Tuesday 5 February, 2008

Beach Trek

2008 ಜನವರಿ 19, 20ನೇ ತಾರಿಖಿನಂದು ನಾವು ಹೊನ್ನಾವರದಿಂದ ಗೋಕರ್ಣದವರೆಗೆ ಸಮುದ್ರದಂಡೆ ಚಾರಣ (Beach Trek) ಕೈಗೊಂಡ್ವಿ. ಕರ್ನಾಟಕದ ಕೊಂಕಣ ಬಹಳ ಸುಂದರ. ಅರಬ್ಬೀ ಸಮುದ್ರದ ದಂಡೆಯಲ್ಲಿ ನೆಡೆಯುತ್ತ ಅದರ ಸವಿಯನ್ನು ಅನುಭವಿಸಬೇಕು ಎನ್ನುವುದೇ ನಮ್ಮ ಉದ್ದೇಶವಾಗಿತ್ತು.

ಕೆಲವೊಂದು ಚಾರಣಗಳು ಸತಾಯಿಸ್ತವೆ, ಕಾಯಿಸ್ತವೆ. ಎಷ್ಟೋ ದಿನಗಳಿಂದ ತಯಾರಿ ಮಾಡಿಕೊಂಡಿದ್ರೂ ಹೊರಡೋ ಮುಂಚೆ ಏನೋ ವಿಘ್ನ ಕಾದಿರುತ್ತೆ. ಆದರೆ ಈ ಚಾರಣದ ಬಗ್ಗೆ ಕಾರ್ಥಿಕ್ ಕಳಿಸಿದ ವರದಿ ಓದಿದ ತಕ್ಷಣ ಇಲ್ಲಿಗೆ ಹೊಗೊ ತಾರಿಖು ಪಕ್ಕ ಮಾಡಿದ್ವಿ. ೧೫ ಜನ ತುಂಬಾ ಉತ್ಸಾಹದಿಂದ ನಾವು ಬರ್ತಿವಿ ಅಂತಂದ್ರು. ನಿಶ್ಚಯಿಸಿದ ದಿನಕ್ಕೂ ಹೊರಡೋ ದಿನಕ್ಕೂ 2 ವಾರ ಗ್ಯಾಪ್ ಇತ್ತು. ಅಷ್ಟರಲ್ಲಿ ಬೇರೆ ಬೇರೆ ಕಾರಣಕ್ಕೋಸ್ಕರ ನಾಲ್ಕು ಜನ ಕೆರೆ-ದಡ ಅನ್ನೋತರ ಬರ್ತಿವಿ, ಬರಬಹುದು, ಒಂಬತ್ತು ಗಂಟೆಗೆ ಹೇಳ್ತಿನಿ ಅನ್ನೋ ಹಂಗೆ ಆದ್ರು. ಇಬ್ಬರು ಹೊಸ ಸದಸ್ಯರ ಜೊತೆಗೆ ಕೊನೆಗೆ ಹೊರಟ ತಲೆಗಳು 13. ಪ್ರತಿ ಸಾರಿ KSRTC ಬಸ್ಸಲ್ಲೇ ಹೋಗುತ್ತಿದ್ದ "ಮಚ್ಚೆ ಎಲ್ಲಿದೆ!?" ತಂಡ ಈ ಸಾರಿ ಟೆಂಪೋ ಟ್ರಾವೆಲ್ಲರ್ ಬಾಡಿಗೆಗೆ ತಗೊಂಡು ಹೊರಟಿತ್ತು. ಉಪಯೋಗ- ಜಾಸ್ತಿ ಭಾರ ಹೊತ್ತುಕೊಂಡು ತಿರುಗೊ ಹಾಗಿಲ್ಲ.

ಶುಕ್ರವಾರ ರಾತ್ರಿ ಒಂಬತ್ತಕ್ಕೆ ಹೊರಡಬೇಕಾಗಿದ್ದವರು ಹತ್ತೂವರೆಗೆ ಮಲ್ಲೇಶ್ವರ ಬಿಟ್ವಿ. ಶಿವಮೊಗ್ಗದಲ್ಲಿ ಶಿವಣ್ಣನವರು ಹತ್ತಿದ್ದಾಗ ಬೆಳಗಿನ ಜಾವ ೫ ಗಂಟೆ. ಸಾಗರ, ಜೋಗ ದಾಟಿ ಗೇರುಸೊಪ್ಪ ಜಲಪಾತದ ಹತ್ತಿರ ಬಂದಾಗ ಏಳು ಗಂಟೆಯ ಮೇಲಾಗಿತ್ತು. ಗೇರುಸೊಪ್ಪ ಜಲಪಾತದಿಂದ ಧುಮುಕಿ ಮುಂದೆ ಹರಿಯುವ ನೀರಿನಲ್ಲಿ ನಮ್ಮ ನಿತ್ಯ ಕರ್ಮಗಳನ್ನ ಮುಗಿಸಿದೆವು. ಹೊನ್ನಾವರ ತಲುಪಿ ಕಾಮತ ಹೋಟೆಲಿನಲ್ಲಿ ಕೊಟ್ಟೆ ಕಡುಬು, ಬನ್ಸ್, ಶಿರ, ಮಸಾಲೆ ಮತ್ತು ಸೆಟ್ ದೋಸೆ ತಿಂದುಮುಗಿಸೋದರಲ್ಲಿ ಹತ್ತುಗಂಟೆಯಾಯಿತು. ಎಂಟು ಗಂಟೆಗೆಲ್ಲ ಹೊನ್ನಾವರದಲ್ಲಿ ಇದ್ದಿದ್ದರೆ ಬಿಸಿಲೇರುವುದರೊಳಗೆ ಸಾಕಷ್ಟು ದೂರ ನೆಡೆಯಬಹುದಿತ್ತು. ಹೊನ್ನಾವರದಿಂದ ಮುಂದೆ ಹಳದೀಪುರಕ್ಕೆ ಹೋಗಿ ಅಲ್ಲಿಂದ ನಮ್ಮ ಚಾರಣ ಆರಂಭಿಸಿದ್ವಿ.


