Wednesday 10 February, 2010

ಬಿಸಿಲೆ ಘಾಟ್ August 2007


ನವೆಂಬರ್ 2009ಕ್ಕೆ ನನ್ನ ಮದುವೆ ಆಯ್ತು. ಮದುವೆಗೆ ಮೂರು ತಿಂಗಳು ಮುಂಚಿನಿಂದ ಇಲ್ಲಿಯವರೆಗೆ ಚಾರಣಕ್ಕೆ ಎಲ್ಲಿಗೂ ಹೋಗಲಿಕ್ಕೆ ಆಗಿಲ್ಲ. ನನ್ನ ಮದುವೆಗೆ ಆರು ತಿಂಗಳು ಮುಂಚಿನಿಂದ ಒಂದೊಂದೇ ವಿಕೆಟ್ ಬೀಳುತ್ತಿದ್ದವು. ಅಶೋಕ, ಜಗದೀಶ, ಕರಿ ಇವರ ಮದುವೆ ಆಯ್ತು. ರವಿಶಂಕರನ ಮದುವೆ ಆಗಿ ವರ್ಷನೇ ಆಯ್ತು, ನಮ್ಮ ಚಿಕ್ಕ ಆಗಲೇ ಅಪ್ಪ ಆದ, ನನ್ನ ಮದುವೆ last nail in the coffin. (ರವಿ ಬೆಳಗೆರೆ ಸ್ಟೈಲಿನಲ್ಲಿ ಓದಿ ಮಜ ಬರುತ್ತೆ)

ಜನಾಕಿರಾಮನನ್ನು ಚೆನ್ನೈಗೆ ಎತ್ತಿಹಾಕಿದ್ದಾರೆ, ಮಿಲ್ಟ್ರಿ ದೇಶ ಬಿಟ್ಟು ಹೋಗಿದ್ದಾನೆ, ಚಂದ್ರ is injured (ರವಿ ಬೆಳಗೆರೆ ಸ್ಟೈಲಿನಲ್ಲಿ ಇನ್ನೊಂದು ಸಲ ಪ್ಲೀಸ್...) LovesU ಚಿಕ್ಕಪ್ಪನಿಗೆ ಹೆಣ್ಣು ಸಿಗೋ ಲಕ್ಷಣಗಳು ಕಾಣಿಸ್ತಿಲ್ಲ. ಒಬ್ಬೊಬ್ಬರು ಒಂದೊಂದು ಕಡೆಗೆ ಹೋಗಿ ಹರೀಶನಿಗೆ ಜೊತೆಗಾರರಿಲ್ಲ. ಹೀಗೆ ಆಗಿದೆ ನೋಡಿ ನಮ್ಮ "ಮಚ್ಚೆ ಎಲ್ಲಿದೆ!?" ತಂಡದ ಸ್ಥಿತಿ. ಸುಮಾರು ಆರೇಳು ತಿಂಗಳಿಂದ ಯಾವುದೇ ಚಾರಣಕ್ಕೆ ಹೋಗೋಕೆ ಆಗಿಲ್ಲ.

2007ರ ಆಗಸ್ಟ್ ತಿಂಗಳಲ್ಲಿ ಹೀಗೆ ಆಗಿತ್ತು. ತುಂಬಾ ದಿನ ಎಲ್ಲೂ ಹೋಗೋಕೇ ಆಗಿರಲಿಲ್ಲ. ಆಗ ಧಿಡೀರ್ ಅಂತ ಬಿಸಿಲೇ ಘಾಟಿಗೆ ಹೋರಟೆವು. ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೋಗೋ ಸುವರ್ಣ ಕರ್ನಾಟಕ ಸಾರಿಗೆ ಹತ್ತಿದೆವು. ನಮ್ಮ LovesU ಚಿಗಪ್ಪ ಅವತ್ತಿನ ದಿನ ಬೆಳಗ್ಗೆನೇ ನಮಗೆಲ್ಲಾ ಟಿಕೀಟು ತಂದಿದ್ದ. ರಾತ್ರಿ 9.30ಕ್ಕೆ ಬಸ್ಸು ಹೊರಟಿತು. ಕುಣಿಗಲ್ ದಾಟಿದಮೇಲೆ ರಾತ್ರಿ ಲಘು ಉಪಹಾರಕ್ಕೆಂದು ಬಸ್ಸು ನಿಂತಿತು. ಎಲ್ಲರೂ ಬೆಂಗಳೂರಿನಲ್ಲಿ ಊಟ ಮುಗಿಸಿದ್ದರೂ ಮತ್ತೊಂದು ಸುತ್ತು ತಟ್ಟೆ ಇಡ್ಲಿ ಪೋಣಿಸಿದರು. ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಸಕಲೇಶಪುರ ದಾಟಿ ಮುಂಜರಾಬಾದ್ ಕೋಟೆ ಹತ್ತಿರ ಬಸ್ಸು ಮತ್ತೊಮ್ಮೆ ನಿಂತಾಗ ನಮ್ಮ ಹುಡುಗರ ಉದರ ಸೇವೆ ಮತ್ತೊಮ್ಮೆ ಆಯಿತು. ನೀರು ದೋಸೆ ತಿಂದು ಬಂದ್ವಿ ಅಂತ ಹೇಳಿದ್ದ ನೆನಪು, ನಾನು ಇಳಿದು ಹೋಗಿರಲಿಲ್ಲ. ಅಲ್ಲಿಂದ ಒಂದು ಗಂಟೆಯ ಪ್ರಯಾಣವಾದ ಮೇಲೆ, forest check post ದಾಟಿ ಕೆಲವೇ ನಿಮಿಷಕ್ಕೆ ನಾವೆಲ್ಲರೂ ಇಳಿಯಲು ತಯಾರಾದೆವು. ಬೆಳಗಿನ ಜಾವ 4.30ರ ಸುಮಾರಿಗೆ ಬಸ್ಸಿಳಿದಾಗ ಇತರ ಪ್ರಯಾಣಿಕರಿಗೆ ನಾವುಗಳು ನಕ್ಸಲರ ಹಾಗೇಯೆ ಕಂಡಿರಬೇಕು.

Forest check post ದಾಟಿ 5~10 ನಿಮಿಷಕ್ಕೆ ನಾವು ಬಸ್ಸು ಇಳಿದಿದ್ದೆವು. ಅಲ್ಲಿಂದ ನಮ್ಮ ಕಾಲ್ನೆಡಿಗೆ ಆರಂಭವಾಯಿತು. ನೆಡೆಯಲಾರಂಭಿಸಿದ ಕೆಲವೇ ನಿಮಿಷಕ್ಕೆ ಧೋ ಎಂದು ಮಳೆ ಸುರಿಯಲಾರಂಭಿಸಿತು. ಛತ್ರಿ ಹಿಡಿದು rain coat ಹಾಕಿಕೊಂಡು ಕತ್ತಲ ಭೇದಿಸಲು ಟಾರ್ಚ್ ಹಿಡಿದು ನೆಡೆಯತೊಡಗಿದೆವು. ಸುಮಾರು 5.30 ರ ಸುಮಾರಿಗೆ ಆಗಸ ಸ್ವಲ್ಪ ಬೆಳ್ಳಗಾಗಲು ಶುರುವಾಯಿತು, ಮಳೆಯೂ ನಿಂತಿತ್ತು. ಒಂದು ಮಸ್ತ್ ತಿರುವಿನಲ್ಲಿ ನಿಂತು ಫೊಟೋ ತೆಗೆಯಲು ಅನುವಾದೆವು. ಅಲ್ಲಿಂದ ನೋಟ ಅದ್ಭುತವಾಗಿತ್ತು. ದೂರದಲ್ಲಿ ಬೆಟ್ಟ ಅದನ್ನು ಸುತ್ತುತಿದ್ದ ತಿಳಿ ಮೋಡಗಳು... ಸೂಪರ್... ಸುಮಾರು ಫೋಟೋಗಳಾದವು ತುಂಬಾ ಹೊತ್ತು ಕೂತಿದ್ದೆವು, ಕೆಲವೊಂದು ಗಾಡಿಗಳು ನಿಂತು ನೋಡಿ ಫೋಟೋತೆಗೆದು ಕೊಂಡು ಮುಂದೆ ಹೊರಟವು. ಪೂರ್ತಿ ಬೆಳಕಾಗುವವರೆಗೆ ನಾವುಗಳು ಅಲ್ಲೇ ಇದ್ದು ನಂತರ ಹೊರಟೆವು. ಸ್ವಲ್ಪ ಹೊತ್ತಿನಲ್ಲಿ ಮತ್ತೆ ಮಳೆ ಶುರುವಾಯಿತು, ದಾರಿಯಲ್ಲಿ ಬಲಭಾಗಕ್ಕೆ ರಸ್ತೆಯಿಂದ ಸ್ವಲ್ಪ ಮೇಲಕ್ಕೆ ಒಂದು view point ಇದೆ. ಅಲ್ಲಿ ಹತ್ತಿ ಕೂತು ತಿಂಡಿ ತಿಂದೆವು. ಅಷ್ಟರಲ್ಲಾಗಲೇ ಕೆಲವರಿಗೆ ಸಾಕಷ್ಟು ಜಿಗಣೆಗಳು ಹತ್ತಿದ್ದವು.

ಅವತ್ತು ದಾರಿ ಪೂರ್ತಿ ಮಳೆ ಬಿಟ್ಟು ಬಿಟ್ಟು ಬರುತಿತ್ತು. ಎಲ್ಲರ ಬಳಿ ಛತ್ರಿ ಇದ್ದರೂ ಪೂರ್ತಿ ತೊಯ್ದು ಹೋಗಿದ್ದೆವು. ದಾರಿ ಸವೆಸುತ್ತ ಗಾಡಿಗಳ ಹೊಡೆತಕ್ಕೆ ಸತ್ತ ಹಾವುಗಳನ್ನು ಎಣಿಸಿದೆವು. ಅಡ್ಡೆ ಹೊಳೆ ದಾಟಿ, ಬಿಸಿಲೆ ಘಾಟಿ ಮುಗಿಯುವ ಹೊತ್ತಿಗೆ ಸಿಗುವ ಚಾಮುಂಡಿ ದೇವಸ್ತಾನ ತಲುಪುವಹೊತ್ತಿಗೆ ಮೂರು ಗಂಟೆಯ ಮೇಲಾಗಿತ್ತು. ಎಲ್ಲರೂ ಸುಸ್ತಾಗಿದ್ದೆವು. ಇಲ್ಲಿಂದ ಸುಮಾರು ಒಂದೂವರೆ ಗಂಟೆ ನೆಡೆದ ಮೇಲೆ ಕುಮಾರ ಧಾರ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ದಾಟಿದೆವು. ಅಲ್ಲಿಂದ ಕಾಲು ಗಂಟೆ-ಇಪತ್ತು ನಿಮಿಷದೊಳಗೆ ಕುಕ್ಕೆ.

