'ನೋಡ್ರಪ್ಪ ಯೊಚನೆ ಮಾಡ್ರಿ...' ಎಂದ ಚಂದ್ರ, ಇನ್ನೂ ನಿದ್ದೆ ಬರದೆ ತಮ್ಮ ತಮ್ಮ ಬೆಡ್-ಶೀಟ್ ಒಳಗೆ ಕೂತು ಬೆಂಕಿ ಕಾಯಿಸಿಕೊಳ್ಳುತಿದ್ದವರ ತಲೆಗೆ ಹುಳ ಬಿಟ್ಟಿದ್ದ. ಚಂದ್ರ ಈ ಮಾತುಗಳನ್ನ ಹೇಳಿದ್ದು ಮಧ್ಯರಾತ್ರಿ ಸುಮಾರು ೧-೧.೧೫ರ ಮಧ್ಯೆ. ಎರಡರಿಂದ ನಾಲ್ಕು ಗಂಟೆಯವರೆಗೆ ನನ್ನ, ಮಿಲ್ಟ್ರಿಯ ಮತ್ತು ಷಿರೀಶನ ಕಾವಲು ಸರತಿ ಇತ್ತು. ಚಂದ್ರನ ಮಾತುಗಳನ್ನು ಕೇಳಿ ನನ್ನ ಸರತಿಯ ಹೊತ್ತಿಗಿಂತಲೂ ಮುಂಚೆ ಎಚ್ಚರ ವಾಗಿತ್ತು.
ಈ ವರ್ಷದ ಮಾರ್ಚಿ ತಿಂಗಳಿನಲ್ಲಿ ನಾವೆಲ್ಲ ಕೊಡಚಾದ್ರಿ ಗುಡ್ಡಕ್ಕೆ ಚಾರಣಕ್ಕೆ ಹೊಗಿದ್ವಿ. ಅರಿಷಿಣಗುಂಡಿ ಫಾಲ್ಸ್ ನೋಡಿಕೊಂಡು ಅಲ್ಲಿಂದ ಮುಂದೆ ಹೋದರೆ ಕೊಡಚಾದ್ರಿ ತುದಿ ತಲುಪುತ್ತೀವಿ ಅನ್ನೋದು ನಮಗಿದ್ದ ಮಾಹಿತಿ. ನಮ್ಮಲ್ಲಿದ್ದ ಮಾಹಿತಿಯೆಲ್ಲವೂ ಇಂಟರ್ನೆಟ್ನಲ್ಲಿ ಹುಡುಕಿ ಗೊರಿಕೊಂಡಿದ್ದಾಗಿತ್ತು, ನಮ್ಮ ಜೊತೆಗಿದ್ದ ಯಾರೊಬ್ಬರೂ ಈ ಮುಂಚೆ ಆ ದಾರಿ ಬಳಸಿ ಹೋಗಿ ಬಂದವರಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ಕೊಲ್ಲೂರಿಗಿಂತ ೧ ಕಿಲೋಮೀಟರ್ ದೂರದಲ್ಲಿ ನಮ್ಮನ್ನು ಇಳಿಸುವಾಗಲೂ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಗಳಿಬ್ಬರೂ 'ಈ ದಾರಿಯಲ್ಲಿ ಕೊಡಚಾದ್ರಿಗೆ ಹೊದವರನ್ನ ನಾವು ನೋಡಿಲ್ಲ, ಬೇಕಾದ್ರೆ ಅರಿಷಿಣಗುಂಡಿ ಫಾಲ್ಸ್ ನೊಡಿಕೊಂಡು ಬನ್ನಿ' ಎಂದು ಎಚ್ಚರಿಸಿದರೂ ಅದು ನಮಗಲ್ಲ ಅನ್ನೋ ಹಾಗೆ ಅವರೊಟ್ಟಿಗೆ ಫೊಟೊ ತೆಗೆಸಿಕೊಂಡು ಅವರಿಗೆ ಟಾಟಾ ಮಾಡಿ ಬೀಳ್ಕೊಟ್ಟೆವು. ರಸ್ತೆ ಎಡಕ್ಕಿದ್ದ ಹಳೇ ಗೇಟಿನ ಮೇಲೆ ಕಮಾನಿನಾಕಾರದಲ್ಲಿದ್ದ ಬೋರ್ಡಿನಲ್ಲಿ ಮೂಕಾಂಬಿಕ ಅಭಯಾರಣ್ಯ ಎಂದು ಬರೆದಿದ್ದು, ಕೆಳಗೆ ಸಣ್ಣ ಅಕ್ಷರಗಳಲ್ಲಿ 'ಛಾರಣ ನಿಲ್ಲಿಸಲಾಗಿದೆ' ಎಂದು ಬರೆದಿತ್ತು. ಆ ಅಕ್ಷರಗಳು ಕಾಣುತಿದ್ದಂತೆಯೇ, ಮತ್ತೆ ಯಾರು ಬಂದು ನಮ್ಮನ್ನು ತಡೆಯುತ್ತಾರೋ ಅನ್ನೊ ಭಯದಲ್ಲಿ ಗೇಟು ದಾಟಿ ಒಳಗೆ ಓಡಿದೆವು.
