Tuesday 21 August, 2007

ಕೊಡಚಾದ್ರಿ-3ಮೂಕಾಂಬಿಕ ಅಭಯಾರಣ್ಯದ ಒಂದು ಚಿತ್ರ

ಎಲ್ಲಿದ್ದೇವೆ ಮತ್ತು ರಸ್ತೆಯಿಂದ ಎಷ್ಟು ದೂರದಲ್ಲಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಲು ಕಾತುರಾಗಿದ್ದೆವು. ರಾಘವೇಂದ್ರ ಸ್ಪಯ್ಸ್ ನಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತನಿಂದ ನಾವು ಎಲ್ಲಿದ್ದೇವೆ ಎಂದು ತಿಳಿದುಕೊಳ್ಳಲು ಮಾಡಿದ ಪ್ರಯತ್ನ ವ್ಯರ್ಥವಾಗಿತ್ತು. ಈಗ ನಾವು ಎಲ್ಲಿದ್ದೇವೆ? ಎಷ್ಟು ದೂರ ನೆಡೆದರೆ ರಸ್ತೆ ಸಿಕ್ಕಬಹುದು ಎಂದು ಯೋಚಿಸತೊಡಗಿದೆವು. ಕತ್ತಲು ಆವರಿಸತೊಡಗಿತು. ಬ್ಯಾಗಿನಲ್ಲಿದ್ದ ಟಾರ್ಚ್, ಬ್ಯಾಟರಿಗಳನ್ನ ಕೈಗೆತ್ತಿಕೊಂಡೆವು, ನಮ್ಮ ಬಳಿ ಆರು ಇಲ್ಲವೇ ಏಳು ಟಾರ್ಚ್ ಇದ್ದವು. ಬ್ಯಾಗ್ ಪ್ಯಾಕ್ ಮಾಡಿಕೊಂಡು ಟಾರ್ಚ್ ಬೆಳಕಿನಲ್ಲಿ ಮುಂದೆ ನೆಡೆಯೋಣ ಎನ್ನುವುದು ನಮ್ಮ ನಿರ್ಧಾರವಾಗಿತ್ತು. ಇಲ್ಲಿಂದ ಮುಂದೆ ಎಲ್ಲರೂ ಒಂದೇ ಗುಂಪಿನಲ್ಲಿ ನೆಡೆಯ ಬೇಕು, ಯಾರೂ ಹಿಂದು ಮುಂದಾಗಬಾರದು ಎಂದು ನಿಶ್ಚಯಿಸಿದೆವು. ಹನ್ನೆರಡು ಜನರ ಗುಂಪಿನ ಮುಂದಾಳುಗಳಾಗಿ ಮಚ್ಚು ಹಿಡಿದಿದ್ದ ಹರೀಶ ಮತ್ತು ಟಾರ್ಚ್ ಹಿಡಿದಿದ್ದ ಮಿಲ್ಟ್ರಿ ಇದ್ದರು. ಅವರನ್ನು ಹಿಂಬಾಲಿಸಿಕೊಂಡು ಉಳಿದ ನಾವುಗಳೆಲ್ಲರೂ ನೆಡೆಯತೊಡಗಿದೆವು. ರಸ್ತೆ ಇಲ್ಲಿಯವರೆಗೆ ನಾವು ನೆಡೆದುಬಂದಿದ್ದಕ್ಕಿಂತ ಏನೂ ಬೇರೆಯಾಗಿರಲಿಲ್ಲ. ತರಗೆಲೆಗಳು, ಏರಿಳಿತ, ಅಕ್ಕ ಪಕ್ಕ ಎತ್ತರದ ಮರಗಳು. ಈ ರಸ್ತೆಯನ್ನು ಬೆಳಗಿನಿಂದಲೂ ನೋಡಿ ನಮಗೆಲ್ಲಾ ಇದು ಆಗಲೇ ಚಿರಪರಿಚಿತವಾದಂತನಿಸುತಿತ್ತು.

ಇಷ್ಟರಲ್ಲಾಗಲೇ ಕತ್ತಲು ಆವರಿಸಿತ್ತು. ಕೈಯಲ್ಲಿ ಬ್ಯಾಟರಿ ಹಿಡಿದು ಎದುರಿಗೆ ಅಂದಾಜಿನಲ್ಲಿ ಕಾಣುವ ದಾರಿಯಲ್ಲಿ ಒಂದರ ಹಿಂದೆ ಒಂದು ಹೋಗುವ ಕುರಿಗಳಂತೆ ಹೆಜ್ಜೆ ಹಾಕಿದೆವು. ಆಗಲೇ ಗಿರಿಶ, ಜಯಂತ ಮತ್ತು ಷಿರೀಶ ಈ ಮೂವರೂ ನಿತ್ರಾಣರಾಗಿದ್ದರು. ಎಲ್ಲರೂ ನೆಡೆಯುತ್ತಿದ್ದರಿಂದ ಅವರೂ ನಡೆಯ ತೊಡಗಿದರು. ಒಂದು ಕೈಯಲ್ಲಿ ಉದ್ದನೆಯ ದೊಣ್ಣೆಯನ್ನು ನೆಲಕ್ಕೆ ಊರಿಕೊಂಡು ಅರ್ಧ ಭಾರ ಅದರ ಮೇಲೆ ಹಾಕಿ ಇನ್ನೊಂದು ಕೈಯನ್ನು ಪಕ್ಕದಲ್ಲಿ ಬರುತ್ತಿರುವವನ ಹೆಗಲಿಗೆ ಹಾಕಿ ಅವನ ಮೇಲೆ ಉಳಿದರ್ಧ ಭಾರ ಹೇರಿ ಹೆಜ್ಜೆ ಇಡ ತೊಡಗಿದರು. ಆ ಕತ್ತಲು ದಾರಿಯಲ್ಲಿ ಅಲ್ಲೊಂದು ಇಲ್ಲೊಂದು ಬಿದ್ದಿದ್ದ ಮರಗಳನ್ನು ಹತ್ತಿ, ಹಾರಿದೆವು. ಮುಂದಿದ್ದ ಹರೀಶ ರಸ್ತೆಗೆ ಅಡ್ಡವಾಗಿದ್ದ ಸಣ್ಣ ಪುಟ್ಟ ಮುಳ್ಳು ಗಿಡಗಳನ್ನು ಸವರುತ್ತಾ ಮುಂದೆ ನೆಡೆದೆದಹಾಗೆ ಉಳಿದವರು ಅವನನ್ನು ಹಿಂಬಾಲಿಸಿದೆವು. ಕತ್ತಲಲ್ಲಿ ನೆಡೆಯುತ್ತಲೇ ಎಲ್ಲಿಯಾದರೂ ವಾಹನಗಳ ಸದ್ದು ಕೇಳುವುದೇ ಎಂದು ಕಿವಿ ಅಗಲಿಸಿಕೊಂಡೇ ನೆಡೆಯುತಿದ್ದೆವು.

ಒಂದು ಇಳಿಜಾರುನ್ನು ಇಳಿದಮೇಲೆ ಸ್ವಲ್ಪ ಸಮತಟ್ಟಾದ ಹಾದಿಗೆ ಬಿದ್ದೆವು. ಇಷ್ಟರಲ್ಲಾಗಲೇ ನಮ್ಮ ಕಷ್ಟಗಳನ್ನು ನೋಡಲಾಗದೆ ಸೂರ್ಯ ಕತ್ತಲೆ ಮನೆಗೆ ಹೋಗಿದ್ದ. ಹತ್ತು ಹೆಜ್ಜೆ ಇಡುವುದರಲ್ಲಿ ದಾರಿ ಹಸಿಯಾಯಿತು. ಕಾಲಿನ ಕೆಳಗೆ ಪಚ-ಪಚ ಎನ್ನುವಷ್ಟು ಕೆಸರು. ಮಳೆಗಾಲದಲ್ಲಿ ಹರಿದು ಈಗ ಬೇಸಿಗೆಯಲ್ಲಿ ಬತ್ತಿ ಹೋಗಿರುವಂತಹ ಒಂದು ಸಣ್ಣ ಝರಿಯಿದು, ನೀರು ಹರಿಯದಿದ್ದರೂ ನೆಲ ಇನ್ನೂ ಹಸಿಯಾಗೇ ಇತ್ತು. ಇಲ್ಲಿ ಸ್ವಲ್ಪ ಮುಳ್ಳಿನ ಗಿಡಗಳೂ ಹೆಚ್ಚಾದವು. ಒಂದು ದೊಡ್ಡ ಮರ ಅಡ್ಡ ಬಿದ್ದಿತ್ತು. ಮುಳ್ಳು ಸವರಿ ಮರದ ದಿಣ್ಣೆಯನ್ನು ಹಾರಿ ಮುಂದಡಿಯಿಟ್ಟೆವು. ಕತ್ತಲಾಗಿದ್ದರಿಂದಲೂ ಮತ್ತು ಬೆಳಗಿನಿಂದ ನೆಡೆದು ಸುಸ್ತಾಗಿದ್ದರಿಂದಲೂ ನಮ್ಮ ನೆಡಿಗೆಯ ವೇಗ ಕ್ಷೀಣಿಸಿತ್ತು. ಈ ಕೆಸರಿನ ಜಾಗದಿಂದ ೫ ನಿಮಿಷ ಮುಂದೆ ನೆಡೆದ ಮೇಲೆ ದಾರಿ ಸೀಳಾಗಿ ಎರಡಾದಂತಿತ್ತು. ಇಲ್ಲಿಂದ ಮುಂದೆ ಯಾವ ದಾರಿಯನ್ನು ಹಿಡಿಯುವುದು? ನಾವೊಂದು ನಾಲ್ಕು ಜನ ಈ ಬಗ್ಗೆ ಯೋಚಿಸುತ್ತಿರಬೇಕಾದರೆ ಇಲ್ಲಿಂದ ಮ್ಮುಂದೆ ಎಲ್ಲಿಗೂ ಹೋಗುವುದೂ ಬೇಡ ಇಲ್ಲೇ ರಾತ್ರಿ ಕಳೆದು ಬೆಳಗಾದ ಮೇಲೆ ಯಾವ ದಾರಿ ಹಿಡಿಯ ಬೇಕು ಎಂದು ನೋಡಿದರಾಯಿತು ಎಂದು ಷಿರೀಶ, ಗಿರೀಶ ಮತ್ತು ಜಯಂತರೆಂದರು. ಈ ವಾದವನ್ನು ನಾವುಗಳು ಒಪ್ಪುವ ಹಾಗೆ ಇರಲಿಲ್ಲ 'ಹತ್ತಿರದಲ್ಲೇ ಜಾಗ ತಣ್ಣಗಿದೆ. ಬೇಸಿಗೆಯಲ್ಲಿ ಹಾವುಗಳಿಗೆ ಇರಲು ಇದಕ್ಕಿಂದ ಬೆಸ್ಟ್ ಜಾಗ ಇನ್ನೊಂದಿರೊಲ್ಲ, ನಾವು ಇಲ್ಲಿ ಇರೋ ಹಾಗೆ ಇಲ್ಲ' ಎಂದ ಮಿಲ್ಟ್ರಿಯ ಮಾತನ್ನು ಎಲ್ಲರೂ ಒಪ್ಪಿದರು. ಸುಸ್ತಾಗಿದ್ದ ಎಲ್ಲರಿಗೂ ಜಯಂತ ಮಥುರಾ ಪೇಡ ತಿನ್ನಿಸಿದ. ಸಿಹಿ ತಿಂಡಿ ಬಾಯಿಗೆ ಬಿದ್ದಕೂಡಲೇ ಮೈಯಲ್ಲಿ ಗ್ಲೂಕೋಸ್ ಹರಿದು ಎಲ್ಲರೂ ಮತ್ತೆ ನೆಡೆಯಲು ಸಜ್ಜಾದೆವು.

