--- **** ---
ಕನ್ನಡದಲ್ಲಿ ಬಹಳಷ್ಟು ಬ್ಲಾಗುಗಳ ಕತೆ ’ಅಗಸ ಹೊಸತರಲ್ಲಿ...’ ಎನ್ನುವಂತೆ ಆಗಿವೆ ಅನ್ನೊ ಒಂದು ಆಪಾದನೆ ಇದೆ. ಕಾಡು ಹರಟೆನೂ ಅದೇ ಪಟ್ಟಿಗೆ ಸೇರಿಕೊಂಡಿತೇನೋ ಎಂದು ನೀವು ಅಂದುಕೊಂಡಿರಬಹುದು. ಕೆಲಸದ ಹೆಚ್ಚಿದ್ದರಿಂದ ಸ್ವಲ್ಪ ದಿನ ಬರೆಯಲು ಆಗಲಿಲ್ಲ. ಕೊಡಚಾದ್ರಿಯ ಐದನೇ ಭಾಗ ಇಲ್ಲಿದೆ, ಆರನೆಯ ಹಾಗು ಕೊನೆಯ ಭಾಗವನ್ನೂ ಸಹ ಸದ್ಯದಲ್ಲೇ ಹಾಕುತ್ತೇನೆ.
ಕಾದಿದ್ದಕ್ಕೆ ಥ್ಯಾಂಕ್ಸ್.
--- **** ---
ಬಿಸಿಲೇರೋ ಮೊದಲು ಆದಷ್ಟು ದೂರ ನೆಡೆಯಬೇಕೆಂದುಕೊಂಡು ಬೇಗ ಬೇಗನೇ ಹೆಜ್ಜೆ ಹಾಕತೊಡಗಿದೆವು. ನಾವು ೧ ಗಂಟೆಗಳಷ್ಟು ವೇಳೆ ನೆಡೆಯುವುದರೊಳಗೆ ಮೊದಲನೆಯ ತೊರೆಯನ್ನು ಸಮೀಪಿಸಿದೆವು. ಇನ್ನು ಅರ್ಧ ಗಂಟೆ ನೆಡೆದರೆ ಇನ್ನೊಂದು ತೊರೆ ಸಿಗುತ್ತದೆಂದು ಗೊತ್ತಿದ್ದರಿಂದ ಇಲ್ಲಿ ಹೆಚ್ಚು ಸಮಯ ಕಳೆಯದೆ ಮುಂದೆ ನೆಡೆದೆವು. ಸಮಯ ಬೆಳಗಿನ ಎಂಟುಗಂಟೆಯನ್ನು ದಾಟಿತ್ತು. ಆಗಲೆ ಬಿಸಿಲೇರಿ ಬೆವರು ಕೀಳತೊಡಗಿತ್ತು. ಆದರೂ ಜಯಂತ ತನ್ನ ಜಾಕೆಟ್ ಹಾಕಿಕೊಂಡೇ ನೆಡೆಯುತ್ತಿದ್ದ. 'ಯಾಕೋ ಕಂದ ನಿನಗೆ ಶಕೆಯಾಗುತ್ತಿಲ್ಲವೇ?' ಎಂದು ಕೇಳಿದರೆ, 'ಮಗ ಇದುನ್ನ ಬಿಚ್ಚಿ ಬ್ಯಾಗಿಗೆ ಹಾಕಿದರೆ ಬ್ಯಾಗ್ ಭಾರ ಆಗಿ ನೆಡೆಯೋದು ಕಷ್ಟ ಆಗುತ್ತೆ' ಎಂದ! ಅಯ್ಯೋ ಇವನಾ... ಎಂದು ಅವನ ಜಾಕೆಟ್ ತೆಗೆದುಕೊಂಡು ನನ್ನ ಬ್ಯಾಗಿಗೆ ತುರುಕಿದೆ.