ಮಯೂರದಲ್ಲಿ ರೂಮು ಮಾಡಿ ಸ್ನಾನ ಮುಗಿಸಿದೆವು. ಮಳೆಗಾಲಕ್ಕೆ ಕುಮಾರಧಾರ ತುಂಬಿ ಹರಿಯುತ್ತಿದ್ದರಿಂದ ಹೋಟೆಲ್ ರೂಮಿನಲ್ಲಿ ಸ್ನಾನ ಮಾಡಬೇಕಾಯಿತು. ಇಲ್ಲದಿದ್ದಲ್ಲಿ ನದಿಯಲ್ಲಿ ಮೀಯುವುದೇ ಮಜ. ರಾತ್ರಿ ದೇವರ ದರ್ಶನವಾದ ಮೇಲೆ ಪ್ರಸಾದ ಮುಗಿಸಿ ಬಂದು ಗಡತ್ತಾಗಿ ಮಲಗಿದೆವು. ಮರುದಿನ ಅಂದರೆ ಭಾನುವಾರ ಬೆಳಿಗ್ಗೆ ಎದ್ದು ಕುಮಾರ ಪರ್ವತದ ಹಾದಿಯಲ್ಲಿ ಸ್ವಲ ದೂರ ಹೋಗಿ ಬರುವುದೆಂದು ತೀರ್ಮಾನಿಸಿದ್ದೆವು.

ಭಾನುವಾರ ಬೆಳಿಗ್ಗೆ ಆರಮವಾಗಿ ಎದ್ದು ನ್ಯೂ ಮೈಸೂರ್ ಕೆಫೆಯಲ್ಲಿ ಅವಲಕ್ಕಿ-ಮೊಸರು, ಮಂಗಳೂರು ಬನ್ಸ್, ಮಸಾಲೆ ದೋಸೆ ಮುಗಿಸಿದೆವು. ಕೆಲವರು ಅಲ್ಲಿ ಮಾರಟಕಿದ್ದ ಉಪ್ಪಿನಕಾಯಿ, ಹಪ್ಪಳ ಸಂಡಿಗೆ ಕೊಂಡರು. ಹಿಂದಿನ ದಿನದ ಮಳೆಗೆ ಸೋತಿದ್ದ ನಮಗೆ ಈ ದಿನವು ಮಳೆ ಬಿಡುವು ಕೊಡಲಿಲ್ಲ. ಮಳೆಗೆ ತೊಯ್ದು ಕೆಸರಲ್ಲಿ ನೆನೆದು ವಾಸನೆ ಬರುತಿದ್ದ ನಮ್ಮ ಶೂಗಳನ್ನು ಹೋಟೆಲಿನಲ್ಲೇ ಬಿಟ್ಟು ನಾವು ಕೆಲವರು ಹೊಸ Paragon ಚಪ್ಪಲಿ ಕೊಂಡುಕೊಂಡೆವು, ನಮ್ಮ ಚಿಗಪ್ಪ ಇಡೀ ದಿನ ಬರಿಗಾಲಲ್ಲೇ ಸುತ್ತಿದ.

ಮಳೆ ಸುರಿಯುತ್ತಿದ್ದರೂ ಕುಮಾರ ಪರ್ವತಕ್ಕೆ ಹೋಗುವದಾರಿಯಲ್ಲಿ ಹೊರಟು ಬೆಟ್ಟ ಹತ್ತುವ ಕಾಲುದಾರಿ ಸೇರಿ 10~15 ನಿಮಿಷ ಹತ್ತಿದೆವು. ಆ ಸುರಿಯುವ ಮಳೆಯಲ್ಲೂ ಅದೆಲ್ಲಿದ್ದವೋ ಅಷ್ಟು ಜಿಗಣೆಗಳು ಅಡರತೊಡಗಿದವು. ಮಳೆ ನೀರಿನಲ್ಲಿ ಜಿಗಣೆಗಳು ಹರಿದು ಬರುತಿದ್ದನ್ನು ನೋಡಿದ್ದು ಅದೇ ಮೊದಲು ಮತ್ತು ಕೊನೆ. ಕುಮಾರ ಪರ್ವತದ ದಾರಿಯನ್ನು ಅಲ್ಲಿಗೇ ಕೈಬಿಟ್ಟು ವಾಪಸ್ ಕುಕ್ಕೆಗೆ ಹೊರಟೆವು. ದಿನವಿಡೀ ದೇವಸ್ತಾನದ ಜಗಲಿಯಲ್ಲಿ ಕೂತು ಸುರಿಯುತ್ತಿದ್ದ ಮಳೆ ನೋಡುತ್ತಾ ಮಧ್ಯಾನ್ಹದ ಪ್ರಸಾದ ಮುಗಿಸಿದೆವು. ಸಂಜೆ ಊರಿನ ಶುರುವಿನಲ್ಲಿ ಹೊಸದಾಗಿ ಕಟ್ಟಿರುವ ಗಣಪತಿ ದೇವಸ್ತಾನ ನೋಡಿ ಬಂದೆವು. ರಾತ್ರಿ ಇನ್ನೊಮ್ಮೆ ದೇವಸ್ತಾನದಲ್ಲಿ ಪ್ರಸಾದ ಮುಗಿಸಿದೆವು. ಮೊದಲೇ ಕಾಯ್ದಿರಿಸಿದ್ದ 10.30 ರಾಜಹಂಸ ಬಸ್ಸಿನಲ್ಲಿ ಕೂತು ಮತ್ತೆ ಕುಮಾರ ಪರ್ವತಕ್ಕೆ ಬರುವ ಪ್ಲಾನ್ ಮಾಡುತ್ತಾ ಬೆಂಗಳೂರಿನ ದಾರಿ ಹಿಡಿದೆವು. 2007ರ ಡಿಸೆಂಬರ್ ತಿಂಗಳಲ್ಲಿ ಕುಮಾರ ಪರ್ವತ ಚಾರಣ ಮಾಡಿದೆವು.

Monday 19 January, 2009

ದೂಧ್ ಸಾಗರ್


Doodh Sagar - 2008 Dec 26, 27

ದೂಧ್ ಸಾಗರ್! ಈ ಜಲಪಾತದ ಬಗ್ಗೆ ಹೀಗೆ ಒಂದು ವರ್ಷದ ಮೊದಲು ಕೇಳಿದೆ. ಕೆಲವರು ಇದು ಜೊಗ ಜಲಪಾತಕಿಂತ ಎತ್ತರ ಇದೆ ಅಂತ ಹೇಳಿದ್ರು. internet ಹುಡುಕಿ ಕೆಲವು ಫೊಟೊ ನೋಡಿದೆ, ಒಂದು ಫೊಟೊದಲ್ಲಿ ತುಂಬಿ ಹರಿಯುತ್ತಿರುವ ಜಲಪಾತದ ಎದುರಿಗೆ ಒಂದು ರೈಲು ಹೋಗುತಿತ್ತು. ಆ ಫೊಟೊ ನೋಡಿದ ಮೇಲೆ ಅಲ್ಲಿಗೆ ಹೋಗಲೇ ಬೇಕು ಅಂತ ಹಟಕ್ಕೆ ಬಿದ್ದೆ. ಎಂದಿನಂತೆ ಬ್ಲಾಗುಗಳನ್ನ ಹುಡುಕಿ ಮಾಹಿತಿ ಸಂಗ್ರಹಿಸಿ ಹೋಗೋದು, ಉಳಿಯೋದು ಎಲ್ಲಾದರ ಬಗ್ಗೆ ತಿಳಿದುಕೊಂಡೆ. ನಮ್ಮ ಕಚೇರಿಯಲ್ಲೇ ಒಬ್ಬರು ಈ ಜಾಗಕ್ಕೆ ಮಳೆಗಾಲದಲ್ಲಿ ಹೋಗಿದ್ರು. ಅವರು ಎಲ್ಲಿ ಹೋಗಬೇಕು ಉಳಿಯೊ ವ್ಯವಸ್ತೆ ಎಲ್ಲದರ ಬಗ್ಗೆ ಮಾಹಿತಿ ಕೊಟ್ಟರು. ಜನವರಿ ತಿಂಗಳಲ್ಲಿ ಇಲ್ಲಿಗೆ ಹೋಗೋದು ಅಂದು ಕೊಂಡಿದ್ವಿ ಆದ್ರೆ ಇದ್ದಕಿದ್ದಹಾಗೆ ತತ್-ಕಾಲ್ ಟಿಕೀಟು ಮಾಡಿಸಿಕೊಂಡು ಹೊರಟೇ ಬಿಟ್ವಿ Dec 25ರ ರಾತ್ರಿ ರಾಣಿ ಚೆನ್ನಮ್ಮ ಗಾಡಿಗೆ.