ಮತ್ತದೇ ನಿಧಾನ ಗತಿಯಲ್ಲಿ ಕಾಲುಗಳನ್ನು ಎಳೆದು ಕೊಂಡು ನೆಡೆಯತೊಡಗಿದೆವು. ಈಗ ಸಮಯ ರಾತ್ರಿಯ ಎಂಟು ಗಂಟೆಯಾಗಿತ್ತು. ಇಲ್ಲಿಯವರೆಗೆ ನೆಡೆಯುತ್ತಿದ್ದ ದಾರಿಯಲ್ಲಿ ಶಾಮಿಯಾನ ಹಾಕಿದ ಹಾಗೆ ಮರಗಳು ತಲೆಯ ಮೇಲಿದ್ದವು. ನಾವು ಈಗ ತಲುಪಿದ್ದ ಜಾಗದಲ್ಲಿ ನಮ್ಮ ತಲೆಯ ಮೇಲೆ ಈ ಮರಗಳ ಶಾಮಿಯಾನ ಇರದೇ ಸ್ವಚ್ಚ ಆಕಾಶ ಕಾಣತೊಡಗಿತು. ಈ ಸ್ಥಳ ಒಂದು ಸಣ್ಣ ಬಯಲಿನಂತೆಯೇ ಇತ್ತು. ಒಂದು ಬದಿಗೆ ನಾವು ನೆಡೆದು ಬರುತ್ತಿದ್ದ ದಾರಿ. ಇಲ್ಲಿ ದಾರಿ ಮಟ್ಟಸವಾಗಿತ್ತು. ದಾರಿಯ ಇದುರಿಗೆ ಸಣ್ಣ ಸಣ್ಣ ಕುರುಚಲು ಗಿಡಗಳು. ಅದರ ಆಚೆಗೆ ಕೋಟೆಯಂತೆ ಕಾಣುತಿದ್ದ ಎತ್ತರದ ಮರಗಳು. ನಾವು ರಾತ್ರಿ ಕ್ಯಾಂಪ್ ಮಾಡಲು ಈ ಜಾಗ ಪ್ರಶಸ್ತವಾಗಿತ್ತು. ಸುಮಾರು ದೂರದವರೆಗೂ ನಮಗೆ ನೀರಿನ ತೊರೆ ಕಾಣಿಸಿರಲಿಲ್ಲ ಆದ್ದರಿಂದ ರಾತ್ರಿಯಲ್ಲಿ ಬೇಡದ ಕಾಡಿನ ಅಥಿತಿಗಳು ಈ ಕಡೆಗೆ ಬರುವು ಕಡಿಮೆಯೇ. ಸ್ವಲ್ಪ ಬಯಲಿದ್ದಿದ್ದರಿಂದ ಯಾವುದಾದರೂ ಪ್ರಾಣಿಗಳು ಬಂದರೆ ನಮಗೆ ಕಾಣುತ್ತವೆ ಎಂದು ಕೊಂಡೆವು. ತಲೆಯ ಮೇಲೆ ಮರಗಳಿರದ ಕಾರಣ ರಾತ್ರಿ ಸ್ವಲ್ಪ ಹೊತ್ತಾದ ಮೇಲೆ ಬೆಳದಿಂಗಳು ಆರಾಮವಾಗಿ ನೆಲದ ಮೇಲೆ ಬೀಳುವುದರಿಂದ ಒಳ್ಳೆಯ ಬೆಳಕೂ ಆಗುವುದು ಎಂದು ಎಣಿಸಿದೆವು.

ಇಷ್ಟರಲ್ಲಾಗಲೇ ಘಾಟಿ ರಸ್ತೆಯನ್ನು ಸೇರಿ ಅಲ್ಲಿಂದ ಲಾರಿಯನ್ನೋ ಬಸನ್ನೋ ಹಿಡಿಯುವ ಪ್ಲಾನನ್ನು ಕೈಬಿಟ್ಟಿದ್ದೆವು. ನಾವು ಈ ರಾತ್ರಿಯನ್ನು ಇಲ್ಲೇ ಕಾಡಲ್ಲೇ ಕಳೆಯಬೇಕು ಎನ್ನುವುದು ಖಾತ್ರಿಯಾಗಿತ್ತು. ಆದರೆ ಹರೀಶ, ಚಂದ್ರ ಮಹೇಶ ಹಾಗೂ ಜಗದೀಶ ಘಾಟಿ ರಸ್ತೆ ಸೇರುವ ಆಸೆಯನ್ನು ಇನ್ನೂ ಬಿಟ್ಟಿರಲಿಲ್ಲ. ಇವರ ಜೊತೆಗೆ ಮಥುರಾ ಪೇಡಾ ತಿಂದು ಫಾರ್ಮಿಗೆ ಬಂದಿದ್ದ ರಾಘವೇಂದ್ರನೂ ಸೇರಿಕೊಂಡ, 'ಇಲ್ಲೇನು ನಾವು ಎಂಟೂವರೇಗೆ ಈ-ಟಿ.ವಿ. ನ್ಯೂಸ್ ನೋಡ ಬೇಕಾಗಿಲ್ಲ, ಹತ್ತು ಗಂಟೆವರೆಗೆ ಎಷ್ಟು ದೂರ ಆಗುತ್ತೋ ಅಷ್ಟು ನೆಡೆಯೋಣ ಅಷ್ಟರಲ್ಲಿ ಎಲ್ಲಾದರೂ ನಾವು ಘಾಟಿ ರಸ್ತೆ ಸೇರ ಬಹುದು, ಸೇರದಿದ್ದರೆ ಹತ್ತು ಗಂಟೆಗೆ ನೆಡೆಯುವುದನ್ನ ನಿಲ್ಲಿಸಿ ಆ ಹೊತ್ತಿನಲ್ಲಿ ಎಲ್ಲಿ ಇರುತ್ತೇವೋ ಅಲ್ಲೇ ಠಿಕಾಣಿ ಹೂಡಿದರಾಯಿತು' ಎಂದ. ಸರಿಯಪ್ಪ ಇವರು ಹೇಳಿದಂಗೇ ಆಗಲಿ ಅಂದ್ವಿ. ಅಲ್ಲಿಂದ ೫-೧೦ ನಿಮಿಷ ನೆಡೆದಿಲ್ಲ ಅಷ್ಟರಲ್ಲಿ ಗಿರೀಶ ಕೂತೇ ಬಿಟ್ಟ. 'ಗುರುಗಳೇ ನನ್ನ ಕೈಯಲ್ಲಿ ಇನ್ನು ಮುಂದಕ್ಕೆ ನೆಡೆಯೋಕೆ ಆಗೊಲ್ಲ ನನ್ನನ್ನ ಮಾತ್ರ ಇಲ್ಲಿಂದ ಮುಂದಕ್ಕೆ ಕರೀ ಬೇಡಿ' ಎಂದ. ಒಂದು ದೊಡ್ಡ ಗುಂಪಿನಲ್ಲಿ ಒಬ್ಬ ಕೂತರೂ ಕತೆ ಮುಗಿದಂತೆ. ಅವನನ್ನು ಬಿಟ್ಟು ಯಾರೂ ಎಲ್ಲೂ ಹೋಗುವಂತಿರುವುದಿಲ್ಲ. ಗಿರೀಶ ಕೂತಿದ್ದರಿಂದ ಇನ್ನು ಮುಂದೆ ಹೋಗುವಂತೆಯೇ ಇರಲಿಲ್ಲ. ೫ ನಿಮಿಷಗಳ ಹಿಂದೆ ನಾವು ನೋಡಿದ್ದ ಬಯಲಿನಂತಹ ಜಾಗಕ್ಕೆ ವಾಪಸ್ಸು ಹೋಗಿ ಅಲ್ಲಿ ರಾತ್ರಿ ಕಳೆಯುವುದೆಂದು ನಿರ್ಧರಿಸಿದೆವು.

