Wednesday 10 February, 2010

ಬಿಸಿಲೆ ಘಾಟ್ August 2007


ನವೆಂಬರ್ 2009ಕ್ಕೆ ನನ್ನ ಮದುವೆ ಆಯ್ತು. ಮದುವೆಗೆ ಮೂರು ತಿಂಗಳು ಮುಂಚಿನಿಂದ ಇಲ್ಲಿಯವರೆಗೆ ಚಾರಣಕ್ಕೆ ಎಲ್ಲಿಗೂ ಹೋಗಲಿಕ್ಕೆ ಆಗಿಲ್ಲ. ನನ್ನ ಮದುವೆಗೆ ಆರು ತಿಂಗಳು ಮುಂಚಿನಿಂದ ಒಂದೊಂದೇ ವಿಕೆಟ್ ಬೀಳುತ್ತಿದ್ದವು. ಅಶೋಕ, ಜಗದೀಶ, ಕರಿ ಇವರ ಮದುವೆ ಆಯ್ತು. ರವಿಶಂಕರನ ಮದುವೆ ಆಗಿ ವರ್ಷನೇ ಆಯ್ತು, ನಮ್ಮ ಚಿಕ್ಕ ಆಗಲೇ ಅಪ್ಪ ಆದ, ನನ್ನ ಮದುವೆ last nail in the coffin. (ರವಿ ಬೆಳಗೆರೆ ಸ್ಟೈಲಿನಲ್ಲಿ ಓದಿ ಮಜ ಬರುತ್ತೆ)

ಜನಾಕಿರಾಮನನ್ನು ಚೆನ್ನೈಗೆ ಎತ್ತಿಹಾಕಿದ್ದಾರೆ, ಮಿಲ್ಟ್ರಿ ದೇಶ ಬಿಟ್ಟು ಹೋಗಿದ್ದಾನೆ, ಚಂದ್ರ is injured (ರವಿ ಬೆಳಗೆರೆ ಸ್ಟೈಲಿನಲ್ಲಿ ಇನ್ನೊಂದು ಸಲ ಪ್ಲೀಸ್...) LovesU ಚಿಕ್ಕಪ್ಪನಿಗೆ ಹೆಣ್ಣು ಸಿಗೋ ಲಕ್ಷಣಗಳು ಕಾಣಿಸ್ತಿಲ್ಲ. ಒಬ್ಬೊಬ್ಬರು ಒಂದೊಂದು ಕಡೆಗೆ ಹೋಗಿ ಹರೀಶನಿಗೆ ಜೊತೆಗಾರರಿಲ್ಲ. ಹೀಗೆ ಆಗಿದೆ ನೋಡಿ ನಮ್ಮ "ಮಚ್ಚೆ ಎಲ್ಲಿದೆ!?" ತಂಡದ ಸ್ಥಿತಿ. ಸುಮಾರು ಆರೇಳು ತಿಂಗಳಿಂದ ಯಾವುದೇ ಚಾರಣಕ್ಕೆ ಹೋಗೋಕೆ ಆಗಿಲ್ಲ.