ಬೆಂಗಳೂರಿಂದ ಲೊಂಡವರೆಗು ರೈಲಿನಲ್ಲಿ ಹೋಗಿ ಅಲ್ಲಿಂದ ಮುಂದೆ Castle Rock ರೈಲು ನಿಲ್ದಾಣಕ್ಕೆ ಒಂದು ಜೀಪ್ ಮಾಡಿಕೊಂಡು ಹೋದೆವು. ವಾಸ್ಕೋ ಕಡೆಗೆ ಹೋಗೋ ರೈಲಿನಲ್ಲಿ ಹೋದರೆ ಸೀದ Castle Rock ರೈಲು ನಿಲ್ದಾಣಕ್ಕೇ ಹೋಗಬಹುದು. ಲೊಂಡ ಇಂದ Castle Rock ಮದ್ಯೆ ಇರೋ ರಸ್ತೆಯಲ್ಲಿ ಮೈನಿಂಗ್ ಲಾರಿಗಳು ಓಡಾಡಿ ದೊಡ್ಡ ದೊಡ್ಡ ಕಂದಕಗಳಾಗಿವೆ. ರಸ್ತೆ ಅಕ್ಕಪಕ್ಕದ ಮರಗಳೆಲ್ಲ ಹೊಸ ಬಣ್ಣ ಪಡೆದಿವೆ. ಇಲ್ಲಿ ಮಳೆ ಬಂದರೆ ಮಾತ್ರ ಮರಗಳು ಹಸಿರಾಗಿ ಕಾಣಬಹುದು, ಬಾಕಿಯಂತೆ ಕೆಂಪು. ಎಂಟುಗಂಟೆಗೆ ಲೊಂಡಕ್ಕೆ ಬಂದು ರೈಲು ನಿಲ್ದಾಣದ ಹೊರಗಿದ್ದ ಒಂದು ಹೋಟೆಲಿನಲ್ಲಿ ಉಪಿಟ್ಟು ತಿಂದು ಜೀಪ್ ಹತ್ತಿದೆವು. ಆ ಹೊಟ್ಲಿನ ಉಪಿಟ್ಟು ಅದ್ಭುತವಾಗಿತ್ತು. ಅಲ್ಲಿ ಉಪಿಟ್ಟು ತಿನ್ನೋದಿಕ್ಕಾದ್ರು ಇನ್ನೊಂದು ಸಾರಿ ದೂಧ್ ಸಾಗರಕ್ಕೆ ಹೋಗಬೇಕು.Castle Rock ರೈಲು ನಿಲ್ದಾಣಕ್ಕೆ ಬಂದಾಗ 10.30 ಇಲ್ಲಿಂದ ನಮ್ಮ ಚಾರಣ ಆರಂಭ. ಸ್ಟೇಷನ್ನಿಂದ ಮುಂದೆ ಹೊರಡುತ್ತಿದ್ದಂತೆ ಒಂದು ಹಳೆಯ ಪಾಳು ಬಿದ್ದ ಗೋಡೋನಿನ ತರಹದ ಕಟ್ಟದ ಇದೆ. ಇದರ ಎದುರಿಗೆ ರೈಲ್ವೆ ಇಲಾಖೆಯವರು 25/000 ಎಂದು ಮೈಲಿಗಲ್ಲು ಹಾಕಿದ್ದಾರೆ. ಇಲ್ಲಿಂದ "Welcome to Braganza Ghat Section" ಎಂದಿರೋ ಸ್ವಾಗತ ಫಲಕ ದಾಟಿ ರೈಲು ಹಳಿಗಳ ಮೇಲೆ ನೆಡೆಯಲಾರಂಭಿಸಿದೆವು. ನಾವು ಹೋರಡುವ ಸಮಯಕ್ಕೆ ಒಂದು ಗೂಡ್ಸ್ ಗಾಡಿ ದೂಧ್ ಸಾಗರದ ಕಡೆಗೆ ಹೊರಟಿತ್ತು. ’ಬನ್ನಿ ನಿಮ್ಮುನ್ನ ಅಲ್ಲೇ ಬಿಟ್ಟು ಹೋಗ್ತಿವಿ’ ಅಂತ ಅವರು ಕರೆದರು, ಹೋಗೋ ಮೂಡ್ ನಲ್ಲಿ ನಾವು ಇರಲಿಲ್ಲ. ನೆಡೆಯೋದಕ್ಕೆ ಆಗದೇ ಇದ್ರೆ ಹೀಗೆ ಯಾವುದಾದರು ಗೂಡ್ಸ್ ಹಿಡಿದುಕೊಂಡು ಹೋಗಬಹುದು. ರೈಲು ಹಳಿಗಳ ಮೇಲೆ ನೆಡೆಯುತ್ತಾ ಸಕಲೆಶಪುರದ ನೆನಪುಗಳು ಬರುತ್ತಿದ್ದವು. ಅಲ್ಲಿ ಹುಂಬರ ತರಹ ನೆಡೆದಿದ್ದು, ಸ್ಟೇಷನ್ ಮಾಸ್ತರ್ ಹತ್ತಿರ ಜಗಳಕಾದಿದ್ದು, ಕೊನೆಗೆ ಮಳೆ ಸುರಿತಿರೋ ರಾತ್ರಿಯಲ್ಲಿ ಒಂದು ಟನಲ್ಲಿನಲ್ಲಿ ಮಲಗಿದ್ದು ಎಲ್ಲಾ ನೆನೆಸಿಕೊಂಡು ಹೆಜ್ಜೆಹಾಕತೊಡಗಿದೆವು.

ಪರಮೇಶ ಮತ್ತು ಅವಿನಾಶ್ -ಜಗದೀಶನ ಸ್ನೇಹಿತರು- ಈ ಸಾರಿ ನಮ್ಮ ಜೊತೆ ಬಂದಿದ್ದ ಹೊಸಬರು. ಇವರಿಬ್ಬರು expert photographers. ನಮ್ಮ ಲವ್ಸ್ಯೂ ರಾಘವೇಂದ್ರನಿಗೆ ಈ ಸಾರಿ ಅದ್ರುಷ್ಟ ಖುಲಾಯಿಸಿತ್ತು. ರೋಗಿ ಬಯಸಿದ್ದು... ವೈದ್ಯರು ಹೇಳಿದ್ದು... ಅವರಿಗೆ ಫೊಟೊ ತೆಗೆಯೋಕೆ ಜನ ಬೇಕು, ಇವನಿಗೆ ಫೊಟೊ ತೆಗೆಯೋರು ಬೇಕು. ಈ ಸಾರಿ ನಾವುಗಳು ಟೆಂಟ್ ಹಾಕಿಕೊಂಡು ಉಳಿಯೋ ಯೊಜನೆಯಲ್ಲಿ ಇದ್ದಿದ್ದರಿಂದ ಎರಡು ಟೆಂಟುಗಳನ್ನ ಹೊತ್ತುಕೊಂಡು ನೆಡೆಯುತ್ತಿದ್ದೆವು. ಒಂದು ಟೆಂಟ್ ಯಮಭಾರ. ಒಂದೊಂದು ಕಿಲೋಮೀಟರ್ ಒಬ್ಬೊಬ್ಬರ ಕೈ ಬದಲಾಯಿಸುತ್ತಾ ನೆಡೆದೆವು. ಲವ್ಸ್ಯೂ ರಾಘವೇಂದ್ರ ಟೆಂಟ್ ಹೊತ್ತುಕೊಂಡು ಉಳುವ ಯೋಗಿಯ ನೋಡಣ್ಣ ಅಂತ ಹಾಡು ಹೇಳಿಕೊಂಡು ನಡೀತಿದ್ದ. ಒಂದು ಕಿಲೋ ಮೀಟರ್ ನೆಡೆದ ಮೇಲೆ ಲವ್ಸ್ಯೂ ಟೆಂಟನ್ನು ಹರಿಶನಿಗೆ ಕೊಟ್ಟು ಅದಕ್ಕೊಂದು ಸಮಾರಂಭ ಮಾಡಿ ಎರಡು ಫೋಟೋ ತೆಗೆಸಿಕೊಂಡ.


29/400 ಮೈಲಿಗಲ್ಲಿನ ಬಳಿ ಒಂದು ಸಣ್ಣ ಜಲಪಾತ ಸಿಕ್ಕಿತು. ಇಲ್ಲಿ ಫೋಟೋಮೇಲೆ ಫೋಟೋ ಆಯ್ತು. ಈ ಜಾಗಕ್ಕೆ ಬರುವ ಹೊತ್ತಿಗಾಗಲೆ ಮೂರು ಟನಲ್ಲುಗಳನ್ನ ದಾಟಿಕೊಂಡು ಬಂದಿದ್ದೆವು. ಇಲ್ಲಿಂದ ಒಂದರ್ದ ಕೀ.ಮೀ. ನೆಡೆದ ಮೇಲೆ ಗೋವಕ್ಕೆ ಸ್ವಾಗತ ಅನ್ನೋ ಫಲಕ ಕಾಣಿಸಿತು. ಕರ್ನಾಟಕದ ಗಡಿ ದಾಟಿ ಗೋವ ಪ್ರವೇಶಿಸಿದ್ದೆವು. ಮುಂದೆ ಕರ್ಜೊಲ್ ಸ್ಟೇಶನ್ನಿಗೆ ಮಧ್ಯಾನ್ಹ ಎರಡರ ಸುಮಾರಿಗೆ ಬಂದೆವು. ಇಲ್ಲಿ ಸ್ವಲ್ಪ ಹೊತ್ತು ಕೂತಿದ್ದೆವು. ಆಗ ಒಂದು ಗೂಡ್ಸ್ ಗಾಡಿ ಹೋಯಿತು. ಈ ಹಾದಿಯಲ್ಲಿ ಬಹಳಷ್ಟು ಗೂಡ್ಸ್ ಗಾಡಿಗಳು ಓಡಾಡುತ್ತಿದ್ದವು. ಸಕಲೇಶಪುರ-ಸುಬ್ರಮಣ್ಯಕ್ಕೆ ಹೋಲಿಸಿದರೆ ಇಲ್ಲಿ ಹೆಚ್ಚು ಗಾಡಿಗಳು ಓಡಾಡುತ್ತವೆ.

ಈ ದಾರಿಯಲ್ಲಿ ಅಲ್ಲೊಂದು ಇಲ್ಲೊಂದು ಝರಿಗಳು ಹರಿಯುತಿದ್ದವು. ಇವು ತುಂಬಿ ಹರಿಯುವುದನ್ನು ನೋಡಲು ಮಳೆಗಾಲದಲ್ಲಿ ಬರಬೇಕು. ಒಂದು ಝರಿ ಟನಲ್ ಶುರುವಾಗುವ ದ್ವಾರದ ಪಕ್ಕದಲ್ಲೇ ಇದೆ. ಅದು ನೋಡಲು ತುಂಬ ಚೆನ್ನಾಗಿತ್ತು. ಅದಕ್ಕೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕೆಳಗಿನ ಪ್ರಪಾತ ಆಳವಾಗಿದ್ದು ನೋಡಲು ಮೋಹಕವಾಗಿತ್ತು. ಮುಂದೆ ನೆಡೆದು ಸಂಜೆ 4.30 ಗಂಟೆ ಸುಮಾರಿಗೆ ದೂಧ್ ಸಾಗರ್ ರೈಲು ನಿಲ್ದಾಣಕ್ಕೆ ತಲುಪಿದೆವು. ಇಲ್ಲಿ ಮೈಸೂರಿನ ಒಬ್ಬ ಸ್ಟೇಷನ್ ಮಾಸ್ಟರ್ ನಮಗೆ ಬಹಳಷ್ಟು ಮಾಹಿತಿ ಕೊಟ್ಟರು. ಇನ್ನೊಂದು ಖುಶಿಯ ವಿಷಯವೆಂದರೆ ಈ ಎರಡು ದಿನಗಳಲ್ಲಿ ನಮಗೆ ಸಿಕ್ಕ ಪ್ರತಿಯೊಬ್ಬ ರೈಲ್ವೆ ನೌಕರನೂ ಕನ್ನಡಲ್ಲಿ ಮಾತನಾಡಿದ್ದ. ಇದಕ್ಕೆ ಮುಖ್ಯ ಕಾರಣ ನಾವು ಮೊದಲು ಮಾತು ತೆಗೆಯುವುದೇ ಕನ್ನಡದಲ್ಲಿ. ನಾವು ಕನ್ನಡ ಮಾತಾಡಿದ್ರೇನೆ ತಾನೆ ಬೇರೆಯವರು ನಮ್ಮನ್ನು ಕನ್ನಡದಲ್ಲಿ ಮಾತಾಡಿಸೋದು.