ಅತ್ಯುತ್ಸಾಹಿ ಹದಿಮೂರು ಜನರ ತಂಡ ಹಳದೀಪುರ ಬೀಚಿನ ಬಿಳೀ ಮರಳನ್ನ ನೋಡಿ ಪುಳಕಿತರಾಗಿ ಸರಿಯಾಗಿ ನೀರನ್ನೂ ತೆಗೆದು ಕೊಳ್ಳದೆ ಚಾರಣ ಆರಂಭಿಸಿತು. ನಾವು ಹೊರಟಾಗ ಗಂಟೆ ೧೦.೩೦. ಹಳದೀಪುರದಿಂದ ಸುಮಾರು ೧.೫ ಕಿ.ಮೀ. ನೆಡೆದ ಮೇಲೆ ನಮಗೆ ಮೊದಲ ಗುಡ್ಡ ಸಿಕ್ಕಿತು. ಕಲ್ಲು ಬಂಡೆಗಳಿಂದ ಕೂಡಿದ್ದ ಗುಡ್ಡವನ್ನು ಹತ್ತಿಳಿಯುವುದು ನಮಗೆಲ್ಲಾ ಒಂದು ಹೊಸ ರೀತಿಯ ಅನುಭವ. ನೀರಿನ ಹೊಡೆತಕ್ಕೆ ಬಂಡೆಗಳು ವಿಚಿತ್ರ ಆಕಾರಗಳನ್ನು ಪಡೆದಿದ್ದವು. ಇವು ಕೆಲವುಕಡೆಗಳಲ್ಲಿ ಜಾರುತ್ತಿದ್ದರೆ ಕೆಲವುಕಡೆ ಚೂಪಾಗಿದ್ದವು. ಈ ಗುಡ್ಡವನ್ನು ಇಳಿದರೆ ಎದುರಿಗೆ ಸುಂದರವಾಗಿದ್ದ ಒಂದು ಬೀಚ್, ಕಣ್ಣಳತೆಯ ದೂರದಲ್ಲಿ ಮತ್ತೊಂದು ಗುಡ್ಡ. ಎರಡು ಗುಡ್ಡಗಳ ಮಧ್ಯದಲ್ಲಿರುವ ಬೀಚ್, ಇದು ರಾಮನಗಿಂಡಿ ಬೀಚ್. ಇಲ್ಲಿ ಒಂದು ದೇವಸ್ತಾನನೂ ಇದೆ ಅಂತ ನಮ್ಮಮ್ಮ ಹೇಳಿದ್ರು. ಅಲ್ಲಿಗೆ ಹೋಗೊಕೆ ಆಗಲಿಲ್ಲ.


ಸೂರ್ಯ ಮೇಲೆರುತ್ತಿದ್ದ, ನೀರಡಿಕೆಯಾಗುತ್ತಿತ್ತು, ಬಹಳ ಕಡಿಮೆ ನೀರು ತಂದು ತಪ್ಪು ಮಾಡಿದ್ವಿ. ಇದ್ದ ಕಿತ್ತಲೆ ಹಣ್ಣನ್ನ ತಿಂದು ಮುಗಿಸಿದೆವು. ರಾಮನಗಿಂಡಿ ಬೀಚಿನ ಎರಡನೇ ಗುಡ್ಡವನ್ನೂ ಹತ್ತಿ ಆಚೆತುದಿಯಲ್ಲಿ ಇಳಿದಾಗ ಸಿಗುವುದೇ ಧಾರೇಶ್ವರ. ಕಣ್ಣು ಹಾಯೋವಷ್ಟು ದೂರನೂ ಮರಳು, ಒಂದು ಬದಿಗೆ ಗುಡ್ಡ. ಧಾರೇಶ್ವರದ ಸಮುದ್ರ ದಂಡೆಯಲ್ಲಿ ಕೆಲವು ಮನೆಗಳಿವೆ, ಒಬ್ಬರ ಮನೆಯಲ್ಲಿ ಸಿಹಿ ನೀರಿನ ಭಾವಿ ಸಿಕ್ಕಿತು. ಅಲ್ಲಿ ಚೆನ್ನಾಗಿ ನೀರು ಕುಡಿದು ನಮ್ಮ ಬಾಟಲಿಗಳನ್ನು ತುಂಬಿಸಿಕೊಂಡು ಮುಂದೆ ಹೊರಟೆವು.


