Thursday, 3 January 2008

ಚಿಕ್ಕ ಊರಿಗೆ ಹೊರಟ


ಚಿತ್ರ: ನಮ್ಮೂರಲ್ಲಿ ಓಡಾಡೋ ಖಲೀಲ್ ಬಸ್ಸಲ್ಲಿ ಹಾಕಿದ್ದ ಫೋಟೋ

ವಿಶಾಲಾಕ್ಷಮ್ಮನವರು ಚಿಕ್ಕನನ್ನು ಒಬ್ಬಂಟಿಯಾಗಿ ಯಾವ ಊರಿಗೂ ಕಳಿಸಿರಲಿಲ್ಲ. ಒಬ್ಬಂಟಿಯಿರಲಿ ತಮ್ಮೊಟ್ಟಿಗೆ ಯಾವುದೇ ಮದುವೆ, ನಾಮಕರಣಗಳಿಗೆ ನೆಂಟರ ಮನೆಗೆ ಕರೆದುಕೊಂಡು ಹೋಗಿದ್ದರೂ ತಮ್ಮೊಡನೆಯೇ ಹಿಂದಕ್ಕೆ ಕರೆದುಕೊಂಡು ಬರುತ್ತಿದ್ದರು. ನೆಂಟರ ಮನೆಗಳಲ್ಲಿ ತನ್ನ ಓರಗೆಯವರೊಂದಿಗೆ ಆಡುತಿದ್ದ ಆಟಗಳನ್ನು ಅರ್ಧಕ್ಕೇ ಬಿಟ್ಟು ಹೋರಡುವಾಗಲಂತೂ ಚಿಕ್ಕನಿಗೆ ಜೀವವೇ ಹೋದಂತಾದರೂ ಅಮ್ಮನ ಹಿಂದೆ ಹೊರಡದೆ ಬೇರೆಯ ದಾರಿಯಿರುತ್ತಿರಲಿಲ್ಲ. ಆದರೆ ಈ ಬಾರಿ ಒಬ್ಬನೇ ದೊಡ್ಡಮ್ಮನ ಮನೆಗೆ ಹೊರಟಿದ್ದರಿಂದ ತಾನೂ ದೊಡ್ಡವನಾದೆನೆಂಬ ವೀರತ್ವದ ಭಾವ ಚಿಕ್ಕನನ್ನು ಆವರಿಸಿಕೊಂಡಿತ್ತು.

ಕಚೇರಿಗೆ ಹೊರಟಿದ್ದ ಚಿಕ್ಕನ ಅಪ್ಪ ದಾರಿಯಲ್ಲಿ ಇವನನ್ನು ಬಸ್ಸಿನಲ್ಲಿ ಕೂರಿಸಿ ಡ್ರೈವರ್ ರುದ್ರಯ್ಯನಿಗೆ ಹೇಳಿಹೋಗುವವರಿದ್ದರು. ಇವರು ಬಸ್ಟ್ಯಾಂಡಿಗೆ ಹೋಗುವ ಹೊತ್ತಿಗೆ ಸರಿಯಾಗಿ ರುದ್ರಯ್ಯನ ವಿರೂಪಾಕ್ಷ ಬಸ್ಸು ಬಂದಿತು. ಚಿಕ್ಕನನ್ನು ಬಸ್ಸಿನಲ್ಲಿ ಕೂರಿಸಿ ರುದ್ರಯ್ಯನಿಗೆ "ಇವನ ದೊಡ್ಡಪ್ಪಬಂದು ಇಳಿಸಿಕೊಳ್ಳುತ್ತಾರೆ" ಎಂದು ಹೇಳಿ, ಚಿಕ್ಕನಿಗ ಟಾಟಾ ಮಾಡಿ ಹೋದರು. ಹೋದಸಾರಿ ಊರಿನಲ್ಲಿ ದೊಡ್ದಮ್ಮನ ಮಕ್ಕಳೊಂದಿಗೆ ಬಾಡಿಗೆ ಸೈಕಲ್ಲಿನಲ್ಲಿ ಮಾವಿನ ತೋಪಿಗೆ ಹೋಗಿದ್ದನ್ನು, ವಾಪಸ್ಸು ಬಂದಾಗ ಅಮ್ಮ ಝಾಡಿಸಿದ್ದನ್ನೂ ಜ್ಞಾಪಿಸಿಕೊಂಡ. ಈ ಸಾರಿ ಅಮ್ಮ ಇಲ್ಲದಿದ್ದರಿಂದ ಮಾವಿನ ತೋಪಿನಲ್ಲಿ ಪೂರ್ತಿದಿನ ಕಳೆಯಬೇಕೆಂದುಕೊಂಡ.

"ಈಶ, ಹತ್ತಲಾ ಬೇಗ, ಮೂರ್ ಜನ ಕೂರೋ ಸೀಟ್ ಮ್ಯಾಗೆ ಟವೆಲ್ ಪೂರ್ತಿ ಹಳ್ಡು" ಎಂದು ಒಬ್ಬಳು ತಾಯಿ, ಜನಗಳ ಮಧ್ಯೆ ತೂರಿ ಸೀಟು ಮಾಡಲು ತನ್ನ ಮಗನನ್ನು ಪ್ರಚೋದಿಸುತ್ತಿದ್ದಳು. ಡ್ರೈವರ್ ರುದ್ರಯ್ಯನ ಕಡೆಯಿಂದ ಚಿಕ್ಕನಿಗೆ ಒಂದು ಸೀಟು ಸಿಕ್ಕಿತು. ಈಶ ಹಿಡಿದ್ದಿದ್ದ ಸೀಟಿನ ಅಡಿಯಲ್ಲಿ ಅವನಮ್ಮ ಸಾಮಾನುಗಳನ್ನು ತುಂಬಿಸಿದಳು. ಸೀಟು ಸಿಗದವರು ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ಹೇಳಿದ್ದಕ್ಕೆ ಅವರೀಗೂ ಅರ್ಧ ಟಿಕೇಕು ಮಾಡಿಸುವುದಾಗಿ ವಾದಮಾಡಿ ಯಾರಿಗೂ ಸೀಟು ಬಿಡಬಾರದೆಂದು ಈಶನಿಗೆ ಹೇಳಿದಳು. ಅವಳೊಡನೆ ವಾದ ಮಾಡಲಾಗದವರು ಗೊಣಗಿಕೊಂಡು ಸುಮ್ಮನಾದರು.

ಚಿಕ್ಕನಿಗಿಂತ ಸಣ್ಣವನಂತೆ ಕಾಣುತಿದ್ದ ಹುಡುಗನೊಬ್ಬ ಒಂದು ನಾಯಿಮರಿಯನ್ನು ಬಸ್ಸಿಗೆ ಹತ್ತಿಸಿ ಅದರ ಕುತ್ತಿಗೆಗೆ ಕಟ್ಟಿದ್ದ ಹುರಿಯನ್ನು ಭದ್ರವಾಗಿ ಹಿಡಿದು ನಿಂತಿದ್ದ.