ಇಲ್ಲಿಂದ ಮುಂದೆ ಒಂದು ಕಿಲೋಮೀಟರ್ ನೆಡೆದ ಮೇಲೆ ದೂಧ್ ಸಾಗರ್ ಜಲಪಾತ ಸಿಕ್ಕಿತು. ಅಲ್ಲಿ ತಲುಪಿ ಸೇತುವೆ ಕೆಳಗಿಳಿದು ಮೇಲಕತ್ತಿ ಎಡದಿಂದ ಬಲದಿಂದ ಎಲ್ಲಾ ಕಡೆಗಳಿಂದ ಜಲಪಾತ ನೋಡಿ ಆದಷ್ಟು ಫೋಟೊಗಳನ್ನು ತೆಗೆದೆವು. ಆ ರಾತ್ರಿಯನ್ನು ಅಲ್ಲಿಯೇ ಕಳೆಯುವ ನಿರ್ಧಾರ ನಮ್ಮದಾಗಿತ್ತು. ಜಲಪಾತಕ್ಕೆ ಅಡ್ಡವಾಗಿ ಕಟ್ಟಿರುವ ಸೇತುವೆಯ ಎರಡೂ ಪಕ್ಕಗಳಲ್ಲಿ ಟೆಂಟು ಹಾಕಿಕೊಂಡು ಉಳಿಯಲು ಸಾಕಷ್ಟು ಜಾಗ ಇದೆ. ಕತ್ತಲಾಗುವ ಮೊದಲು ಸಾಕಷ್ಟು ಸೌದೆ ಗುಡ್ಡೆಹಾಕಿದೆವು. ಟೆಂಟು ಹೊಡೆದು, ಹೊಲೆ ಹೂಡಿ ರಾತ್ರಿ ಊಟಕ್ಕೆ ತಯಾರಿ ಶುರುಮಾಡಿದೆವು. ಸೂಪ್ ಮತ್ತು ನೂಡಲ್ಸ್ ತಯಾರಾದವು. ಊಟಮುಗಿಸಿ ಹತ್ತರ ಸುಮಾರಿಗೆ ನಿದ್ರೆಗೆ ಶರಣಾದೆವು. ರಾತ್ರಿಯಲ್ಲಿಯೂ ನಾಲ್ಕೈದು ಗಾಡಿಗಳು ಓಡಾಡಿದವು ಈ ರೈಲ್ವೆ ಹಳಿ ಜಲಪಾತ ಎಲ್ಲವೂ ಮುಲ್ಲೆಮ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಇಲ್ಲಿ ರಾತ್ರಿ ಸಮಯದಲ್ಲಿ ರೈಲುಗಾಡಿಗಳ ಓಡಾಟಕ್ಕೆ ಕಡಿವಾಣ ಹಾಕುವುದು ಒಳ್ಳೆಯದು.


ಬೆಳಗ್ಗೆ ಆರಕ್ಕೆ ಎದ್ದು ಕೆಂಡ ಕೆರೆದು ಮತ್ತೆ ಬೆಂಕಿ ಮಾಡಿದೆವು. ಮತ್ತೊಂದು ಸುತ್ತು ಸೂಪ್ ಮತ್ತು ನೂಡಲ್ಸ್ ಮುಗಿಸಿ ಹೊರಡಲು ತಯಾರಾದೆವು. ಸೇತುವೆಯಿಂದ ಸ್ವಲ್ಪ ಮುಂದೆ ಎರಡು ಟನಲ್ಲುಗಳ ನಡುವೆ ಕೆಳಗಿಳಿಯಲು ಸಣ್ಣ ಕಾಲುದಾರಿಯಿದೆ. ಈ ದಾರಿಯಲ್ಲಿ ಒಂದು ಇಪತ್ತು ನಿಮಿಷ ಇಳಿದು ಜಲಪಾತದ ತಳಭಾಗಕ್ಕೆ ಬಂದೆವು. ಇಲ್ಲಿಂದ ಜಲಪಾತದ ಪೂರ್ಣ ದೃಷ್ಯ ಅದ್ಭುತವಾಗಿ ಕಾಣುತಿತ್ತು. ಇಲ್ಲಿ ಕೆಲವು ಫೋಟೋ ತೆಗೆದು ನೀರಿಗಿಳಿದು ಸ್ನಾನಮಾಡಿದೆವು. ನಾವು ಇಲ್ಲಿಗೆ ಬಂದಾಗ ನಮ್ಮನ್ನು ಬಿಟ್ಟು ಬೇರೆಯಾರೂ ಇರಲಿಲ್ಲ ಒಂಬತ್ತು ಗಂಟೆ ಸುಮಾರಿಗೆ ಸಣ್ಣಗೆ ಜನ ಬರಲಾರಂಭಿಸಿದರು. ಹತ್ತರ ಸುಮಾರಿಗೆ ಅಲ್ಲಿ ಚೆನ್ನಾಗಿಯೆ ಜನ ಜಮಾಯಿಸಿದರು. ಕೊಲ್ಲೆಮ್ ಇಂದ ಜಲಪಾತದ ಬುಡದವರೆಗೂ ಜೀಪಿನಲ್ಲಿ ಬರಬಹುದಾಗಿದ್ದರಿಂದ ಮತ್ತು ಅದು ಕ್ರಿಸ್ ಮಸ್ ರಜೆಯ ದಿನಗಳಾಗಿದ್ದರಿಂದ ಜನ ಸ್ವಲ್ಪ ಹೆಚ್ಚೇ ಇದ್ದರು.


ಇಲ್ಲಿಂದ ಜೀಪ್ ದಾರಿಯಲ್ಲಿ ಕುಲ್ಲೆಮ್ ತಲುಪಲು ಏಳು ಕಿಲೋಮೀಟರುಗಳಾಗುತ್ತವೆ ಎಂದು ಮೈಸೂರಿನ ಸ್ಟೇಷನ್ ಮಾಸ್ಟರ್ ಹೇಳಿದ್ದರು ಆದರೆ ಅಲ್ಲಿ ಸಿಕ್ಕ ಜೀಪ್ ಡ್ರೈವರುಗಳು 11-12 kmಗೆ ಕಡಿಮೆ ಇಲ್ಲ ಎಂದರು. ಜೀಪ್ ದಾರಿಯಲ್ಲಿ ಒಂದು ಧೂಳೋ ಧೂಳು. ಸತತವಾಗಿ ಒಳ್ಳೆಯ ವೇಗದಲ್ಲಿ ಒಂದು ಗಂಟೆನೆಡೆದು ಸೊನಾಲಿಮ್ ಎನ್ನೋ ಒಂದೆರಡು ಮನೆಗಳ ಹಳ್ಳಿ ತಲುಪಿದೆವು. ಅಲ್ಲಿ ಒಂದು ಸಣ್ಣ ಅಂಗಡಿಯಲ್ಲಿ ಕುಡಿಯಲು ಬೇಕಾದ್ದು ಸಿಗುತಿತ್ತು. ಆಲ್ಲಿದ್ದ ಹುಡುಗ ಜೀಪ್ ದಾರಿಯಲ್ಲಿ ಹೋದರೆ ಸ್ವಲ್ಪ ಸುತ್ತಾಗುತ್ತೆ, ಮುಂದೆ ಒಂದುಕಡೆ ದಾರಿ ರೈಲು ಹಳಿಗಳ ಪಕ್ಕ ಹೋಗುತ್ತದೆ ಅಲ್ಲಿ ರೈಲ್ವೆ ಹಳಿ ಸೇರಿಕೊಂಡು ಮುಂದೆ ಹೋಗಿ ಎಂದ. ಸೊನಾಲಿಂನಿಂದ ಸ್ವಲ್ಪ ದೂರಬಂದ ಮೇಲೆ ಎರಡು ಎಮ್ಮೆಗಳು ಕಾಣಿಸಿದವು. ಕಾಡೆಮ್ಮೆನೋ ಇಲ್ಲ ನಾಡೆಮ್ಮೆನೋ ಗೊತ್ತಿಲ್ಲ, ಕಾಡು ದಾರಿಯಾಗಿದ್ದರಿಂದ ಮತ್ತು ನಮ್ಮ ಸಂತೋಷಕ್ಕೆ ಅವುಗಳನ್ನು ಕಾಡೆಮ್ಮೆ ಎಂದೇ ಅಂದುಕೊಳ್ಳೋಣ. ನಮ್ಮ ಸದ್ದು ಸ್ವಲ್ಪ ಆಗುತ್ತಲೆ ಅವು ಗಿಡಗಳ ಮರೆಗೆ ಸರಿದವು.

ಮುಂದೆ ಜೀಪ್ ದಾರಿಯ ಎಡಕ್ಕೆ ರೈಲ್ವೇ ಹಳಿ ಕಾಣಿಸಿತು, ಮತ್ತೆ ಹಳಿ ಸೇರಿದೆವು. ಅಲ್ಲಿದ್ದ ಒಬ್ಬ ಗ್ಯಾಂಗ್ ಮನ್ ಕೊಲ್ಲೆಂಗೆ 4 kmಎಂದು ತಿಳಿಸಿದ. ಈತನೂ ಕನ್ನಡದಲ್ಲಿ ಮಾತಾಡಿದ. ಸರಸರನೆ ಹೆಜ್ಜೆ ಹಾಕ ತೊಡಗಿದೆವು. ಹೌರಾ-ವಾಸ್ಕೊ ರೈಲು ನಮ್ಮನ್ನು ದಾಟಿ ಹೋಯಿತು. ಮಧ್ಯಾನ್ಹ ಎರಡರ ಸುಮಾರಿಗೆ ಕೊಲ್ಲೆಮ್ ತಲುಪಿದೆವು. ಅಲ್ಲಿ ಸಿಗ್ನಲ್ ರೂಮಿನಲ್ಲಿದ್ದ ಒಬ್ಬರನ್ನು ಹೋಟೆಲ್ ಮತ್ತು ಮೊಲ್ಲೆಂಗೆ ಹೋಗುವ ಬಸ್ಸಿನ ಬಗ್ಗೆ ವಿಚಾರಿಸಿದೆವು. ಮೊಲ್ಲೆಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಿದ್ದರಿಂದ ಹುಬ್ಬಳ್ಳಿಗೆ ಬಹಳಷ್ಟು ಬಸ್ಸುಗಳು ಸಿಗುತ್ತವೆ ಎಂದು ತಿಳಿಸಿದ. ಈತ ಬಾಗಲಕೋಟೆಯವನು.