ಸಮಯ ಮಧ್ಯಾನ್ಹ ೧೨.೪೫. ಇಲ್ಲಿಂದ ಮುಂದೆ ಕುಮಟ ಬೀಚಿನವರೆಗೆ ಮರಳದಂಡೆಯ ಮೇಲೆ, ಸಮುದ್ರದ ಪಕ್ಕದಲ್ಲೇ ನೆಡೆಯಬೇಕು, ಒಟ್ಟು ದೂರ ೬ ಕಿ.ಮೀ. ಸಮುದ್ರದ ದಂಡೆಯಲ್ಲಿ ನೆಡೆಯುವುದು ಸ್ವಲ್ಪ ವಿಚಿತ್ರ, ದೂರದಲ್ಲೆಲ್ಲೂ ಕೊನೆ ಇರುವಂತೆ ಕಂಡರೂ ಎಷ್ಟು ನೆಡೆದರೂ ಮುಗಿಯದ ದಾರಿಯಂತೆ ಅನ್ನಿಸುತ್ತದೆ. ಹಿತವಾಗಿ ಗಾಳಿ ಬೀಸುತ್ತಿದ್ದರಿಂದ ನೆಡೆಯುವುದು ಅಷ್ಟು ಆಯಾಸದಾಯಕವಾಗಿರಲಿಲ್ಲ. ಧಾರೇಶ್ವರದಿಂದ ಕುಮಟದವರೆಗೆ ಸಾಕಷ್ಟು ಹಕ್ಕಿಗಳನ್ನು ನೋಡಿದೆವು. ಕೆಲವು ಬೆಳ್ಳಗೆ ಹೊಳೆಯುತ್ತಿದ್ದರೆ ಕೆಲವು ಕಂದು ಮಿಶ್ರಿತ. ಕೆಲವು ಗುಬ್ಬಚ್ಚಿಯ ಹಾಗೆ ಸಣ್ಣಗಿದ್ದವು ಆದರೆ ಕಾಗೆಗಳಿಗಿಂತ ದಪ್ಪಗಿದ್ದ ಹಕ್ಕಿಗಳ ಗುಂಪು ಸಾಕಷ್ಟು ದೊಡ್ದದಿತ್ತು ಮತ್ತು ಬಹಳ ಚಾಣಾಕ್ಷವಾಗಿತ್ತು. ಈ ಹಕ್ಕಿಗಳು ಗುಂಪಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಹಾರಿ ನಮ್ಮಿಂದ ಒಂದು ಸುರಕ್ಷಿತ ಅಂತರವನ್ನ ಕಾಪಾಡಿಕೊಳ್ಳುತ್ತಿದ್ದವು. ನಾವು ಒಂದು ಕಿಲೋ ಮೀಟರಿನಷ್ಟು ದೂರ ಇವುಗಳ ಜೊತೆಯಲ್ಲೇ ಬಂದಮೇಲೆ ಒಮ್ಮೆಲೆ ಹಿಂದಕ್ಕೆ ಹಾರಿ ಅವು ಮೊದಲಿದ್ದ ಜಾಗ ತಲುಪಿದವು.


ನಾವು ಕುಮಟ ಬೀಚ್ ತಲುಪಿದಾಗ ೨.೧೫. ಕುಮಟ ಬೀಚಿನಲ್ಲಿ ಒಂದು ಸಣ್ಣ ಹಳ್ಳ ಸಮುದ್ರವನ್ನು ಸೇರುತ್ತದೆ, ಇದು ಅಘನಾಶಿನಿ ನದಿಯ ಒಂದು ಕವಲು ಎಂದು ಕೆಲವರು ಹೇಳಿದರು. ನಮ್ಮ ಟೆಂಪೋ ಟ್ರಾವೆಲ್ಲರ್ ಒಡೆಯ ಬಾಬುನನ್ನು ಅಲ್ಲಿಗೆ ಬರಲು ಹಳದಿಪುರ ಬಿಟ್ಟಾಗಲೇ ತಿಳಿಸಿದ್ದೆವು. ಅವನು ಕುಮಟ ಬೀಚ್ ತಲುಪಿ ಅಲ್ಲಿ ನೆಡೆಯುತ್ತಿದ್ದ ಶೂಟಿಂಗ್ ಬಗ್ಗೆ ನಮಗೆ ವರದಿ ಒಪ್ಪಿಸಿದ್ದ. ಅಲ್ಲಿ ಭಯ.com ಚಿತ್ರದ ಒಂದು ಹಾಡಿನ ಚಿತ್ರೀಕರಣ ನೆಡೆಯುತ್ತಿತ್ತು. ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಸರಿಯಾಗಿ ಅವರು ಪ್ಯಾಕ್ ಅಪ್ ಹೇಳಿದರು. ಗಾಡಿ ಹತ್ತಿ ಕುಮಟ ಪಟ್ಟಣಕ್ಕೆ ಹೋಗಿ ಊಟಮಾಡಿದೆವು. ಊಟದ ನಂತರ ಮಜ್ಜಿಗೆ, ಎಳನೀರು ಮತ್ತು ಕಬ್ಬಿನಹಾಲು ಇವುಗಳಲ್ಲಿ ನಮಗೆ ಬೇಕಾದುದನ್ನು ಆಯ್ದುಕೊಂಡು ಕುಡಿದೆವು. ಬಾಬು ನಮ್ಮನ್ನು ವಾಪಸ್ ಕರೆದುಕೊಂಡು ಬಂದು ಕುಮಟ ಬೀಚಿನಲ್ಲಿ ಬಿಟ್ಟ. ಶೂಟಿಂಗ್ ಮತ್ತೆ ಶುರುವಾಗಿತ್ತು.