ಅಲ್ಲಿಂದ ಸುಮಾರು ೫ ಕಿಲೋ ಮೀಟರ್ ನೆಡೆದ ಮೇಲೆ ಎಡಕ್ಕೆ ಒಂದು ಕಾಲ್ದಾರಿ ಹೊರಳಿತ್ತು. -ನಾನೇನು ಈ ಕಿಲೋ ಮೀಟರ್ ಲೆಕ್ಕವನ್ನ ಅಂದಾಜಿನಲ್ಲಿ ಹೇಳುತ್ತಿಲ್ಲ, ಕ.ಅ.ಇ ಅಲ್ಲಿ ಕಿಲೋ ಮೀಟರಿಗೊಂದರಂತೆ ಕಲ್ಲು ನೆಟ್ಟು ಅದರ ಮೇಲೆ ಮೈನ್ ರೋಡಿನಿಂದ ಆ ಕಲ್ಲಿನವರೆಗಿನ ದೂರ ಗುರುತು ಹಾಕ್ಕಿದ್ದಾರೆ-. ಆ ಕಾಲ್ದಾರಿಯಲ್ಲಿ ಸುಮಾರು ೨ ಕಿ.ಮೀ. ನಡೆದ ಮೇಲೆ ನಮಗೆ ಅರಿಷಿಣಗುಂಡಿ ಫಾಲ್ಸ್ ಕಂಡಿತು. ಈ ೨ ಕಿ.ಮೀ ಎಷ್ಟು ದುರ್ಗಮವಾಗಿದೆಯೆಂದರೆ ಮಳೆಗಾಲದಲ್ಲಿ ಈ ದಾರಿಯಲ್ಲಿ ಕಾಲಿಡುವುದುನ್ನು ನೆನೆಸಿ ಕೊಳ್ಳುವಂತೆಯೂ ಇಲ್ಲ. ಅರಿಷಿಣಗುಂಡಿ ಜಲಪಾತವನ್ನು ಸಮೀಪಿಸುತ್ತಿದ್ದಂತೆಯೆ ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಇದಿರಾಗುತ್ತವೆ. ಬಹುಶಃ ಮಳೆಗಾಲದಲ್ಲಿ ಇಲ್ಲಿ ನೀರು ಹರಿಯುವ ರಭಸಕ್ಕೆ ಮಣ್ಣೆಲ್ಲಾ ಕೊಚ್ಚಿ ಬರೀ ಬಂಡೆ ಕಲ್ಲುಗಳು ಉಳಿದಿರಬಹುದು. ಒಂದೇ ಒಂದು ದೊಡ್ಡ ಬಂಡೆಯು '೧'ರ ಆಕಾರದಲ್ಲಿ ಇದ್ದು ಅದರ ಮಧ್ಯ ಭಾಗದಿಂದ ನೀರು ಧುಮುಕುತ್ತದೆ. ನೀರು ಒಂದೇ ನೆಗೆತದಲ್ಲಿ ಸುಮಾರು ೨೫ ಅಡಿಗಳಷ್ಟು ಧುಮುಕಿ ಅಲ್ಲಿಂದ ಕೆಳಗೆ ಮತ್ತೆ ೫ ಅಡಿಗಳಷ್ಟು ಧುಮುಕಿ ನಂತರ ಕೆಳಗಿನ ಹೊಂಡ ಸೇರಿ, ಹೊಂಡದ ಇನ್ನೊಂದು ತುದಿಯಿಂದ ಮುಂದಕ್ಕೆ ಹರಿಯುತ್ತದೆ.
