Monday 19 January, 2009

ದೂಧ್ ಸಾಗರ್


Doodh Sagar - 2008 Dec 26, 27

ದೂಧ್ ಸಾಗರ್! ಈ ಜಲಪಾತದ ಬಗ್ಗೆ ಹೀಗೆ ಒಂದು ವರ್ಷದ ಮೊದಲು ಕೇಳಿದೆ. ಕೆಲವರು ಇದು ಜೊಗ ಜಲಪಾತಕಿಂತ ಎತ್ತರ ಇದೆ ಅಂತ ಹೇಳಿದ್ರು. internet ಹುಡುಕಿ ಕೆಲವು ಫೊಟೊ ನೋಡಿದೆ, ಒಂದು ಫೊಟೊದಲ್ಲಿ ತುಂಬಿ ಹರಿಯುತ್ತಿರುವ ಜಲಪಾತದ ಎದುರಿಗೆ ಒಂದು ರೈಲು ಹೋಗುತಿತ್ತು. ಆ ಫೊಟೊ ನೋಡಿದ ಮೇಲೆ ಅಲ್ಲಿಗೆ ಹೋಗಲೇ ಬೇಕು ಅಂತ ಹಟಕ್ಕೆ ಬಿದ್ದೆ. ಎಂದಿನಂತೆ ಬ್ಲಾಗುಗಳನ್ನ ಹುಡುಕಿ ಮಾಹಿತಿ ಸಂಗ್ರಹಿಸಿ ಹೋಗೋದು, ಉಳಿಯೋದು ಎಲ್ಲಾದರ ಬಗ್ಗೆ ತಿಳಿದುಕೊಂಡೆ. ನಮ್ಮ ಕಚೇರಿಯಲ್ಲೇ ಒಬ್ಬರು ಈ ಜಾಗಕ್ಕೆ ಮಳೆಗಾಲದಲ್ಲಿ ಹೋಗಿದ್ರು. ಅವರು ಎಲ್ಲಿ ಹೋಗಬೇಕು ಉಳಿಯೊ ವ್ಯವಸ್ತೆ ಎಲ್ಲದರ ಬಗ್ಗೆ ಮಾಹಿತಿ ಕೊಟ್ಟರು. ಜನವರಿ ತಿಂಗಳಲ್ಲಿ ಇಲ್ಲಿಗೆ ಹೋಗೋದು ಅಂದು ಕೊಂಡಿದ್ವಿ ಆದ್ರೆ ಇದ್ದಕಿದ್ದಹಾಗೆ ತತ್-ಕಾಲ್ ಟಿಕೀಟು ಮಾಡಿಸಿಕೊಂಡು ಹೊರಟೇ ಬಿಟ್ವಿ Dec 25ರ ರಾತ್ರಿ ರಾಣಿ ಚೆನ್ನಮ್ಮ ಗಾಡಿಗೆ.

ಬೆಂಗಳೂರಿಂದ ಲೊಂಡವರೆಗು ರೈಲಿನಲ್ಲಿ ಹೋಗಿ ಅಲ್ಲಿಂದ ಮುಂದೆ Castle Rock ರೈಲು ನಿಲ್ದಾಣಕ್ಕೆ ಒಂದು ಜೀಪ್ ಮಾಡಿಕೊಂಡು ಹೋದೆವು. ವಾಸ್ಕೋ ಕಡೆಗೆ ಹೋಗೋ ರೈಲಿನಲ್ಲಿ ಹೋದರೆ ಸೀದ Castle Rock ರೈಲು ನಿಲ್ದಾಣಕ್ಕೇ ಹೋಗಬಹುದು. ಲೊಂಡ ಇಂದ Castle Rock ಮದ್ಯೆ ಇರೋ ರಸ್ತೆಯಲ್ಲಿ ಮೈನಿಂಗ್ ಲಾರಿಗಳು ಓಡಾಡಿ ದೊಡ್ಡ ದೊಡ್ಡ ಕಂದಕಗಳಾಗಿವೆ. ರಸ್ತೆ ಅಕ್ಕಪಕ್ಕದ ಮರಗಳೆಲ್ಲ ಹೊಸ ಬಣ್ಣ ಪಡೆದಿವೆ. ಇಲ್ಲಿ ಮಳೆ ಬಂದರೆ ಮಾತ್ರ ಮರಗಳು ಹಸಿರಾಗಿ ಕಾಣಬಹುದು, ಬಾಕಿಯಂತೆ ಕೆಂಪು. ಎಂಟುಗಂಟೆಗೆ ಲೊಂಡಕ್ಕೆ ಬಂದು ರೈಲು ನಿಲ್ದಾಣದ ಹೊರಗಿದ್ದ ಒಂದು ಹೋಟೆಲಿನಲ್ಲಿ ಉಪಿಟ್ಟು ತಿಂದು ಜೀಪ್ ಹತ್ತಿದೆವು. ಆ ಹೊಟ್ಲಿನ ಉಪಿಟ್ಟು ಅದ್ಭುತವಾಗಿತ್ತು. ಅಲ್ಲಿ ಉಪಿಟ್ಟು ತಿನ್ನೋದಿಕ್ಕಾದ್ರು ಇನ್ನೊಂದು ಸಾರಿ ದೂಧ್ ಸಾಗರಕ್ಕೆ ಹೋಗಬೇಕು.