ಬಿಳಿ ಪಂಚೆ, ಬಿಳಿ ಶರಟು, ಹಸಿರು ಟವೆಲ್ ಹೊದ್ದ ಯಜಮಾನರೊಬ್ಬರು ನಿಧಾನವಾಗಿ ಬಸ್ಸುಹತ್ತಿ ಯಾವುದಾದರೂ ಸೀಟಿದಿಯಾ ಎಂದು ಸುತ್ತಲೂ ಕಣ್ಣಾಡಿಸಿದರು. ಮುಂದಿನಿಂದ ಮೂರನೇ ಸೀಟಿನಲ್ಲಿ ಇವರಂತೆಯೇ ಹಸಿರು ಟವೆಲ್ ಹೊದ್ದಿದ್ದವನೋಬ್ಬನನ್ನು ನೋಡಿ
"ನಂಟ, ಏನೋ ಗಾಡನೇ ಹತ್ತಿ ಸೀಟ್ ಹಿಡಿದಿಯಾ, ನಂಗು ಒಂದು ಸೀಟ್ ಮಾಡದಲ್ಲೇನೋ" ಎಂದರು.
"ಸಂತೆ ಮುಗಿಸಿಕೊಂಡು ನೆನ್ನೆನೆ ಹೋಗಿರ್ತಿಯ ಅಂದುಕೊಂಡಿದ್ನಪ್ಪ. ಇನ್ನೂ ಇಲ್ಲೇ ಇದ್ದಿಯ ಅಂತ ನಂಗೇನು ಗೊತ್ತಿತ್ತು" ಎಂದು ರಾಗ ಎಳೆದ.
ಸೀಟಿ ಹೊಡೆಯುತ್ತಾ ಮೇಲೆ ಹತ್ತಿದ ಕಂಡಕ್ಟರ್ "ಮುಂದೆ ನಡಿರಿ ಪಂಚಾಯತಿನೆಲ್ಲಾ ಊರಿಗೆ ಹೊಗಿ ಮಾಡಿದ್ರಾಯಿತು" ಎಂದು ಒಳಗೆ ಕಳಿಸುತ್ತಾ ಇವರ ಮಾತುಗಳನ್ನು ತುಂಡರಿಸಿದ.
ಕಂಡಕ್ಟರನ ದೃಷ್ಟಿ ನಾಯಿಮರಿಯ ಮೇಲೆ ಬಿದ್ದಿತು. "ಯಾರುದ್ರಿ ಇದು ನಾಯಿಮರಿ" ಎಂದು ಅಬ್ಬರಿಸಿ "ನಿಂದೆನೋ?" ಎಂದು ಹುಡುಗನ ಕಡೆ ನೋಡಿದ.
"ಹೂ ಕಣ್ಣಣ್ಣ ನಂದೆಯ" ಎಂದ ಹುಡುಗ.
"ನಾಯಿ, ಕೋಳಿ, ಕುರಿನೆಲ್ಲ ಹತ್ತಿಸಲ್ಲ ಅಂತ ಗೊತ್ತಿಲ್ಲೇನೋ? ನಾಯಿ ತಗಂಡೋಗೋಹಂಗಿದ್ರೆ ಏಳ್ ಗಂಟೆ ಸಿದ್ರಾಮಕ್ಕ್ ಹೋಗು" ಎಂದು, ನಾಯಿ ಮತು ಹುಡುಗನನ್ನು ಇಳಿಸಲು ನೋಡಿದ.
"ಸುಂಕಿರಪ ಸಾಕು, ನಿನ್ ಬಸ್ಸೊಳಗೆ ಅರ್ದ ಗಂಟೆ ನಾಯಿಯಿದ್ರೆ ಏನು ಆಗಕಿಲ್ಲ. ನೋಡಕೆ ನಿನ್ಕಿಂತ ಅದೇ ಕ್ಲೀನಾಗಿ ಕಾಣ್ತಾಅಯ್ತಿ" ಎಂದು ಒಂದು ಮುದುಕಿ ಕಂಡಕ್ಟರಿಗೆ ತಗುಲಿಕೊಂಡಳು.
"ಓ ಭಾರಿ... ಅದು ಏನಾರ ಮಾಡಿಕೊಂಡ್ರೆ ನಿನ್ ಕೈಲೇ ಬಾಚುಸ್ತಿನಿ" ಎನ್ನುತ್ತಾ "ನಡಿರಿ ಮುಂದೆ" ಎನ್ನುತ್ತಾ ಒಳ ನಡೆದ.
ಚಿಕ್ಕ, ಊರಿಂದ ವಾಪಸ್ಸು ಬರುವಾಗ ಪಮ್ಮಿ ಮನೆಯಿಂದ ನಾಯಿಮರಿ ತರಬೇಕು ಎಂದು ಕೊಂಡಿದ್ದ. ಇವ್ರು ಬಸ್ಸಿಗೆ ಹತ್ತಿಸ್ದಿದ್ರೆ ಕಷ್ಟ, ದೊಡ್ಡಪ್ಪಂಗೆ ಹೇಳಿ ಡ್ರೈವರ್ ರುದ್ರಯ್ಯಂಗೆ ಹೇಳೋಕೆ ಹೇಳಬೇಕು ಎಂದು ಕೊಂಡ.

ಡ್ರೈವರ್ ರುದ್ರಯ್ಯನೂ ಬಸ್ಸು ಹತ್ತಿ, ಎರಡು ಸಾರಿ ಹಾರೆನ್ ಹೊಡೆದು, ಬಸ್ಸು ಸ್ಟಾರ್ಟ್ ಮಾಡಿದ. ನಿಧಾನವಾಗಿ ಬಸ್ಸು ಸರ್ಕಲ್ ಬಿಟ್ಟು ಕ್ಯಾಂಪಿನ ಕಡೆಗೆ ಹೊರಟಿತು.
ಟಿಕೇಟು ಮಾಡಿಕೊಂಡು ಕಂಡಕ್ಟರ್ ಈಶ, ಅವನಮ್ಮ ಕೂತಿದ್ದ ಸೀಟಿಗೆ ಬಂದ. "ಒಂದು ಫುಲ್, ಎಳ್ಡ್ ಆಫ್ ಎಂದು" ಈಶ ಮತ್ತು ಇನ್ನೋಬ್ಬ ಮಗನನು ತೋರಿಸಿದಳು.
"ಹೈಸ್ಕೂಲಿಗೆ ಹೋಗೋ ಹುಡುಗ್ರಿಗೆ ಫುಲ್ ಮಾಡಿಸ್ ಬೇಕು ಕಣಮ್ಮ" ಎಂದ ಕಂಡಕ್ಟರಿಗೆ, "ಸ್ಕೂಲ್ ಹೋಗ್ದೇ ಇರ್‍ಓ ಹುಡುಗ್ರಿಗೇನು ಪುಗ್ಸಟ್ಟೆ ಕರ್ಕೊಂಡು ಹೋಗ್ತಿಯಾ" ಎಂದು ಸವಾಲೆಸೆದಳು.
ಅಷ್ಟರಲ್ಲಿ ಬಸ್ಸು ಕ್ಯಾಂಪಿಗೆ ಬಂದಿದ್ದರಿಂದ ಹಾರನ್ ಮಾಡುತ್ತಾ ನಿಂತಿತು. ಓಡೊಡಿ ಬಸ್ಸು ಹತ್ತಿದ ಹುಡುಗನೋಬ್ಬ ಈಶ ಮತ್ತು ಅವರಮ್ಮನನ್ನು ನೋಡಿ "ಅತ್ತೆಮ್ಮ, ಅಮ್ಮ ಇನ್ನು ರೆಡಿಯಾಗಿಲ್ಲ ೧೦ ಗಂಟೆ ಬಸ್ಸಿಗೆ ಹೋಗೋದಂತೆ, ನೀನು ಇಳಿಬೇಕಂತೆ" ಎಂದು ಕೂಗಿ ಕೆಳಗಿಳಿದ. ಈ ತಾಯಿ ಅವಸರಮಾಡುತ್ತಾ ಈಶನಿಗೆ ೨ ಬ್ಯಾಗು ಕೊಟ್ಟು ಉಳಿದ ಬ್ಯಾಗುಗಳನ್ನು ಹಿಡಿದು ಇನ್ನೊಬ್ಬ ಮಗನನ್ನು ತಳ್ಳಿಕೊಂದು ಹತ್ತುತ್ತಿರುವವರಿಗೆ ಎದುರಾಗಿ ಇಳಿಯತೊಡಗಿದಳು. "ಸರ್ಕಲ್ಲಿಂದ ಕ್ಯಾಂಪಿಗೆ ಬರೋಕೆ ಇಷ್ಟೋಂದು ರಂಪ ಮಾಡಿದ ನೀನು, ಒಬ್ಬೊಬ್ಬರಿಗೆ ಎರೆಡೆರಡು ರುಪಾಯಿ ತೆಗಿ" ಎಂದ ಕಂಡಕ್ಟರನಿಗೆ ೫ ರೂಪಾಯಿ ಕೊಡುತ್ತಾ "ನೀನೆ ಇನ್ನು ೧ ರುಪಾಯಿ ಚಿಲ್ಲರೆ ಕೊಡಬೇಕು" ಎಂದಳು. "ಇನ್ನೇನು ಬ್ಯಾಡವೆ?" ಎಂದು ಚಿಲ್ಲರೆ ಕೊಡದೆ ರೈಟ್ ಹೇಳಿ "ರುದ್ರಣ್ಣ, ಸರ್ಕಲ್ಲಿಂದ ಕ್ಯಾಂಪಿಗೆ ಯಾರುನ್ನೂ ಹತ್ತಿಸೋದು ಬ್ಯಾಡಕಣ್ಣಣ್ಣ ಇನ್ನ್ ಮೇಲೆ" ಎನ್ನುತ್ತ ಟಿಕೇಟ್ ಮಾಡುತ್ತಾ ಮುಂದೆ ಹೋದನು.