ಹಿಂತಿರುಗಿ ೫ ನಿಮಿಷಗಳಷ್ಟು ನೆಡೆದು ಈ-ಟೀ.ವಿ. ನ್ಯೂಸ್ ಶುರುವಾಗುವ ಹೊತ್ತಿಗೆ ಆ ಬಯಲನ್ನು ತಲುಪಿದೆವು. ಆ ಹೊತ್ತಿನಲ್ಲೂ 'ಲೋ ಮಕ್ಕಳ ಈ ರಾತ್ರಿ ಹುಶಾರಾಗಿ ಒಬ್ಬರಾದ ಮೇಲೆ ಒಬ್ಬರು ಕಾವಲು ಕಾಯಬೇಕು ಕಣ್ರೋ, ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ನಾವೆಲ್ಲಾ ನ್ಯೂಸ್ ನಲ್ಲಿ ಬಂದುಬಿಡ್ತೀವಿ' ಎಂದು ನಗೆ ಚಟಾಕಿ ಹಾರಿಸಿದರು. ನಮ್ಮ ಚಾರಣಗಳಲ್ಲಿ ಹುಡುಗರು ಹೊಡೆಯೋ ಡೈಲಾಗುಗಳು, ಹಾರಿಸೋ ಚಟಾಕಿಗಳನ್ನೆಲ್ಲಾ ಇಲ್ಲಿ ಬರೀತಾ ಹೋದರೆ ಇದು ಒಂದು ಕಾದಂಬರಿನೇ ಆಗಬಹುದು. ಅದನ್ನೆಲ್ಲಾ ಇನ್ನೋದುಸಾರಿಗೆ ಇಟ್ಟು ಕೊಳ್ಳೋಣ. ನಾವೆಲ್ಲರೂ ಆ ಸಣ್ಣ ಬಯಲಿನ ಒಂದು ಬದಿಯಲ್ಲಿ ಇದ್ದ ರಸ್ತೆಯ ಮೇಲೆ ಮಲಗುವುದೆಂದು ತೀರ್ಮಾನಿಸಿದೆವು. ಹತ್ತು ಹದಿನೈದು ನಿಮಿಷಗಳಲ್ಲಿ ಇಡೀ ರಾತ್ರಿ ಬೆಂಕಿ ಉರಿಸಲು ಬೇಕಾಗುವಷ್ಟು ಸೌದೆ ಗುಡ್ಡೆ ಹಾಕಿದೆವು. ಮಿಲ್ಟ್ರಿ ಮತ್ತು ಜಗದೀಶರು ಅವನ್ನು ಬೆಂಕಿಗೆ ಕೊಡಲು ಸುಲಭವಾಗುವಂತೆ ಸಣ್ಣಗೆ ಕಡಿದರು. ಇಡೀ ರಾತ್ರಿ ಉರಿದರೂ ಮುಗಿಯದಂತಹ ಒಂದು ದೊಡ್ಡ ದಿಮ್ಮಿಯನ್ನು ಮೂರುಜನ ಸೇರಿ ಎಳೆದು ಕೊಂಡು ಬಂದೆವು. ಇಷ್ಟರಲ್ಲಾಗಲೆ ಸಾಕಾಗುವಷ್ಟು ತರಗೆಲೆಗಳನ್ನು ಗುಡ್ಡೇ ಹಾಕಲಾಗಿತ್ತು. ಜಗದೀಶ ೨ ಕ್ಷಣದಲ್ಲಿ ಬೆಂಕಿಮಾಡಿದ. ಪೇಪರಿನ ಜೊತೆಗೆ ಸ್ವಲ್ಪ ತರಗೆಲೆಗಳನ್ನು ಹಾಕಿ ಮೊದಲು ಹಚ್ಚಿದ, ಆಮೇಲೆ ಸಣ್ಣಗೆ ಕಡಿದಿದ್ದ ಸೌದೆಯನ್ನು ಅದರ ಸುತ್ತಾ ಇಡುತ್ತಾ ಬಂದ. ಅದೆಲ್ಲಾ ಉರಿಯಲು ಶುರುವಾದ ಮೇಲೆ ಮರದ ದಿಮ್ಮಿಯ ಒಂದು ತುದಿಯನ್ನು ಉರಿಯಮೇಲೆ ಬರುವಂತೆ ಎಳೆದು ನಿಲ್ಲಿಸಿ, ಅದು ಬೀಳದಂತೆ ಒಂದು ದಪ್ಪ ಕಲ್ಲನ್ನು ದಿಮ್ಮಿಗಿ ಆನಿಸಿ ಅದು ನಿಲ್ಲುವಂತೆ ಮಾಡಿದ. ಹತ್ತೇ ನಿಮಿಷದಲ್ಲಿ ದಿಮ್ಮಿ ಹತ್ತಿ ಕೊಂಡಿತು.

ಇದ್ದ ಹನ್ನೆರಡು ಜನ ೩-೩ ಜನರ ನಾಲ್ಕು ತಂಡಗಳಾಗಬೇಕು, ಎರಡು ಗಂಟೆಯ ಒಂದು ಸರತಿಯಂತೆ ಒಂದು ತಂಡವಾದ ಮೇಲೆ ಒಂದು ತಂಡ ನಿದ್ದೆ ಮಾಡದೆ ಕಾಯಬೇಕು. ಆ ೨ ಗಂಟೆಗಳಲ್ಲಿ ಅವರು ಮಾಡಬೇಕಾಗಿದ್ದೇನೆಂದರೆ, ಬೆಂಕಿ ಕೆಡಬಾರದು ಮತ್ತು ತೀರಾ ಜೋರಾಗಿಯೂ ಉರಿಯ ಬಾರದು ಹಾಗೆ ನೋಡಿಕೊಳ್ಳಬೇಕು. ಕೈಯಲ್ಲಿ ಟಾರ್ಚ್ ಹಿಡಿದೇ ಕೂತಿರಬೇಕು. ಟಾರ್ಚ್ ಬೆಳಕನ್ನು ಸುತ್ತಲೂ ಬಿಟ್ಟು ಯಾವುದಾದರೂ ಹುಳ, ಹಾವುಗಳು ಕಾಣುತ್ತವೆಯೇ ನೋಡುವುದು. ರಸ್ತೆಯ ಆಚೆಗಿದ್ದ ಪೊದೆಗಳಕಡೆಗೆ ಟಾರ್ಚ್ ಬಿಟ್ಟು ಏನಾದರೂ ತೊಂದರೆಗಳು ಆ ಕಡೆಯಿಂದ ಬರುತ್ತಿವೆಯೇ ನೋಡುವುದು. ನಾವು ತಂಗಿದ್ದ ಜಾಗ ನೀರಿನ ತೊರೆಗಳಿಗೆ ದೂರ ಇದ್ದಿದ್ದರಿಂದ ಕಾಡು ಪ್ರಾಣಿಗಳು ಈ ಕಡೆಗೆ ಬರುವುದಿಲ್ಲ ಎನ್ನುವ ಒಂದು ರೀತಿಯ ಧೈರ್ಯ ನಮ್ಮಲ್ಲಿತ್ತು. ಹೀಗೆ ಎರಡು ಗಂಟೆಗಳ ಕಾಲ ಒಂದೊಂದು ತಂಡವೂ ಮಾತಾಡುತ್ತಾ ನಿದ್ದೆಗೆ ಶರಣಾಗದೆ ಉಳಿದವರ ಕ್ಷೇಮವನ್ನು ನೋಡಿಕೊಳ್ಳೂವುದು ಎಂದು ನಿರ್ಧರಿಸಿದೆವು. ಸುಸ್ತಾಗಿದ್ದ ಗಿರೀಶ ಮತ್ತು ಜಯಂತ ಇಬ್ಬರೂ ನಮಗೆ ರಾತ್ರಿ ತಡವಾದ ಸರತಿಯಲ್ಲಿ ನಿದ್ದೆಗೆಟ್ಟು ಇರಲಾಗುವುದಿಲ್ಲ ಎಂದು ಹೇಳಿದಾಗ ಅವರಿಬ್ಬರ ಜೊತೆಗೆ ರಾಘವೇಂದ್ರನನ್ನು ಸೇರಿಸಿ ಹತ್ತರಿಂದ ಹನ್ನೆರಡರವರೆಗೆ ಕಾಯುವ ಮೊದಲ ತಂಡವನ್ನಾಗಿ ಮಾಡಿದೆವು. ಇದು ಮೊದಲ ಸರದಿಯಗಿದ್ದರಿಂದ ಈ ಮೂವರಲ್ಲದೆ ನಿದ್ದೆ ಬರದ ಇನ್ನೂ ಯಾರಾದರು ಇದ್ದೇ ಇರುತ್ತೇವೆ, ಆದ್ದರಿಂದ ಮೊದಲ ಸರದಿಯೇ ಸುಲಭದ್ದೆಂದು ಇದನ್ನು ಇವರಿಗೆ ಕೊಟ್ಟೆವು. ಅಶೋಕ, ಸಂಗಮೇಶ ಮತ್ತು ಚಂದ್ರ ರಾತ್ರಿ ಹನ್ನೆರಡರಿಂದ ಎರಡರವರೆಗಿನ ಸರತಿಯನ್ನು ಆರಿಸಿಕೊಂಡರು. ನನಗೆ, ಮಿಲ್ಟ್ರಿಗೆ ಮತ್ತು ಷಿರೀಶನಿಗೆ ಎರಡರಿಂದ ನಾಲ್ಕರವರೆಗಿನ ಸರದಿಯಾದರೆ ಕೊನೆಯ ಸರದಿ ಅಂದರೆ ಬೆಳಗಿನಜಾವ ನಾಲ್ಕರಿಂದ ಆರರವರೆಗಿನ ಸರದಿಯಲ್ಲಿ ಹರೀಶ, ಚಂದ್ರ ಮಹೇಶ ಮತ್ತು ಜಗದೀಶರಿದ್ದರು.

ಸರತಿಯ ಬಟವಾಡೆ ಆಗುವುದರೊಳಗೆ ರಾತ್ರಿ ಒಂಬತ್ತೂವರೆಯ ಮೇಲಾಗಿತ್ತು. ಇನ್ನು ನಮ್ಮ ಹತ್ತಿರ ಎಷ್ಟು ನೀರು ಮತ್ತು ಊಟ ಉಳಿದಿದೆ ಎಂದು ನೋಡಿಕೊಳ್ಳತೊಡಗಿದೆವು.