Castle Rock ರೈಲು ನಿಲ್ದಾಣಕ್ಕೆ ಬಂದಾಗ 10.30 ಇಲ್ಲಿಂದ ನಮ್ಮ ಚಾರಣ ಆರಂಭ. ಸ್ಟೇಷನ್ನಿಂದ ಮುಂದೆ ಹೊರಡುತ್ತಿದ್ದಂತೆ ಒಂದು ಹಳೆಯ ಪಾಳು ಬಿದ್ದ ಗೋಡೋನಿನ ತರಹದ ಕಟ್ಟದ ಇದೆ. ಇದರ ಎದುರಿಗೆ ರೈಲ್ವೆ ಇಲಾಖೆಯವರು 25/000 ಎಂದು ಮೈಲಿಗಲ್ಲು ಹಾಕಿದ್ದಾರೆ. ಇಲ್ಲಿಂದ "Welcome to Braganza Ghat Section" ಎಂದಿರೋ ಸ್ವಾಗತ ಫಲಕ ದಾಟಿ ರೈಲು ಹಳಿಗಳ ಮೇಲೆ ನೆಡೆಯಲಾರಂಭಿಸಿದೆವು. ನಾವು ಹೋರಡುವ ಸಮಯಕ್ಕೆ ಒಂದು ಗೂಡ್ಸ್ ಗಾಡಿ ದೂಧ್ ಸಾಗರದ ಕಡೆಗೆ ಹೊರಟಿತ್ತು. ’ಬನ್ನಿ ನಿಮ್ಮುನ್ನ ಅಲ್ಲೇ ಬಿಟ್ಟು ಹೋಗ್ತಿವಿ’ ಅಂತ ಅವರು ಕರೆದರು, ಹೋಗೋ ಮೂಡ್ ನಲ್ಲಿ ನಾವು ಇರಲಿಲ್ಲ. ನೆಡೆಯೋದಕ್ಕೆ ಆಗದೇ ಇದ್ರೆ ಹೀಗೆ ಯಾವುದಾದರು ಗೂಡ್ಸ್ ಹಿಡಿದುಕೊಂಡು ಹೋಗಬಹುದು. ರೈಲು ಹಳಿಗಳ ಮೇಲೆ ನೆಡೆಯುತ್ತಾ ಸಕಲೆಶಪುರದ ನೆನಪುಗಳು ಬರುತ್ತಿದ್ದವು. ಅಲ್ಲಿ ಹುಂಬರ ತರಹ ನೆಡೆದಿದ್ದು, ಸ್ಟೇಷನ್ ಮಾಸ್ತರ್ ಹತ್ತಿರ ಜಗಳಕಾದಿದ್ದು, ಕೊನೆಗೆ ಮಳೆ ಸುರಿತಿರೋ ರಾತ್ರಿಯಲ್ಲಿ ಒಂದು ಟನಲ್ಲಿನಲ್ಲಿ ಮಲಗಿದ್ದು ಎಲ್ಲಾ ನೆನೆಸಿಕೊಂಡು ಹೆಜ್ಜೆಹಾಕತೊಡಗಿದೆವು.