ಕಂಡಕ್ಟರ್ ಹಸಿರು ಟವೆಲ್ ಯಜಮಾನರ ಬಳಿ ಬಂದು ಟಿಕೆಟ್, ಟಿಕೆಟ್ ಎಂದಾಗ "ನಂಟ ನಂದೂ ತಗಂಡಿದಿಯ ಅಲ್ಲೇನೋ?" ಎಂದು ಖಾತ್ರಿಯಾಗಿ ಕುಳಿತಿದ್ದ ಹಸಿರು ಟವೆಲ್ಲಿನವರ ಕಡೆಗೆ ನೋಡಿದರು, "ಯಾಕಪ್ಪ? ನೀನು ರಾತ್ರೆಲ್ಲ ಆಟ ಆಡಿ ದುಡ್ಡು ಕಳಕಂಡು ಬಂದಿದಿಯಾ ಅಂತ ನನಗೇನು ಗೊತ್ತಾಗಬೇಕು" ಎಂದು ತಣ್ಣಗೆ ಮರ್ಯಾದೆ ತೆಗೆಯಲು ಶುರು ಮಾಡಿದ್ದರಿಂದ ಗೊಣಗಿಕೊಳ್ಳುತ್ತಾ ಟಿಕೇಟಿಗೆ ದುಡ್ಡು ಕೊಡತೊಡಗಿದರು.

"ದೇವರಳ್ಳಿಗೆ ನಾಕುವರೆಗೆ ಕಮ್ಮಿ ಇಲ್ಲ... ಸರಿಯಾಗಿ ಕೊಡು ಇದೇನು ಸಂತೆ ವ್ಯಾಪಾರ ಕೆಟ್ಟೋತೆ? " ಎಂದು ಕಂಡಕ್ಟರ್ ಒಂದು ಮುದುಕಿಯ ಮೇಲೆ ರೇಗತೊಡಗಿದಾದ ಚಿಕ್ಕನ ಗಮನ ಆ ಕಡೆಗೆ ಹರಿಯಿತು. "ಸುಂಕೆ ಇಟ್ಟ್ಗಳಪ್ಪ ಒಂದು ರುಪಾಯಗೆ ಯಾರು ಎನ್ ಮನೆ ಕಟ್ಟಿ ಮದುವೆ ಮಾಡಕಿಲ್ಲ" ಎಂದಳು ಘಾಟಿ ಮುದುಕಿ.
"ಸಾರಿಯಾಗಿ ದುಡ್ಡು ತೆಗೆ, ಇಲ್ಲಾಂದ್ರೆ ಇಲ್ಲೇ ಇಳಿಸಿ ಹೋಗ್ತಿನಿ ನೋಡು" ಎಂದ ಕಂಡಕ್ಟರ್ ಎಂದರೂ ಮುದುಕಿ ಬಗ್ಗುವಂತೆ ಕಾಣಲಿಲ್ಲ. "ರುದ್ರಣ್ಣ ಗಾಡಿ ಸೈಡಿಗೆ ನಿಲ್ಲಿಸು ಈವಮ್ಮನ್ನ ಇಲ್ಲೇ ಇಳಿಸಿ ಹೋಗೋಣ... ಇವರತ್ರ ಯಾವನ್ ಬಡ್ಕ್ಂತನೆ" ಎಂದಿದ್ದಕ್ಕೆ, "ತಗಳೋ ಮಾರಯ, ಒಂದ್ ರುಪಾಯಿ ಮಕಾನೆ ಕಂಡಿಲ್ದಂಗೆ ಆಡ್ತನೆ ಇವನು" ಎಂದು ತನ್ನ ಎಲೆ ಚೀಲದಿಂದ ಒಂದು ರೂಪಾಯಿ ತೆಗೆದು ಕುಕ್ಕಿದಳು.

ಇಷ್ಟರಲ್ಲಿ ಹಿಂದಿನ ಬಾಗಿಲಿನ ಬಳಿ ನೆಡೆಯುತ್ತಿದ್ದ ಕುತೂಹಲಕಾರಿ ಮಾತುಕತೆಗಳ ಕಡೆಗೆ ಚಿಕ್ಕನ ಕಿವಿ ತಿರುಗಿದವು
ಒಂದು ಧ್ವನಿ "ಲೋ ಲೌಡೆ!! ಆವಾಗಿಂದ ಕಾಣ್ದಂಗೆ ಎಲ್ಲಿ ನಿಂತಿದ್ದೆ?" ಎಂದರೆ, "ಓ ನೀನು, ಏನ್ ಹೇಳಪ್ಪ" ಎಂದು ಇನ್ನೊಂದು ಧ್ವನಿ ಉತ್ತರಿಸಿತು.
"ನಾಳೆ ಗಿರೀಲಿ ನನ್ನ ಮದುವೆ, ಬರಬೇಕು ನೀನು"
"ಏ ಇದೇನೋ ಇದು ಇದ್ದುಕಿದ್ದಂಗೆ?"
"ಯಾಕೆ ನಂಗೇನು ಮೀಸೆ ಬಂದಿಲ್ವ, ಇಲ್ಲ ತೊಡೆ ಬಲ್ತಿಲ್ವ?"
"ಹಂಗಲ್ಲ ಕಣಲೆ, ಸಡನ್ ಆಗಿ ಹೇಳ್ತಿದಿಯಲ್ಲ ಅದುಕ್ಕೆ ಕೇಳಿದ್ದು"

"ದೇವರಳ್ಳಿ, ದೇವರಳ್ಳಿ ಯಾರ್ರಿ? ಇಳಿಯವ್ರು ಬರ್ರೀ ಬೇಗ" ಎಂದು ಕಂಡಕ್ಟರ್ ಕೂಗಿದಾಗ ಮದುವೆಗೆ ಕರೆಯುತ್ತಿದ್ದ ಮದಲಿಂಗ "ಮರಿದಲೆ ಬರಬೇಕಲೇ" ಎಂದು ಹೇಳಿ ಇಳಿದು ಹೋದ.

"ರೈಟ್ ರೈಟ್" ಎಂದೊಡನೆ ಬಸ್ಸು ಮುಂದಕ್ಕೆ ಹೊರಟಿತು, ಹಿಂದಿನ ಬಾಗಿಲಿನ ಬಳಿಯಿಂದ ಧ್ವನಿಗಳು ಬರುತ್ತಲೇ ಇದ್ದವು,
"ಮೂರು ಪ್ಯಾಕೆಟ್ ಹೊಡೆದ ಮೇಲೆ ನೆಟ್ಟಗೆ ನಿಂತ್ಗಳಕೆ ಬರಲ್ಲ ಇವ್ರಿಗೆಲ್ಲ ಮದುವೆ"
"ಬಿಡಲೆ, ಎಲ್ಲಾರಿಗೂ ಆಗ್ತಾಯ್ತಿ... ಇವ್ನಿಗೂ ಆಗ್ಲಿ... ನೀನು ಹೋಗಿ ಲಾಡ್ ತಿಂದ್ ಬಾ..."
"ಲಾಡ್ ಎಲ್ಲೆದು, ಪಾಯ್ಸ ಇದ್ದಾತು ಅಷ್ಟೆಯ"
"ಅಷ್ಟೆ ಅಂತಿಯ?"
"ಕಣಿ ಕೇಳು"

ಚಿಕ್ಕನಿಗಾಗಲೆ ಸಣ್ಣಗೆ ತೂಕಡಿಕೆ ಶುರುವಾಗಿದ್ದರಿಂದ, ಕಿಟಕಿಗೆ ಒರಗಿ ಕೊಂಡ.