2007ರ ಆಗಸ್ಟ್ ತಿಂಗಳಲ್ಲಿ ಹೀಗೆ ಆಗಿತ್ತು. ತುಂಬಾ ದಿನ ಎಲ್ಲೂ ಹೋಗೋಕೇ ಆಗಿರಲಿಲ್ಲ. ಆಗ ಧಿಡೀರ್ ಅಂತ ಬಿಸಿಲೇ ಘಾಟಿಗೆ ಹೋರಟೆವು. ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೋಗೋ ಸುವರ್ಣ ಕರ್ನಾಟಕ ಸಾರಿಗೆ ಹತ್ತಿದೆವು. ನಮ್ಮ LovesU ಚಿಗಪ್ಪ ಅವತ್ತಿನ ದಿನ ಬೆಳಗ್ಗೆನೇ ನಮಗೆಲ್ಲಾ ಟಿಕೀಟು ತಂದಿದ್ದ. ರಾತ್ರಿ 9.30ಕ್ಕೆ ಬಸ್ಸು ಹೊರಟಿತು. ಕುಣಿಗಲ್ ದಾಟಿದಮೇಲೆ ರಾತ್ರಿ ಲಘು ಉಪಹಾರಕ್ಕೆಂದು ಬಸ್ಸು ನಿಂತಿತು. ಎಲ್ಲರೂ ಬೆಂಗಳೂರಿನಲ್ಲಿ ಊಟ ಮುಗಿಸಿದ್ದರೂ ಮತ್ತೊಂದು ಸುತ್ತು ತಟ್ಟೆ ಇಡ್ಲಿ ಪೋಣಿಸಿದರು. ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಸಕಲೇಶಪುರ ದಾಟಿ ಮುಂಜರಾಬಾದ್ ಕೋಟೆ ಹತ್ತಿರ ಬಸ್ಸು ಮತ್ತೊಮ್ಮೆ ನಿಂತಾಗ ನಮ್ಮ ಹುಡುಗರ ಉದರ ಸೇವೆ ಮತ್ತೊಮ್ಮೆ ಆಯಿತು. ನೀರು ದೋಸೆ ತಿಂದು ಬಂದ್ವಿ ಅಂತ ಹೇಳಿದ್ದ ನೆನಪು, ನಾನು ಇಳಿದು ಹೋಗಿರಲಿಲ್ಲ. ಅಲ್ಲಿಂದ ಒಂದು ಗಂಟೆಯ ಪ್ರಯಾಣವಾದ ಮೇಲೆ, forest check post ದಾಟಿ ಕೆಲವೇ ನಿಮಿಷಕ್ಕೆ ನಾವೆಲ್ಲರೂ ಇಳಿಯಲು ತಯಾರಾದೆವು. ಬೆಳಗಿನ ಜಾವ 4.30ರ ಸುಮಾರಿಗೆ ಬಸ್ಸಿಳಿದಾಗ ಇತರ ಪ್ರಯಾಣಿಕರಿಗೆ ನಾವುಗಳು ನಕ್ಸಲರ ಹಾಗೇಯೆ ಕಂಡಿರಬೇಕು.

Forest check post ದಾಟಿ 5~10 ನಿಮಿಷಕ್ಕೆ ನಾವು ಬಸ್ಸು ಇಳಿದಿದ್ದೆವು. ಅಲ್ಲಿಂದ ನಮ್ಮ ಕಾಲ್ನೆಡಿಗೆ ಆರಂಭವಾಯಿತು. ನೆಡೆಯಲಾರಂಭಿಸಿದ ಕೆಲವೇ ನಿಮಿಷಕ್ಕೆ ಧೋ ಎಂದು ಮಳೆ ಸುರಿಯಲಾರಂಭಿಸಿತು. ಛತ್ರಿ ಹಿಡಿದು rain coat ಹಾಕಿಕೊಂಡು ಕತ್ತಲ ಭೇದಿಸಲು ಟಾರ್ಚ್ ಹಿಡಿದು ನೆಡೆಯತೊಡಗಿದೆವು. ಸುಮಾರು 5.30 ರ ಸುಮಾರಿಗೆ ಆಗಸ ಸ್ವಲ್ಪ ಬೆಳ್ಳಗಾಗಲು ಶುರುವಾಯಿತು, ಮಳೆಯೂ ನಿಂತಿತ್ತು. ಒಂದು ಮಸ್ತ್ ತಿರುವಿನಲ್ಲಿ ನಿಂತು ಫೊಟೋ ತೆಗೆಯಲು ಅನುವಾದೆವು. ಅಲ್ಲಿಂದ ನೋಟ ಅದ್ಭುತವಾಗಿತ್ತು. ದೂರದಲ್ಲಿ ಬೆಟ್ಟ ಅದನ್ನು ಸುತ್ತುತಿದ್ದ ತಿಳಿ ಮೋಡಗಳು... ಸೂಪರ್... ಸುಮಾರು ಫೋಟೋಗಳಾದವು ತುಂಬಾ ಹೊತ್ತು ಕೂತಿದ್ದೆವು, ಕೆಲವೊಂದು ಗಾಡಿಗಳು ನಿಂತು ನೋಡಿ ಫೋಟೋತೆಗೆದು ಕೊಂಡು ಮುಂದೆ ಹೊರಟವು. ಪೂರ್ತಿ ಬೆಳಕಾಗುವವರೆಗೆ ನಾವುಗಳು ಅಲ್ಲೇ ಇದ್ದು ನಂತರ ಹೊರಟೆವು. ಸ್ವಲ್ಪ ಹೊತ್ತಿನಲ್ಲಿ ಮತ್ತೆ ಮಳೆ ಶುರುವಾಯಿತು, ದಾರಿಯಲ್ಲಿ ಬಲಭಾಗಕ್ಕೆ ರಸ್ತೆಯಿಂದ ಸ್ವಲ್ಪ ಮೇಲಕ್ಕೆ ಒಂದು view point ಇದೆ. ಅಲ್ಲಿ ಹತ್ತಿ ಕೂತು ತಿಂಡಿ ತಿಂದೆವು. ಅಷ್ಟರಲ್ಲಾಗಲೇ ಕೆಲವರಿಗೆ ಸಾಕಷ್ಟು ಜಿಗಣೆಗಳು ಹತ್ತಿದ್ದವು.