ನಾವು ಕುಮಟ ಬೀಚ್ ಬಿಟ್ಟಾಗ ೪ ಗಂಟೆ. ಮೊದಲ ದಿನದ ಕೊನೆಗೆ ನಾವು ಬಾಡ ತಲುಪ ಬೇಕಿತ್ತು. ಕುಮಟ ಬೀಚಿನ ಕೊನೆಗೆ ಒಂದು ಗುಡ್ಡ ಇದೆ. ಈ ಬಾರಿ ಗುಡ್ಡವನ್ನು ಬಳಸಿಕೊಂಡು ಕಲ್ಲು ಬಂಡೆಗಳ ಮೇಲೆ ಹೋಗದೆ, ಗುಡ್ಡವನ್ನು ಹತ್ತಿ ಇಳಿದೆವು. ಅಷ್ಟೇನೂ ಕಡಿದಾಗಿರದೆ, ಜನರು ಓಡಾಡಿ ಕಾಲು ದಾರಿಗಳು ಇದ್ದಿದ್ದರಿಂದ ಸುಲಭವಾಗಿ ಈ ಗುಡ್ಡವನ್ನು ದಾಟಿದೆವು. ಗುಡ್ಡ ಇಳಿದ ಮೇಲೆ ಸಿಕ್ಕಿದ್ದು ವನ್ನಳ್ಳಿ ಬೀಚ್ ಮತ್ತು ವನ್ನಳ್ಳಿ ಗ್ರಾಮ. ಈ ಬೀಚ್ ಅರ್ದ ಚಂದ್ರಾಕ್ರುತಿಯಲ್ಲಿದ್ದು ಬಹಳ ಸುಂದರವಾಗಿದೆ. ಈ ಬೀಚಿನ ಇನ್ನೊಂದು ಕೊನೆಯಲ್ಲಿ ಮತ್ತೊಂದು ಗುಡ್ಡ ಇದೆ. ಅದನ್ನು ಹತ್ತಿ ಇಳಿದರೆ ಸಣ್ಣ ಬೀಚ್ -ಅದರ ಹೆಸರು ಮಂಗೊಡ್ಲು ಬೀಚ್- ಮತ್ತೊಂದು ಗುಡ್ಡ. ಈ ಗುಡ್ಡದ ಹೆಸರು ಕಡ್ಲೆ ಗುಡ್ಡ. ಕಡ್ಲೆ ಗುಡ್ಡವನ್ನು ಹತ್ತಿ ಇಳಿದರೆ ವಿಶಾಲವಾದ ಸಮುದ್ರ ದಂಡೆ. ಮಂಗೊಡ್ಲು ಬೀಚಿನಲ್ಲಿ ನಮಗೆ ಒಂದು ದೊಡ್ಡ ಮೀನಿನ ಮೂಳೆ ನೋಡಲು ಸಿಕ್ಕಿತು. ಅದು ತಿಮಿಂಗಿಲದ್ದೇ ಇರಬೇಕು ಅಷ್ಟು ದೊಡ್ಡ ಮೂಳೆ ಅದು. ಒಬ್ಬರು ಅದರ ಮೇಲೆ ಆರಾಮವಾಗಿ ಕೂರ ಬಹುದಿತ್ತು, ಅಷ್ಟು ದೊಡ್ಡ ಮೂಳೆ ಅದು.


ಕಡ್ಲೆ ಗುಡ್ಡವನ್ನು ಇಳಿದ ಮೇಲೆ ಮುಂದೆ ಹೊನಲಗದ್ದೆ, ಗುಡೇ ಅಂಗಡಿ ಆಮೆಲೆ ಬಾಡ ಸಿಗುತ್ತದೆ. ಕಡ್ಲೆ ಗುಡ್ಡ ಇಳಿದ ಮೇಲೆ ಬಾಡ ತಲುಪಲು ಮೂರರಿಂದ ನಾಲ್ಕು ಕಿಲೋ ಮೀಟರ್ ನೆಡೆಯ ಬೇಕು. ಸಂಜೆ ತಂಪು ಹಿತವಾಗಿತ್ತು. ಸಮತಟ್ಟಾದ ದಂಡೆಯಲ್ಲಿ ಕ್ಯಾಚ್ ಕ್ಯಾಚ್ ಆಟ ಆಡುತ್ತ ಹೆಜ್ಜೆ ಹಾಕಿದೆವು. ಬಾಡ ತಲುಪಲು ಇನ್ನೂ ಒಂದು ಕಿಲೋ ಮೀಟರಿನಷ್ಟು ದೂರ ಇರುವಾಗಲೆ ಸೂರ್ಯ ಮುಳುಗತೊಡಗಿದ. ಎಲ್ಲರೂ ಮುಳುಗುವ ಸೂರ್ಯನೊಟ್ಟಿಗೆ ಫೋಟೋ ತೆಗೆಸಿಕೊಂಡೆವು. ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದರೆ ಪೂರ್ವದಿಂದ ಚಂದ್ರ ಮೇಲೆ ಬಂದಿದ್ದ. ಹುಣ್ಣಿಮೆಗೆ ಇನ್ನು ಎರಡು ದಿನಗಳಿದ್ದವು.