Monday 13 August, 2007

ಕೊಡಚಾದ್ರಿ -2


ಚಿತ್ರ: ನಾವು ನಿಂತಿದ್ದ ಗುಡ್ಡದಿಂದ ಕಾಣುತ್ತಿದ್ದ ಕೊಡಚಾದ್ರಿಯ ಬೋಳು ನೆತ್ತಿ


ಅಲ್ಲೊಂದು ಇಲ್ಲೊಂದು ಮರಗಳಿಂದ ಬೋಳು ಬೋಳಾಗಿದ್ದ ಬೆಟ್ಟದ ತುದಿ ತಲುಪಿದಾಗ ನಮಗೆಲ್ಲರಿಗೂ ಅರಿವಾಗಿದ್ದೇನೆಂದರೆ... ನಾವು ನಿಂತಿದ್ದ ಬೆಟ್ಟ ಕೊಡಚಾದ್ರಿಯಲ್ಲ ಎನ್ನುವುದು. ಇದು ಕೊಡಚಾದ್ರಿಯ ಪಕ್ಕಕ್ಕಿದ್ದ ಇನ್ನೊಂದು ಬೆಟ್ಟವಾಗಿತ್ತು. ಹೀಗಾಗಬಹುದೆಂದು ನಾವುಗಳಾರೂ ಎಣಿಸಿರಲಿಲ್ಲ. ನಾವು ನಡೆಯುತ್ತಿದ್ದ ಏರುದಾರಿ ಇನ್ನೇನು ಸಂತೋಷ್ ಹೋಟೆಲ್ ಮುಟ್ಟಿ ಅಲ್ಲಿಂದ ನಮ್ಮನ್ನು ಕೊಡಚಾದ್ರಿಯ ಗ್ಯೆಸ್ಟ್ ಹೌಸ್ ತಲುಪಿಸುತ್ತದೆ ಎಂದುಕೊಂಡಿದ್ದ ನಮಗೆ, ನಾವು ಹಿಡಿದಿದ್ದ ದಾರಿ ಕೊಡಚಾದ್ರಿಯನ್ನು ತಲುಪಿಸದೆ ಪಕ್ಕದ ಇನ್ನೊಂದು ಗುಡ್ಡಕ್ಕೆ ಕರೆದೊಯ್ದಿದ್ದು ಅಚ್ಚರಿಯಾಗಿತ್ತು. ನಾವು ಹತ್ತಿ ಬಂದಿದ್ದ ಕಾಡು ದಾರಿಯಿಂದ ಎಡಕ್ಕೆ ನೊಡಿದರೆ ಕೊಡಚಾದ್ರಿಯ ತುದಿ ಕಾಣುತಿತ್ತು. ಬಲಕ್ಕೆ ನಾವು ತಲುಪಿದ್ದ ಗುಡ್ಡದ ತುದಿಯಲ್ಲಿದ್ದ ಸಣ್ಣ ಬಯಲು. ಮೊದಲೇ ಹೇಳಿದಂತೆ ಅಲೊಂದು ಇಲ್ಲೊಂದು ಗಿಡಗಳನ್ನು ಬಿಟ್ಟರೆ ಬೇರೇನು ಇರಲಿಲ್ಲ. ಬಯಲಿನಿಂದ ಮುಂದಕ್ಕೆ ಪ್ರಪಾತ! ಆ ಬಯಲಿನ ತುದಿಯಲ್ಲಿ ನಿಂತು ನೋಡಿದರೆ ಕೆಳಗೆ ಪ್ರಪಾತ, ದೂರದಲ್ಲೆಲ್ಲೋ ಕಾಣುವ ಭತ್ತದ ಗದ್ದೆಗಳು, ಅಲ್ಲೊಂದು ಇಲ್ಲೊಂದು ಬೆಂಕಿ ಪೊಟ್ಟಣದಂತೆ ಕಾಣುವ ಮನೆಗಳು.

ನಮ್ಮ ಎಡಕ್ಕಿದ್ದ ಕೊಡಚಾದ್ರಿ ಬೆಟ್ಟವನ್ನು ದಿಟ್ಟಿಸಿ ನೋಡಿದರೆ ಅದರ ತುದಿಯಲ್ಲಿ ಸಣ್ಣಗೆ ಜನಗಳು ಕಾಣುತ್ತಿದ್ದರು. ಕೊಡಚಾದ್ರಿಯ ತುದಿಯಲ್ಲಿ ಮರಗಿಡಗಳಿರದೆ ಬೋಳಾಗಿತ್ತು. ಆ ಬೋಳು ತುದಿಯಲ್ಲಿ ದನ ಇಲ್ಲವೇ ಕಾಡುಪ್ರಾಣಿಗಳು ನಡೆದಾಡಿ ಆಗಿರಬಹುದಂತಹ ಸಣ್ಣ ಸಣ್ಣ ದಾರಿಗಳು ಕಾಣುತ್ತಿದ್ದವು. ಬೆಟ್ಟ ಬಹಳವೇ ಕಡಿದಾಗಿದ್ದು ನಾವು ಅಲ್ಲಿ ಕಾಣುತಿದ್ದ ಸರ್ಪಹರಿದಂತಹ ದಾರಿಯಲ್ಲಿ ಹೋಗಿ ಕೊಡಾಚಾದ್ರಿಯ ತುದಿ ತಲುಪುವುದು ಅಸಾಧ್ಯ ಎನ್ನುವಷ್ಟೇ ಕಷ್ಟ ಎಂದು ನಿರ್ಧರಿಸಿದೆವು.

ಸರಿ ಮುಂದೇನು? ವಾಪಸ್ ಬಂದ ದಾರಿಯಲ್ಲೇ ನಡೆದು ಕೊಲ್ಲೂರಿಗೆ ಹೋಗುವ ಟಾರು ರಸ್ತೆ ಸೇರಲು ೮ ರಿಂದ ೧೦ ಗಂಟೆ ನೆಡೆಯ ಬೇಕು. ಇದುರಿಗೆ ಕಾಣುವ ಕೊಡಚಾದ್ರಿಯ ಬೋಳು ನೆತ್ತಿಯ ಮೇಲೆ ಕಾಣುತ್ತಿರುವ ಸರ್ಪ ಹಾದಿಯಲ್ಲಿ ನಡೆಯುವುದು ಅಸಾಧ್ಯವಾಗಿತ್ತು. ನಾವು ನೆಡೆದು ಬಂದ ದಾರಿ ಮುಂದೆ ಇಳಿಮುಖವಾಗಿ ಸಾಗಿ ಎಡಕ್ಕೆ ತಿರುಗಿತ್ತು. ಈ ದಾರಿಯನ್ನು ಹಿಡಿದು ಎಡಕ್ಕೆ ತಿರುಗಿ ಮುಂದೆ ನೆಡೆದರೆ ಕೊಡಚಾದ್ರಿಯನ್ನು ಇನ್ನೊಂದು ಬದಿಯಿಂದ ಹತ್ತಲು ಎಲ್ಲಾದರೂ ದಾರಿ ಇದ್ದೇ ಇರುತ್ತದೆ. ನಾವು ಆ ದಾರಿಯನ್ನು ಹಿಡಿದು ಮೇಲೆ ಹತ್ತಿದರೆ ಮತ್ತೆ ಕೊಡಚಾದ್ರಿಯ ಗೆಸ್ಟ್-ಹೌಸ್ ತಲುಪುತ್ತೇವೆ, ಅಲ್ಲಿ ಮಲಗಲು ಜಗುಲಿಯಾದರೂ ಸಿಕ್ಕೇ ಸಿಗುತ್ತದೆ ಎಂದು ನಿಶ್ಚಯಿಸಿ, ಮುಂದೆ ಸಾಗುತ್ತಿದ್ದ ಹಾದಿ ಹಿಡಿದು ಕೊಡಚಾದ್ರಿಯನ್ನು ಬಳಸಿಕೊಂಡು ಮೇಲೆ ಹತ್ತುವ ಭರವಸೆಯೊಂದಿಗೆ ಹೆಜ್ಜೆಯಿಟ್ಟೆವು.

ನಾವು ನಿಂತಿದ್ದ ಗುಡ್ಡದ ತುದಿ, ಅದರ ಪಕ್ಕದಲ್ಲಿ ಕಾಣುತ್ತಿದ್ದ ಕೊಡಚಾದ್ರಿ, ಕೆಳಗೆ ಕಾಣುತ್ತಿದ್ದ ಪ್ರಪಾತದಂತಹ ನೋಟದ ಫೋಟೋ ತೆಗೆದೆವು. ಸ್ವಲ್ಪ ಹೊತ್ತು ಕೂತು ವಿಶ್ರಮಿಸಿಕೊಂಡೆವು. ನಂತರ ನಿರ್ಧರಿಸಿದಂತೆ ಇದುರಿಗಿದ್ದ ಇಳಿಜಾರಿನ ದಾರಿಯಲ್ಲಿ ಮುಂದೆ ನಡೆದವು. ಈ ದಾರಿಯಲ್ಲಿ ಇಳಿಯುತ್ತಿದ್ದಂತೆ ಪಕ್ಕದಲ್ಲಿ ನಮ್ಮ ಎಡಕ್ಕೆ ಕೊಡಚಾದ್ರಿ ಕಾಣುತ್ತಿತ್ತು. ಅದರ ಮೇಲೆ ನೆಡೆದಾಡುತ್ತಿದ್ದ ಜನಗಳೂ ಸಹ ಸಣ್ಣಗೆ ಕಾಣುತ್ತಿದ್ದರು. ನಾವು ಹಿಡಿದಿದ್ದ ದಾರಿ ಕೆಲ ಹೊತ್ತಿನ ತನಕ ಕೊಡಚಾದ್ರಿಯ ಪಕ್ಕದಲ್ಲೇ ಸಾಗಿತ್ತು. ನಂತರ ಮತ್ತೆ ಕಾಡು ದಟ್ಟವಾಗುತ್ತಾ ಬಂತು, ತರಗೆಲೆಗಳು ಹೆಚ್ಚಾದವು, ದಾರಿ ತೀಕ್ಷ್ಣವಾಗಿ ಇಳಿಮುಖವಾಯಿತು. ಕಾಡು ದಟ್ಟವಾಗಿದ್ದರಿಂದ ಕೊಡಚಾದ್ರಿ ಬೆಟ್ಟ ಮೊದಲಿಂತೆ ಪೊರ್ತಿಯಾಗಿ ಕಾಣದೆ ನಾವು ಎತ್ತ ಸಾಗುತ್ತಿದ್ದೇವೆಂದು ನೋಡುವ ರೀತಿ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕಿ ನೋಡುತ್ತಿತ್ತು. ಧಡ ಧಡನೆ ಕೆಳಗೆ ಇಳಿಯುತ್ತಿದ್ದಾಗ ಕೊಡಚಾದ್ರಿ ಮೆಲ್ಲನೆ ನಮ್ಮಿಂದ ದೂರವಾಗುತ್ತಿದೆ ಎನ್ನುವ ಅರಿವು ನಮಗೆ ಬರತೊಡಗಿತು.