ಅವತ್ತು ದಾರಿ ಪೂರ್ತಿ ಮಳೆ ಬಿಟ್ಟು ಬಿಟ್ಟು ಬರುತಿತ್ತು. ಎಲ್ಲರ ಬಳಿ ಛತ್ರಿ ಇದ್ದರೂ ಪೂರ್ತಿ ತೊಯ್ದು ಹೋಗಿದ್ದೆವು. ದಾರಿ ಸವೆಸುತ್ತ ಗಾಡಿಗಳ ಹೊಡೆತಕ್ಕೆ ಸತ್ತ ಹಾವುಗಳನ್ನು ಎಣಿಸಿದೆವು. ಅಡ್ಡೆ ಹೊಳೆ ದಾಟಿ, ಬಿಸಿಲೆ ಘಾಟಿ ಮುಗಿಯುವ ಹೊತ್ತಿಗೆ ಸಿಗುವ ಚಾಮುಂಡಿ ದೇವಸ್ತಾನ ತಲುಪುವಹೊತ್ತಿಗೆ ಮೂರು ಗಂಟೆಯ ಮೇಲಾಗಿತ್ತು. ಎಲ್ಲರೂ ಸುಸ್ತಾಗಿದ್ದೆವು. ಇಲ್ಲಿಂದ ಸುಮಾರು ಒಂದೂವರೆ ಗಂಟೆ ನೆಡೆದ ಮೇಲೆ ಕುಮಾರ ಧಾರ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ದಾಟಿದೆವು. ಅಲ್ಲಿಂದ ಕಾಲು ಗಂಟೆ-ಇಪತ್ತು ನಿಮಿಷದೊಳಗೆ ಕುಕ್ಕೆ.

ಮಯೂರದಲ್ಲಿ ರೂಮು ಮಾಡಿ ಸ್ನಾನ ಮುಗಿಸಿದೆವು. ಮಳೆಗಾಲಕ್ಕೆ ಕುಮಾರಧಾರ ತುಂಬಿ ಹರಿಯುತ್ತಿದ್ದರಿಂದ ಹೋಟೆಲ್ ರೂಮಿನಲ್ಲಿ ಸ್ನಾನ ಮಾಡಬೇಕಾಯಿತು. ಇಲ್ಲದಿದ್ದಲ್ಲಿ ನದಿಯಲ್ಲಿ ಮೀಯುವುದೇ ಮಜ. ರಾತ್ರಿ ದೇವರ ದರ್ಶನವಾದ ಮೇಲೆ ಪ್ರಸಾದ ಮುಗಿಸಿ ಬಂದು ಗಡತ್ತಾಗಿ ಮಲಗಿದೆವು. ಮರುದಿನ ಅಂದರೆ ಭಾನುವಾರ ಬೆಳಿಗ್ಗೆ ಎದ್ದು ಕುಮಾರ ಪರ್ವತದ ಹಾದಿಯಲ್ಲಿ ಸ್ವಲ ದೂರ ಹೋಗಿ ಬರುವುದೆಂದು ತೀರ್ಮಾನಿಸಿದ್ದೆವು.