ಸೂರ್ಯ ಮುಳುಗಿದರೂ ಸಾಕಷ್ಟು ಬೆಳಕಿತ್ತು. ಬಾಡ ತಲುಪಿ ಸ್ವಲ್ಪ ಹೊತ್ತು ಆಟ ಆಡುವುದರಲ್ಲಿ ಪೂರ್ತಿ ಕತ್ತಲಾಯಿತು. ಬಾಡದ ಸಮುದ್ರ ದಂಡೆಯಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ. ಎಲ್ಲರೂ ಒಂದೇ ಬಂಡೆ ಹತ್ತಿ ಕೂತೆವು. ಗಾಡಿಯೊಟ್ಟಿಗೆ ಬಾಬುಗೆ ಬಾಡಕ್ಕೆ ಬರಲು ಹೇಳಿದ್ದೆವು. ಆ ರಾತ್ರಿ ನಮಗೆ ಉಳಿಯಲು ಬಾಡದ ಶ್ರೀ ಪ್ರಮೋದ್ ಮಹಾಲೆಯವರು ತಮ್ಮ ಮನೆಯಲ್ಲಿ ವ್ಯವಸ್ತೆ ಮಾಡಿದ್ದರು. ಮಹಾಲೆಯವರು ನಮ್ಮ ತಂದೆಯವರ ಸ್ನೇಹಿತರು. ನಮ್ಮ ದೊಡ್ಡ ಗುಂಪು ಅವರ ಮನೆಯಲ್ಲಿ ಉಳಿಯುವುದು ಹೇಗೆಂದು ನಮಗೆ ಮುಜುಗರವಿತ್ತು. ಅವರ ಮನೆ ತಲುಪಿದಾಗ ೭.೩೦. ಸಿಹಿ ನೀರಿನಲ್ಲಿ ಕೈಕಾಲು ಮುಖ ತೊಳೆದು ಅವರು ಕೊಟ್ಟ ಶರಬತ್ತು ಕುಡಿದು ಅವರ ಮನೆಯ ಜಗುಲಿಯಲ್ಲಿ ಆಸಿನರಾದೆವು. ಮಹಾಲೆಯವರು ರಾತ್ರಿ ಭರ್ಜರಿ ಭೋಜನ ಮಾಡಿಸಿದ್ದರು. ಭೋಜನವಾದ ಮೇಲೆ ಬಾಳೆಹಣ್ಣು.

ಇಲ್ಲಿಂದ ಬೆಳಗ್ಗೆ ಮುಂಚೆ ಸೂರ್ಯ ಹುಟ್ಟುವುದರೊಳಗೆ ಹೊರಟು ಬೆಳದಿಂಗಳಿನಲ್ಲಿ ಸ್ವಲ್ಪ ನೆಡೆದು ಚಂದ್ರ ಮುಳುಗುವುದನ್ನು ನೋಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಆದರೆ ದಣಿದಿದ್ದ ದೇಹಗಳು ಬೆಳಗ್ಗೆ ಬೇಗ ಏಳಲಿಲ್ಲ. ನಾವು ಮಹಾಲೆಯವರಿಗೆ ಬೀಳ್ಕೊಟ್ಟು ಹೊರಟಾಗ ಬೆಳಗ್ಗೆ ೬ ಗಂಟೆ ೩೦ ನಿಮಿಷಗಳಾಗಿದ್ದವು. ಅಪರಿಚಿತ ಹಳ್ಳಿಯಲ್ಲಿ ನಮ್ಮನ್ನು ಮನೆಯಲ್ಲಿ ಉಳಿಸಿ, ಒಳ್ಳೆಯ ಊಟ ಹಾಕಿಸಿ ಮಹಾಲೆಯವರು ಅದ್ಭುತವಾಗಿ ನೋಡಿಕೊಂಡರು.


ಎರಡನೆಯ ದಿನ ಇಬ್ಬರು retired hurt ಆಗಿ ೧೩ ಜನರ ಗುಂಪು ೧೧ಕ್ಕೆ ಇಳಿದಿತ್ತು. ನಾವೆಲ್ಲರು ಜೇಷ್ಟಪುರದ ಸಮುದ್ರ ದಂಡೆ ತಲುಪುವುದರೊಳಗೆ ಸಂಪೂರ್ಣವಾಗಿ ಬೆಳಕಾಗಿತ್ತು. ವಾಲಿಬಾಲ್ ಆಡಿ, ಅದೇ ಬಾಲಿನಲ್ಲಿ ಫುಟ್ ಬಾಲ್ ಆಡುತ್ತ ಮುಂದೆ ಸಾಗಿದೆವು. ಮರಳಿನ ಮೇಲೆ ಓಡುತ್ತ beach jogging ಮಾಡಬೇಕೆನ್ನುವುದು ನನ್ನ ಮತ್ತು ಚಂದ್ರನ ಬಹಳ ದಿನಗಳ ಆಸೆ. ನಮ್ಮಿಬ್ಬರ beach joggingಗೆ ರಾಘವೇಂದ್ರನೂ ಸೇರಿಕೊಂಡ. ಅಘನಾಶಿನಿ ಗುಡ್ಡದವರೆಗೂ ಓಡಿ ನೆಡೆದು ಓಡಿದೆವು. ಅಘನಾಶಿನಿ ಗುಡ್ದದ ಮೇಲೆ ಕಿರಿ ಕೋಟೇಯಿದೆ. ಸಣ್ಣಗೆ ಕಾಂಪೌಂಡ್ ಎತ್ತರಕ್ಕೆ ಇರುವ ಕೋಟೆ ಗೋಡೆ ಬೆಟ್ಟದ ನೆತ್ತಿಯನ್ನು ಸುತ್ತಿಕೊಂಡು ಬರುತ್ತದೆ. ಅಘನಾಶಿನಿ ಬೆಟ್ಟದ ಮೇಲಿನಿಂದ ಅಘನಾಶಿನಿ ನದಿ ಸಮುದ್ರ ಸೇರುತ್ತಿರುವುದು ಕಾಣುತ್ತದೆ. ಇಲ್ಲಿ ನದಿ ಬಹಳ ವಿಶಾಲವಾಗಿ ಹರಿಯುತ್ತದೆ. ಒಂದು ದಂಡೆಯಿಂದ ಇನ್ನೊಂದು ದಂದೆಗೆ ದೋಣಿಯಲ್ಲಿ ಹೋಗಬೇಕು. ಬೆಟ್ಟವನ್ನು ಇಳಿದು ದೋಣಿಗಳಿದ್ದ ಜಾಗ ತಲುಪುವುದರೊಳಗೆ ಬೆಳಗಿನ ಹತ್ತು ಗಂಟೆಗಳ ಮೇಲಾಗಿತ್ತು. ದೋಣಿಯಲ್ಲಿ ನದಿ ದಾಟಲು ಬಹಳ ಜನರಿದ್ದರು ಮತ್ತು ನಮ್ಮ ತಂಡದವರೆಲ್ಲರಿನ್ನೂ ಬಂದಿರದ ಕಾರಣ ಸಣ್ಣದಾಗಿ ಒಂದು ಬೀಚ್ ವಾಲಿಬಾಲ್ ಆಡಿದೆವು.

ಎಲ್ಲರೂ ಬಂದು ದೋಣಿ ಹಿಡಿದು ಆಚೆಯ ದಡದಲ್ಲಿದ್ದ ತದಡಿ ಎಂಬ ಬಂದರು ಹಳ್ಳಿ ತಲುಪಿ ಒಂದು ಹೋಟೆಲ್ ಹೊಕ್ಕೆವು. ಬನ್ಸ್, ಇಡ್ಲಿ ಮತ್ತು ಕಾಫಿ ಸೇವಿಸಿದೆವು. ಹೊಟೆಲಿನ್ನ ಎದುರಿಗೆ ಒಂದು ಗಣಪತಿ ದೇವಸ್ತಾನ, ಪಕ್ಕದಲ್ಲಿ ಒಂದು ಆಟದ ಮೈದಾನವಿತ್ತು. ಮೈದಾನದಲ್ಲಿ ವಾಲಿಬಾಲ್ ಕೋರ್ಟ್ ಇದ್ದು ನೆಟ್ ಸಹ ಕಟ್ಟಿತ್ತು. ವಾಲಿಬಾಲ್ ಕೋರ್ಟ್ ನೋಡಿದ್ದೇ ಒಂದು ಆಟ ಆಡಲು ಇಳಿದೆವು. ಬೀಚಿನಲ್ಲಿ ಡೈವ್ ಹೋಡೆದು ವಾಲಿಬಾಲ್ ಆಡುತ್ತಿದ್ದವರಾರೂ ಇಲ್ಲಿ ಡೈವ್ ಹೊಡೆಯುವ ಉಮೇದಿ ತೋರಿಸಲಿಲ್ಲ. ನಮ್ಮ ಆಟ ನೋಡಲು ತಕ್ಕ ಮಟ್ಟಿಗೆ ಸ್ತಳೀಯ ಪ್ರೇಕ್ಷಕರು ನೆರೆಯತೊಡಗಿದರು. ರಾಘವೇಂದ್ರ ಮತ್ತು ಹರೀಶರಿದ್ದ ತಂಡ ಸೋತಿತು. ಆಟ ಮುಗಿದ ಮೇಲೆ ತದಡಿಯ ಜನರಿಗೆ ವಿದಾಯ ಹೇಳಿ ಪ್ಯಾರಡೈಸ್ ಬೀಚಿನ ಕಡೆಗೆ ಹೊರಟೆವು.

ತದಡಿಯಿಂದ ಮುಂದೆ ಬರುತ್ತಾ ಆಟದ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಸೋಲನ್ನು ಯಾರಾದರೊಬ್ಬರ ತಲೆಗೆ ಕಟ್ಟಲು ಯತ್ನಿಸುತ್ತಿದ್ದರು. ರಾಘವೇಂದ್ರ ಮತ್ತು ಹರೀಶ ಸೋಲಿಗೆ ಪರಸ್ಪರರನ್ನು ದೂರಿದರೆ, ಇಬರೂ ಕಾರಣರೆನ್ನುವುದು ತಂಡದ ಸರ್ವಾನುಮತದ ತೀರ್ಮಾನವಾಗಿತ್ತು. ಆದರೆ ನಮ್ಮ ವಾಲಿಬಾಲ್ ಆಟದ ಫೋಟೋ ತೆಗಯದೆ ಜಾನಕಿರಾಮ ನಿಜವಾದ ಖಳನಾಯಕನಾಗಿದ್ದ.


ತದಡಿಯಿಂದ ಹೊರಟು ಬೆಲೆಕಾನ್ ಬೀಚ್ ದಾಟಿ ಒಂದು ಗುಡ್ಡವನ್ನು ಹತ್ತಿ ಇಳಿದರೆ ಪ್ಯಾರಡೈಸ್ ಬೀಚ್ ಸಿಗುತ್ತದೆ. ಇಲ್ಲಿ ಮರಳಿನ ದಂಡೆ ಅಷ್ಟೇನು ದೊಡ್ಡದಿಲ್ಲ ಆದರೆ ಬಹಳ ಸಂಖ್ಯೆಯಲ್ಲಿ ಚೂಪಾದ ಬಂಡೆಗಳಿದ್ದು ನೋಡಲು ತುಂಬಾ ಸುಂದರವಾಗಿದೆ. ಇಲ್ಲಿಂದ ಮುಂದೆ half moon beach ಇದೆ. ಪ್ಯಾರಡೈಸ್ ಬೀಚಿನಿಂದ ಹಾಲ್ಫ್ ಮೂನ್ ಬೀಚಿಗೆ ಬಂಡೆಗಳ ಮೇಲೆ ಹತ್ತಿ ಹೋಗಲು ಆಗುವುದಿಲ್ಲ. ಗುಡ್ಡವನ್ನು ಹತ್ತಿ ಹೋಗಬೇಕು. ಹಾಲ್ಫ್ ಮೂನ್ ಬೀಚಿನಲ್ಲಿ ಸಹ ಮರಳ ದಂಡೆ ಸಣ್ಣದೆ. ಆದರೆ ನೋಡಲು ಬಹಳ ಚೆನ್ನಾಗಿದೆ. ತದಡಿಯಿಂದ ಪ್ಯಾರಡೈಸ್ ಬೀಚ್ ತಲುಪಲು ೩೦ ರಿಂದ ೪೦ ನಿಮಿಷಗಳು ಬೇಕು. ಪ್ಯಾರಡೈಸ್ ಬೀಚಿನಿಂದ ಹಾಲ್ಫ್ ಮೂನ್ ಬೀಚ್ ತಲುಪಲು ಸುಮಾರು ೧೫ ನಿಮಿಷಗಳು ಸಾಕು.