ಮಾಮೂಲಿನಂತೆ ೧೨ ಜನರ ಗುಂಪು ೩ ತಂಡವಾಗಿತ್ತು. ಮಿಲ್ಟ್ರಿ, ಹರೀಶ, ಜಗದೀಶರು ಮುಂದಾದರೆ ಚಂದ್ರ, ಜಯಂತ ಹಾಗೂ ರಾಘವೇಂದ್ರ ಹಿಂದಾದರು. ಬೆಳಗಿಂದ ಬರೀ ಏರುದಾರಿಯಲ್ಲೇ ನೆಡೆದಿದ್ದ ನಾವುಗಳು ಈಗ ಇಳಿಜಾರಿನಲ್ಲಿ ಬಿರುಸಾಗಿ ಹೆಜ್ಜೆಗಳನ್ನು ಬೀಸುತ್ತ ಸಾಗಿದೆವು. ೧ ಗಂಟೆಗೂ ಸ್ವಲ್ಪ ಹೆಚ್ಚು-ಒಂದೂಕಾಲು ಗಂಟೆಗಳಷ್ಟು- ನೆಡೆದು ೨ ಗುಡ್ಡಗಳು ಸೇರುವ ೧ ಕಣಿವೆಯನ್ನು ತಲುಪಿದೆವು. ಈ ಕಣಿವೆಯಲ್ಲಿ ಒಂದು ಝರಿ ಹರಿಯುತ್ತಿತ್ತು. ಬೇಸಿಗೆಯ ಲೆಕ್ಕಕ್ಕೆ ಇದು ದೊಡ್ಡ ಝರಿಯೇ. ಈ ಝರಿಯಲ್ಲಿ ಅಲ್ಲೊಂದು ಇಲ್ಲೊಂದು ಇದ್ದ ಸಣ್ಣ ಗುಂಡಿಗಳಲ್ಲಿ ಸೊಂಟದ ಮೇಲಕ್ಕೆ ನೀರು ಹರಿಯುತ್ತಿತ್ತು. ಮುಂಚೆ ಬಂದವರು ಇಲ್ಲಿ ಕೂತು ಹಿಂದಿನವರಿಗೆ ಕಾಯಬೇಕೆಂದು ನಿರ್ಧರಿಸಿ ಅಲ್ಲೇ ಠಿಕಾಣಿ ಹೂಡಿದೆವು. ಹರಿಯುತ್ತಿದ್ದ ನೀರಿನಲ್ಲಿ ತೊಳೆದುಕೊಳ್ಳಬಹುದಾಗಿದ್ದನ್ನೆಲ್ಲಾ ತೊಳೆದು ಕೊಂಡೆವು. ದಿನವೆಲ್ಲಾ ಗ್ಲುಕೋಸ್ ಪುಡಿ, ಎಲೆಕ್ಟ್ರಾಲ್ ಇವುಗಳನ್ನ ನೀರಿನಲ್ಲಿ ಬೆರೆಸಿ ನೀರು ಕುಡಿಯುತ್ತಿದ್ದೆವು. ಅವುಯಾವುದೂ ಇಲ್ಲದೆಯೇ ಸಿಹಿಯಾಗಿ ಹರಿಯುತ್ತಿದ್ದ ಝರಿಯಲ್ಲಿ ಚೆನ್ನಾಗಿ ನೀರು ಕುಡಿದು ವಿಷ್ರಮಿಸಿಕೊಂಡೆವು. ನಾವು ಬಂದು ಹದಿನೈದು ನಿಮಿಷಗಳ ಮೇಲೆ ಚಂದ್ರ, ಗಿರೀಶ, ಜಯಂತ, ರಾಘವೇಂದ್ರರ ತೇರು ಬಂತು.

ಈಗ ಸಮಯ ಸಂಜೆಯ ೫-೩೦. ನಾವು ಕೊಡಚಾದ್ರಿಯನ್ನು ಏರುತ್ತಿಲ್ಲ ಇಳಿಯುತಿದ್ದೇವೆ. ನಾವು ಬಂದ ಇಳಿದಾರಿ, ಅಂದುಕೊಂಡ ಹಾಗೆ ಕೊಡಚಾದ್ರಿಯನ್ನು ಬಳಸಿ ಹತ್ತುತ್ತಿಲ್ಲ, ಹತ್ತುವುದೂ ಇಲ್ಲ ಎನ್ನುವುದು ನಮಗೆಲ್ಲರಿಗೂ ಮನವರಿಕೆಯಾಯಿತು. ಈಗ ಮುಂದೇನು? ಇನ್ನು ನಾವು ಕೊಡಚಾದ್ರಿಯನ್ನು ಏರುವುದಿಲ್ಲ ಎನ್ನುವುದು ಗ್ಯಾರಂಟಿ ಆಗಿತ್ತು. ಈಗಾಗಲೆ ಬೆಟ್ಟದ ತಳ ತಲುಪಿ ಝರಿಯಲ್ಲಿ ಕಾಲು ಇಳಿಸಿಕೊಂಡು ಕೂಳಿತಿದ್ದ ನಾವುಗಳು ಇಲ್ಲಿಯವರೆಗೆ ಸವೆಸಿ ಬಂದಿದ್ದ ಹಾದಿಯನ್ನು ನೆನೆಸಿ ಕೊಳ್ಳುತ್ತಿದ್ದೆವು. ಈಗ ನಮಗಿದ್ದ ಒಂದೇ ದಾರಿಯೆಂದರೆ ಮುಂದೆ ನಡೆಯುವುದು. ನಾವುಗಳು ಒಂದೂವರೆ ಗಂಟೆಗಳಷ್ಟು ಕಾಲ ಇಳಿದು ಬಂದಿದ್ದ ಇಳಿಜಾರನ್ನು ಹತ್ತಲು ಕನಿಷ್ಟ ಎಂದರೂ ೩ ಗಂಟೆಗಳು ಬೇಕು. ಮತ್ತೆ ಅಲ್ಲಿಂದ ಬೆಳಿಗ್ಗೆ ಬಸ್ಸಿನಿಂದ ಇಳಿದಿದ್ದ ಟಾರು ರಸ್ತೆ ತಲುಪಲು ೮ ಗಂಟೆ, ಒಟ್ಟಿನಲ್ಲಿ ೧೧ ಇಲ್ಲವೇ ೧೨ ಗಂಟೆಗಳು ಬೇಕು ನಮಗೆ ಟಾರ್ ರಸ್ತೆ ಸೇರಲು. ಮತ್ತೆ ಹನ್ನೆರಡು ಗಂಟೆ ಸತತವಾಗಿ ನೇಡೆಯಲು ಸಾಧ್ಯವೇ? ಈಗಾಗಲೇ ಎಲ್ಲರ ಕಾಲುಗಳೂ ರಾಗ ಹಾಡುತ್ತಿದ್ದರೂ ಯಾರೂ ತೋರಿಸಿಕೊಳ್ಳುತ್ತಿರಲಿಲ್ಲ ಮತ್ತು ರಾತ್ರಿಯಲ್ಲಿ ಕಾಡಿನಲ್ಲಿ ನೆಡೆಯುವುದು ಎಷ್ಟು ಸುರಕ್ಷಿತ? ಇದನ್ನೆಲ್ಲಾ ಯೋಚಿಸಿ ಮುಂದೆ ನೆಡೆದು ಹೋದರೆ ನಾವು ಎಲ್ಲಿಯಾದರೂ ಘಾಟಿ ರಸ್ತೆಯನ್ನು ತಲುಪುತ್ತೇವೆ ಅಲ್ಲಿಂದ ಯಾವುದಾದರು ಒಂದು ಬಸ್ಸೋ ಇಲ್ಲ ಲಾರಿಯನ್ನೋ ಹಿಡಿದು ಕೊಲ್ಲೂರು ತಲುಪಿದರಾಯಿತು ಎಂದುಕೊಂಡೆವು.

ನಮ್ಮ ಯೋಚನಾ ಲಹರಿಗೆ ಷಿರೀಶ ಹಾಗೂ ಗಿರೀಶನ ವಿರೋಧವಿತ್ತು 'ಮುಂದೆ ಎಷ್ಟು ದೂರ ನೆಡೆದ ಮೇಲೆ ಘಾಟಿರಸ್ತೆ ಸಿಗಬಹುದು ಎನ್ನುವುದು ನಮಗೆ ತಿಳಿದಿಲ್ಲ, ನಮಗೆ ಯಾವ ರಸ್ತೆಯೂ ಸಿಗದೆ ಹೀಗೆಯೇ ಕಾಡುದಾರಿಯಲ್ಲಿ ಅಲೆಯುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವೇ? ಹೀಗಿರುವಾಗ ಸುಮ್ಮನ್ನೆ ಸನ್ನಿ ಹಿಡಿದವರಂತೆ ಎಷ್ಟು ದೂರ ಎಂದು ನೆಡೆಯುವುದು?' ಇದು ಇವರಿಬ್ಬರ ವಾದವಾಗಿತ್ತು. ಆದರೆ ಬಂದ ದಾರಿಯಲ್ಲಿ ವಾಪಸ್ ಹೋಗುವುದು ಸಧ್ಯಕ್ಕೆ ಆಗದ ಮಾತು ಎನ್ನುವುದು ಅವರಿಗೂ ತಿಳಿದಿದ್ದರಿಂದ ನಮ್ಮ ಮಾತಿನಂತೆ ಇನ್ನೂ ಮ್ಮುಂದೆ ನೆಡೆದು ಘಾಟಿ ರಸ್ತೆಯನ್ನು ಎಲ್ಲಾದರೂ ಕೂಡಿಕೊಳ್ಳುವುದೇ ಉತ್ತಮ ಎಂದು ಒಪ್ಪಿಕೊಂಡು ನಮ್ಮೊಟ್ಟಿಗೆ ಹೆಜ್ಜೆ ಹಾಕ ತೊಡಗಿದರು.