ವಾಪಸ್ ನೆಡೆಯುತ್ತಾ ಅತ್ತ ಇತ್ತ ಹಾದಿ ನೋಡುತ್ತಿರುವಾಗ 'ಅಬ್ಬ ನೆನ್ನೆ ರಾತ್ರಿ ಕತ್ತಲೆಯಲ್ಲಿ ಎಂತಾ ಕಷ್ಟದ ದಾರಿ ಸವೆಸಿದ್ದೇವೆ' ಎಂದುಕೊಂಡೆವು. ಕೆಲವು ಕಡೆಗಳಲ್ಲಿ ದಾರಿಯೇ ಇರಲಿಲ್ಲ, ಇನ್ನು ಕೆಲವು ಕಡೆ ದೊಡ್ಡ ದೊಡ್ಡ ಮರಗಳು ಅಡ್ಡ ಬಿದ್ದಿದ್ದರೆ ಒಂದೆರೆಡುಕಡೆ ಭೂಮಿ ಜರುಗಿ ದೊಡ್ಡ ಕಂದಕಗಳೇ ಆಗಿದ್ದವು. ಚೆನ್ನಾಗಿ ಬೆಳಕಿರುವಾಗ ಈ ದಾರಿಗೆ ಬಂದಿದ್ದರೆ ಖಂಡಿತವಾಗಿಯೂ ಮುಂದೆ ಹೋಗದೆ ಹಿಂತಿರುಗುತ್ತಿದ್ದೆವು.
ಎರಡನೇ ತೊರೆ ಬೆಳಗ್ಗೆ ೮-೩೦ರ ಸುಮಾರಿಗೆ ಸಿಕ್ಕಿತು. ನೆನ್ನೆಯಿಂದ ಒಂದೇ ಸಮನೆ ನೆಡೆದು ಸುಸ್ತಾಗಿದ್ದೆ. ಬೆವರು ಧಾರಳವಾಗಿ ಹರಿದು ಮೈ ನೆನೆದು, ಬಿಸಿಲಿಗೆ ಒಣಗಿ ಮತ್ತೆ ನೆನೆದು ಸಣ್ಣಗೆ ವಾಸನೆ ಬರಲು ಶುರುವಾಗಿತ್ತು. ಹೇಗಿದ್ದರು ತೊರೆಯಲ್ಲಿ ಅಲ್ಲೊಂದು ಇಲ್ಲೊಂದು ಸೊಂಟದೆತ್ತರದ ಗುಂಡಿಗಳಿದ್ದವು. ನಾನು ಮೊದಲು ತಲುಪಿದ್ದರಿಂದ ಹಿಂದಿನವರು ಬಂದು ಕೂಡಿಕೊಳ್ಳುವುದರೊಳಗೆ ಸ್ನಾನ ಮಾಡೋಣವೆಂದು ಸೋಪು ಹಿಡಿದು ಸ್ವಲ್ಪ ಕೆಳಗೆ ನೆಡೆದೆ. ಬೇಸಿಗೆಯಲ್ಲೂ ನೀರು ತಣ್ಣಗೆ ಕೊರೆಯುತ್ತಿತ್ತು. ನೀರಿಗೆ ಬಿದ್ದು ಎಮ್ಮೆಯಂತೆ ಉರುಳಾಡಿ ಸ್ನಾನ ಪೂರೈಸುವುದರೊಳಗೆ ಎಲ್ಲರೂ ಆ ತೊರೆಯನ್ನು ಬಂದು ಸೇರಿದರು. ನನ್ನನ್ನು ನೋಡಿ ಉತ್ತೇಜಿತರಾದ ಕೆಲವರು ಸ್ನಾನಮಾಡಿದರೆ, ಉಳಿದವರು ಕೈ ಕಾಲು ಮುಖ ತೊಳೆದೇ ಸಂತುಷ್ಟರಾದರು.