ಈ ಎರಡೂ ಬೀಚುಗಳಿಗೆ ಕಾಲ್ನೆಡಿಗೆಯಲ್ಲಿ ಬರದೆ ಬೇರೆ ದಾರಿಯಿಲ್ಲ. ಬಹುಷಃ ಇದೇ ಕಾರಣದಿಂದಲೇ ಈ ಎರಡೂ ಬೀಚುಗಳಿಗೆ ಹೆಚ್ಚು ಜನರು ಬರದೆ ಬಹಳ ಶುಭ್ರವಾಗಿವೆ. ಈ ಎರಡೂ ಬೀಚುಗಳಲ್ಲಿ ವಿದೇಶೀ ಪ್ರವಾಸಿಗರು ತುಂಬಿದ್ದರು. ದೇಶೀಯರು ಇಲ್ಲಿ ಅಂಗಡಿಗಳನ್ನೂ ಹೋಟೆಲ್ಲುಗಳನ್ನು ನೆಡೆಸುತ್ತಾರೆ. ಆದರೆ ಅವರಿಗೆ ದೇಶೀ ಗ್ರಾಹಕರ ಕಡೆಗೆ ಒಲವಿಲ್ಲ. ಓಂ ಬೀಚಿನಲ್ಲಿಯೂ ಇದೇ ಕತೆ. ಇತ್ತೀಚಿಗೆ ಓಂ ಬೀಚಿನವರೆಗೂ ಟಾರ್ ರಸ್ತೆ ಮಾಡಿರುವುದರಿಂದ ಓಂ ಬೀಚಿನಲ್ಲಿ ವಿದೇಶಿಯರನ್ನಷ್ಟೇ ಅಲ್ಲದೇ ದೇಶಿಯರನ್ನೂ ಕಾಣಬಹುದಿತ್ತು. ಓಂ ಬೀಚಿನಲ್ಲಿ ದೇಶಿಯರ ಒಂದು ಗುಂಪು ಸುಮಾರು ೨-೩ ಗಂಟೆಗಳಕಾಲ ಕೂತು ಸಮಾರಾಧನೆ ನೆಡೆಸಿ ಸಾಕಷ್ಟು ಪ್ಲಾಸ್ಟಿಕ್ ಕಸ ಎಸೆದು ಹೋಯಿತು. ಪಕ್ಕದಲ್ಲೇ ಇದ್ದ ತೊಟ್ಟಿಯ ಮೇಲೆ 'ಗ್ರಾಮ ಪಂಚಾಯಿತಿ ಗೋಕರ್ಣ, ನನ್ನನ್ನು ಉಪಯೋಗಿಸಿ' ಎಂದಿದ್ದದ್ದು ಅವರಿಗೆ ಕಾಣಿಸಲೇ ಇಲ್ಲ. ಇದು ಬೀಚುಗಳದಷ್ಟೇ ಕತೆಯಲ್ಲ. ಮುಂಗಾರು ಮಳೆ ಚಿತ್ರದ ನಂತರದ ಜೋಗವನ್ನು ನೋಡಿ ನಾನು ನಡುಗಿ ಹೋಗಿದ್ದೆ. ಗಾಳಿಪಟದ ನಂತರ ಕೊಡಚಾದ್ರಿ ಹಾಗಾಗದಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.

ಹಾಲ್ಫ್ ಮೂನ್ ಬೀಚಿನಿಂದ ಓಂ ಬೀಚಿಗೆ ೨೦ ನಿಮಿಷಗಳ ಹಾದಿ. ಒಂದು ಗುಡ್ಡವನ್ನು ಹತ್ತಿ ಇಳಿಯಬೇಕು. ಗುಡ್ಡದ ಮೇಲಿನಿಂದ ಒಂದು ಬದಿಗೆ ಕಾಣುವ ಸಮುದ್ರ, ಕೆಳಗಿನ ಬಂಡೆಗಳಿಗೆ ಬಂದು ಅಪ್ಪಳಿಸುವ ಅಲೆಗಳು, ಅವುಗಳನ್ನು ನೋಡುತ್ತಾ ದಿನವೆಲ್ಲಾ ಅಲ್ಲಿ ಕೂರಬಹುದು. ಈ ಗುಡ್ಡ ಇಳಿಮುಖವಾದಾಗ ಓಂ ಬೀಚ್ ಕಾಣುತ್ತದೆ. ಗುಡ್ಡದ ಮೇಲಿನಿಂದ ಸಮುದ್ರ ದಂಡೆ '3'ರ ಆಕಾರದಲ್ಲಿ ಕಾಣುತ್ತದೆ. ಇಲ್ಲಿ ಸಮುದ್ರ ಸಮತಟ್ಟಾಗಿದ್ದು ವಿಷಾಲವಾಗಿ ಹರಡಿಕೊಂಡಿದೆ. ನೀರು ತಿಳಿಯಾಗಿದೆ. ಅಲೆಗಳ ಹೊಡೆತ ಜೋರಾಗಿಲ್ಲ.