ಪರಮೇಶ ಮತ್ತು ಅವಿನಾಶ್ -ಜಗದೀಶನ ಸ್ನೇಹಿತರು- ಈ ಸಾರಿ ನಮ್ಮ ಜೊತೆ ಬಂದಿದ್ದ ಹೊಸಬರು. ಇವರಿಬ್ಬರು expert photographers. ನಮ್ಮ ಲವ್ಸ್ಯೂ ರಾಘವೇಂದ್ರನಿಗೆ ಈ ಸಾರಿ ಅದ್ರುಷ್ಟ ಖುಲಾಯಿಸಿತ್ತು. ರೋಗಿ ಬಯಸಿದ್ದು... ವೈದ್ಯರು ಹೇಳಿದ್ದು... ಅವರಿಗೆ ಫೊಟೊ ತೆಗೆಯೋಕೆ ಜನ ಬೇಕು, ಇವನಿಗೆ ಫೊಟೊ ತೆಗೆಯೋರು ಬೇಕು. ಈ ಸಾರಿ ನಾವುಗಳು ಟೆಂಟ್ ಹಾಕಿಕೊಂಡು ಉಳಿಯೋ ಯೊಜನೆಯಲ್ಲಿ ಇದ್ದಿದ್ದರಿಂದ ಎರಡು ಟೆಂಟುಗಳನ್ನ ಹೊತ್ತುಕೊಂಡು ನೆಡೆಯುತ್ತಿದ್ದೆವು. ಒಂದು ಟೆಂಟ್ ಯಮಭಾರ. ಒಂದೊಂದು ಕಿಲೋಮೀಟರ್ ಒಬ್ಬೊಬ್ಬರ ಕೈ ಬದಲಾಯಿಸುತ್ತಾ ನೆಡೆದೆವು. ಲವ್ಸ್ಯೂ ರಾಘವೇಂದ್ರ ಟೆಂಟ್ ಹೊತ್ತುಕೊಂಡು ಉಳುವ ಯೋಗಿಯ ನೋಡಣ್ಣ ಅಂತ ಹಾಡು ಹೇಳಿಕೊಂಡು ನಡೀತಿದ್ದ. ಒಂದು ಕಿಲೋ ಮೀಟರ್ ನೆಡೆದ ಮೇಲೆ ಲವ್ಸ್ಯೂ ಟೆಂಟನ್ನು ಹರಿಶನಿಗೆ ಕೊಟ್ಟು ಅದಕ್ಕೊಂದು ಸಮಾರಂಭ ಮಾಡಿ ಎರಡು ಫೋಟೋ ತೆಗೆಸಿಕೊಂಡ.


29/400 ಮೈಲಿಗಲ್ಲಿನ ಬಳಿ ಒಂದು ಸಣ್ಣ ಜಲಪಾತ ಸಿಕ್ಕಿತು. ಇಲ್ಲಿ ಫೋಟೋಮೇಲೆ ಫೋಟೋ ಆಯ್ತು. ಈ ಜಾಗಕ್ಕೆ ಬರುವ ಹೊತ್ತಿಗಾಗಲೆ ಮೂರು ಟನಲ್ಲುಗಳನ್ನ ದಾಟಿಕೊಂಡು ಬಂದಿದ್ದೆವು. ಇಲ್ಲಿಂದ ಒಂದರ್ದ ಕೀ.ಮೀ. ನೆಡೆದ ಮೇಲೆ ಗೋವಕ್ಕೆ ಸ್ವಾಗತ ಅನ್ನೋ ಫಲಕ ಕಾಣಿಸಿತು. ಕರ್ನಾಟಕದ ಗಡಿ ದಾಟಿ ಗೋವ ಪ್ರವೇಶಿಸಿದ್ದೆವು. ಮುಂದೆ ಕರ್ಜೊಲ್ ಸ್ಟೇಶನ್ನಿಗೆ ಮಧ್ಯಾನ್ಹ ಎರಡರ ಸುಮಾರಿಗೆ ಬಂದೆವು. ಇಲ್ಲಿ ಸ್ವಲ್ಪ ಹೊತ್ತು ಕೂತಿದ್ದೆವು. ಆಗ ಒಂದು ಗೂಡ್ಸ್ ಗಾಡಿ ಹೋಯಿತು. ಈ ಹಾದಿಯಲ್ಲಿ ಬಹಳಷ್ಟು ಗೂಡ್ಸ್ ಗಾಡಿಗಳು ಓಡಾಡುತ್ತಿದ್ದವು. ಸಕಲೇಶಪುರ-ಸುಬ್ರಮಣ್ಯಕ್ಕೆ ಹೋಲಿಸಿದರೆ ಇಲ್ಲಿ ಹೆಚ್ಚು ಗಾಡಿಗಳು ಓಡಾಡುತ್ತವೆ.