ಕೊಲ್ಲೆಂನಲ್ಲಿ ಊಟ ಮಾಡಿ ಮೊಲ್ಲೆಮ್ ತಲುಪಿ ಅಲ್ಲಿಂದ ಹುಬ್ಬಳ್ಳಿ ಬಸ್ ಹತ್ತಿದೆವು. ನಾವುಗಳೆಲ್ಲ ನಿದ್ರೆಗೆ ಜಾರಿದ್ದೆವು, ಮಧ್ಯದಲ್ಲಿ ಎಲ್ಲೋ ಬಸ್ ನಿಂತಿತ್ತು. ಕಡ್ಲೆಗಿಡ ಮಾರುವವರು ಮತ್ತು ಗೋವಾ ಇಂದ ತಂದಿರೋ ಎಣ್ಣೆ ಹಿಡಿಯುವ ಜೋಶಿನಲ್ಲಿ ಪೋಲೀಸರು ಬಸ್ಸು ಹತ್ತಿದ್ದರು. ಪೋಲೀಸ್ ಲವ್ಸೂ ಬ್ಯಾಗ್ ಹಿಡಿದು ’ಯಾರದ್ರಿ, ಈ ಬ್ಯಾಗ್ ತೆಗಿರೀ ಸ್ವಲ್ಪ ಅಂತಿದ್ದರು’ ಆ ಕೂಗು ಕೇಳದೇ ಮಗಲಿದ್ದ ಇವನಿಗೆ ಕೇಳಿದ್ದು ಕಡ್ಲೆ ಗಿಡವನ ಕೂಗು. ಚ್ಂಗನೆ ಎದ್ದು ವ್ಯಾಪಾರಕ್ಕೆ ನಿಂತ. ಪೋಲೀಸು ಇವನನ್ನ ಹಿಡಿದು ಕೇಳಿದ ಮೇಲೆ ಬ್ಯಾಗ್ ತೆಗೆದು ತೋರಿಸಿ ಪೋಲೀಸರಿಗೆ ದೂಧ್ ಸಾಗರಕ್ಕೆ ಹೋಗಿದ್ದ ಕತೆ ಹೇಳಿದ ಉಪಕತೆ ಗೋವಿಂದು ಅಲಿಯಾಸ್ ಲವ್ಸ್ಯೂ ರಾಘವೇಂದ್ರ. ರಾತ್ರಿ ಎಂಟರ ಸುಮಾರಿಗೆ ಹುಬ್ಬಳ್ಳಿ ಸೇರಿ ಬಸವೇಶ್ವರ ಖಾನಾವಳಿಯಲ್ಲಿ ಊಟಮಾಡಿ ಬೆಂಗಳೂರಿಗೆ ಬಸ್ಸು ಹಿಡಿದೆವು. ಬಸ್ಸಿನಲ್ಲಿ ಕೂತು ಮಳೆಗಾಲದಲ್ಲಿ ಮತ್ತೆ ದೂಧ್ ಸಾಗರ್ ನೋಡಲು ಬರಲು ಪ್ಲಾನ್ ಮಾಡತೊಡಗಿದೆವು.

Monday 15 December, 2008

ಮುಕ್ತಿ ಹೊಳೆ


ತುಂಬಾ ದಿನಗಳಿಂದ ಬ್ರಹ್ಮಗಿರಿಗೆ ಹೋಗಬೇಕು ಅನ್ಕೊಂಡಿದ್ವಿ. ಈ ಸಾರಿ 15 ದಿನ ಮುಂಚಿತವಾಗಿ ಬ್ರಹ್ಮಗಿರಿಗೆ ಹೊಗೊ ವ್ಯವಸ್ತೆ ಮಾಡಿಕೊಂಡು ತಯಾರಾಗಿದ್ದೆವು. ಆದರೆ ಹೊರಡೋ 3 ದಿನಗಳ ಮೊದಲು ಬ್ರಹ್ಮಗಿರಿಗೆ ಫೋನಾಯಿಸಿದಾಗ "ಸಾರ್ ನೀವು ಮತ್ತೆ ಫೊನ್ ಮಾಡಲಿಲ್ಲವಲ್ಲ ಅದುಕ್ಕೆ ಬೇರೆಯವರಿಗೆ ಬುಕ್ಕಿಂಗ್ ಮಾಡಿದ್ದೀವಿ. ನೀವು ಮುಂದಿನ ವಾರ ಬನ್ನಿ" ಎಂದು ನಿರಾಯಸವಾಗಿ ಹೇಳಿ ನಮ್ಮ ಉತ್ಸಾಹಕ್ಕೆ ಕಲ್ಲೇಟು ಹಾಕಿದ್ದ ಅಲ್ಲಿನ ಅರಣ್ಯಾಧಿಕಾರಿ.

ಬರಗಾಲದಲ್ಲಿ ಅಧಿಕ ಮಾಸ - ನಾವು ಮೊದಲೇ 3 ತಿಂಗಳಿಂದ ಎಲ್ಲೂ ಹೊಗಿಲ್ಲ, ಹಾಗಾಗಿ ಈ ಮಾಸ್ಟರ್ ಪ್ಲಾನ್ ಹಾಕ್ಕಿದ್ರೆ ಇದೂ ಉಲ್ಟಾ ಹೊಡಿತಲಪ್ಪ. ಮುಂದೇನು ಅಂತ ಜಗದೀಶ ಮತ್ತು ಲವ್ಸ್ಯೂ ರಾಘವೇಂದ್ರನಿಗೆ ಫೋನ್ ಮಾಡಿ ನವೆಂಬರ್ 15-16 ತಾರಿಖು ಬಹಳ ಮುಂಚೆನೇ ಗೊತ್ತು ಮಾಡಿರೊದ್ರಿಂದ ಬೇರೆ ಎಲ್ಲಾದರೂ ಹೋಗೋಣ ಎಂದೆ. ಜಗದೀಶ ಮುಕ್ತಿ ಹೊಳೆಗೆ ಈ ಮುಂಚೆ ಒಂದು ಸಾರಿ ಹೊಗಿದ್ದರಿಂದ ಅಲ್ಲಿಗೆ ಹೋಗೋ ನಿರ್ಧಾರ ಮಾಡಿದೆವು.

ಆ ಬ್ಲಾಗು ಈ ಬ್ಲಾಗು ಓದಿ ಮುಕ್ತಿ ಹೊಳೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಎಲ್ಲಾ ಬ್ಲಾಗುಗಳಲ್ಲೂ, ದಾರಿ ಸಿಗದೆ ಕಳೆದು ಹೊಗೋ ಸಾಧ್ಯತೆಗಳು ಇದೆ ಸ್ವಲ್ಪ ಹುಷಾರು ಎಂದು ಎಚ್ಚರಿಸಿದ್ದರು. ಬ್ಲಾಗ್ ಬರೆದವರೆಲ್ಲಾ ಅಲ್ಲಿ ಉಳಿದುಕೊಳ್ಳೊಕೆ ಮಹದೇವ ನಾಯಕರ ಮನೆಗೆ ಹೊಗಿದ್ದರು. ಜಗದೀಶನೂ ಮುಕ್ತಿಹೊಳೆಗೆ ಹೋದಾಗ ಅಲ್ಲೇ ಉಳಿದಿದ್ದ ಆದರೆ ಅವರ ಫೋನ್ ನಂಬರ್ ಎಲ್ಲೂ ಸಿಗಲಿಲ್ಲ. ಹಾಗಾಗಿ ಮುಕ್ತಿಹೊಳೆ ಹೋಗುವ ಮೊದಲು ಮಹದೇವ ನಾಯಕರಿಗೆ ಫೋನಾಯಿಸಿ ನಮಗೆ ಗೈಡ್ ವ್ಯವಸ್ತೆ ಮಾಡಿಕೊಳ್ಳಲಾಗಿರಲಿಲ್ಲ. ಆರು ಜನ ಹೊರಡೋದು ಅಂತ ನಿರ್ಧಾರ ಆಗಿತ್ತು ಆದರೆ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಇನ್ನೂ 3 ಮೂರು ಜನ ಸೇರಿಕೊಂಡು ಒಂಬತ್ತು ಜನರಾದೆವು.


ನಾವು ಗೊತ್ತು ಮಾಡಿದ್ದ ಟೆಂಪೋ ಟ್ರಾವೆಲ್ಲರಿನಲ್ಲಿ ಬೆಂಗಳೂರು ಬಿಟ್ಟಾಗ ರಾತ್ರಿ 11 ಗಂಟೆ. ಮುಕ್ತಿಹೊಳೆ ಹೊನ್ನಾವರದ ಹತ್ತಿರ ಇದೆ. ಬೆಂಗಳೂರಿನಿಂದ ಹೊನ್ನಾವರ ಸುಮಾರು 450 ಕೀ.ಮೀ. ಮುಕ್ತಿಹೊಳೆ ತಲುಪಲು ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ (B H Road NH-206) ಹೊನ್ನಾವರದ ಹತ್ತಿರ ಇರುವ ಹಡಿನಬಾಳದಿಂದ ಬಲಕ್ಕೆ ತಿರುಗಬೇಕು. ಮೊದಲು ಗುಂಡಬಾಳ ಎನ್ನುವ ಊರು ಸಿಗುತ್ತದೆ. ಹಡಿನಬಾಳದಿಂದ ಸುಮಾರು 15 ಕೀ.ಮೀ. ದೂರದಲ್ಲಿ ಹಿರೇಬೈಲು ಎಂಬುವ ಊರಿದೆ. ಮಹದೇವ ನಾಯಕರ ಮನೆ ಇರುವುದು ಇಲ್ಲೇ. ಊರು ಅಂದಾಕ್ಷಣ ಬಯಲುಸೀಮೆಯ ಕಡೆಯ ಊರುಗಳನ್ನ ಕಲ್ಪಿಸಿಕೊಳ್ಳ ಬೇಡಿ. ಹಿರ್‍ಏಬೈಲಿನಲ್ಲಿ ನಮಗೆ ಕಾಣಿಸಿದ್ದು ಒಂದೇ ಮನೆ. ಹಿರೇಬೈಲು ತಲುಪಲು KSRTC ಬಸ್ಸುಗಳೂ ಇವೆ. ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಹಡಿನಬಾಳದಿಂದ ಒಂದು ಬಸ್ಸು ಹಿರೇಬೈಲಿಗೆ ಬರುತ್ತದೆ. ಮಳೆ ಇಲ್ಲದಿದ್ದರೆ ಮಾತ್ರ ಬಸ್ಸು ಹಿರೇಬೈಲಿಗೆ ಬರುತ್ತದೆ ಇಲ್ಲದಿದ್ದರೆ ಇಲ್ಲ. ಹಡಿನಬಾಳದಿಂದ ಹಿರೇಬೈಲಿಗೆ 15 ಕೀ.ಮೀ. ದಾರಿ ಸವೆಸಲು ನಮಗೆ ಒಂದು ಗಂಟೆಯೇ ಹಿಡಿಯಿತು. ನಾವು ಹಡಿನಬಾಳದಲ್ಲಿ ತಿಂಡಿ ತಿಂದು, ಅದಕ್ಕೂ ಮುಂಚೆ ಗೇರುಸೊಪ್ಪ ಜಲಪಾತದ ತಪ್ಪಲಿನಲ್ಲಿ ನಿತ್ಯಕರ್ಮಗಳನ್ನು ಮುಗಿಸಿ ಬಂದಿದ್ದೆವು. ನಾವುಗಳು ಈ ಕಾರಣಕ್ಕಾಗಿ ಗೇರುಸೊಪ್ಪಕೆ ಹೋಗಿದ್ದು ಇದು ಮೂರನೇ ಬಾರಿ.