Tuesday, 20 November 2007

2007 ಕರ್ನಾಟಕದ ರಾಜಕೀಯ

ಗೆಳೆಯರೆ,

youtube ನೋಡುತ್ತಿದ್ದಾಗ ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದು ವೀಡಿಯೋ ನೋಡಿದೆ. ಇದು ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ವೀಡಿಯೊ ರೂಪ. ಬರೆದು ಪ್ರಸ್ತುತ ಪಡಿಸುವವರು ರವಿ ಕೃಷ್ಣ ರೆಡ್ಡಿ. ಈ ಲೇಖನಗಳನ್ನು ಅವರ ಬ್ಲಾಗಿನಲ್ಲಿಯೂ ನೋಡಬಹುದು. ಅವರ ಬ್ಲಾಗಿನ ಹಾದಿ ಕೆಳಗಿದೆ.

ಬ್ಲಾಗ್ - ಅಮೇರಿಕಾದಿಂದ ರವಿ

Thursday, 8 November 2007

ಕೊಡಚಾದ್ರಿ -6


ಚಿತ್ರ: ನಾವು ಚಾರಣ ಆರಂಭಿಸಿ, ಮುಕ್ತಾಯಗೊಳಿಸಿದ ಮಹಾದ್ವಾರ.


ಕೊಡಚಾದ್ರಿಗೆ ದಾರಿ ತೋರಿಸುತೇನೆ, ಬನ್ನಿ ಎಂದು ನಮಗೆ ಕೊಟ್ಟ ಆಹ್ವಾನ ಸ್ವೀಕರಿಸದೆ ನಾವು ಕೊಲ್ಲೂರಿನ ಕಡೆಗೆ ಹೊರಟೆವು. ಅಯ್ಯೋ ದಾರಿ ಇನ್ನೂ ಮುಗಿಲಿಲ್ಲ... ಇನ್ನೂ ಮುಗಿಲಿಲ್ಲ... ಎಂದುಕೊಂಡು ಒಂದೂವರೆ ಗಂಟೆ ನೆಡೆದು ಹಿಂದಿನ ದಿನ ಬಸ್ಸಿನಿಂದ ಇಳಿದಿದ್ದ -ಕೊಲ್ಲೂರಿಗೆ ಹೋಗುವ- ಟಾರ್ ರಸ್ತೆ ಸೇರಿದೆವು. ಎರಡು ದಿನಗಳು ಸತತವಾಗಿ ನೆಡೆದು ಸುಸ್ತಾಗಿದ್ದ ನಮಗೆಲ್ಲ ಸಧ್ಯ ಎರಡನೇ ದಿನ ಹೆಚ್ಚಿಗೆ ತೊಂದರೆಗೆ ಒಳಗಾಗದೆ ಕೊನೆ ಮುಟ್ಟಿದ್ದಕ್ಕೆ ಸಂತೋಷವಾಗಿತ್ತು. ಆದರೆ ಅಂದು ಕೊಂಡಹಾಗೆ ಕೊಡಚಾದ್ರಿ ಗುಡ್ಡವನ್ನು ನೋಡದೆ ಇದ್ದುದ್ದಕ್ಕೆ ಬೇಸರವೂ ಇತ್ತು.

ಇಲ್ಲಿಂದ ಕೊಲ್ಲೂರಿಗೆ ೧ ರಿಂದ ೨ ಕಿ.ಮೀ. ಕೆಲವರು ನೆಡೆದು ಹೊಗೋಣ ಎಂದರು, ಇನ್ನು ಕೆಲವರು ಬಸ್ಸಿಗೆ ಕಾಯೋಣ ಅಂದು ಅಲ್ಲೇ ರಸ್ತೆ ಪಕ್ಕ ಕೂತರು. ನೆಡೆಯೋದು, ಬಸ್ಸಿಡಿಯೋದು ಎಲ್ಲಾ ಬಿಟು ಆಟೋ ಹಿಡಿದು ಕೊಲ್ಲೂರಿನ ಕಡೆ ಹೊರಟೆವು. ನಮಗಿಂತ ಮುಂಚೆ ಹೋಗಿದ್ದವರು ಕೊಲೂರಿನಲ್ಲಿ ಹರಿಯುವ ಸೌಪರ್ಣಿಕ ನದಿಯ ಬಳಿ ಇರುವುದಾಗಿ ಹೇಳಿದ್ದರು. ಅಲ್ಲಿ ಹೋಗಿ ಅವರನ್ನು ಸೇರಿಕೊಂಡೆವು. ನಮಗೆ ಭೇಟಿಯಾಗಿದ್ದವನು ಹೇಳಿದ್ದನ್ನು ಅವರಿಗೆ ಹೇಳಿದೆವು. ಎಲ್ಲರೂ ನದಿಯಲ್ಲಿ ಮುಳುಗಾಕಿ ಸ್ನಾನ ಮಾಡಿದೆವು. ದೇವಿಯ ದರ್ಶನ ಮಾಡಿ ದೇವಸ್ತಾನದ ಹತ್ತಿರದಲ್ಲೇ ಇದ್ದ ಹೋಟೆಲ್ ಒಂದಕ್ಕೆ ಊಟಕ್ಕೆ ನುಗ್ಗಿದೆವು. ಅಲ್ಲಿ ಇದ್ದುದ್ದನ್ನೆಲ್ಲಾ ತಿಂದು ಬಸ್ಸು ಹಿಡಿಯಲು ಹೊರಟೆವು.

ಕೊಲ್ಲೂರಿನಿಂದ ಬಸ್ಸು ೮ ಗಂಟೆಗೆ ಹೊರಟಾಗ ಸಂತೋಷ, ದುಖಃ ಎರಡು ನಮ್ಮನ್ನು ಆವರಿಸಿಕೊಂಡಿದ್ದವು. ತೊಂದರೆ ಇಲ್ಲದೆ ವಾಪಸ್ಸು ಬಂದಿದ್ದು ಸಂತೋಷಕ್ಕೆ ಕಾರಣವಾದರೆ, ಕೊಡಚಾದ್ರಿಯ ತುದಿ ತಲುಪದೆ ಹಿಂದಿರುಗಿದ್ದಕ್ಕೆ ಬೇಸರವೂ ಇತ್ತು. ಆದರೂ ನಮಗಾದ ಅನುಭವ ಅಗಾಧವಾಗಿದ್ದದಾಗಿತ್ತು.

ಇಲ್ಲಿಗೆ ನಮ್ಮ ಕೊಡಚಾದ್ರಿಯ ಅನುಭವವನ್ನು ಮುಗಿಸೋಣ. ಇದನ್ನೆಲ್ಲಾ ಓದಿ ನಿಮಗೂ ಎಲ್ಲಾದರೂ ಚಾರಣಕ್ಕೆ ಹೋಗಬೇಕು, ಇಲ್ಲವೇ ಪ್ರಕೃತಿಯ ತೆಕ್ಕೆಗೆ ಬೀಳಬೇಕು ಎನ್ನಿಸಿರಬೇಕು. ಚಾರಣಕ್ಕೆ ಹೊರಟಿರುವವರಿಗೆಲ್ಲಾ ನಮ್ಮ ತಂಡದ ಕಡೆಯಿಂದ ಒಂದೆರೆಡು ಮಾತುಗಳು.

ಅಗತ್ಯವಾಗಿ ಮಾಡಬೇಕಾಗಿದ್ದು:

1. ಸಾಕಾಗುವಷ್ಟು ಊಟ ಮತ್ತು ನೀರು.
2. ಬೇಕಿದ್ದಷ್ಟು Electoral, Glucose Powder, First Aid Kit ಮತ್ತು ಅಗತ್ಯವಿದ್ದ ಔಷಧಗಳು.
3. ಕಾಡು ಮತ್ತು ಗುಡ್ಡಗಳಲ್ಲಿ ತಿರುಗಲು ಮಳೆಗಾಲ ಸೂಕ್ತವಲ್ಲ.
4. ಬೆಂಕಿ ಪೊಟ್ಟಣ ನೀರಿಗೆ ಬಿದ್ದರೆ ಉಪಯೋಗಕ್ಕೆ ಬರುವುದಿಲ್ಲ ಆದರಿಂದ lighter ಇರಲಿ. ಚಾಕು, ಮೇಣದ ಬತ್ತಿಗಳು ಮತ್ತು ಬ್ಯಾಟರಿ ಅಗತ್ಯ.
5. ಹೊರಟಿರುವ ಸ್ತಳದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿ. ಸಾಧ್ಯವಾದಲ್ಲಿ ಸ್ತಳೀಯರನ್ನ ಮಾರ್ಗದರ್ಶಕರನ್ನಾಗಿ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮೊಳಗೇ ಮುಂಚೆ ಆ ಜಾಗಕ್ಕೆ ಹೋಗಿ ಬಂದವರಿದ್ದರೆ ಒಳ್ಳೆಯದು.
6. ಜಿಗಣೆಗಳ ಕಾಟಕ್ಕೆ ತಕ್ಕ ಮುಂಜಾಗ್ರತೆ ಮತ್ತು ಔಷಧಿ ಅಗತ್ಯ.
7. ಅಗತ್ಯ ಇಲ್ಲದ್ದನ್ನೆಲ್ಲಾ ತುಂಬಿಸಿ ಬ್ಯಾಗುಗಳನ್ನು ಹೊರಲಾರದ ಹಾಗೆ ಮಾಡಿಕೊಳ್ಳ ಬೇಡಿ. ಏನಾದ್ರು ಹೆಚ್ಚಿಗೆ ತೆಗೆದುಕೊಂಡು ಹೋಗಬೇಂದಿದ್ದಲ್ಲಿ, ಊಟ ಮತ್ತು ನೀರಿಗೆ ಆದ್ಯತೆ ಕೊಡಿ.

ಅಗತ್ಯವಾಗಿ ತಪ್ಪಿಸಬೇಕಾದುದ್ದು -ಮಾಡಬಾರದ್ದು:

1. ಸಿಗರೇಟು ಮತ್ತು ಮಧ್ಯಪಾನ ಬೇಡ.
2. ಕಾಡಿನಲ್ಲಿ ಬೆಂಕಿಯ ಬಗ್ಗೆ ಎಚ್ಚರ ಇರಲಿ. ಎಲ್ಲೆಂದರಲ್ಲಿ ಬೆಂಕಿ ಹಾಕಬೇಡಿ.
3. ದಾರಿಗಳನ್ನು ಬಿಟ್ಟು ಬೇರೆಡೆ ಹೋಗಬೇಡಿ. ಸಾಧ್ಯವಾದಷ್ಟು ಇರುವ ದಾರಿಗಳನ್ನೇ ಬಳಸಿ.
4. ರಾತ್ರಿಗಳಲ್ಲಿ ಕಾಡಿನಲ್ಲಿ ಉಳಿಯುವಂತಹ ಪ್ರಸಂಗ ತಂದುಕೊಳ್ಳಬೇಡಿ. ಉಳಿದರೂ ನೀರು ಇರುವ ಕಡೆ ಉಳಿಯ ಬೇಡಿ.
5. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ. ನೀವು ಮಾಡಿದ ಕಸವನ್ನು ನಿಮ್ಮ ಜೊತೆಯಲ್ಲಿಯೇ ವಾಪಸ್ಸು ತನ್ನಿ.
6. ಕಾಡುಗಳು ಮತ್ತು ನಿರ್ಜನವಾದ ಜಾಗಗಳಲ್ಲಿ ಕೂಗಾಡುವುದು, ಅಬ್ಬರದ ಸಂಗೀತ ಹಾಕುವುದು ಬೇಡ.
7. Heroism ಇಂದ ದೂರ ಇರಿ. ಗೊತ್ತಿಲ್ಲದ/ ಪರಿಚಯವಿಲ್ಲದ ನೀರಿನ ಜಾಗದಲ್ಲಿ ಈಜಲು ಹೋಗಬೇಡಿ.

Friday, 19 October 2007

ಕೊಡಚಾದ್ರಿ -5

--- **** ---
ಕನ್ನಡದಲ್ಲಿ ಬಹಳಷ್ಟು ಬ್ಲಾಗುಗಳ ಕತೆ ’ಅಗಸ ಹೊಸತರಲ್ಲಿ...’ ಎನ್ನುವಂತೆ ಆಗಿವೆ ಅನ್ನೊ ಒಂದು ಆಪಾದನೆ ಇದೆ. ಕಾಡು ಹರಟೆನೂ ಅದೇ ಪಟ್ಟಿಗೆ ಸೇರಿಕೊಂಡಿತೇನೋ ಎಂದು ನೀವು ಅಂದುಕೊಂಡಿರಬಹುದು. ಕೆಲಸದ ಹೆಚ್ಚಿದ್ದರಿಂದ ಸ್ವಲ್ಪ ದಿನ ಬರೆಯಲು ಆಗಲಿಲ್ಲ. ಕೊಡಚಾದ್ರಿಯ ಐದನೇ ಭಾಗ ಇಲ್ಲಿದೆ, ಆರನೆಯ ಹಾಗು ಕೊನೆಯ ಭಾಗವನ್ನೂ ಸಹ ಸದ್ಯದಲ್ಲೇ ಹಾಕುತ್ತೇನೆ.

ಕಾದಿದ್ದಕ್ಕೆ ಥ್ಯಾಂಕ್ಸ್.
--- **** ---

ಬಿಸಿಲೇರೋ ಮೊದಲು ಆದಷ್ಟು ದೂರ ನೆಡೆಯಬೇಕೆಂದುಕೊಂಡು ಬೇಗ ಬೇಗನೇ ಹೆಜ್ಜೆ ಹಾಕತೊಡಗಿದೆವು. ನಾವು ೧ ಗಂಟೆಗಳಷ್ಟು ವೇಳೆ ನೆಡೆಯುವುದರೊಳಗೆ ಮೊದಲನೆಯ ತೊರೆಯನ್ನು ಸಮೀಪಿಸಿದೆವು. ಇನ್ನು ಅರ್ಧ ಗಂಟೆ ನೆಡೆದರೆ ಇನ್ನೊಂದು ತೊರೆ ಸಿಗುತ್ತದೆಂದು ಗೊತ್ತಿದ್ದರಿಂದ ಇಲ್ಲಿ ಹೆಚ್ಚು ಸಮಯ ಕಳೆಯದೆ ಮುಂದೆ ನೆಡೆದೆವು. ಸಮಯ ಬೆಳಗಿನ ಎಂಟುಗಂಟೆಯನ್ನು ದಾಟಿತ್ತು. ಆಗಲೆ ಬಿಸಿಲೇರಿ ಬೆವರು ಕೀಳತೊಡಗಿತ್ತು. ಆದರೂ ಜಯಂತ ತನ್ನ ಜಾಕೆಟ್ ಹಾಕಿಕೊಂಡೇ ನೆಡೆಯುತ್ತಿದ್ದ. 'ಯಾಕೋ ಕಂದ ನಿನಗೆ ಶಕೆಯಾಗುತ್ತಿಲ್ಲವೇ?' ಎಂದು ಕೇಳಿದರೆ, 'ಮಗ ಇದುನ್ನ ಬಿಚ್ಚಿ ಬ್ಯಾಗಿಗೆ ಹಾಕಿದರೆ ಬ್ಯಾಗ್ ಭಾರ ಆಗಿ ನೆಡೆಯೋದು ಕಷ್ಟ ಆಗುತ್ತೆ' ಎಂದ! ಅಯ್ಯೋ ಇವನಾ... ಎಂದು ಅವನ ಜಾಕೆಟ್ ತೆಗೆದುಕೊಂಡು ನನ್ನ ಬ್ಯಾಗಿಗೆ ತುರುಕಿದೆ.