ಒಬ್ಬೊಬ್ಬರು ೬-೬ ಪಾರ್ಲೇಜಿಗಳನ್ನು ತಿಂದು ತಿಂಡಿಯ ಶಾಸ್ತ್ರವನ್ನು ಪೂರೈಸಿದೆವು. ಇಲ್ಲಿಂದ ಹೊರಟಾಗ ಸಮಯ ೯ ದಾಟಿತ್ತು. ಸುಮಾರು ೧೨-೩೦ರ ಸುಮಾರಿಗೆ ಹಿಂದಿನ ದಿನ ಬಂದು ತಲುಪಿದ್ದ ಕೊಡಚಾದ್ರಿಯ ಪಕ್ಕಕ್ಕಿದ್ದ ಗುಡ್ಡವನ್ನು ಬಂದು ಸೇರಿದೆವು. ಹಿಂದಿನ ಸಂಜೆ ೧ ಗಂಟೆಯಲ್ಲಿ ಇಳಿದಿದ್ದ ಇಳಿಜಾರನ್ನು ಮತ್ತೆ ಹತ್ತಲು ಇಂದು ನಮಗೆ ೩ ಗಂಟೆಗೂ ಹೆಚ್ಚಿನ ಸಮಯ ಹಿಡಿದಿತ್ತು. ಬೊಳು ನೆತ್ತಿಯನ್ನು ಸಮೀಪಿಸುತ್ತಿದ್ದಂತೆ ಮರಗಳು ಕಡಿಮೆಯಾಗಿ ಮಧ್ಯಾನ್ಹದ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ತತ್ತರಿಸಿದ್ದೆವು. ಅಲ್ಲೊಂದು ಇಲ್ಲೊಂದು ಇದ್ದ ಮರದ ನೆರಳಿನಲ್ಲಿ ಕಾಲು ಚಾಚಿದೆವು. ಸ್ವಲ್ಪ ವಿಶ್ರಮಿಸಿ, ಪಾರ್ಲೇಜೀ ತಿಂದು ನೀರು ಕುಡಿದೆವು. ಇಲ್ಲಿಂದ ಹಿಂದಿನ ದಿನ ನಾವು ಬಸ್ಸಿನಿಂದ ಇಳಿದಿದ್ದ ಟಾರ್ ರಸ್ತೆ ಸೇರಲು ಸುಮಾರು ೬ ಗಂಟೆಗಳು ಬೇಕಾಗಬಹುದು ಎಂದುಕೊಂಡೆವು.
೧ ಗಂಟೆಯ ಊಟದ ವಿರಾಮ ಮುಗಿಸಿ, ೧:೩೦ರ ಸುಮಾರಿಗೆ ಬೆಟ್ಟ ಇಳಿಯಲು ಸಜ್ಜಾದೆವು. ಇಲ್ಲಿಂದ ಮುಂದೆ ಬರೀ ಇಳಿಜಾರು. ವಿಶ್ರಾಂತಿಯ ನಂತರ ಶಕ್ತಿ ವೃದ್ದಿಸಿಕೊಂದಿಡ್ಡರಿಂದ ಧಡ ಧಡನೆ ಇಳಿಯ ತೊಡಗಿದೆವು. ಕಡಿದಾದ ಈ ಇಳಿಜಾರನ್ನು ನೋಡಿದಾಗ ನಾವುಗಳು ಹಿಂದಿನ ದಿನ ಹೇಗೆ ಈ ದಾರಿಯನ್ನು ಹತ್ತಿ ಹೋಗಿದ್ದೆವೋ ಎಂದು ಕೊಂಡೆ. ಇದಕ್ಕೂ ಮುಂಚೆ ನಾನು ನೋಡಿದ್ದ ಕಡಿದಾದ ಬೆಟ್ಟ ಎಂದರೆ ಚಿಕ್ಕಮಗಳೂರು ಜಿಲ್ಲೆಯ ದೇವೀರಮ್ಮನ ಬೆಟ್ಟ. ದೇವಿರಮ್ಮನ ಬೆಟ್ಟದ ಏರನ್ನು ಸತತವಾಗಿ ೪೫ ನಿಮಿಷಗಳಷ್ಟು ಹತ್ತಿದರೆ ತುದಿ ತಲುಪುತ್ತೇವೆ. ಆದರೆ ಈ ಬೆಟ್ಟದ ಏರನ್ನು ಅರ್ಧ ದಿನಕ್ಕೂ ಹೆಚ್ಚಿಗೆ ಹತ್ತಿದ್ದೆವು.