ಮಚ್ಚೆ ಎಲ್ಲಿದೆ!? ತಂಡ ಮಹದೇವ ನಾಯಕರ ಮನೆ ತಲುಪಿದಾಗ ಬೆಳಗ್ಗೆ ಹನ್ನೊಂದು ಗಂಟೆಗಳಾಗಿದ್ದವು. ಮಹದೇವ ನಾಯಕರು ಹಾಗು ಅವರ ಮಗ ಮನೆಯಲ್ಲಿಯೇ ಇದ್ದರು. ನಾವು ಹೀಗೆ ಮುಕ್ತಿ ಹೊಳೆ ನೋಡಲು ಬಂದಿರುವುದಾಗಿ ತಿಳಿಸಿ, ಯಾರದರು ನಮಗೆ ಗೈಡ್ ಸಿಗುತ್ತಾರೆಯೇ ಎಂದು ವಿಚಾರಿಸಿದೆವು. ಮುಂಚಿತವಾಗಿ ತಿಳಿಸಿ ಬಂದಿದ್ದರೆ ವ್ಯವಸ್ತೆ ಮಾಡಬಹುದಿತ್ತು ಆದರೆ ಈಗ ಕಷ್ಟ ಎಂದರು. ನಮ್ಮ ಜಗದೀಶ ಈ ಮೊದಲು ಮುಕ್ತಿಹೊಳೆಗೆ ಹೋಗಿ ಬಂದಿದ್ದರಿಂದ ನಮಗೆ ಸ್ವಲ್ಪ ದಾರಿ ಹೇಳಿ ನಾವುಗಳೇ ಹೊಗುತ್ತೇವೆ ಎಂದೆವು. ಮಹದೇವ ನಾಯಕರು ಮತ್ತು ಅವರ ಮಗ ಮೊದಲು ಅನುಮಾನಿಸಿದರೂ ನಂತರ ಒಪ್ಪಿದರು. ಮುಕ್ತಿಹೊಳೆಗೆ ಹೋಗಲು ಮಹದೇವ ನಾಯಕರ ಮನೆಯಿಂದ ಹೊರಟು ಎದುರಿಗಿರುವ ಗುಡ್ಡದಲ್ಲಿ ಏರು ಮುಖವಾಗಿ ಹೋಗಬೇಕು. ನಂತರ ಒಂದು ಜಾಗದಲ್ಲಿ ಬಲಕ್ಕೆ ತಿರುಗಿ ಗುದ್ದಡ ಇನ್ನೊಂದು ಬದಿಗೆ ಇಳಿಯಬೇಕು. ಈ ಬಲತಿರುವನ್ನು ಗುರುತಿಸುವುದೇ ಅತ್ಯಂತ ಕಷ್ಟ. ಅಲ್ಲಿ ಯಾವುದೇ ದಾರಿ ಸೂಚಕಗಳಿಲ್ಲ. ಮುಂಚಿತವಾಗಿ ನೋಡಿದ್ದರೂ ಈ ತಿರುವನ್ನು ಗುರುತಿಸುವುದು ಕಷ್ಟವೇ. ಈ ಗುಡ್ಡವನ್ನು ಇಳಿದರೆ ಸಿಗುವ ಕಣಿವೆಯಲ್ಲಿ ಮುಕ್ತಿಹೊಳೆ ಹರಿಯುತ್ತದೆ. ಅಲ್ಲಿಂದ ಸುಮಾರು ಒಂದು ಗಂಟೆಗೂ ಮೀರಿ ನೀರಿನ ಹರಿವಿನ ವಿರುದ್ದವಾಗಿ ನೆಡೆದರೆ ಮುಕ್ತಿಹೊಳೆ ಜಲಪಾತ ಸಿಗುತ್ತದೆ.

ನಾವು ಮಹದೇವ ನಾಯಕರ ಮನೆ ಬಿಟ್ಟಾಗ ಸುಮಾರು 11.30. ಮಹದೇವ ನಾಯಕರ ಮನೆಯ ಹತ್ತಿರದಿಂದ ಹೊರಡುವ ಕಾಲು ದಾರಿಯಲ್ಲಿ ಹೊರಟೆವು. ಸುಮಾರು ಅರ್ಧ ಗಂಟೆಗೂ ಮೀರಿ ನೆಡೆದರೂ ನಾವುಗಳು ಬೆಟ್ಟವನ್ನು ಏರದೇ ಅದನ್ನು ಬಳಸಿ ಬರುತ್ತಿದ್ದೇವೆ ಅನ್ನಿಸುತಿತ್ತು. ದಾರಿಯಲ್ಲಿ ನಮಗೆ ಒಂದು ಮನೆ ಕಾಣಿಸಿತು. ಒಂದಿಬ್ಬರು ಒಳಗೆ ಹೋಗಿ ಮುಕ್ತಿಹೊಳೆಯ ದಾರಿ ಕೇಳಿಕೊಂಡು ಬಂದರು. ಬೆಟ್ಟದ ಮೇಲಕ್ಕೆ ಹತ್ತುವ ದಾರಿಯನ್ನು ನಾವುಗಳು ಈ ಹಿಂದೆಯೇ ಬಿಟ್ಟು ಬಂದಿರುವೆವು ಮತ್ತು ನಮ್ಮ ಎದುರಿಗಿರುವ ಏರು ರಸ್ತೆಯಲ್ಲಿ ಹೋದರೆ ದಾರಿ ಮುಂದೆ ಒಂದು ಕಡೆ ಕವಲಾಗುತ್ತದೆ ಅಲ್ಲಿ ಬಲಕ್ಕೆ ಹೋದರೆ ಮಹದೇವ ನಾಯಕರ ಮನೆಯಿಂದ ಮುಕ್ತಿಹೊಳೆಗೆ ಹೋಗುವ ಕಾಲು ದಾರಿ ಕೋಡಿಕೊಳ್ಳುತ್ತೇವೆ ಎಂದು ಆ ಮನೆಯಲ್ಲಿದ್ದವರು ತಿಳಿಸಿದ್ದರು. ನಾವು ನೆಡೆದ ಅರ್ಧ ಗಂಟೆಯ ದಾರಿಯು ಒಣಗಿದ ತರಗೆಲೆಗಳಿಂದ ಕೂಡಿತ್ತು. ನವೆಂಬರಿನ ಒಣಹವೆ ಎದ್ದು ಕಾಣುತಿತ್ತು. ಆದರೂ ನನಗೆ ಒಂದೆರೆದು ಜಿಗಣೆಗಳು ಅಮರಿಕೊಂಡಿದ್ದವು. ಒಂದು ಜಿಗಣೆಯಂತು ಕಾಲು ಬೆರಳಿನ ಸಂದಿಯಲ್ಲಿ ಕೂತು ಚೆನ್ನಾಗಿಯೇ ರಕ್ತ ಕುಡಿದಿತ್ತು. ಜಿಗಣೆಗಳು ಚಂದ್ರನಿಗೂ ಕಚ್ಚಿದ್ದವು. ನಾವಿಬ್ಬರು ಜಿಗಣೆಗಳನ್ನು ಕೀಳುವುದನ್ನು ಕಂಡು ಉಳಿದವರೂ ಒಮ್ಮೆ ತಮ್ಮ ಕೈ ಕಾಲುಗಳನ್ನು ನೋಡಿಕೊಂಡರು.

ಇಲ್ಲಿಂದ ಮುಂದೆ ಏರು ರಸ್ತೆಯಲ್ಲಿ ಒಂದೇ ಸಮನೆ ನೆಡೆಯತೊಡಗಿದೆವು. ಒಂದುಕಡೆ ದಾರಿ ಕವಲಾಯಿತು. ನಾವು ಬಲಗಡೆಗೆ ಹೊರಳಿಕೊಂಡೆವು. ಈ ದಾರಿ ಮುಂದೆ ಹೋಗಿ ಇನ್ನೊಂದು ಕಲ್ದಾರಿಯನ್ನು ಸೇರಿಕೊಂಡಿತು- ಇದೇ ಮಹದೇವ ನಾಯಕರ ಮನೆಯ ಕಡೆಯಿಂದ ಬರುವ ದಾರಿ. ಹೀಗೆ ಏರು ದಾರಿಯಲ್ಲಿ ಒಂದು ಗಂಟೆ ನೆಡೆದಮೇಲೆ ನಾವು ಬೆಟ್ಟದ ತುದಿ ತಲುಪಿದ್ದೇವೆ ಅನ್ನಿಸತೊಡಗಿತು. ಇಲ್ಲಿಂದ ಮುಂದೆ ದಾರಿ ಸಣ್ಣದಾಗಿ ಇಳಿಯತೊಡಗಿದಾಗ ಬಲಕ್ಕೆ ಕಣಿವೆಯ ಕಡೆಗೆ ಇಳಿಯುವ ಕಾಲುದಾರಿಯನ್ನು ಹುಡುಕುತ್ತ ಮುಂದೆ ನೆಡೆದೆವು. ಒಂದು ಕಡೆ ಮರದ ಬಡ್ಡೆಯೊಂದಕ್ಕೆ ಮಚ್ಚಿನಿಂದ ಹೊಡೆದು ಗುರುತು ಮಾಡಲಾಗಿತ್ತು. ಇದೇ ಕಣಿವೆಗೆ ಇಳಿಯುವ ದಾರಿಯೆಂದು ಜಗದೀಶ ಹೇಳಿದ. ನಾವು ಗಮನಕೊಟ್ಟು ಹುಡುಕಿಕೊಂಡು ಬರದಿದ್ದಲ್ಲಿ ಈ ಕಾಲ್ದಾರಿಯನ್ನು ಗುರುತಿಸಲು ಸಾಧ್ಯವೇ ಇರಲಿಲ್ಲ. ಈ ಕಾಲ್ದಾರಿಯನ್ನು ಗುರುತಿಸದೆ ಮುಂದೆ ಆರೇಳು ಕೀಲೋ ಮೀಟರಿನಷ್ಟು ಮುಂದೆ ನೆಡೆದರೆ ಕೋಡಿಗದ್ದೆಯೆಂಬ ಊರು ಸಿಗುತ್ತದೆ. ಅಲ್ಲಿಂದ ಸಿದ್ದಾಪುರ-ಕುಮಟ ರಸ್ತೆಯನ್ನು ಸೇರಬಹುದು. ಗುಡ್ಡವನ್ನು ಏರುತ್ತಿದ್ದಂತೆ ಕಾಡು ದಟ್ಟವಾಗತೊಡಗಿತ್ತು. ಈಗ ನಾವುಗಳು ಇಳಿಯುತ್ತಿದ್ದ ದಾರಿಯಂತೂ ಬಹಳ ಕಡಿದಾಗಿದ್ದು ಜಾರುತಿತ್ತು. ಇಲ್ಲಿ ಸೂರ್ಯನ ಬೆಳಕು ನೆಲಮುಟ್ಟುವುದು ಕಷ್ಟವೆನ್ನಿಸುವಷ್ಟು ಕಾಡು ದಟ್ಟವಾಗಿತ್ತು. ಇಲ್ಲಿ ಹೆಚ್ಚಾಗಿ ರಬ್ಬರ್ ಮರಗಳು ಕಂಡವು. ಈ ದಾರಿಯಲ್ಲಿ ಜನ ತಿರುಗಾಡದ ಕಾರಣ ಬಹಳ ಗಿಡ ಬಳ್ಳಿಗಳು ದಾರಿಗೆ ಅಡ್ಡವಾಗಿ ಬೆಳೆದಿದ್ದವು. ಎಲ್ಲೂ ನಿಲ್ಲದೆ ಸತತವಾಗಿ ಅರ್ಧಗಂಟೆ ಇಳಿದಮೇಲೆ ನಾವು ಕಣಿವೆಯನ್ನು ಸೇರಿದೆವು.