ವಾಪಸ್ ನೆಡೆಯುತ್ತಾ ಅತ್ತ ಇತ್ತ ಹಾದಿ ನೋಡುತ್ತಿರುವಾಗ 'ಅಬ್ಬ ನೆನ್ನೆ ರಾತ್ರಿ ಕತ್ತಲೆಯಲ್ಲಿ ಎಂತಾ ಕಷ್ಟದ ದಾರಿ ಸವೆಸಿದ್ದೇವೆ' ಎಂದುಕೊಂಡೆವು. ಕೆಲವು ಕಡೆಗಳಲ್ಲಿ ದಾರಿಯೇ ಇರಲಿಲ್ಲ, ಇನ್ನು ಕೆಲವು ಕಡೆ ದೊಡ್ಡ ದೊಡ್ಡ ಮರಗಳು ಅಡ್ಡ ಬಿದ್ದಿದ್ದರೆ ಒಂದೆರೆಡುಕಡೆ ಭೂಮಿ ಜರುಗಿ ದೊಡ್ಡ ಕಂದಕಗಳೇ ಆಗಿದ್ದವು. ಚೆನ್ನಾಗಿ ಬೆಳಕಿರುವಾಗ ಈ ದಾರಿಗೆ ಬಂದಿದ್ದರೆ ಖಂಡಿತವಾಗಿಯೂ ಮುಂದೆ ಹೋಗದೆ ಹಿಂತಿರುಗುತ್ತಿದ್ದೆವು.

ಎರಡನೇ ತೊರೆ ಬೆಳಗ್ಗೆ ೮-೩೦ರ ಸುಮಾರಿಗೆ ಸಿಕ್ಕಿತು. ನೆನ್ನೆಯಿಂದ ಒಂದೇ ಸಮನೆ ನೆಡೆದು ಸುಸ್ತಾಗಿದ್ದೆ. ಬೆವರು ಧಾರಳವಾಗಿ ಹರಿದು ಮೈ ನೆನೆದು, ಬಿಸಿಲಿಗೆ ಒಣಗಿ ಮತ್ತೆ ನೆನೆದು ಸಣ್ಣಗೆ ವಾಸನೆ ಬರಲು ಶುರುವಾಗಿತ್ತು. ಹೇಗಿದ್ದರು ತೊರೆಯಲ್ಲಿ ಅಲ್ಲೊಂದು ಇಲ್ಲೊಂದು ಸೊಂಟದೆತ್ತರದ ಗುಂಡಿಗಳಿದ್ದವು. ನಾನು ಮೊದಲು ತಲುಪಿದ್ದರಿಂದ ಹಿಂದಿನವರು ಬಂದು ಕೂಡಿಕೊಳ್ಳುವುದರೊಳಗೆ ಸ್ನಾನ ಮಾಡೋಣವೆಂದು ಸೋಪು ಹಿಡಿದು ಸ್ವಲ್ಪ ಕೆಳಗೆ ನೆಡೆದೆ. ಬೇಸಿಗೆಯಲ್ಲೂ ನೀರು ತಣ್ಣಗೆ ಕೊರೆಯುತ್ತಿತ್ತು. ನೀರಿಗೆ ಬಿದ್ದು ಎಮ್ಮೆಯಂತೆ ಉರುಳಾಡಿ ಸ್ನಾನ ಪೂರೈಸುವುದರೊಳಗೆ ಎಲ್ಲರೂ ಆ ತೊರೆಯನ್ನು ಬಂದು ಸೇರಿದರು. ನನ್ನನ್ನು ನೋಡಿ ಉತ್ತೇಜಿತರಾದ ಕೆಲವರು ಸ್ನಾನಮಾಡಿದರೆ, ಉಳಿದವರು ಕೈ ಕಾಲು ಮುಖ ತೊಳೆದೇ ಸಂತುಷ್ಟರಾದರು.

ಒಬ್ಬೊಬ್ಬರು ೬-೬ ಪಾರ್ಲೇಜಿಗಳನ್ನು ತಿಂದು ತಿಂಡಿಯ ಶಾಸ್ತ್ರವನ್ನು ಪೂರೈಸಿದೆವು. ಇಲ್ಲಿಂದ ಹೊರಟಾಗ ಸಮಯ ೯ ದಾಟಿತ್ತು. ಸುಮಾರು ೧೨-೩೦ರ ಸುಮಾರಿಗೆ ಹಿಂದಿನ ದಿನ ಬಂದು ತಲುಪಿದ್ದ ಕೊಡಚಾದ್ರಿಯ ಪಕ್ಕಕ್ಕಿದ್ದ ಗುಡ್ಡವನ್ನು ಬಂದು ಸೇರಿದೆವು. ಹಿಂದಿನ ಸಂಜೆ ೧ ಗಂಟೆಯಲ್ಲಿ ಇಳಿದಿದ್ದ ಇಳಿಜಾರನ್ನು ಮತ್ತೆ ಹತ್ತಲು ಇಂದು ನಮಗೆ ೩ ಗಂಟೆಗೂ ಹೆಚ್ಚಿನ ಸಮಯ ಹಿಡಿದಿತ್ತು. ಬೊಳು ನೆತ್ತಿಯನ್ನು ಸಮೀಪಿಸುತ್ತಿದ್ದಂತೆ ಮರಗಳು ಕಡಿಮೆಯಾಗಿ ಮಧ್ಯಾನ್ಹದ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ತತ್ತರಿಸಿದ್ದೆವು. ಅಲ್ಲೊಂದು ಇಲ್ಲೊಂದು ಇದ್ದ ಮರದ ನೆರಳಿನಲ್ಲಿ ಕಾಲು ಚಾಚಿದೆವು. ಸ್ವಲ್ಪ ವಿಶ್ರಮಿಸಿ, ಪಾರ್ಲೇಜೀ ತಿಂದು ನೀರು ಕುಡಿದೆವು. ಇಲ್ಲಿಂದ ಹಿಂದಿನ ದಿನ ನಾವು ಬಸ್ಸಿನಿಂದ ಇಳಿದಿದ್ದ ಟಾರ್ ರಸ್ತೆ ಸೇರಲು ಸುಮಾರು ೬ ಗಂಟೆಗಳು ಬೇಕಾಗಬಹುದು ಎಂದುಕೊಂಡೆವು.

೧ ಗಂಟೆಯ ಊಟದ ವಿರಾಮ ಮುಗಿಸಿ, ೧:೩೦ರ ಸುಮಾರಿಗೆ ಬೆಟ್ಟ ಇಳಿಯಲು ಸಜ್ಜಾದೆವು. ಇಲ್ಲಿಂದ ಮುಂದೆ ಬರೀ ಇಳಿಜಾರು. ವಿಶ್ರಾಂತಿಯ ನಂತರ ಶಕ್ತಿ ವೃದ್ದಿಸಿಕೊಂದಿಡ್ಡರಿಂದ ಧಡ ಧಡನೆ ಇಳಿಯ ತೊಡಗಿದೆವು. ಕಡಿದಾದ ಈ ಇಳಿಜಾರನ್ನು ನೋಡಿದಾಗ ನಾವುಗಳು ಹಿಂದಿನ ದಿನ ಹೇಗೆ ಈ ದಾರಿಯನ್ನು ಹತ್ತಿ ಹೋಗಿದ್ದೆವೋ ಎಂದು ಕೊಂಡೆ. ಇದಕ್ಕೂ ಮುಂಚೆ ನಾನು ನೋಡಿದ್ದ ಕಡಿದಾದ ಬೆಟ್ಟ ಎಂದರೆ ಚಿಕ್ಕಮಗಳೂರು ಜಿಲ್ಲೆಯ ದೇವೀರಮ್ಮನ ಬೆಟ್ಟ. ದೇವಿರಮ್ಮನ ಬೆಟ್ಟದ ಏರನ್ನು ಸತತವಾಗಿ ೪೫ ನಿಮಿಷಗಳಷ್ಟು ಹತ್ತಿದರೆ ತುದಿ ತಲುಪುತ್ತೇವೆ. ಆದರೆ ಈ ಬೆಟ್ಟದ ಏರನ್ನು ಅರ್ಧ ದಿನಕ್ಕೂ ಹೆಚ್ಚಿಗೆ ಹತ್ತಿದ್ದೆವು.