ಇಳಿಜಾರನ್ನು ನಾವು ಅಂದುಕೊಂಡಿದ್ದಕಿಂತಲೂ ಬೇಗನೆ ಇಳಿಯ ತೊಡಗಿದ್ದೆವು. ಹಿಂದಿನ ದಿನ ನಾವು ನೋಡಿದ್ದ ಝರಿಯ ಬಳಿಗೆ ಒಬ್ಬೊಬ್ಬರಾಗಿ ಬಂದು ವಿಶ್ರಮಿಸಿ ಕೊಳ್ಳತೊಡಗಿದೆವು. ಎರಡು ದಿನಗಳವರೆಗೆ ಸತತವಾಗಿ ನೆಡೆದು ಕಾಲುಗಳು ರಾಗ ಹಾಡುತ್ತಿರುವಾಗ ತಣ್ಣಗೆ ಕೊರೆಯುವ ನೀರಿನಲ್ಲಿ ಕಾಲು ಮುಳುಗಿಸಿಕೊಂಡು ಕೂತರೆ ದೊರೆಯುವ ಆನಂದ... ಆ.. ಹಾ.. ಎನ್ನುವಂತಹುದು... ಅನುಭವಿಸಿದವರಿಗೇ ಅದು ಗೊತ್ತು. ಉಳಿದಿದ್ದ ಬ್ರಿಟಾನಿಯ ಕೇಕು ಮತ್ತು ಸ್ವಲ್ಪ ಬಿಸ್ಕೆಟ್ ತಿಂದು ಆಗುವಷ್ಟು ನೀರು ಕುಡಿದು ಮತ್ತೆ ಹೊರಡಲು ತಯಾರಾದೆವು. ಹರೀಶ, ಜಗದೀಶ, ಮಿಲ್ಟ್ರಿ ಇವರೆಲ್ಲಾ "ನಾವು ಮುಂದೆ ಮುಂದೆ ಹೊಗುತ್ತೇವೆ. ನೀವು ಟಾರ್ ರಸ್ತೆ ಬಂದು ಸೇರುವುದು ತಡ ಆದರೆ ನಾವು ನಿಮಗೆ ಕಾಯದೆ ಕೊಲ್ಲೂರಿಗೆ ಹೊಗಿರುತ್ತೇವೆ. ಅಲ್ಲಿ ಸೀದ ನದಿಗೆ ಬನ್ನಿ ನಾವು ಅಲ್ಲೇ ಇರುತ್ತೇವೆ" ಎಂದು ಹಿಂದೆ ಬೀಳುವ ಗ್ಯಾಂಗಿಗೆ ಹೇಳಿ ಹೊರಟರು.
ನಾವು ಒಂದು ಆರು ಜನ ಇನ್ನೂ ಸ್ವಲ್ಪ ಹೂತ್ತು ನೀರಿನಲ್ಲಿ ಕಾಲಾಡಿಸುತ್ತ ಕೂತಿದ್ದೆವು. ಇಲ್ಲಿಂದ ಮುಂದೆ ನಮಗೆ ಸಿಗುತ್ತಿದ್ದ ಮುಖ್ಯ ಜಾಗಗಳೆಂದರೆ ಹಿಂದಿನ ದಿನ ಅರಿಶಿನಗುಂಡಿ ಫಾಲ್ಸಿಗೆ ಹೊಗಲು ಹಿಡಿದಿದ್ದ ಕಾಲುದಾರಿ, ಅಲ್ಲಿಂದ ೧ ಗಂಟೆಯ ದೂರಕ್ಕೆ ಟಾರ್ ರಸ್ತೆ. ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಅರಿಶಿನಗುಂಡಿಯ ಕಡೆಗೆ ತಿರುಗುವ ಕಾಲು ದಾರಿಯ ಬಳಿ ಬಂದೆವು. ಅಲ್ಲಿ ನಮಗೆ ಇನ್ನೋಂದು ಚಾರಣ ತಂಡ ಸಿಕ್ಕಿತು. ಅವರೊಟ್ಟಿಗೆ ಅವರಿಗೆ ಮಾರ್ಗದರ್ಶಕನಾಗಿ ಬಂದಿದ್ದ ಸ್ತಳೀಯನೊಬ್ಬ ಇದ್ದ. ನಾನು ಅವನೊಟ್ಟಿಗೆ ಮಾತಿಗೆ ಇಳಿದೆ.