ಭಾನುವಾರ ಬೆಳಿಗ್ಗೆ ಆರಮವಾಗಿ ಎದ್ದು ನ್ಯೂ ಮೈಸೂರ್ ಕೆಫೆಯಲ್ಲಿ ಅವಲಕ್ಕಿ-ಮೊಸರು, ಮಂಗಳೂರು ಬನ್ಸ್, ಮಸಾಲೆ ದೋಸೆ ಮುಗಿಸಿದೆವು. ಕೆಲವರು ಅಲ್ಲಿ ಮಾರಟಕಿದ್ದ ಉಪ್ಪಿನಕಾಯಿ, ಹಪ್ಪಳ ಸಂಡಿಗೆ ಕೊಂಡರು. ಹಿಂದಿನ ದಿನದ ಮಳೆಗೆ ಸೋತಿದ್ದ ನಮಗೆ ಈ ದಿನವು ಮಳೆ ಬಿಡುವು ಕೊಡಲಿಲ್ಲ. ಮಳೆಗೆ ತೊಯ್ದು ಕೆಸರಲ್ಲಿ ನೆನೆದು ವಾಸನೆ ಬರುತಿದ್ದ ನಮ್ಮ ಶೂಗಳನ್ನು ಹೋಟೆಲಿನಲ್ಲೇ ಬಿಟ್ಟು ನಾವು ಕೆಲವರು ಹೊಸ Paragon ಚಪ್ಪಲಿ ಕೊಂಡುಕೊಂಡೆವು, ನಮ್ಮ ಚಿಗಪ್ಪ ಇಡೀ ದಿನ ಬರಿಗಾಲಲ್ಲೇ ಸುತ್ತಿದ.

ಮಳೆ ಸುರಿಯುತ್ತಿದ್ದರೂ ಕುಮಾರ ಪರ್ವತಕ್ಕೆ ಹೋಗುವದಾರಿಯಲ್ಲಿ ಹೊರಟು ಬೆಟ್ಟ ಹತ್ತುವ ಕಾಲುದಾರಿ ಸೇರಿ 10~15 ನಿಮಿಷ ಹತ್ತಿದೆವು. ಆ ಸುರಿಯುವ ಮಳೆಯಲ್ಲೂ ಅದೆಲ್ಲಿದ್ದವೋ ಅಷ್ಟು ಜಿಗಣೆಗಳು ಅಡರತೊಡಗಿದವು. ಮಳೆ ನೀರಿನಲ್ಲಿ ಜಿಗಣೆಗಳು ಹರಿದು ಬರುತಿದ್ದನ್ನು ನೋಡಿದ್ದು ಅದೇ ಮೊದಲು ಮತ್ತು ಕೊನೆ. ಕುಮಾರ ಪರ್ವತದ ದಾರಿಯನ್ನು ಅಲ್ಲಿಗೇ ಕೈಬಿಟ್ಟು ವಾಪಸ್ ಕುಕ್ಕೆಗೆ ಹೊರಟೆವು. ದಿನವಿಡೀ ದೇವಸ್ತಾನದ ಜಗಲಿಯಲ್ಲಿ ಕೂತು ಸುರಿಯುತ್ತಿದ್ದ ಮಳೆ ನೋಡುತ್ತಾ ಮಧ್ಯಾನ್ಹದ ಪ್ರಸಾದ ಮುಗಿಸಿದೆವು. ಸಂಜೆ ಊರಿನ ಶುರುವಿನಲ್ಲಿ ಹೊಸದಾಗಿ ಕಟ್ಟಿರುವ ಗಣಪತಿ ದೇವಸ್ತಾನ ನೋಡಿ ಬಂದೆವು. ರಾತ್ರಿ ಇನ್ನೊಮ್ಮೆ ದೇವಸ್ತಾನದಲ್ಲಿ ಪ್ರಸಾದ ಮುಗಿಸಿದೆವು. ಮೊದಲೇ ಕಾಯ್ದಿರಿಸಿದ್ದ 10.30 ರಾಜಹಂಸ ಬಸ್ಸಿನಲ್ಲಿ ಕೂತು ಮತ್ತೆ ಕುಮಾರ ಪರ್ವತಕ್ಕೆ ಬರುವ ಪ್ಲಾನ್ ಮಾಡುತ್ತಾ ಬೆಂಗಳೂರಿನ ದಾರಿ ಹಿಡಿದೆವು. 2007ರ ಡಿಸೆಂಬರ್ ತಿಂಗಳಲ್ಲಿ ಕುಮಾರ ಪರ್ವತ ಚಾರಣ ಮಾಡಿದೆವು.