ಮಹದೇವ ನಾಯಕರ ಮನೆಯಿಂದ ಹೊರಟು ಕಣಿವೆ ಸೇರಲು ನಮಗೆ ಸುಮಾರು ಎರಡು ಗಂಟೆಗಳೇ ಹಿಡಿದಿದ್ದವು. ಕೆಲಕಾಲ ಹರಿಯುತ್ತಿದ್ದ ನೀರಿನಲ್ಲಿ ಕಾಲು ಮುಳುಗಿಸಿಕೊಂಡು ಕೂತೆವು. ಸಮಯ ಆಗಲೇ ಮಧ್ಯಾಹ್ನ 1.30 ಆಗಿತ್ತು. ಮಹದೇವ ನಾಯಕರು ಕಣಿವೆಗೆ ಇಳಿದಮೇಲೆ ಜಲಪಾತ ತಲುಪತು ಸುಮಾರು ಒಂದು ಗಂಟೆಯಷ್ಟು ನೆಡೆಯಬೇಕು ಎಂದಿದ್ದರು. ನಾವು ಹೋಗುತ್ತಿದ್ದ ಗತಿಯಲ್ಲಿ ನಮಗೆ ಕನಿಷ್ಟ ಒಂದೂವರೆ ಗಂಟೆಗಳಾದರೂ ಬೇಕಿತ್ತು. 3 ಗಂಟೆಗೆ ಸರಿಯಾಗಿ ಜಲಪಾತ ತಲುಪಿದರೂ ಮತ್ತೆ ವಾಪಸ್ಸು ಮಹದೇವ ನಾಯಕರ ಮನೆ ತಲುಪಲು ನಾಲ್ಕು ಗಂಟೆಗಳೇ ಬೇಕು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ತಿನ್ನಲು ಬೇಕಾದ್ದನ್ನು ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಗಾಡಿಯಲ್ಲಿಯೇ ಬಿಟ್ಟು ಬಂದಿದ್ದರಿಂದ, ನಾವುಗಳು ಯಾವುದೇ ಕಾರಣಕ್ಕೂ ಕಾಡಿನಲ್ಲಿ ರಾತ್ರಿ ಕಳೆಯುವ ಸ್ಥಿತಿಯಲ್ಲಿ ಇರಲಿಲ್ಲ.

ಅಲ್ಲೊಂದು ಇಲ್ಲೊಂದು ಫೋಟೊಗಳನ್ನು ತೆಗೆಯುತ್ತಿದ್ದರೂ ಸರಸರನೆ ಹೆಜ್ಜೆಹಾಕತೊಡಗಿದೆವು. ದಾರಿಯಲ್ಲಿ ಬಹಳಷ್ಟು ಹಾವಿನ ಪೊರೆಗಳು ನೋಡಲು ಸಿಕ್ಕಿದವು. ಹರೀಶ ಮತ್ತು ಗಿರೀಶರ ನಕ್ಷತ್ರ ಚೆನ್ನಗಿದ್ದಿದ್ದರಿಂದ ಅವರಿಗೆ ಜೀವಂತ ಹಾವೆ ಕಾಣಿಸಿತು. ಮಳೆಗಾಲ ಮುಗಿದಿದ್ದರಿಂದ ನೀರಿನ ಹರಿವು ಕಡಿಮೆಯಾಗಿತ್ತು. ಈ ಹೊಳೆಯಲ್ಲಿ ಬಹಳ ರಭಸದಿಂದ ನೀರು ಹರಿಯುವುದರಿಂದ ದಡಗಳಲ್ಲಾಗಲಿ ಇಲ್ಲವೆ ಹೊಳೆಯಲ್ಲಾಗಲಿ ಸ್ವಲ್ಪವೂ ಮಣ್ಣು ಇರದೆ ಶುಭ್ರವಾಗಿದೆ. ಹೊಳೆಯ ದಡದಲ್ಲಿ ಬರೀ ಬಂಡೆಗಳೇ ಇವೆ. ಒಂದು ಬಂಡೆಯಿಂದ ಇನ್ನೋಂದು ಬಂಡೆಗೆ ನೆಗೆಯುತ್ತಾ, ಎಡ ದಂಡೆಯಲ್ಲಿ ಮುಂದೆ ಹೋಗಲು ಸಾಧ್ಯವೆ ಇಲ್ಲ ಎಂದಾಗ ಹೊಳೆದಾಟಿ ಬಲ ದಂಡೆಗೆ ಹೋಗಿ ಅಲ್ಲಿಂದ ಮುಂದೆ ನೆಡೆಯ ತೊಡಗಿದೆವು. ಹೀಗೆ ಎಡದಂಡೆಯಿಂದ ಬಲದಂಡೆಗೆ ಮತ್ತು ಬಲದಿಂದ ಎಡಕ್ಕೆ ದಾಟಿಕೊಳ್ಳುತ್ತಾ ಮುಂದುವರೆದೆವು. ಒಂದೇ ಒಂದು ಮಳೆ ಬಂದರೂ ಇಲ್ಲಿ ನೆಡೆಯುವುದು ದುಸ್ತರ. ಹೊಳೆಬಿಟ್ಟು ಸ್ವಲ್ಪ ಮೇಲೆ ಹತ್ತಿದರೂ ಜೀವ ತಿನ್ನುವಷ್ಟು ಜಿಗಣೆಗಳಿರುತ್ತವೆ. ಮಳೆಗಾಲದಲ್ಲಿ ಈ ಜಾಗಕ್ಕೆ ಬರುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಈ ಮುಂಚೆ ಜಗದೀಶ ಏಪ್ರಿಲ್ ತಿಂಗಳಿನಲ್ಲಿ ಇಲ್ಲಿಗೆ ಬಂದಿದ್ದಾಗ ಒಂದೇ ಒಂದು ಅಡ್ಡಮಳೆ ಹೊಡೆದಿದ್ದರಿಂದ ಈ ಕಣಿವೆಯವರೆಗೆ ಬಂದು ಇಲ್ಲಿಂದ ಮುಂದೆ ಹೋಗಲಾರದೆ ಹಿಂತಿರುಗಿದ್ದರು.

pic: GPS ನಿಂದ ಹಿಡಿದ ಚಾರಣದ ಜಾಡು

ಈಗಾಗಲೆ ಹೊಳೆಯ ದಡದಲ್ಲಿ ಒಂದು ಗಂಟೆ ಸತತವಾಗಿ ನೆಡೆದಿದ್ದರೂ ಜಲಪಾತದ ಸುಳಿವು ಸಿಕ್ಕಿರಲಿಲ್ಲ. ನಮ್ಮ ಲವ್ಸ್ಯೂ ’ಋಷಿ ಮೂಲ ನದಿ ಮೂಲ ಹುಡುಕಬಾರದು ಅದುಕ್ಕೆ ನಮಗೆ ಈ ಜಲಪಾತ ಸಿಗ್ತಿಲ್ಲ ಮೂರು ಗಂಟೆ ಒಳಗೆ ಇದು ಸಿಕ್ಕಲಿಲ್ಲಂದ್ರೆ ವಾಪಸ್ ಹೊಗೋಣ’ ಎಂದ. ಚಂದ್ರ, ಜಗದೀಶ, ಗಿರೀಶ ಎಲ್ಲರಿಗಿಂತ ಮುಂದಿದ್ದರೆ... ನಾನು ಹರೀಶ ಮತ್ತು ಲವ್ಸೂ ರಾಘವೇಂದ್ರವೇಂದ್ರ ಮಧ್ಯದಲ್ಲಿ ಇದ್ದೆವು. ವರುಣ್ ಸುಸ್ತಾಗಿದ್ದ ಅವನ ಗತಿ ಇಳಿದಿತ್ತು ಅವನ ಜೊತೆಗೆ ರಂಗ ಇದ್ದ. ಸಮಯ 3 ಗಂಟೆಯಾಗಿತ್ತು, ಹೊಳೆ ಬಹಳ ತಿರುವುವುಗಳನ್ನ ತಗೊಂಡಿತ್ತು... ಎದುರಿಗೆ ಕಾಣುತ್ತಿರುವ ತಿರುವೇ ಕೊನೆಯದು ಜಲಪಾತ ಸಿಗದಿದ್ದರೆ ವಾಪಸ್ ಹೊರಡೋಣ ಅಂದುಕೊಂಡು ಆ ತಿರುವು ದಾಟಿದರೆ ಅಲ್ಲೇ ಇತ್ತು ಮುಕ್ತಿ ಹೊಳೆ ಜಲಪಾತ. ಮುಕ್ತಿಹೊಳೆ ಜಲಪಾತ ಮೂರು ಹಂತದಲ್ಲಿ ಕೆಳಗಿಳಿಯುತ್ತದೆ. ಮೊದಲನೆಯದು ಚೆನ್ನಾಗಿ ಕಾಣುತ್ತದೆ, ಎರಡನೆಯದು ಅಷ್ಟು ಚೆನ್ನಾಗಿ ಕಾಣುವುದಿಲ್ಲ. ಕೊನೆಯ ಮತ್ತು ಮೂರನೆಯ ಹಂತವೇ ಉಳಿದವುಗಳಿಗಿಂತ ಜೋರಾಗಿ ಬೀಳುತ್ತದೆ. ಮುಕ್ತಿಹೊಳೆ ಜಲಪಾತದಿಂದ ಧುಮುಕುತಿದ್ದ ನೀರು ಹಾಲಿನಷ್ಟು ಶುಭ್ರವಾಗಿ ಕಾಣುತಿತ್ತು. ನೀರು ಧುಮುಕಿ ಕೆಳಗೆ ಒಂದು ಸಣ್ಣ ಹೊಂಡ ನಿರ್ಮಾಣವಾಗಿದೆ.