ಇಳಿಜಾರನ್ನು ನಾವು ಅಂದುಕೊಂಡಿದ್ದಕಿಂತಲೂ ಬೇಗನೆ ಇಳಿಯ ತೊಡಗಿದ್ದೆವು. ಹಿಂದಿನ ದಿನ ನಾವು ನೋಡಿದ್ದ ಝರಿಯ ಬಳಿಗೆ ಒಬ್ಬೊಬ್ಬರಾಗಿ ಬಂದು ವಿಶ್ರಮಿಸಿ ಕೊಳ್ಳತೊಡಗಿದೆವು. ಎರಡು ದಿನಗಳವರೆಗೆ ಸತತವಾಗಿ ನೆಡೆದು ಕಾಲುಗಳು ರಾಗ ಹಾಡುತ್ತಿರುವಾಗ ತಣ್ಣಗೆ ಕೊರೆಯುವ ನೀರಿನಲ್ಲಿ ಕಾಲು ಮುಳುಗಿಸಿಕೊಂಡು ಕೂತರೆ ದೊರೆಯುವ ಆನಂದ... ಆ.. ಹಾ.. ಎನ್ನುವಂತಹುದು... ಅನುಭವಿಸಿದವರಿಗೇ ಅದು ಗೊತ್ತು. ಉಳಿದಿದ್ದ ಬ್ರಿಟಾನಿಯ ಕೇಕು ಮತ್ತು ಸ್ವಲ್ಪ ಬಿಸ್ಕೆಟ್ ತಿಂದು ಆಗುವಷ್ಟು ನೀರು ಕುಡಿದು ಮತ್ತೆ ಹೊರಡಲು ತಯಾರಾದೆವು. ಹರೀಶ, ಜಗದೀಶ, ಮಿಲ್ಟ್ರಿ ಇವರೆಲ್ಲಾ "ನಾವು ಮುಂದೆ ಮುಂದೆ ಹೊಗುತ್ತೇವೆ. ನೀವು ಟಾರ್ ರಸ್ತೆ ಬಂದು ಸೇರುವುದು ತಡ ಆದರೆ ನಾವು ನಿಮಗೆ ಕಾಯದೆ ಕೊಲ್ಲೂರಿಗೆ ಹೊಗಿರುತ್ತೇವೆ. ಅಲ್ಲಿ ಸೀದ ನದಿಗೆ ಬನ್ನಿ ನಾವು ಅಲ್ಲೇ ಇರುತ್ತೇವೆ" ಎಂದು ಹಿಂದೆ ಬೀಳುವ ಗ್ಯಾಂಗಿಗೆ ಹೇಳಿ ಹೊರಟರು.

ನಾವು ಒಂದು ಆರು ಜನ ಇನ್ನೂ ಸ್ವಲ್ಪ ಹೂತ್ತು ನೀರಿನಲ್ಲಿ ಕಾಲಾಡಿಸುತ್ತ ಕೂತಿದ್ದೆವು. ಇಲ್ಲಿಂದ ಮುಂದೆ ನಮಗೆ ಸಿಗುತ್ತಿದ್ದ ಮುಖ್ಯ ಜಾಗಗಳೆಂದರೆ ಹಿಂದಿನ ದಿನ ಅರಿಶಿನಗುಂಡಿ ಫಾಲ್ಸಿಗೆ ಹೊಗಲು ಹಿಡಿದಿದ್ದ ಕಾಲುದಾರಿ, ಅಲ್ಲಿಂದ ೧ ಗಂಟೆಯ ದೂರಕ್ಕೆ ಟಾರ್ ರಸ್ತೆ. ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಅರಿಶಿನಗುಂಡಿಯ ಕಡೆಗೆ ತಿರುಗುವ ಕಾಲು ದಾರಿಯ ಬಳಿ ಬಂದೆವು. ಅಲ್ಲಿ ನಮಗೆ ಇನ್ನೋಂದು ಚಾರಣ ತಂಡ ಸಿಕ್ಕಿತು. ಅವರೊಟ್ಟಿಗೆ ಅವರಿಗೆ ಮಾರ್ಗದರ್ಶಕನಾಗಿ ಬಂದಿದ್ದ ಸ್ತಳೀಯನೊಬ್ಬ ಇದ್ದ. ನಾನು ಅವನೊಟ್ಟಿಗೆ ಮಾತಿಗೆ ಇಳಿದೆ.

ನಾನು- 'ನೀವು ಅರಿಶಿನಗುಂಡಿ ಫಾಲ್ಸ್ ಕಡೆಯಿಂದ ಬಂದ್ರ?'

ಸ್ತಳೀಯ - 'ಹೌದು, ಕೊಡಚಾದ್ರಿಯಿಂದ ಹೊರಟು ಅರಿಶಿನಗುಂಡಿ ಫಾಲ್ಸಿಗೆ ಬಂದು ಅಲ್ಲಿಂದ ಈಗ ಇಲ್ಲಿಗೆ ಬಂದಿದ್ದೀವಿ. ಇವರೆಲ್ಲ ನನಗೆ ಕೊಡಚಾದ್ರಿಯಲ್ಲಿ ಸಿಕ್ಕಿದ್ರು, ದಾರಿ ತೊರಿಸ್ಲಿಕ್ಕೆ ಇವರೊಟ್ಟಿಗೆ ಬಂದೆ, ಈಗ ತಿರುಗಿ ಹೊರಟೆ'

'ಅರಿಶಿನಗುಂಡಿಯಿಂದ ಸೀದ ನೆಡೆದು ಹೋದರೆ ಕೊಡಚಾದ್ರಿ ತುದಿಗೆ ಹೋಗಬಹುದ?'

'ಹೌದು, ಈ ಕಾಲು ದಾರಿ ಅರಿಶಿನಗುಂಡಿಗೆ ಹೊಗುತ್ತಲ್ಲ, ಇದೇ ಕಾಲುದಾರಿಲಿ ಮುಂದೆ ಹೋದರೆ ಸಂತೋಷ್ ಹೋಟೆಲ್ಲಿಗೆ ಹೋಗಿ ಅಲ್ಲಿಂದ ಬೆಟ್ಟದ ತುದಿಗೆ ಹೋಗ ಬಹುದು'

ನನಗೆ ಈಗ ಹಿಂದಿನ ದಿನ ನಾವು ಎಲ್ಲಿ ದಾರಿ ತಪ್ಪಿದ್ದೀವಿ ಎಂದು ಹೋಳೀತು. ಅರಿಶಿನಗುಂಡಿಗೆ ಹೋಗಿದ್ದ ನಾವು, ಅದೇ ಕಾಲುದಾರಿಯಲ್ಲಿ ಮುಂದೆ ಹೋಗದೆ ಮತ್ತೆ ಹಿಂದೆ ಬಂದು ಮುಖ್ಯ ರಸ್ತೆಯಂತಿದ್ದ ಈ ರಸ್ತೆಗೆ ಬಂದು ತಪ್ಪು ಮಾಡಿದ್ದೆವು.

ನೆನ್ನೆ ಹೀಗೀಗಾಯಿತು, ನಾವು ದಾರಿ ತಪ್ಪಿ ಎಲ್ಲೆಲ್ಲೋ ಅಲೆದು ಇವತ್ತು ವಾಪಸ್ ಬರ್ತಿದೀವಿ ಎಂದು ಅವನಿಗೆ ಹೇಳಿದೆ.