ಮಾರ್ಚಿ ತಿಂಗಳು, ಇನ್ನೇನು ಬೇಸಿಗೆ ಶುರುವಾಗ ಬೇಕು ಅಂತಹ ಸಮಯದಲ್ಲೂ ನೀರು ತಣ್ಣಗೆ ಕೊರೆಯುತಿತ್ತು. ಗೆಳೆಯರೆಲ್ಲರೂ ಸಾಹಸಪಟ್ಟು ಬಂಡೆಗಳಮೇಲೆ ಕೋತಿಗಳಂತೆ ಚಲಿಸಿ ಜಲಪಾತದ ಕೆಳಗೆ ತಲುಪಿ, ಎಮ್ಮೆ ಕೆಸರಿನಲ್ಲಿ ಬಿದ್ದು ಹೊರಳಾಡುವಂತೆ ಹೊರಳಾಡಿ ಮಿಂದರು. ಸ್ನಾನದ ಬಳಿಕ ಬೆಂಗಳೂರಿನಿಂದಲೇ ಕೊಂಡೊಯ್ದಿದ್ದ ಚಪಾತಿ ಚಟ್ಣಿಪುಡಿ ಹೋಳಿಗೆ ತಿಂದು ಕೊಡಚಾದ್ರಿ ಶಿಖರದ ತುದಿ ತಲುಪಲು ಸಜ್ಜಾದೆವು. ಪುನಃ ೨ ಕಿ.ಮೀ ಕಾಲುದಾರಿ ಕ್ರಮಿಸಿ ಮುಖ್ಯರಸ್ತೆಯಂತಿದ್ದ ಕಾಡುರಸ್ತೆಯನ್ನು ಕೂಡಿಕೊಂಡೆವು. ಆಗ ಸಮಯ ಬೆಳಗಿನ ೧೧ ಗಂಟೆ. ಇಲ್ಲಿಂದ ಬಲಕ್ಕೆ ತಿರುಗಿ ೫ ಕಿ.ಮೀ ನೆಡೆದರೆ ಬೆಳಿಗ್ಗೆ ನಾವು ಬಸ್ಸಿನಿಂದ ಇಳಿದ ಟಾರುರಸ್ತೆ.
ಬಂದ ದಾರಿಯೆಡೆಗೆ ಒಮ್ಮೆ ಹಿಂತಿರುಗಿ ನೋಡಿ ಮುಂದೆ ಹೊರೆಟೆವು. ಇಲ್ಲಿಯವರೆಗೆ ಉಬ್ಬು ತಗ್ಗುಗಳ ದಾರಿ ಇದ್ದರೆ ಮುಂದೆ ಉಬ್ಬು ದಾರಿ ಹೆಚ್ಚಾಗಿ ತಗ್ಗು ದಾರಿ ಕಡಿಮೆಯಾಗುತ್ತಾ ಬಂತು. ಸತತ ೧ ಗಂಟೆ ನಡೆದು ನಾವು ಮೊಳಕಾಲಿನುದ್ದ ನೀರು ಹರಿಯುತ್ತಿದ್ದ ೧ ಝರಿಯ ಬಳಿ ಬಂದೆವು. ಇಷ್ಟು ಹೊತ್ತಿಗಾಗಲೆ ೧೨ ಜನರ ನಮ್ಮ ತಂಡ ಎಂದಿನಂತೆ ೨ ತಂಡಗಳಾಗಿತ್ತು. ಬೇಗ ಬೇಗ ನಡೆಯುವ ಜಗದೀಶ, ಹರೀಶ, ಮಿಲ್ಟ್ರಿ ಇವರುಗಳನ್ನೊಳಗೊಂಡ ತಂಡ ಮುಂಚೆಯೇ ಬಂದು ಈ ಸ್ಥಳವನ್ನು ತಲುಪಿದ್ದರೆ, ಹೆಜ್ಜೆ ಎಣಿಸದಿದ್ದರೂ ಸ್ವಲ್ಪ ನಿಧಾನ ಎನ್ನುವಂತೆ ನಡೆಯುವ ಜಯಂತ, ಚಂದ್ರ ಹಾಗೂ ರಾಘವೇಂದ್ರನನ್ನು ಒಳಗೊಂಡ ತಂಡ ನಂತರ ಈ ಜಾಗವನ್ನು ಬಂದು ತಲುಪಿತು. ಈ ಮುಂಚೆಯೇ ಬಂದು ತಲುಪಿದ್ದ ಜಗದೀಶ-ಮಿಲ್ಟ್ರಿಯವರ ತಂಡ ನಾವು ಮುಂದೆ ಹೊರಡುತ್ತೇವೆ, ಮುಂದೆ ಸಿಗುವ ಸಂತೋಷ್ ಹೋಟೆಲ್ಲಿನ್ನಲ್ಲಿ ಎಲ್ಲರಿಗೂ ರೈಸ್ ಬಾತ್ ಮಾಡಿಸಿಟ್ಟಿರುತ್ತೇವೆ ಎಂದು ಹೇಳಿ ಪ್ರಯಾಣ ಮುಂದುವರೆಸಿತು. ನಾವುಗಳು ಈ ಝರಿ ಇರುವ ಸ್ಥಳವನ್ನು ತಲುಪುವ ವೇಳೆಗಾಗಲೆ ಕಾಡು ದಟ್ಟವಾಗಿಹೋಗಿತ್ತು. ನಾವು ಬಂದ ಹಾದಿಯಲ್ಲಿ ನಮ್ಮ ಕಾಲುಗಳು ನೆಲವನ್ನು ತಾಕದಂತೆ ಐದರಿಂದ ಹತ್ತು ಇಂಚು ದಪ್ಪಗೆ ಒಣಗಿದ ಏಲೆಗಳು ಬಿದ್ದಿದ್ದವು. ಇಲ್ಲಿ ಸೂರ್ಯ ಕಷ್ಟಪಟ್ಟು ನೆಲವನ್ನು ಚುಂಬಿಸುತ್ತಿದ್ದ. ಹರಿಯುತ್ತಿದ್ದ ಝರಿಯನ್ನು ನೋಡಿದರೆ ಇದೊಂದು ಕಣಿವೆಯ ಬುಡ ಎಂದು ತಿಳಿಯುತಿತ್ತು. ಇಲ್ಲಿಂದ ಮುಂದೆ ಏರು ದಾರಿಯಲ್ಲಿ ಗುಡ್ಡವನ್ನು ಹತ್ತಿಕೊಂಡು ಹೊದರೆ ಕೊಡಚಾದ್ರಿಯ ತುದಿತಲುಪುತ್ತೇವೆಂದು ಭಾವಿಸಿದೆವು. ಇಲ್ಲಿಂದ ಮುಂದೆ ನಾವು ಎಣಿಸಿದಂತೆ ದಾರಿ ಕಡಿದಾಗುತ್ತಾ ಬಂತು. ಆಗಷ್ಟೇ ಶುರುವಾಗಿದ್ದ ವಸಂತ ಕಾಲದಲ್ಲಿ ಮರಗಳೆಲ್ಲ ಚಿಗುರೊಡೆದು ದಟ್ಟ ನೆರಳು ಆವರಿಸಿತ್ತು.