ಸ್ವಲ್ಪ ಹೊತ್ತು ಕೂತು ಜಲಪಾತವನ್ನು ನೋಡಿದೆವು. ಕೆಲವರು ಬಟ್ಟೆ ಕಳಚಿ ನೀರಿಗೆ ಇಳಿದರು. ಉಳಿದವರು ಊಟಕ್ಕ ಕೈ ಹಚ್ಚಿದರು. ಬೆಂಗಳೂರಿನಿಂದ ತಂದಿದ್ದ ಚಪಾತಿ, ಹೊಳಿಗೆ, ಚಕ್ಕುಲಿ, ಕೋಡುಬಳೆಗಳ ಸೇವನೆ ಆಯಿತು. ಸಮಯ ಆಗಲೆ ನಾಲ್ಕು ಗಂಟೆಯ ಸಮೀಪ ಬಂದಿದ್ದರಿಂದ ಹೊರಡಲು ತಯಾರಾದೆವು. ಸುಮಾರು ನಾಲ್ಕು ಗಂಟೆಗಳಷ್ಟು ಕಾಲ ನೆಡೆದು ಬಂದಿದ್ದರೂ ಜಲಪಾತದ ಬಳಿ ಹೆಚ್ಚು ಸಮಯ ಕಳೆಯಲಾಗದಿದ್ದುದ್ದಕ್ಕೆ ಎಲ್ಲರಿಗೂ ಬೆಜಾರಿತ್ತು. ಮರಳಿ ಮಹದೇವ ನಾಯಕರ ಮನೆ ತಲುಪಲು ಮತ್ತೆ ಸುಮಾರು ನಾಲ್ಕು ಗಂಟೆಗಳಷ್ಟು ನೆಡೆಯಬೇಕು ಎನ್ನುವುದು ಎಲ್ಲರಿಗೂ ತಿಳಿದಿತ್ತು. ಕಣಿವೆಯಿಂದ ಬೆಟ್ಟದ ತುದಿಗೆ ಹತ್ತಬೇಕಿದ್ದ ಏರಿನ ಬಗ್ಗೆ ಎಲ್ಲರಿಗೂ ಹೆದರಿಕೆ ಇತ್ತು. ಕತ್ತಲಾಗುವುದಕ್ಕೆ ಮುಂಚೆ ಈ ಏರುದಾರಿಯನ್ನು ದಾಟಬೇಕೆಂದುಕೊಂಡಿದ್ದೆವು. ನಾನು, ಚಂದ್ರ, ರಾಘವೇಂದ್ರ ಹಾಗೂ ಗಿರೀಶ ಸರಸರನೇ ಹೆಜ್ಜೆ ಹಾಕತೊಡಗಿದೆವು. ಲವ್ಸೂ ರಾಘವೇಂದ್ರ ’ವೆಂಕು ಪೆಣಂಬೂರಿಗೆ’ ಹೋದ ಹಾಗೆ ತಲೆ ಬಗ್ಗಿಸಿಕೊಂಡು ಮುಂದೆ ಹೋಗುತಿದ್ದ. ಹೋಗುವಾಗ ಒಂದೂವರೆ ಗಂಟೆ ತೆಗೆದುಕೊಂಡಿದ್ದ ದಾರಿಯನ್ನು ಒಂದು ಗಂಟೆಯಲ್ಲಿ ಪೂರೈಸಿದೆವು. 5 ಗಂಟೆಯ ಹೊತ್ತಿಗೆ ನಾವು ಬೆಟ್ಟದಿಂದ ಇಳಿದು ನದಿ ದಡ ಸೇರಿದ್ದ ಜಾಗ ತಲುಪಿದೆವು. ಇಳಿಯುವಾಗಲೆ ಮತ್ತೆ ಗುರುತಿಸಲು ಸುಲಭವಾಗುವಂತೆ ನೀರಿನ ಬಾಟಲಿಗಳನ್ನು ಕಟ್ಟಿದ್ದೆವು. ಹೀಗೆ ಕಟ್ಟಿದ್ದು ಬಹಳ ಸಹಾಯ ಆಯಿತು. ಅವುಗಳಿಲ್ಲದಿದ್ದರೆ ಮತ್ತೆ ಮೇಲೆ ಹತ್ತುವ ದಾರಿ ಗುರುತು ಹಿಡಿಯುವುದು ಕಷ್ಟವಿತ್ತು.

ಹಿಂದಿದ್ದ ಗುಂಪಿನಲ್ಲಿ ವರುಣ್ ಬಹಳ ಸುಸ್ತಾಗಿದ್ದ. ಅವರು ನಮ್ಮನ್ನು ಬಂದು ಸೇರುವ ಹೊತ್ತಿಗೆ 5.30 ಆಗಿತ್ತು. ನೇತುಹಾಕಿದ್ದ ಬಾಟಲಿಗಳನ್ನು ಬಿಚ್ಚಿಕೊಂಡು ನೀರು ತುಂಬಿಸಿಕೊಂಡೆವು. ಇಲ್ಲಿಯವರೆಗೆ ನದಿಯದಂಡೆಯಲ್ಲಿಯೇ ನೆಡೆಯುತ್ತಿರುವುದರಿಂದ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೊಗುವ ಅಗತ್ಯ ಇರಲಿಲ್ಲ. ಸಂಜೆಗತ್ತಲು ಆವರಿಸುತಿತ್ತು ಪೂರ್ತಿ ಕತ್ತಲಾಗುವ ಹೊತ್ತಿಗೆ ಬೆಟ್ಟದ ತುದಿ ತಲುಪಬೇಕಿತ್ತು. ಇಲ್ಲಿಂದ ಮುಂದೆ ತಂಡ ಹೊಡೆದು ಹೋಗದೆ ಒಟ್ಟಿಗೆ ನೆಡೆಯತೊಡಗಿದೆವು. UP ಜಾಸ್ತಿ ಇದ್ದಿದ್ದರಿಂದ ಕೆಲ ಹೆಜ್ಜೆ ಇಟ್ಟೊಡನೆ ಸುಸ್ತಾಗಿ ನಿಂತೆವು. ಏರು ದಾರಿಯಲ್ಲಿ ಸ್ವಲ್ಪ ದೂರ ನೆಡೆಯುವುದು ನಿಲ್ಲುವುದು ಮಾಡುತ್ತಾ ನೆಡೆಯತೊಡಗಿದೆವು. ಅಂದುಕೊಂಡಂತೆ ಪೂರ್ತಿ ಕತ್ತಲಾಗುವದೊರೊಳಗೆ ಮೇಲೆ ಹತ್ತಿದ್ದೆವು. ಇಲ್ಲಿಂದ ಮುಂದೆ ಇಳಿಜಾರು. ಟಾರ್ಚ್ ಗಳನ್ನು ಹೊತ್ತಿಸಿಕೊಂಡು ನೆಡೆಯತೊಡಗಿದೆವು. ಸತತವಾಗಿ ಒಂದೂವರೆಗಂಟೆ ನೆಡೆದ ಮೇಲೆ ಸುಮಾರು ಎಂಟುಗಂಟೆಯ ಸುಮಾರಿಗೆ ಮಹದೇವ ನಾಯಕರ ಮನೆ ತಲುಪಿದೆವು.

ವರುಣನ ಕಾಲಿಗೆ ಬಹಳಷ್ಟು ಜಿಗಣೆಗಳು ಹತ್ತಿದ್ದವು. ಅವನು ಎಷ್ಟು ಸುಸ್ತಾಗಿದ್ದನೆಂದರೆ ಕೈ ಹಾಕಿ ಜಿಗಣೆಗಳನ್ನೂ ಕಿತ್ತು ಕೊಂಡಿರಲಿಲ್ಲ. ಉಳಿದವರೂ ಜಿಗಣೆಗಳನ್ನು ಹುಡುಕಿ ಕಿತ್ತುಕೊಂಡೆವು. ಮಹದೇವ ನಾಯಕರ ಮನೆಯ ಬಳಿಯೇ ಒಂದು ಸಣ್ಣ ಕಾಲುವೆ ಇದೆ. ಅಲ್ಲಿಗೆ ಹೋಗಿ ಕೈ ಕಾಲು ತೊಳೆದುಕೊಂಡು ಬಂದು ಜಗುಲಿಯಲ್ಲಿ ಕೂತೆವು. ಮುಕ್ತಿ ಹೊಳೆಗೆ ಹೋಗುವ ಮೊದಲೆ ರಾತ್ರಿ ಊಟಕ್ಕೆ ಮಹದೇವ ನಾಯಕ ಮನೆಯಲ್ಲಿ ಹೇಳಿ ಹೋಗಿದ್ದೆವು. ಬಿಸಿ ಬಿಸಿ ಅನ್ನ, ತೆಂಗಿನ ಕಾಯಿನ ಚಟ್ನಿ ಜೊತೆಗೆ ಮಜ್ಜಿಗೆ ಹುಳಿ ಬೆರೆಸಿಕೊಂಡು ಎರಡು ಪಾತ್ರೆ ಅನ್ನ ಮುಗಿಸಿದೆವು. ಆವರ ಮನೆಯ ಜಗುಲಿಯಲ್ಲಿ ರಾತ್ರಿ ಮಲಗಿದ್ದು ಬೆಳಗೆದ್ದು ಅವರು ಕೊಟ್ಟ ಚಹ ಕುಡಿದು ಅವರ ಸಹಾಯಕ್ಕೆ ವಂದಿಸಿ ಹೊನ್ನಾವರದ ಕಡೆಗೆ ಹೊರಟೆವು.

ಹೊನ್ನಾವರದಲ್ಲಿ ತಿಂಡಿ ತಿಂದು ಶರಾವತಿ ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ಹೊರಟೆವು. ಒಂದು ’ಡಿಂಗಿ’ ಬಾಡಿಗೆಗೆ ಹಿಡಿದು ಸುಮಾರು ಎರಡು ಗಂಟೆಗಳಕಾಲ ಸುತ್ತಿದೆವು. ನಾನು, ರಾಘವೇಂದ್ರ ಮತ್ತು ದೋಣಿ ಚಲಾಯಿಸುವುದನ್ನೂ ಒಂದು ಕೈ ನೋಡಿದೆವು. ಅಲ್ಲಿಂದ ಅಪ್ಸರ ಕೊಂಡಕ್ಕೆ ಹೋಗಿ ಬೀಚಿನಲ್ಲಿ ಆಟವಾಡಿ ಕೊಂಡದಲ್ಲಿ ಮಿಂದು ಊಟಕ್ಕೆ ಹೊರಟೆವು. ಕಾಮತ ಹೋಟೆಲಿನಲ್ಲಿ ಊಟ ಮುಗಿಸಿ 4 ಗಂಟೆ ಸುಮಾರಿಗೆ ಬೆಂಗಳೂರಿನ ದಾರಿ ಹಿಡಿದೆವು.

Tuesday 1 April, 2008

ಕುಂಟಿನಿ pages

ಕುಂಟಿನಿ ಎಂಬುವವರು ಬ್ಲಾಗಿಸಿರೊ ಕವನಗಳನ್ನ ಓದಿದೆ... ತುಂಬಾ ಮುದಕೊಟ್ಟವು. ನಾನು ಓದಿ ನಿಮಗೂ ತೋರಿಸ ಬೇಕು ಅನ್ನಿಸ್ತು, ಒಂದೇ ಒಂದು ಚುಟುಕವನ್ನ (ಅವರ ಅನುಮತಿಗೂ ಕಾಯದೆ) ಈಗ ಇಲ್ಲಿ ಹಾಕ್ಕಿದ್ದೀನಿ, ಓದಿ.

ನಿತ್ಯ ಮುಂಜಾನೆ
ಹಕ್ಕಿಯ ಕಲರವದಲ್ಲಿ
ನಿನ್ನ
ಸಂತೋಷಕ್ಕಿಂತ
ಅದರ
ಪಾಡಿದೆ.

ಎಷ್ಟು ಚೆನ್ನಾಗಿದೆ ಅಲ್ಲವೇ? ನನ್ನಂತ ಮಂದ ಮತಿಗೇ ಅರ್ಥ ಹೊಳೆದಿರುವಾಗ ನಿಮಗೆ ತಿಳಿಯೊಲ್ಲವೇ...

ಉಳಿದವನ್ನ ಓದೊದಕ್ಕೆ ಅವರ ಬ್ಲಾಗಿಗೆ ಭೇಟಿಕೊಡಿ.