ನಾನು- 'ನೀವು ಅರಿಶಿನಗುಂಡಿ ಫಾಲ್ಸ್ ಕಡೆಯಿಂದ ಬಂದ್ರ?'
ಸ್ತಳೀಯ - 'ಹೌದು, ಕೊಡಚಾದ್ರಿಯಿಂದ ಹೊರಟು ಅರಿಶಿನಗುಂಡಿ ಫಾಲ್ಸಿಗೆ ಬಂದು ಅಲ್ಲಿಂದ ಈಗ ಇಲ್ಲಿಗೆ ಬಂದಿದ್ದೀವಿ. ಇವರೆಲ್ಲ ನನಗೆ ಕೊಡಚಾದ್ರಿಯಲ್ಲಿ ಸಿಕ್ಕಿದ್ರು, ದಾರಿ ತೊರಿಸ್ಲಿಕ್ಕೆ ಇವರೊಟ್ಟಿಗೆ ಬಂದೆ, ಈಗ ತಿರುಗಿ ಹೊರಟೆ'
'ಅರಿಶಿನಗುಂಡಿಯಿಂದ ಸೀದ ನೆಡೆದು ಹೋದರೆ ಕೊಡಚಾದ್ರಿ ತುದಿಗೆ ಹೋಗಬಹುದ?'
'ಹೌದು, ಈ ಕಾಲು ದಾರಿ ಅರಿಶಿನಗುಂಡಿಗೆ ಹೊಗುತ್ತಲ್ಲ, ಇದೇ ಕಾಲುದಾರಿಲಿ ಮುಂದೆ ಹೋದರೆ ಸಂತೋಷ್ ಹೋಟೆಲ್ಲಿಗೆ ಹೋಗಿ ಅಲ್ಲಿಂದ ಬೆಟ್ಟದ ತುದಿಗೆ ಹೋಗ ಬಹುದು'
ನನಗೆ ಈಗ ಹಿಂದಿನ ದಿನ ನಾವು ಎಲ್ಲಿ ದಾರಿ ತಪ್ಪಿದ್ದೀವಿ ಎಂದು ಹೋಳೀತು. ಅರಿಶಿನಗುಂಡಿಗೆ ಹೋಗಿದ್ದ ನಾವು, ಅದೇ ಕಾಲುದಾರಿಯಲ್ಲಿ ಮುಂದೆ ಹೋಗದೆ ಮತ್ತೆ ಹಿಂದೆ ಬಂದು ಮುಖ್ಯ ರಸ್ತೆಯಂತಿದ್ದ ಈ ರಸ್ತೆಗೆ ಬಂದು ತಪ್ಪು ಮಾಡಿದ್ದೆವು.
ನೆನ್ನೆ ಹೀಗೀಗಾಯಿತು, ನಾವು ದಾರಿ ತಪ್ಪಿ ಎಲ್ಲೆಲ್ಲೋ ಅಲೆದು ಇವತ್ತು ವಾಪಸ್ ಬರ್ತಿದೀವಿ ಎಂದು ಅವನಿಗೆ ಹೇಳಿದೆ.
'ನೀವು ದಾರಿ ತಪ್ಪೀದ್ದೀರಿ' ಎಂದು ಅವನು ಶಾಂತವಾಗಿ ಹೇಳಿದ. ಅವನ ಮಾತಿಗಿಂತ ಅವನ ಭಂಗಿ ಮತ್ತು ಹೇಳಿದ ರೀತಿ ಬಹಳಷ್ಟು ವಿಷಯಗಳನ್ನು ತಿಳಿಸುವಂತಿತ್ತು. ಅವನು 'ದಡ್ಡ ಬಡ್ಡೀ ಮಕ್ಕಳ ದಾರಿ ಗೊತ್ತಿಲ್ಲದೇ ಎಲ್ಲೆಲ್ಲೋ ಅಲೆದಾಡಿದಿರಲ್ಲೋ' ಅಂದನೇನೋ ಎಂದು ನಮಗೆಲ್ಲ ಅನಿಸಿತ್ತು.