ಇಷ್ಟು ಹೊತ್ತಿಗಾಗಲೆ ಸೂರ್ಯ ತಂಪಾಗಿದ್ದ, ಸ್ವಲ್ಪ ದಣಿವಾರಿಸಿಕೊಂಡು ಉಲ್ಲಸಿತರಾಗಿದ್ದರಿಂದಲೋ, ಇಲ್ಲ ಕತ್ತಲಾಗುವ ಮೊದಲು ಯಾವುದಾದರೊಂದು ದಾರಿ ಹುಡುಕಿ ಕೊಳ್ಳ ಬೇಕು ಎನ್ನುವ ಹುಮ್ಮಸ್ಸು... ಹುಮ್ಮಸ್ಸೇ ಇಲ್ಲ ಭಯವೇ? ಹುಮ್ಮಸ್ಸು ಇಲ್ಲ ಭಯ, ಯಾವುದೋ ಒಂದು ಒಟ್ಟಿನಲ್ಲಿ ಎಲ್ಲರೂ ಇನ್ನೂ ವೇಗವಾಗಿ ನೆಡೆಯಲಾರಂಭಿಸಿದೆವು. ಎಲ್ಲೂ ನಿಲ್ಲದೇ ಸತತವಾಗಿ ನೆಡೆಯುತ್ತಿದ್ದೆವು. ಇಷ್ಟು ಹೊತ್ತಿಗಾಗಲೆ, ಕಾಡಿನ ಸವಿ, ಫೋಟೋಗಳು ಇವೆಲ್ಲವನ್ನೂ ಕಟ್ಟಿಟ್ಟಾಗಿತ್ತು. ನೆಡೆಯುವುದು, ನೆಡೆದು ರಸ್ತೆ ಸೇರುವುದು ಇದಿಷ್ಟೇ ಈಗ ಮನಸಿನಲ್ಲಿದ್ದದ್ದು. ಸಣ್ಣದಾಗಿ ಏರು ಇಳಿತಗಳಿಂದ ಕೂಡಿದ ದಾರಿಯಲ್ಲೀಗ ಬಿರುಬಿರನೆ ನೆಡೆಯತೊಡಗಿದೆವು. ಸುಮಾರು ಅರ್ಧ ಗಂಟೆಗಳ ಕಾಲ ನೆಡೆದ ಮೇಲೆ ಮತ್ತೊಂದು ಝರಿ ಇದುರಾಯಿತು. ಇದೂ ಕೂಡ ಹಿಂದೆ ನೋಡಿದ ಝರಿಯಷ್ಟೇ ದೊಡ್ಡದಾಗಿದ್ದಿತು. ಈ ಬಾರಿ ಝರಿಯಲ್ಲಿ ಹೆಚ್ಚು ಸಮಯ ಕಳೆಯಲಿಲ್ಲ. ಅರ್ಧ ಗಂಟೆಯ ಹಿಂದಷ್ಟೇ ನಮ್ಮ ಬಾಟಲಿಗಳಿಗೆ ನೀರು ತುಂಬಿಸಿಕೊಂಡು ನಮ್ಮ ಹೊಟ್ಟೆಗಳಿಗೂ ತುಂಬಿಸಿಕೊಂಡಿದ್ದರಿಂದ ಬಾಟಲಿಗಳು ಇನ್ನೂ ಭರ್ತಿಯಾಗೆ ಇದ್ದವು. ಎಲ್ಲರೂ ತಮಗೆ ಸಾಕೆನಿಸುವಷ್ಟು ನೀರು ಕುಡಿದು ಮುಂದೆ ಹೊರೆಟೆವು.

ಇದೇ ವೇಗದಲ್ಲಿ ಹೆಜ್ಜೆ ಬೀಸುತ್ತ ನಡೆಯುತ್ತಿದ್ದೆವು. ಸಮಯ ಸಾಯಂಕಾಲದ ಏಳನ್ನು ಸಮೀಪಿಸುತ್ತಿತ್ತು, ಸೂರ್ಯನ ಕಿರಣಗಳು ನಮ್ಮ ಮೇಲೆ ಬೀಳುವುದನ್ನು ಆಗಲೇ ನಿಲ್ಲಿಸಿದ್ದರೂ ಇನ್ನೂ ಕಣ್ಣು ಕಾಣದಷ್ಟೇನು ಕತ್ತಲಾಗಿರಲಿಲ್ಲ. ಝರಿಯಿಂದ ಈಗಾಗಲೆ ಸಾಕಷ್ಟು ದೂರ ನಡೆದು ಬಂದಿದ್ದೆವು. ನಾವು ಈಗ ನಿಂತಿದ್ದ ಜಾಗ ಒಂದು ಎತ್ತರದ ಪ್ರದೇಷವಾಗಿತ್ತು. ಎಲ್ಲರೂ ತಮ್ಮ ಬ್ಯಾಗುಗಳನ್ನು ಕೆಳಗಿಟ್ಟು ನೆಲದ ಮೇಲೆ ಕೂತೆವು. ಎಲ್ಲರೂ ತಮ್ಮ ತಮ್ಮ ಫೋನುಗಳನ್ನು ತೆಗೆದು ಎಲ್ಲಿಯಾದರೂ ಸಿಗ್ನಲ್ ಸಿಗಬಹುದೇ ಎಂದು ಪರೀಕ್ಷಿಸಿ ನೋಡಿದರು. ಬಿ.ಎಸ್.ಎನ್.ಎಲ್. ಸ್ಪಯ್ಸ್, ಏರ್-ಟೆಲ್ ಎಲ್ಲಾ ಬಗೆಯ ಫೋನುಗಳು ನಮ್ಮ ಬಳಿ ಇದ್ದವು. ಇದರಲ್ಲಿ ಸ್ಪಯ್ಸ್ ಮತ್ತು ಬಿ.ಎಸ್.ಎನ್.ಎಲ್ ಸಿಗ್ನಲ್ಲುಗಳು ಸ್ವಲ್ಪ ಮಟ್ಟಿಗೆ ದೊರಕಿದವು. ಇದರಿಂದ ಉಲ್ಲಸಿತನಾದ ರಾಘವೇಂದ್ರ ಸ್ಪಯ್ಸ್ ಕಂಪನಿಯಲ್ಲಿ ಇಂಜಿನಿಯರನಾಗಿ ಕೆಲಸಮಾಡುವ ತನ್ನ ಇನ್ನೊಬ್ಬ ಮಿತ್ರನಿಗೆ ಫೋನಾಯಿಸಿ ನಾವುಗಳು ಈಗ ಇರುವ ಸೈಟ್ ಯಾವುದು ಎಂದು ತಿಳಿದು ಕೊಳ್ಳಲು ಪ್ರಯತ್ನಿಸಿದ. ಅವನ ಸ್ನೇಹಿತ, ನಾವು ಬೆಳಗಿನಿಂದ ನೋಡಿದ ಕಾಡು ಹೇಗಿತ್ತು? ಯಾವುದಾದರೂ ಪ್ರಾಣಿ ಪಕ್ಷಿಗಳು ಕಂಡವೇ? ನೀವುಗಳೀಗ ಬೆಳಗಿನಿಂದ ಎಷ್ಟು ಕಿ.ಮೀ. ನೆಡೆದಿರಬಹುದು? ಹೀಗೆ ಆ ಸಮಯಕ್ಕೆ ನಮಗೆ ಕೆಲಸಕ್ಕೆ ಬಾರದ ವಿಷಯಗಳನ್ನೇ ಕೇಳ ತೊಡಗಿದ. ಇಷ್ಟರಲ್ಲಾಗಲೆ ಸಿಟ್ಟುಗೊಂಡಿದ್ದ ರಾಘವೇಂದ್ರ ಅವನನ್ನ ಒಮ್ಮೆ ಗದರಿಕೊಂಡ ಮೇಲೆ, 'ನಿಮಗೆ ಸಿಗುತ್ತಿರುವ ಸಿಗ್ನಲ್ ಮರವಂತೆಯದು, ಆದರೆ ನೀವಿರುವ ಜಾಗಕ್ಕೆ ಮರವಂತೆ ಹತ್ತಿರದಲ್ಲೇನೂ ಇಲ್ಲ. ಎತ್ತರವಾಗಿರುವಂತಹ ಗುಡ್ಡಗಳಲ್ಲಿ ಹೀಗಾಗುತ್ತೆ, ನಮಗೆ ಹತ್ತಿರ ಇಲ್ಲದಿರೋ ಊರುಗಳ ಸಿಗ್ನಲ್ಲುಗಳೆಲ್ಲಾ ಸಿಕ್ಕುತ್ತವೇ ಎಂದ'. ಅವನ ಸಹಾಯಕ್ಕೆ ಥ್ಯಾಂಕ್ಸ್ ಹೇಳಿದ ರಾಘವೇಂದ್ರ ಮಾತು ಕತೆ ಮುಗಿಸಿದ.

ಈಗ ನಾವು ಎಲ್ಲಿದ್ದೇವೆ? ಎಷ್ಟು ದೂರ ನೆಡೆದರೆ ರಸ್ತೆ ಸಿಕ್ಕಬಹುದು ಎಂದು ಯೋಚಿಸತೊಡಗಿದೆವು. ಕತ್ತಲು ಆವರಿಸತೊಡಗಿತು. ಬ್ಯಾಗಿನಲ್ಲಿದ್ದ ಟಾರ್ಚ್, ಬ್ಯಾಟರಿಗಳನ್ನ ಕೈಗೆತ್ತಿಕೊಂಡೆವು. ಬ್ಯಾಗ್ ಪ್ಯಾಕ್ ಮಾಡಿಕೊಂಡು ಟಾರ್ಚ್ ಬೆಳಕಿನಲ್ಲಿ ಮುಂದೆ ನೆಡೆಯೋಣ ಎನ್ನುವುದು ನಮ್ಮ ನಿರ್ಧಾರವಾಗಿತ್ತು.

