿಷಯಗಳಿರಬಹುದು ಆದ್ದರಿಂದ ಅವುಗಳನ್ನೆಲ್ಲಾ ಇನ್ನೊಂದು ಅಧ್ಯಾಯಕ್ಕೆ ಬಿಟ್ಟು ಮೊದಲು ಹೇಳಿದ ಮಾತಿಗೆ ಬದ್ದನಾಗಿ ಈ ಅಧ್ಯಾಯ ಮುಗಿಸುತ್ತಿದ್ದೇನೆ.

Monday 9 July, 2007

ಬರೀಯೊಣು ಬಾರ

ಹೈಸ್ಕೂಲಿನಲ್ಲಿದ್ದಾಗ ಕತೆ, ಕವನ ಬರೀತಿದ್ದೆ ಚಿಕ್ಕಮಗಳೂರಿನ ಜನಮಿತ್ರದಲ್ಲಿ ಒಂದೋ, ಎರಡೊ ಕವನಗಳು ಪ್ರಕಟವಾಗಿದ್ದವು. ಆಗ ಓದು ಕಡಿಮೆ ಇತ್ತು, ಬರಹ ಜಾಸ್ತಿ. ದಿನ ಕಳೆದಂತೆ ಕುವೆಂಪು, ತೇಜಸ್ವಿ, ಭೈರಪ್ಪ, ಲಂಕೆಶ್ ಹೀಗೆ ಇನ್ನೂ ಅನೇಕರ ಗದ್ಯ ಸಾಹಿತ್ಯ ಓದುತ್ತ ಬಂದೆ. ಬರೆದರೆ ಹೀಗೆ ಬರೀ ಬೇಕು ಇಲ್ಲಾಂದ್ರೆ ಸುಮ್ಮನೆ ಓದಬೇಕು ಅಂತ ತೀರ್ಮಾನ ಮಾಡಿ, ನಾನು ಬರೀತಿದ್ದ ಡೈರಿ ತೆಗೆದಿಟ್ಟೆ.

ನನ್ನ ಚಿಕ್ಕಂದಿನಲ್ಲಿ ಇದ್ದ ಬರಹಗಾರನಾಗಬೇಕು ಅನ್ನೊ ತವಕ ಮಾಸಿ ಹೊಗಿದೆ. ಕನ್ನಡದಲ್ಲಿ ವ್ಯವಹಾರ ಕಡಿಮೆಯಾಗುತ್ತಿದೆ. ಆದರೂ ನನ್ನ ಕನ್ನಡ ಓದು ನಿಂತಿಲ್ಲ. ಇಂಗ್ಲೀಷ್ ಬಳಕೆ ಏಷ್ಟೇ ಹೆಚ್ಚಾದರು ಅದು ನಮ್ಮ ಮನೆ ಭಾಷೆ ಆಗುವ ಸಾಧ್ಯತೆಯಿಲ್ಲ ಆದ್ದರಿಂದ ನನಗೆ ಮತ್ತು ಕರ್ನಾಟಕದ ಎಲ್ಲರಿಗೂ ಕನ್ನಡ ಅತ್ಯವಶ್ಯಕವಾಗಿ ಬೇಕು. ನಾನು ನಿಂತ ನೀರಾಗಬಾರದು, ಬರೆಯುವುದರ ಮೂಲಕ ಚೈತನ್ಯ ಹೆಚ್ಚಿಸಿಕೊಳ ಬೇಕು ಅಂತ ಅನ್ನಿಸ್ತಿದೆ.
ಅದರ ಫಲ "ಕಾಡು ಹರಠೆ" ನೋಡೊಣ ಇದು ಎಷ್ತು ದಿನ ನಡಿಯುತ್ತೆ ಅಂತ...

ಮೇಲೆ ಹೇಳಿದ ಹಾಗೆ ಕನ್ನಡದಲ್ಲಿ ವ್ಯವಹಾರ ಕಡಿಮೆ ಆಗುತ್ತಿದೆ, ನಾನು ಸತತವಾಗಿ ಕನ್ನಡ ಬರೆದದ್ದು PUC ಪರೀಕ್ಷೆಲಿ ಅಂದುಕೊಳ್ಳುತ್ತೇನೆ... ಅದಾದ ನಂತರ ಸತತವಾಗಿ ಕನ್ನಡದಲ್ಲಿ ಬರೆದ ನೆನಪು ಬರುತ್ತಿಲ್ಲ. ಬರೆದು ತುಂಬ ದಿನವಾಗಿದೆ, blog ಮಾಡೊದು ನನಗೆ ಹೊಸತು, 'ಬರಹ' ತಂತ್ರಾಂಶ ಬಳಸಿಕೊಂಡು ಬರೀತಿದಿನಿ ಅದಕ್ಕೂ ಹೊಸದಾಗಿ ತೆರದುಕೊಳ್ಳುತ್ತಿದ್ದೀನಿ... ಇದೆಲ್ಲವನ್ನು ಲೆಕ್ಕಿಸಿ ಅಲ್ಲೊಂದು ಇಲ್ಲೊಂದು ವ್ಯಾಕರಣ ಇಲ್ಲವೇ ಭಾಷಾ ಪ್ರಯೋಗದಲ್ಲಿ ತಪ್ಪಿದ್ದಲ್ಲಿ ಕ್ಷಮಿಸಿ, ತಪ್ಪುಗಳು ತುಂಬಾನೇ ಜಾಸ್ತಿ ಆಯಿತು ಅನ್ನಿಸಿದರೆ ನನಗೆ ಬರೆದು ತಿಳಿಸಿ.

ಗೆಳೆಯ ಜಾನಕಿರಾಮ ಕೇಳಿದ, 'ಏನೊ, ಕಾಡು ಹರಠೆ ಅಂದ್ರೆ? ಕಾಡಲ್ಲಿ ನೋಡಿ ಬಂದಿದ್ದರ ಬಗ್ಗೆ ಬರೀತಿಯ?' ನನಗೆ ತತ್ ಕ್ಶಣಕ್ಕೆ ಎನೂ ಹೊಳಿಲಿಲ್ಲ, 'ಕೆಲಸಕ್ಕೆ ಬಾರದ ಮಾತುಗಳು ಅಂತ ಹೇಳಬಹುದು' ಅಂದೆ.' 'ಓ ಕಾಮ್ ಚೊರ್ ಗಳಿಗೆ ಅಂತ ಹೇಳು' ಅಂದ. ಓಳ್ಳೆ ಆರಂಭ ಅಂತ ಹೇಳಿ ನನ್ನ ಪರಿಚಯ ಪೋಸ್ಟ್ ಮಾಡಿದೆ...