'ಹೋದ ತಿಂಗಳು ಹೀಗೆ ೩ ಜನ ದಾರಿ ತಪ್ಪಿ ಎಲ್ಲೆಲ್ಲೋ ತಿರುಗಿದ್ದಾರೆ. ೨ ದಿನ ಕಾಡೊಳೊಗೇ ಸಿಕ್ಕಿ ಹಾಕಿ ಕೊಂಡಿದ್ದಾರೆ. ಆಮೇಲೆ ಕಾಡಿನಲ್ಲಿ ಯಾರೋ ಫಾರೆಸ್ಟ್ ಗಾರ್ಡುಗಳಿಗೆ ಸಿಕ್ಕಿ, ಅವರ ಜೊತೆ ಬಂದಿದ್ದಾರೆ. ಅವರುಗಳು ಒಂದು ದಿನ ಪೂರ್ತಿ ಊಟನೇ ಮಾಡಿರಲಿಲ್ಲವಂತೆ' ಎಂದು ಹೇಳಿ ನಮ್ಮನ್ನು ಇನ್ನಷ್ಟು ಹೆದರಿಸಿದ.
ಈ ಮನುಷ್ಯ ಹೇಳುತ್ತಿದ್ದ ಮಾತಿನ ಸತ್ಯಾಸತ್ಯತೆಯನ್ನು ನಮಗೆ ಪರೀಕ್ಷಿಸಲು ಆಗದಿದ್ದರೂ ನಾವು ನೋಡಿದ್ದ ಕೆಲವು ದ್ರುಶ್ಯಗಳಿಗೆ ಇದನ್ನು ತಾಳೆ ಹಾಕಬಹುದಿತ್ತು. ನಾವು ತಲುಪಿದ್ದ ಕೊಡಚಾದ್ರಿಯ ಪಕ್ಕದ ಬೋಳು ನೆತ್ತಿಯಿಂದ ಸ್ವಲ್ಪ ಕೆಳಗೆ ಇಳಿದೊಡನೆ ಸೌದೆಗಳನ್ನು ಉರಿಸಿ ಬೆಂಕಿಮಾಡಿ ನಂತರ ಆರಿಸಿದ್ದ ಗುರುತಿತ್ತು. ಅದೇ ಇಳಿಜಾರಿನಲ್ಲಿ ಇದಕ್ಕೂ ಸ್ವಲ್ಪ ಮುಂಚೆ, ಒಂದು ಕಲ್ಲಿನ ಮೇಲೆ ಸಣ್ಣಗೆ ನೀರು ಜಿನುಗುತ್ತಿತ್ತು. ಸಣ್ಣಗೆ ಜಿನುಗುತ್ತಿದ್ದ ಈ ನೀರನ್ನು ಬಾಟಲಿಗೆ ತುಂಬಿಸಲು ಚಿಕ್ಕ ಮತ್ತು ಅಶೋಕ ತಮ್ಮೆಲ್ಲಾ ಇಂಜಿನಿಯರಿಂಗ್ ತಲೆ ಉಪಯೋಗಿಸಿ, ಒಂದು ದೊಡ್ಡ ಎಲೆಯ ತೊಟ್ಟಿನ ಭಾಗವನ್ನು ನೀರಿಗೆ ತಾಕಿಸಿ ಇನ್ನೊಂದು ತುದಿಯನ್ನು ಬಾಟಲಿಯ ಬಾಯಿಗೆ ಇಟ್ಟು ನೀರು ಹಿಡಿದಿದ್ದರು. ಈ ಜಾಗ ಬೆಟ್ಟದ ತುದಿಯಲ್ಲಿದ್ದು ಇಲ್ಲಿ ಹತ್ತಿರದಲ್ಲೆಲ್ಲೂ ನೀರು ಹರಿಯುತ್ತಿರಲಿಲ್ಲ. ನೀರಿನ ಒರತೆಯನ್ನು ತಲುಪಬೇಕಿದ್ದಲ್ಲಿ ಇಳಿಜಾರನ್ನು ಇಳಿದು ಕಣಿವೆಯನ್ನು ತಲುಪುಪುದು ಅನಿವಾರ್ಯವಾಗಿತ್ತು. ಆದ್ದರಿಂದ ಕಳೆದು ಹೋಗಿದ್ದ ಆ ಮೂರೂ ಜನ ಕಣಿವೆಗೆ ಇಳಿಯದೆ ಅಲ್ಲೇ ಬೆಟ್ಟದ ತುದಿಯಲ್ಲೆಲ್ಲೋ ತಿರುದಿದ್ದರೆ ಅವರಿಗೆ ನೀರು ಸಿಗುವುದು ಸಾಧ್ಯವಿರಲಿಲ್ಲ. ಅದ್ದರಿಂದ ಅವರುಗಳು ನೀರು ಸಿಗದೆ ಒದ್ದಾಡಿರುವ ಸಾಧ್ಯತೆಗಳಿದ್ದವು. ಇದೆಲ್ಲಕ್ಕಿಂತಲೂ ಹೆಚ್ಚಿನ ಆತಂಕಕಾರಿ ಸಂಗತಿಯೆಂದರೆ, ಸಣ್ಣಗೆ ನೀರು ಜಿನುಗುತ್ತಿದ್ದ ಈ ಜಾಗದ ಎದುರಿಗಿದ್ದ ಒಂದು ಸಣ್ಣ ಬಂಡೆಕಲ್ಲಿನ ಮೇಲೆ ಬಳಪದ ಕಲ್ಲಿನಿಂದ ಗೀಚಿ ಮೂಡಿಸಿದ್ದ ಅಕ್ಷರಗಳು "I want to come back alive" ಎಂದಿತ್ತು. ಇದನ್ನು ಯಾರು ಬರೆದಿರ ಬಹುದು ಎಂದು ಕೊಂಡಿದ್ದ ನಮಗೆ, ಈತ ಹೇಳಿದ ಕತೆ ಕೇಳಿದ ಮೇಲೆ ಆ ಮೂವರೇ ಏಕೆ ಇದನ್ನು ಬರೆದಿರಬಾರದು ಎನ್ನಿಸಿತು. ಸಧ್ಯ ನಮಗೆ ಅಂತ ಕಷ್ಟ ಆಗಲಿಲ್ಲವಲ್ಲ ಅಂದುಕೊಂಡ್ವಿ.
'ನಾನು ಈಗ ಅರಿಶಿನಗುಂಡಿ ಮೇಲೆ ಕೊಡಚಾದ್ರಿ ಗುಡ್ಡಕ್ಕೇ ಹೊರಟಿದಿನಿ, ಬನ್ನಿ ಬೇಕಾದ್ರೆ ನನ್ನ ಜೊತೆ' ಅಂತ ನಮಗೆ ಆಹ್ವಾನ ಕೊಟ್ಟ.
ನೆಡೆದೂ ನೆಡೆದೂ ನಿತ್ರಾಣರಾಗಿದ್ದರಿಂದಲೂ, ನಮ್ಮ ಉಳಿದ ಅರ್ಧ ತಂಡ ನಮಗಿಂತ ಮುಂದೆ ಹೋಗಿದ್ದರಿಂದಲೂ ಅವನ ಆಹ್ವಾನ ಸ್ವೀಕರಿಸದೆ, ಅವನಿಗೆ ಒಂದು ಪಾರ್ಲೇಜೀ ಕೊಟ್ಟು ಟಾಟಾ ಮಾಡಿದೆವು.
Friday, 19 October 2007
Subscribe to:
Posts (Atom)