ಈ ದಾರಿಯಲ್ಲಿ ಅಲ್ಲೊಂದು ಇಲ್ಲೊಂದು ಝರಿಗಳು ಹರಿಯುತಿದ್ದವು. ಇವು ತುಂಬಿ ಹರಿಯುವುದನ್ನು ನೋಡಲು ಮಳೆಗಾಲದಲ್ಲಿ ಬರಬೇಕು. ಒಂದು ಝರಿ ಟನಲ್ ಶುರುವಾಗುವ ದ್ವಾರದ ಪಕ್ಕದಲ್ಲೇ ಇದೆ. ಅದು ನೋಡಲು ತುಂಬ ಚೆನ್ನಾಗಿತ್ತು. ಅದಕ್ಕೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕೆಳಗಿನ ಪ್ರಪಾತ ಆಳವಾಗಿದ್ದು ನೋಡಲು ಮೋಹಕವಾಗಿತ್ತು. ಮುಂದೆ ನೆಡೆದು ಸಂಜೆ 4.30 ಗಂಟೆ ಸುಮಾರಿಗೆ ದೂಧ್ ಸಾಗರ್ ರೈಲು ನಿಲ್ದಾಣಕ್ಕೆ ತಲುಪಿದೆವು. ಇಲ್ಲಿ ಮೈಸೂರಿನ ಒಬ್ಬ ಸ್ಟೇಷನ್ ಮಾಸ್ಟರ್ ನಮಗೆ ಬಹಳಷ್ಟು ಮಾಹಿತಿ ಕೊಟ್ಟರು. ಇನ್ನೊಂದು ಖುಶಿಯ ವಿಷಯವೆಂದರೆ ಈ ಎರಡು ದಿನಗಳಲ್ಲಿ ನಮಗೆ ಸಿಕ್ಕ ಪ್ರತಿಯೊಬ್ಬ ರೈಲ್ವೆ ನೌಕರನೂ ಕನ್ನಡಲ್ಲಿ ಮಾತನಾಡಿದ್ದ. ಇದಕ್ಕೆ ಮುಖ್ಯ ಕಾರಣ ನಾವು ಮೊದಲು ಮಾತು ತೆಗೆಯುವುದೇ ಕನ್ನಡದಲ್ಲಿ. ನಾವು ಕನ್ನಡ ಮಾತಾಡಿದ್ರೇನೆ ತಾನೆ ಬೇರೆಯವರು ನಮ್ಮನ್ನು ಕನ್ನಡದಲ್ಲಿ ಮಾತಾಡಿಸೋದು.


ಇಲ್ಲಿಂದ ಮುಂದೆ ಒಂದು ಕಿಲೋಮೀಟರ್ ನೆಡೆದ ಮೇಲೆ ದೂಧ್ ಸಾಗರ್ ಜಲಪಾತ ಸಿಕ್ಕಿತು. ಅಲ್ಲಿ ತಲುಪಿ ಸೇತುವೆ ಕೆಳಗಿಳಿದು ಮೇಲಕತ್ತಿ ಎಡದಿಂದ ಬಲದಿಂದ ಎಲ್ಲಾ ಕಡೆಗಳಿಂದ ಜಲಪಾತ ನೋಡಿ ಆದಷ್ಟು ಫೋಟೊಗಳನ್ನು ತೆಗೆದೆವು. ಆ ರಾತ್ರಿಯನ್ನು ಅಲ್ಲಿಯೇ ಕಳೆಯುವ ನಿರ್ಧಾರ ನಮ್ಮದಾಗಿತ್ತು. ಜಲಪಾತಕ್ಕೆ ಅಡ್ಡವಾಗಿ ಕಟ್ಟಿರುವ ಸೇತುವೆಯ ಎರಡೂ ಪಕ್ಕಗಳಲ್ಲಿ ಟೆಂಟು ಹಾಕಿಕೊಂಡು ಉಳಿಯಲು ಸಾಕಷ್ಟು ಜಾಗ ಇದೆ. ಕತ್ತಲಾಗುವ ಮೊದಲು ಸಾಕಷ್ಟು ಸೌದೆ ಗುಡ್ಡೆಹಾಕಿದೆವು. ಟೆಂಟು ಹೊಡೆದು, ಹೊಲೆ ಹೂಡಿ ರಾತ್ರಿ ಊಟಕ್ಕೆ ತಯಾರಿ ಶುರುಮಾಡಿದೆವು. ಸೂಪ್ ಮತ್ತು ನೂಡಲ್ಸ್ ತಯಾರಾದವು. ಊಟಮುಗಿಸಿ ಹತ್ತರ ಸುಮಾರಿಗೆ ನಿದ್ರೆಗೆ ಶರಣಾದೆವು. ರಾತ್ರಿಯಲ್ಲಿಯೂ ನಾಲ್ಕೈದು ಗಾಡಿಗಳು ಓಡಾಡಿದವು ಈ ರೈಲ್ವೆ ಹಳಿ ಜಲಪಾತ ಎಲ್ಲವೂ ಮುಲ್ಲೆಮ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಇಲ್ಲಿ ರಾತ್ರಿ ಸಮಯದಲ್ಲಿ ರೈಲುಗಾಡಿಗಳ ಓಡಾಟಕ್ಕೆ ಕಡಿವಾಣ ಹಾಕುವುದು ಒಳ್ಳೆಯದು.