'ನೀವು ದಾರಿ ತಪ್ಪೀದ್ದೀರಿ' ಎಂದು ಅವನು ಶಾಂತವಾಗಿ ಹೇಳಿದ. ಅವನ ಮಾತಿಗಿಂತ ಅವನ ಭಂಗಿ ಮತ್ತು ಹೇಳಿದ ರೀತಿ ಬಹಳಷ್ಟು ವಿಷಯಗಳನ್ನು ತಿಳಿಸುವಂತಿತ್ತು. ಅವನು 'ದಡ್ಡ ಬಡ್ಡೀ ಮಕ್ಕಳ ದಾರಿ ಗೊತ್ತಿಲ್ಲದೇ ಎಲ್ಲೆಲ್ಲೋ ಅಲೆದಾಡಿದಿರಲ್ಲೋ' ಅಂದನೇನೋ ಎಂದು ನಮಗೆಲ್ಲ ಅನಿಸಿತ್ತು.

'ಹೋದ ತಿಂಗಳು ಹೀಗೆ ೩ ಜನ ದಾರಿ ತಪ್ಪಿ ಎಲ್ಲೆಲ್ಲೋ ತಿರುಗಿದ್ದಾರೆ. ೨ ದಿನ ಕಾಡೊಳೊಗೇ ಸಿಕ್ಕಿ ಹಾಕಿ ಕೊಂಡಿದ್ದಾರೆ. ಆಮೇಲೆ ಕಾಡಿನಲ್ಲಿ ಯಾರೋ ಫಾರೆಸ್ಟ್ ಗಾರ್ಡುಗಳಿಗೆ ಸಿಕ್ಕಿ, ಅವರ ಜೊತೆ ಬಂದಿದ್ದಾರೆ. ಅವರುಗಳು ಒಂದು ದಿನ ಪೂರ್ತಿ ಊಟನೇ ಮಾಡಿರಲಿಲ್ಲವಂತೆ' ಎಂದು ಹೇಳಿ ನಮ್ಮನ್ನು ಇನ್ನಷ್ಟು ಹೆದರಿಸಿದ.

ಈ ಮನುಷ್ಯ ಹೇಳುತ್ತಿದ್ದ ಮಾತಿನ ಸತ್ಯಾಸತ್ಯತೆಯನ್ನು ನಮಗೆ ಪರೀಕ್ಷಿಸಲು ಆಗದಿದ್ದರೂ ನಾವು ನೋಡಿದ್ದ ಕೆಲವು ದ್ರುಶ್ಯಗಳಿಗೆ ಇದನ್ನು ತಾಳೆ ಹಾಕಬಹುದಿತ್ತು. ನಾವು ತಲುಪಿದ್ದ ಕೊಡಚಾದ್ರಿಯ ಪಕ್ಕದ ಬೋಳು ನೆತ್ತಿಯಿಂದ ಸ್ವಲ್ಪ ಕೆಳಗೆ ಇಳಿದೊಡನೆ ಸೌದೆಗಳನ್ನು ಉರಿಸಿ ಬೆಂಕಿಮಾಡಿ ನಂತರ ಆರಿಸಿದ್ದ ಗುರುತಿತ್ತು. ಅದೇ ಇಳಿಜಾರಿನಲ್ಲಿ ಇದಕ್ಕೂ ಸ್ವಲ್ಪ ಮುಂಚೆ, ಒಂದು ಕಲ್ಲಿನ ಮೇಲೆ ಸಣ್ಣಗೆ ನೀರು ಜಿನುಗುತ್ತಿತ್ತು. ಸಣ್ಣಗೆ ಜಿನುಗುತ್ತಿದ್ದ ಈ ನೀರನ್ನು ಬಾಟಲಿಗೆ ತುಂಬಿಸಲು ಚಿಕ್ಕ ಮತ್ತು ಅಶೋಕ ತಮ್ಮೆಲ್ಲಾ ಇಂಜಿನಿಯರಿಂಗ್ ತಲೆ ಉಪಯೋಗಿಸಿ, ಒಂದು ದೊಡ್ಡ ಎಲೆಯ ತೊಟ್ಟಿನ ಭಾಗವನ್ನು ನೀರಿಗೆ ತಾಕಿಸಿ ಇನ್ನೊಂದು ತುದಿಯನ್ನು ಬಾಟಲಿಯ ಬಾಯಿಗೆ ಇಟ್ಟು ನೀರು ಹಿಡಿದಿದ್ದರು. ಈ ಜಾಗ ಬೆಟ್ಟದ ತುದಿಯಲ್ಲಿದ್ದು ಇಲ್ಲಿ ಹತ್ತಿರದಲ್ಲೆಲ್ಲೂ ನೀರು ಹರಿಯುತ್ತಿರಲಿಲ್ಲ. ನೀರಿನ ಒರತೆಯನ್ನು ತಲುಪಬೇಕಿದ್ದಲ್ಲಿ ಇಳಿಜಾರನ್ನು ಇಳಿದು ಕಣಿವೆಯನ್ನು ತಲುಪುಪುದು ಅನಿವಾರ್ಯವಾಗಿತ್ತು. ಆದ್ದರಿಂದ ಕಳೆದು ಹೋಗಿದ್ದ ಆ ಮೂರೂ ಜನ ಕಣಿವೆಗೆ ಇಳಿಯದೆ ಅಲ್ಲೇ ಬೆಟ್ಟದ ತುದಿಯಲ್ಲೆಲ್ಲೋ ತಿರುದಿದ್ದರೆ ಅವರಿಗೆ ನೀರು ಸಿಗುವುದು ಸಾಧ್ಯವಿರಲಿಲ್ಲ. ಅದ್ದರಿಂದ ಅವರುಗಳು ನೀರು ಸಿಗದೆ ಒದ್ದಾಡಿರುವ ಸಾಧ್ಯತೆಗಳಿದ್ದವು. ಇದೆಲ್ಲಕ್ಕಿಂತಲೂ ಹೆಚ್ಚಿನ ಆತಂಕಕಾರಿ ಸಂಗತಿಯೆಂದರೆ, ಸಣ್ಣಗೆ ನೀರು ಜಿನುಗುತ್ತಿದ್ದ ಈ ಜಾಗದ ಎದುರಿಗಿದ್ದ ಒಂದು ಸಣ್ಣ ಬಂಡೆಕಲ್ಲಿನ ಮೇಲೆ ಬಳಪದ ಕಲ್ಲಿನಿಂದ ಗೀಚಿ ಮೂಡಿಸಿದ್ದ ಅಕ್ಷರಗಳು "I want to come back alive" ಎಂದಿತ್ತು. ಇದನ್ನು ಯಾರು ಬರೆದಿರ ಬಹುದು ಎಂದು ಕೊಂಡಿದ್ದ ನಮಗೆ, ಈತ ಹೇಳಿದ ಕತೆ ಕೇಳಿದ ಮೇಲೆ ಆ ಮೂವರೇ ಏಕೆ ಇದನ್ನು ಬರೆದಿರಬಾರದು ಎನ್ನಿಸಿತು. ಸಧ್ಯ ನಮಗೆ ಅಂತ ಕಷ್ಟ ಆಗಲಿಲ್ಲವಲ್ಲ ಅಂದುಕೊಂಡ್ವಿ.

'ನಾನು ಈಗ ಅರಿಶಿನಗುಂಡಿ ಮೇಲೆ ಕೊಡಚಾದ್ರಿ ಗುಡ್ಡಕ್ಕೇ ಹೊರಟಿದಿನಿ, ಬನ್ನಿ ಬೇಕಾದ್ರೆ ನನ್ನ ಜೊತೆ' ಅಂತ ನಮಗೆ ಆಹ್ವಾನ ಕೊಟ್ಟ.

ನೆಡೆದೂ ನೆಡೆದೂ ನಿತ್ರಾಣರಾಗಿದ್ದರಿಂದಲೂ, ನಮ್ಮ ಉಳಿದ ಅರ್ಧ ತಂಡ ನಮಗಿಂತ ಮುಂದೆ ಹೋಗಿದ್ದರಿಂದಲೂ ಅವನ ಆಹ್ವಾನ ಸ್ವೀಕರಿಸದೆ, ಅವನಿಗೆ ಒಂದು ಪಾರ್ಲೇಜೀ ಕೊಟ್ಟು ಟಾಟಾ ಮಾಡಿದೆವು.