ನಾವು ಓಂ ಬೀಚ್ ತಲುಪಿದಾಗ ೩ ಗಂಟೆಗಳ ಮೇಲಾಗಿತ್ತು. ಬ್ಯಾಗುಗಳನ್ನು ಕಳಚಿ ಎಲ್ಲರೂ ನೀರಿಗೆ ಇಳಿದೆವು. ದಣಿದ ದೇಹಗಳಿಗೆ ನೀರು ಅಹ್ಲಾದಕರವಾಗಿತ್ತು. ಕರಿ ಮತ್ತು ಗುರು ಇಬ್ಬರನ್ನು ಹೊರತು ಪಡಿಸಿದರೆ ಈ ಎರಡು ದಿನದಲ್ಲಿ ಉಳಿದವರಾರೂ ಸಮುದ್ರಕ್ಕೆ ಇಳಿದಿರಲಿಲ್ಲ. ಕರಿ ಮಾತ್ರ ಮೊದಲ ದಿನದಿಂದಲೇ ಸಿಕ್ಕ ಸಿಕ್ಕ ಬೀಚಿನಲ್ಲೆಲ್ಲಾ ನೀರಿಗೆ ಬಿದ್ದು ಬಂದಿದ್ದ. ಒಂದು ಗಂಟೆಗೂ ಹೆಚ್ಚು ಹೊತ್ತು ನೀರಿನಲ್ಲಿ ಆಡಿ ಸಂತುಷ್ಟರಾದಮೇಲೆ ಗೋಕರ್ಣಕ್ಕೆ ಹೊರಟೆವು.



ಓಂ ಬೀಚಿನಿಂದ ಮುಂದೆ ಗುಡ್ಡವೊಂದನ್ನು ಹತ್ತಿಳಿದರೆ ಕುಡ್ಲೆ ಬೀಚ್ ಸಿಗುತ್ತದೆ. ಅಲ್ಲಿಂದ ಮುಂದೆ ಇನ್ನೊಂದು ಗುಡ್ಡ ಹತ್ತಿಳಿದರೆ ಗೋಕರ್ಣ. ನಾವುಗಳು ಓಂ ಬೀಚಿನಿಂದ ಕಾಲ್ನೆಡಿಗೆಯಲ್ಲಿ ಹೋಗದೆ ಗಾಡಿ ಹತ್ತಿ ಗೋಕರ್ಣ ತಲುಪಿದೆವು.

ಗೋಕರ್ಣದಲ್ಲಿ ಸ್ನಾನ ಮುಗಿಸಿ ದೇವರ ದರ್ಶನ ಮಾಡಿದೆವು. ಗೋಕರ್ಣದಿಂದ ಹೊರಟು ಕುಮಟದಲ್ಲಿ ರಾತ್ರಿ ಊಟಮಾಡಿ ಬೆಂಗಳೂರಿನೆಡೆಗೆ ಹೊರಟೆವು. ಗಾಡಿಯಲ್ಲಿ ಹರಟೆ ರಾತ್ರಿ ಬಹಳ ಹೊತ್ತಿನವರೆಗೆ ನೆಡೆದಿತ್ತು. ಒಟ್ಟಿನಲ್ಲಿ ಒಂದು ಅಹ್ಲಾದಕರವಾದ ಮತ್ತು ವಿಭಿನ್ನವಾದ ಚಾರಣಮುಗಿಸಿ ಸಂತೋಷದಿಂದ ಹಿಂದಿರುಗಿದೆವು.

ಕಾರ್ತಿಕ್ ಕಳಿಸಿದ್ದ ವರದಿಯಲ್ಲಿ ಒಂದು ಬೀಚಿನಿಂದ ಇನ್ನೊಂದು ಬೀಚಿನ ನಡುವಿನ ದೂರವನ್ನು ಕಿಲೋ ಮೀಟರುಗಳಲ್ಲಿ ತಿಳಿಸಿತ್ತು. ನಮಗಿದು ಉಪಯೋಗಕ್ಕೆ ಬಂತು. ಹೆಚ್ಚಿನ ಉಪಯೋಗಕ್ಕೆ ಬಂದಿದ್ದು 'wikimapia.org'ನಿಂದ ತೆಗೆದುಕೊಂಡು ಹೋಗಿದ್ದ ಚಿತ್ರಗಳು. ನನಗೆ ಕೊನೇ ಘಳಿಗೆಯಲ್ಲಿ ಈ ಚಿತ್ರಗಳ ಪ್ರಿಂಟ್ ತರಲು ಹೇಳಿದ್ದ ಜಾನಕಿರಾಮನಿಗೆ ಶಹಭಾಸ್ ಹೇಳೋಣ.

Friday 1 February, 2008

ಗೀತೆ-ಗಾಯನ

ಇದು ನಾನು ಬರೆದಿರುವ ಅತೀ ಸಣ್ಣಕತೆ.

ಹರೀಶ ಕವನ ಬರೆದ. "ಅಲೆಗಳ ತೀರದಲ್ಲಿ ಏನೀ ನಿನ್ನ ಮೌನ?".
ಉತ್ತರ ಭಾರತದ ಗಾಯಕ ಹಾಡಿದ. "ಹಲೆಗಳ ತೀರದಲಿ ಏನೀ ನಿಮ್ಮೌನ?"