ಈ ಝರಿಯನ್ನು ತಲುಪುವ ಹೊತ್ತಿಗಾಗಲೇ ಅರಣ್ಯ ಇಲಾಖೆಯವರು ಹಾಕಿದ್ದ ಮೈಲಿಗಲ್ಲುಗಳು ಮಾಯವಾಗಿದ್ದವು. ಝರಿಯಿಂದ ಮುಂದೆ ಹೊರಟ ನಂತರ ದಾರಿ ನಾವು ಎಣಿಸಿದ್ದಕ್ಕಿಂತ ಕಡಿದಾಗುತ್ತ ಬಂದಿತು. ಏರುತ್ತಲೇ ಹೊಗುತ್ತಿದ್ದ ದಾರಿ ಮುಂದೆ ಎಡಕ್ಕೋ ಇಲ್ಲ ಬಲಕ್ಕೋ ತಿರುಗುತ್ತಿತ್ತು. ಆ ತಿರುವಿನ ನಂತರ ರಸ್ತೆ ಸಮತಟಾಗಬಹುದು ಎಂದುಕೊಂಡು ಆ ತಿರುವಿನಿಂದ ಮುಂದೆ ಬಂದರೆ, ಆ ತಿರುವಿನ ನಂತರ ನಮ್ಮ ದೃಷ್ಟಿ ಹಾಯುವಷ್ಟು ದೂರವೂ ಏರುರಸ್ತೆ ಕಂಡು ಎಲ್ಲರೂ ಕಂಗಾಲಾಗುತ್ತಿದ್ದರು. ಇಂತಹ ಏರು ರಸ್ತೆಯಲ್ಲಿ ಎಡೆ ಬಿಡದೆ ಎರಡರಿಂದ ಮೂರುಗಂಟೆ ನಡೆದೆವು. ಈ ೨-೩ ಗಂಟೆಯಲ್ಲಿ ತಂದಿದ್ದ ಕಿತ್ತಳೆ, ಕಿಟ್-ಕ್ಯಾಟ್ ಚಾಕೊಲೇಟ್, ಗುಡ್-ಡೇ ಬಿಸ್ಕೆಟ್ ಗಳು ಖಾಲಿಯಾಗುತ್ತಾ ಬಂದವು. ಇಷ್ಟೆಲ್ಲಾ ತಿನಿಸುಗಳ ಮಧ್ಯದಲ್ಲಿ ಮೈಸೂರಿನಿಂದ ಪಾರ್ಲೆ-ಜಿ ಬಿಸ್ಕೆಟ್ ತಂದಿದ್ದಕ್ಕಾಗಿ ಅಶೋಕನನ್ನು ಎಲ್ಲರೂ ರೇಗಿಸುತ್ತಿದ್ದರು. ಇವನು ಬರೀ ೨ ಡಜನ್ ಪಾರ್ಲೆ-ಜಿ ಬಿಸ್ಕೆಟ್ ತಂದಿದ್ದ! ಹೇರಳವಾಗಿದ್ದ ಹಣ್ಣು, ಹೋಳಿಗೆ, ಬಿಸ್ಕೆಟ್ ಗಳ ಮಧ್ಯೆ ಪಾರ್ಲೆ-ಜಿ ಯಾರಿಗೂ ಬೇಡವಾಗಿತ್ತು.
ಇನ್ನೇನು ಸಂತೋಷ್ ಹೊಟೆಲ್ಲನ್ನು ತಲುಪೇ ಬಿಡುತ್ತೇವೆ - ರೈಸ್ ಬಾತ್ ತಿಂದೇ ಬಿಡುತ್ತೇವೆ ಎನ್ನುವ ಜೋಶಿನಲ್ಲಿ ನಾವೆಲ್ಲ ೩ ಗಂಟೆಯವರೆಗೂ ಸತತವಾಗಿ ನಡೆದೆವು. ರೈಸ್ ಬಾತ್ ಮಾಡಿಸುತ್ತೇವೆಂದು ನಮಗಿಂತ ಮುಂಚೆ ಹೊರಟಿದ್ದ ಮಿಲ್ಟ್ರಿ ಮತ್ತು ಜಗದೀಶರನ್ನು ಸೇರಿಕೊಂಡ ಮೇಲೆ ರೈಸ್ ಬಾತಿನ ಆಸೆ ಬಿಟ್ಟು ಬೆಂಗಳೂರಿನಿಂದ ತಂದಿದ್ದ ಚಪಾತಿ, ಹೋಳಿಗೆ ಕೇಕ್ ತಿಂದು ಊಟ ಮುಗಿಸಿದರು. ನಾವು ಊಟ ಮಾಡಲು ಕುಳಿತಿದ್ದ ಜಾಗದಿಂದ ಕೊಡಚಾದ್ರಿಯ ತುದಿ ಕಾಣುತಿತ್ತು. ಇನ್ನೇನು ೧ ಗಂಟೆಯ ನಡಿಗೆ ನಮ್ಮನ್ನು ಶಿಖರದ ತುದಿ ತಲುಪಿಸುತ್ತದೆ ಎನ್ನುವ ಹುಮ್ಮಸ್ಸಿನಲ್ಲಿ ಊಟ ಮುಗಿಸಿದೆವು. ಊಟ ಮುಗಿಸಿ ಮುಂದೆ ನೆಡೆಯುತ್ತಿದ್ದಂತೆ ಕಾಡಿನ ಸಾಂದ್ರತೆ ಕಡಿಮೆಯಾಗುತ್ತಾ ಬಂದಿತು. ಸಂಜೆಯ ಬಿಸಿಲು ದಣಿದಿದ್ದ ನಮ್ಮನ್ನು ಛೇಡಿಸಲಾರಂಬಿಸಿತ್ತು. ಅರ್ಧ ಗಂಟೆ ನಡೆಯುವುದರೊಳಗೆ ನಾವು ಶಿಖರದ ತುದಿ ತಲುಪಿದೆವು.