Thursday 9 August, 2007

ಕೊಡಚಾದ್ರಿ -1


'ನೋಡ್ರಪ್ಪ ಯೊಚನೆ ಮಾಡ್ರಿ...' ಎಂದ ಚಂದ್ರ, ಇನ್ನೂ ನಿದ್ದೆ ಬರದೆ ತಮ್ಮ ತಮ್ಮ ಬೆಡ್-ಶೀಟ್ ಒಳಗೆ ಕೂತು ಬೆಂಕಿ ಕಾಯಿಸಿಕೊಳ್ಳುತಿದ್ದವರ ತಲೆಗೆ ಹುಳ ಬಿಟ್ಟಿದ್ದ. ಚಂದ್ರ ಈ ಮಾತುಗಳನ್ನ ಹೇಳಿದ್ದು ಮಧ್ಯರಾತ್ರಿ ಸುಮಾರು ೧-೧.೧೫ರ ಮಧ್ಯೆ. ಎರಡರಿಂದ ನಾಲ್ಕು ಗಂಟೆಯವರೆಗೆ ನನ್ನ, ಮಿಲ್ಟ್ರಿಯ ಮತ್ತು ಷಿರೀಶನ ಕಾವಲು ಸರತಿ ಇತ್ತು. ಚಂದ್ರನ ಮಾತುಗಳನ್ನು ಕೇಳಿ ನನ್ನ ಸರತಿಯ ಹೊತ್ತಿಗಿಂತಲೂ ಮುಂಚೆ ಎಚ್ಚರ ವಾಗಿತ್ತು.ಈ ವರ್ಷದ ಮಾರ್ಚಿ ತಿಂಗಳಿನಲ್ಲಿ ನಾವೆಲ್ಲ ಕೊಡಚಾದ್ರಿ ಗುಡ್ಡಕ್ಕೆ ಚಾರಣಕ್ಕೆ ಹೊಗಿದ್ವಿ. ಅರಿಷಿಣಗುಂಡಿ ಫಾಲ್ಸ್ ನೋಡಿಕೊಂಡು ಅಲ್ಲಿಂದ ಮುಂದೆ ಹೋದರೆ ಕೊಡಚಾದ್ರಿ ತುದಿ ತಲುಪುತ್ತೀವಿ ಅನ್ನೋದು ನಮಗಿದ್ದ ಮಾಹಿತಿ. ನಮ್ಮಲ್ಲಿದ್ದ ಮಾಹಿತಿಯೆಲ್ಲವೂ ಇಂಟರ್ನೆಟ್ನಲ್ಲಿ ಹುಡುಕಿ ಗೊರಿಕೊಂಡಿದ್ದಾಗಿತ್ತು, ನಮ್ಮ ಜೊತೆಗಿದ್ದ ಯಾರೊಬ್ಬರೂ ಈ ಮುಂಚೆ ಆ ದಾರಿ ಬಳಸಿ ಹೋಗಿ ಬಂದವರಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ಕೊಲ್ಲೂರಿಗಿಂತ ೧ ಕಿಲೋಮೀಟರ್ ದೂರದಲ್ಲಿ ನಮ್ಮನ್ನು ಇಳಿಸುವಾಗಲೂ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಗಳಿಬ್ಬರೂ 'ಈ ದಾರಿಯಲ್ಲಿ ಕೊಡಚಾದ್ರಿಗೆ ಹೊದವರನ್ನ ನಾವು ನೋಡಿಲ್ಲ, ಬೇಕಾದ್ರೆ ಅರಿಷಿಣಗುಂಡಿ ಫಾಲ್ಸ್ ನೊಡಿಕೊಂಡು ಬನ್ನಿ' ಎಂದು ಎಚ್ಚರಿಸಿದರೂ ಅದು ನಮಗಲ್ಲ ಅನ್ನೋ ಹಾಗೆ ಅವರೊಟ್ಟಿಗೆ ಫೊಟೊ ತೆಗೆಸಿಕೊಂಡು ಅವರಿಗೆ ಟಾಟಾ ಮಾಡಿ ಬೀಳ್ಕೊಟ್ಟೆವು. ರಸ್ತೆ ಎಡಕ್ಕಿದ್ದ ಹಳೇ ಗೇಟಿನ ಮೇಲೆ ಕಮಾನಿನಾಕಾರದಲ್ಲಿದ್ದ ಬೋರ್ಡಿನಲ್ಲಿ ಮೂಕಾಂಬಿಕ ಅಭಯಾರಣ್ಯ ಎಂದು ಬರೆದಿದ್ದು, ಕೆಳಗೆ ಸಣ್ಣ ಅಕ್ಷರಗಳಲ್ಲಿ 'ಛಾರಣ ನಿಲ್ಲಿಸಲಾಗಿದೆ' ಎಂದು ಬರೆದಿತ್ತು. ಆ ಅಕ್ಷರಗಳು ಕಾಣುತಿದ್ದಂತೆಯೇ, ಮತ್ತೆ ಯಾರು ಬಂದು ನಮ್ಮನ್ನು ತಡೆಯುತ್ತಾರೋ ಅನ್ನೊ ಭಯದಲ್ಲಿ ಗೇಟು ದಾಟಿ ಒಳಗೆ ಓಡಿದೆವು.

ಅಲ್ಲಿಂದ ಸುಮಾರು ೫ ಕಿಲೋ ಮೀಟರ್ ನೆಡೆದ ಮೇಲೆ ಎಡಕ್ಕೆ ಒಂದು ಕಾಲ್ದಾರಿ ಹೊರಳಿತ್ತು. -ನಾನೇನು ಈ ಕಿಲೋ ಮೀಟರ್ ಲೆಕ್ಕವನ್ನ ಅಂದಾಜಿನಲ್ಲಿ ಹೇಳುತ್ತಿಲ್ಲ, ಕ.ಅ.ಇ ಅಲ್ಲಿ ಕಿಲೋ ಮೀಟರಿಗೊಂದರಂತೆ ಕಲ್ಲು ನೆಟ್ಟು ಅದರ ಮೇಲೆ ಮೈನ್ ರೋಡಿನಿಂದ ಆ ಕಲ್ಲಿನವರೆಗಿನ ದೂರ ಗುರುತು ಹಾಕ್ಕಿದ್ದಾರೆ-. ಆ ಕಾಲ್ದಾರಿಯಲ್ಲಿ ಸುಮಾರು ೨ ಕಿ.ಮೀ. ನಡೆದ ಮೇಲೆ ನಮಗೆ ಅರಿಷಿಣಗುಂಡಿ ಫಾಲ್ಸ್ ಕಂಡಿತು. ಈ ೨ ಕಿ.ಮೀ ಎಷ್ಟು ದುರ್ಗಮವಾಗಿದೆಯೆಂದರೆ ಮಳೆಗಾಲದಲ್ಲಿ ಈ ದಾರಿಯಲ್ಲಿ ಕಾಲಿಡುವುದುನ್ನು ನೆನೆಸಿ ಕೊಳ್ಳುವಂತೆಯೂ ಇಲ್ಲ. ಅರಿಷಿಣಗುಂಡಿ ಜಲಪಾತವನ್ನು ಸಮೀಪಿಸುತ್ತಿದ್ದಂತೆಯೆ ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಇದಿರಾಗುತ್ತವೆ. ಬಹುಶಃ ಮಳೆಗಾಲದಲ್ಲಿ ಇಲ್ಲಿ ನೀರು ಹರಿಯುವ ರಭಸಕ್ಕೆ ಮಣ್ಣೆಲ್ಲಾ ಕೊಚ್ಚಿ ಬರೀ ಬಂಡೆ ಕಲ್ಲುಗಳು ಉಳಿದಿರಬಹುದು. ಒಂದೇ ಒಂದು ದೊಡ್ಡ ಬಂಡೆಯು '೧'ರ ಆಕಾರದಲ್ಲಿ ಇದ್ದು ಅದರ ಮಧ್ಯ ಭಾಗದಿಂದ ನೀರು ಧುಮುಕುತ್ತದೆ. ನೀರು ಒಂದೇ ನೆಗೆತದಲ್ಲಿ ಸುಮಾರು ೨೫ ಅಡಿಗಳಷ್ಟು ಧುಮುಕಿ ಅಲ್ಲಿಂದ ಕೆಳಗೆ ಮತ್ತೆ ೫ ಅಡಿಗಳಷ್ಟು ಧುಮುಕಿ ನಂತರ ಕೆಳಗಿನ ಹೊಂಡ ಸೇರಿ, ಹೊಂಡದ ಇನ್ನೊಂದು ತುದಿಯಿಂದ ಮುಂದಕ್ಕೆ ಹರಿಯುತ್ತದೆ.
ಮಾರ್ಚಿ ತಿಂಗಳು, ಇನ್ನೇನು ಬೇಸಿಗೆ ಶುರುವಾಗ ಬೇಕು ಅಂತಹ ಸಮಯದಲ್ಲೂ ನೀರು ತಣ್ಣಗೆ ಕೊರೆಯುತಿತ್ತು. ಗೆಳೆಯರೆಲ್ಲರೂ ಸಾಹಸಪಟ್ಟು ಬಂಡೆಗಳಮೇಲೆ ಕೋತಿಗಳಂತೆ ಚಲಿಸಿ ಜಲಪಾತದ ಕೆಳಗೆ ತಲುಪಿ, ಎಮ್ಮೆ ಕೆಸರಿನಲ್ಲಿ ಬಿದ್ದು ಹೊರಳಾಡುವಂತೆ ಹೊರಳಾಡಿ ಮಿಂದರು. ಸ್ನಾನದ ಬಳಿಕ ಬೆಂಗಳೂರಿನಿಂದಲೇ ಕೊಂಡೊಯ್ದಿದ್ದ ಚಪಾತಿ ಚಟ್ಣಿಪುಡಿ ಹೋಳಿಗೆ ತಿಂದು ಕೊಡಚಾದ್ರಿ ಶಿಖರದ ತುದಿ ತಲುಪಲು ಸಜ್ಜಾದೆವು. ಪುನಃ ೨ ಕಿ.ಮೀ ಕಾಲುದಾರಿ ಕ್ರಮಿಸಿ ಮುಖ್ಯರಸ್ತೆಯಂತಿದ್ದ ಕಾಡುರಸ್ತೆಯನ್ನು ಕೂಡಿಕೊಂಡೆವು. ಆಗ ಸಮಯ ಬೆಳಗಿನ ೧೧ ಗಂಟೆ. ಇಲ್ಲಿಂದ ಬಲಕ್ಕೆ ತಿರುಗಿ ೫ ಕಿ.ಮೀ ನೆಡೆದರೆ ಬೆಳಿಗ್ಗೆ ನಾವು ಬಸ್ಸಿನಿಂದ ಇಳಿದ ಟಾರುರಸ್ತೆ.

ಬಂದ ದಾರಿಯೆಡೆಗೆ ಒಮ್ಮೆ ಹಿಂತಿರುಗಿ ನೋಡಿ ಮುಂದೆ ಹೊರೆಟೆವು. ಇಲ್ಲಿಯವರೆಗೆ ಉಬ್ಬು ತಗ್ಗುಗಳ ದಾರಿ ಇದ್ದರೆ ಮುಂದೆ ಉಬ್ಬು ದಾರಿ ಹೆಚ್ಚಾಗಿ ತಗ್ಗು ದಾರಿ ಕಡಿಮೆಯಾಗುತ್ತಾ ಬಂತು. ಸತತ ೧ ಗಂಟೆ ನಡೆದು ನಾವು ಮೊಳಕಾಲಿನುದ್ದ ನೀರು ಹರಿಯುತ್ತಿದ್ದ ೧ ಝರಿಯ ಬಳಿ ಬಂದೆವು. ಇಷ್ಟು ಹೊತ್ತಿಗಾಗಲೆ ೧೨ ಜನರ ನಮ್ಮ ತಂಡ ಎಂದಿನಂತೆ ೨ ತಂಡಗಳಾಗಿತ್ತು. ಬೇಗ ಬೇಗ ನಡೆಯುವ ಜಗದೀಶ, ಹರೀಶ, ಮಿಲ್ಟ್ರಿ ಇವರುಗಳನ್ನೊಳಗೊಂಡ ತಂಡ ಮುಂಚೆಯೇ ಬಂದು ಈ ಸ್ಥಳವನ್ನು ತಲುಪಿದ್ದರೆ, ಹೆಜ್ಜೆ ಎಣಿಸದಿದ್ದರೂ ಸ್ವಲ್ಪ ನಿಧಾನ ಎನ್ನುವಂತೆ ನಡೆಯುವ ಜಯಂತ, ಚಂದ್ರ ಹಾಗೂ ರಾಘವೇಂದ್ರನನ್ನು ಒಳಗೊಂಡ ತಂಡ ನಂತರ ಈ ಜಾಗವನ್ನು ಬಂದು ತಲುಪಿತು. ಈ ಮುಂಚೆಯೇ ಬಂದು ತಲುಪಿದ್ದ ಜಗದೀಶ-ಮಿಲ್ಟ್ರಿಯವರ ತಂಡ ನಾವು ಮುಂದೆ ಹೊರಡುತ್ತೇವೆ, ಮುಂದೆ ಸಿಗುವ ಸಂತೋಷ್ ಹೋಟೆಲ್ಲಿನ್ನಲ್ಲಿ ಎಲ್ಲರಿಗೂ ರೈಸ್ ಬಾತ್ ಮಾಡಿಸಿಟ್ಟಿರುತ್ತೇವೆ ಎಂದು ಹೇಳಿ ಪ್ರಯಾಣ ಮುಂದುವರೆಸಿತು. ನಾವುಗಳು ಈ ಝರಿ ಇರುವ ಸ್ಥಳವನ್ನು ತಲುಪುವ ವೇಳೆಗಾಗಲೆ ಕಾಡು ದಟ್ಟವಾಗಿಹೋಗಿತ್ತು. ನಾವು ಬಂದ ಹಾದಿಯಲ್ಲಿ ನಮ್ಮ ಕಾಲುಗಳು ನೆಲವನ್ನು ತಾಕದಂತೆ ಐದರಿಂದ ಹತ್ತು ಇಂಚು ದಪ್ಪಗೆ ಒಣಗಿದ ಏಲೆಗಳು ಬಿದ್ದಿದ್ದವು. ಇಲ್ಲಿ ಸೂರ್ಯ ಕಷ್ಟಪಟ್ಟು ನೆಲವನ್ನು ಚುಂಬಿಸುತ್ತಿದ್ದ. ಹರಿಯುತ್ತಿದ್ದ ಝರಿಯನ್ನು ನೋಡಿದರೆ ಇದೊಂದು ಕಣಿವೆಯ ಬುಡ ಎಂದು ತಿಳಿಯುತಿತ್ತು. ಇಲ್ಲಿಂದ ಮುಂದೆ ಏರು ದಾರಿಯಲ್ಲಿ ಗುಡ್ಡವನ್ನು ಹತ್ತಿಕೊಂಡು ಹೊದರೆ ಕೊಡಚಾದ್ರಿಯ ತುದಿತಲುಪುತ್ತೇವೆಂದು ಭಾವಿಸಿದೆವು. ಇಲ್ಲಿಂದ ಮುಂದೆ ನಾವು ಎಣಿಸಿದಂತೆ ದಾರಿ ಕಡಿದಾಗುತ್ತಾ ಬಂತು. ಆಗಷ್ಟೇ ಶುರುವಾಗಿದ್ದ ವಸಂತ ಕಾಲದಲ್ಲಿ ಮರಗಳೆಲ್ಲ ಚಿಗುರೊಡೆದು ದಟ್ಟ ನೆರಳು ಆವರಿಸಿತ್ತು.

ಈ ಝರಿಯನ್ನು ತಲುಪುವ ಹೊತ್ತಿಗಾಗಲೇ ಅರಣ್ಯ ಇಲಾಖೆಯವರು ಹಾಕಿದ್ದ ಮೈಲಿಗಲ್ಲುಗಳು ಮಾಯವಾಗಿದ್ದವು. ಝರಿಯಿಂದ ಮುಂದೆ ಹೊರಟ ನಂತರ ದಾರಿ ನಾವು ಎಣಿಸಿದ್ದಕ್ಕಿಂತ ಕಡಿದಾಗುತ್ತ ಬಂದಿತು. ಏರುತ್ತಲೇ ಹೊಗುತ್ತಿದ್ದ ದಾರಿ ಮುಂದೆ ಎಡಕ್ಕೋ ಇಲ್ಲ ಬಲಕ್ಕೋ ತಿರುಗುತ್ತಿತ್ತು. ಆ ತಿರುವಿನ ನಂತರ ರಸ್ತೆ ಸಮತಟಾಗಬಹುದು ಎಂದುಕೊಂಡು ಆ ತಿರುವಿನಿಂದ ಮುಂದೆ ಬಂದರೆ, ಆ ತಿರುವಿನ ನಂತರ ನಮ್ಮ ದೃಷ್ಟಿ ಹಾಯುವಷ್ಟು ದೂರವೂ ಏರುರಸ್ತೆ ಕಂಡು ಎಲ್ಲರೂ ಕಂಗಾಲಾಗುತ್ತಿದ್ದರು. ಇಂತಹ ಏರು ರಸ್ತೆಯಲ್ಲಿ ಎಡೆ ಬಿಡದೆ ಎರಡರಿಂದ ಮೂರುಗಂಟೆ ನಡೆದೆವು. ಈ ೨-೩ ಗಂಟೆಯಲ್ಲಿ ತಂದಿದ್ದ ಕಿತ್ತಳೆ, ಕಿಟ್-ಕ್ಯಾಟ್ ಚಾಕೊಲೇಟ್, ಗುಡ್-ಡೇ ಬಿಸ್ಕೆಟ್ ಗಳು ಖಾಲಿಯಾಗುತ್ತಾ ಬಂದವು. ಇಷ್ಟೆಲ್ಲಾ ತಿನಿಸುಗಳ ಮಧ್ಯದಲ್ಲಿ ಮೈಸೂರಿನಿಂದ ಪಾರ್ಲೆ-ಜಿ ಬಿಸ್ಕೆಟ್ ತಂದಿದ್ದಕ್ಕಾಗಿ ಅಶೋಕನನ್ನು ಎಲ್ಲರೂ ರೇಗಿಸುತ್ತಿದ್ದರು. ಇವನು ಬರೀ ೨ ಡಜನ್ ಪಾರ್ಲೆ-ಜಿ ಬಿಸ್ಕೆಟ್ ತಂದಿದ್ದ! ಹೇರಳವಾಗಿದ್ದ ಹಣ್ಣು, ಹೋಳಿಗೆ, ಬಿಸ್ಕೆಟ್ ಗಳ ಮಧ್ಯೆ ಪಾರ್ಲೆ-ಜಿ ಯಾರಿಗೂ ಬೇಡವಾಗಿತ್ತು.

ಇನ್ನೇನು ಸಂತೋಷ್ ಹೊಟೆಲ್ಲನ್ನು ತಲುಪೇ ಬಿಡುತ್ತೇವೆ - ರೈಸ್ ಬಾತ್ ತಿಂದೇ ಬಿಡುತ್ತೇವೆ ಎನ್ನುವ ಜೋಶಿನಲ್ಲಿ ನಾವೆಲ್ಲ ೩ ಗಂಟೆಯವರೆಗೂ ಸತತವಾಗಿ ನಡೆದೆವು. ರೈಸ್ ಬಾತ್ ಮಾಡಿಸುತ್ತೇವೆಂದು ನಮಗಿಂತ ಮುಂಚೆ ಹೊರಟಿದ್ದ ಮಿಲ್ಟ್ರಿ ಮತ್ತು ಜಗದೀಶರನ್ನು ಸೇರಿಕೊಂಡ ಮೇಲೆ ರೈಸ್ ಬಾತಿನ ಆಸೆ ಬಿಟ್ಟು ಬೆಂಗಳೂರಿನಿಂದ ತಂದಿದ್ದ ಚಪಾತಿ, ಹೋಳಿಗೆ ಕೇಕ್ ತಿಂದು ಊಟ ಮುಗಿಸಿದರು. ನಾವು ಊಟ ಮಾಡಲು ಕುಳಿತಿದ್ದ ಜಾಗದಿಂದ ಕೊಡಚಾದ್ರಿಯ ತುದಿ ಕಾಣುತಿತ್ತು. ಇನ್ನೇನು ೧ ಗಂಟೆಯ ನಡಿಗೆ ನಮ್ಮನ್ನು ಶಿಖರದ ತುದಿ ತಲುಪಿಸುತ್ತದೆ ಎನ್ನುವ ಹುಮ್ಮಸ್ಸಿನಲ್ಲಿ ಊಟ ಮುಗಿಸಿದೆವು. ಊಟ ಮುಗಿಸಿ ಮುಂದೆ ನೆಡೆಯುತ್ತಿದ್ದಂತೆ ಕಾಡಿನ ಸಾಂದ್ರತೆ ಕಡಿಮೆಯಾಗುತ್ತಾ ಬಂದಿತು. ಸಂಜೆಯ ಬಿಸಿಲು ದಣಿದಿದ್ದ ನಮ್ಮನ್ನು ಛೇಡಿಸಲಾರಂಬಿಸಿತ್ತು. ಅರ್ಧ ಗಂಟೆ ನಡೆಯುವುದರೊಳಗೆ ನಾವು ಶಿಖರದ ತುದಿ ತಲುಪಿದೆವು.

ಅಲ್ಲೊಂದು ಇಲ್ಲೊಂದು ಮರಗಳಿಂದ ಬೋಳು ಬೋಳಾಗಿದ್ದ ಬೆಟ್ಟದ ತುದಿ ತಲುಪಿದಾಗ ನಮಗೆಲ್ಲರಿಗೂ ಅರಿವಾಗಿದ್ದೇನೆಂದರೆ... ನಾವು ನಿಂತಿದ್ದ ಬೆಟ್ಟ ಕೊಡಚಾದ್ರಿಯಾಗಿರಲಿಲ್ಲ. ಕೊಡಚಾದ್ರಿಯ ಪಕ್ಕಕ್ಕಿದ್ದ ಇನ್ನೊಂದು ಬೆಟ್ಟವಾಗಿತ್ತು.

ನಾವು, ಅಂದರೆ ನಾನು ಮತ್ತು ನನ ಸ್ನೇಹಿತರೆಲ್ಲಾ ಸೇರಿ ಕೈಗೊಂಡಿದ್ದ ಚಾರಣದ ಪ್ರಥಮ ಭಾಗ ಇದು. ಎರಡನೇ ಭಾಗ ಸದ್ಯದಲ್ಲೇ ಬರಲಿದೆ.