ಅಲ್ಲೊಂದು ಇಲ್ಲೊಂದು ಮರಗಳಿಂದ ಬೋಳು ಬೋಳಾಗಿದ್ದ ಬೆಟ್ಟದ ತುದಿ ತಲುಪಿದಾಗ ನಮಗೆಲ್ಲರಿಗೂ ಅರಿವಾಗಿದ್ದೇನೆಂದರೆ... ನಾವು ನಿಂತಿದ್ದ ಬೆಟ್ಟ ಕೊಡಚಾದ್ರಿಯಾಗಿರಲಿಲ್ಲ. ಕೊಡಚಾದ್ರಿಯ ಪಕ್ಕಕ್ಕಿದ್ದ ಇನ್ನೊಂದು ಬೆಟ್ಟವಾಗಿತ್ತು.
ನಾವು, ಅಂದರೆ ನಾನು ಮತ್ತು ನನ ಸ್ನೇಹಿತರೆಲ್ಲಾ ಸೇರಿ ಕೈಗೊಂಡಿದ್ದ ಚಾರಣದ ಪ್ರಥಮ ಭಾಗ ಇದು. ಎರಡನೇ ಭಾಗ ಸದ್ಯದಲ್ಲೇ ಬರಲಿದೆ.
5 comments:
ಉತ್ತಮ ಪ್ರವಾಸಕಥನ. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.
ಕೊಡಚಾದ್ರಿಗೆ ಹೋಗಬೇಕೆಂಬುದು ನನ್ನ ಆಸೆ ಕೂಡ..
U can expect the next part shortly. But the rout I am explaingin is the one which should not be taken :-)
ಸಂತೋಷ್,
ಅರಶಿನಗುಂಡಿಯಿಂದ ಮೇಲೆ ಬಂದು ಆ ದಾರಿಯಲ್ಲಿ ಮೇಲಕ್ಕೆ ನಡೆದರೆ ಅದು ಕೊಡಚಾದ್ರಿಗೆ ತೆರಳುವ ಮುಖ್ಯ ಹಾದಿಗೆ ಬಂದು ಸೇರುತ್ತೆ. ಎಲ್ಲೋ ಒಂದು ಕಡೆ ತಿರುವು ತಗೊಳ್ಳಬೇಕಾದಲ್ಲಿ ನೀವು ನೇರ ನಡೆದಿರಬೇಕು. ಆದ್ದರಿಂದ ಕೊಡಚಾದ್ರಿಯ ಪಕ್ಕದ ಬೆಟ್ಟದ ಶಿಖರದ ತುದಿಗೆ ಬಂದು ಮುಟ್ಟಿದ್ದೀರ! ಆದರೂ ಅದೊಂದು ಸಾಹಸ. ದಾರಿ ಗೊತ್ತಿಲ್ಲದೇ ಇರುವಲ್ಲಿ ತೆರಳಿ ನಂತರ ದಾರಿ ಕಂಡುಹುಡುಕುವುದು ಚಾರಣದ ಅದ್ಭುತ ಅನುಭವಗಳಲ್ಲೊಂದು. ಚೆನ್ನಾಗಿ ಬರೆದಿರುವ ಚಾರಣ ಅನುಭವ. ಸರಿಯಾದ ದಾರಿಗೆ ಮರಳಿ ಹೇಗೆ ಬಂದಿರಿ ಎಂದು ತಿಳಿದುಕೊಳ್ಳಲು ಮುಂದಿನ ಭಾಗ ಓದಲು ಉತ್ಸುಕನಾಗಿದ್ದೇನೆ.
Really cool...
do you know parameshwa bhatta's contact no?
Post a Comment