ಬೆಳಗ್ಗೆ ಆರಕ್ಕೆ ಎದ್ದು ಕೆಂಡ ಕೆರೆದು ಮತ್ತೆ ಬೆಂಕಿ ಮಾಡಿದೆವು. ಮತ್ತೊಂದು ಸುತ್ತು ಸೂಪ್ ಮತ್ತು ನೂಡಲ್ಸ್ ಮುಗಿಸಿ ಹೊರಡಲು ತಯಾರಾದೆವು. ಸೇತುವೆಯಿಂದ ಸ್ವಲ್ಪ ಮುಂದೆ ಎರಡು ಟನಲ್ಲುಗಳ ನಡುವೆ ಕೆಳಗಿಳಿಯಲು ಸಣ್ಣ ಕಾಲುದಾರಿಯಿದೆ. ಈ ದಾರಿಯಲ್ಲಿ ಒಂದು ಇಪತ್ತು ನಿಮಿಷ ಇಳಿದು ಜಲಪಾತದ ತಳಭಾಗಕ್ಕೆ ಬಂದೆವು. ಇಲ್ಲಿಂದ ಜಲಪಾತದ ಪೂರ್ಣ ದೃಷ್ಯ ಅದ್ಭುತವಾಗಿ ಕಾಣುತಿತ್ತು. ಇಲ್ಲಿ ಕೆಲವು ಫೋಟೋ ತೆಗೆದು ನೀರಿಗಿಳಿದು ಸ್ನಾನಮಾಡಿದೆವು. ನಾವು ಇಲ್ಲಿಗೆ ಬಂದಾಗ ನಮ್ಮನ್ನು ಬಿಟ್ಟು ಬೇರೆಯಾರೂ ಇರಲಿಲ್ಲ ಒಂಬತ್ತು ಗಂಟೆ ಸುಮಾರಿಗೆ ಸಣ್ಣಗೆ ಜನ ಬರಲಾರಂಭಿಸಿದರು. ಹತ್ತರ ಸುಮಾರಿಗೆ ಅಲ್ಲಿ ಚೆನ್ನಾಗಿಯೆ ಜನ ಜಮಾಯಿಸಿದರು. ಕೊಲ್ಲೆಮ್ ಇಂದ ಜಲಪಾತದ ಬುಡದವರೆಗೂ ಜೀಪಿನಲ್ಲಿ ಬರಬಹುದಾಗಿದ್ದರಿಂದ ಮತ್ತು ಅದು ಕ್ರಿಸ್ ಮಸ್ ರಜೆಯ ದಿನಗಳಾಗಿದ್ದರಿಂದ ಜನ ಸ್ವಲ್ಪ ಹೆಚ್ಚೇ ಇದ್ದರು.


ಇಲ್ಲಿಂದ ಜೀಪ್ ದಾರಿಯಲ್ಲಿ ಕುಲ್ಲೆಮ್ ತಲುಪಲು ಏಳು ಕಿಲೋಮೀಟರುಗಳಾಗುತ್ತವೆ ಎಂದು ಮೈಸೂರಿನ ಸ್ಟೇಷನ್ ಮಾಸ್ಟರ್ ಹೇಳಿದ್ದರು ಆದರೆ ಅಲ್ಲಿ ಸಿಕ್ಕ ಜೀಪ್ ಡ್ರೈವರುಗಳು 11-12 kmಗೆ ಕಡಿಮೆ ಇಲ್ಲ ಎಂದರು. ಜೀಪ್ ದಾರಿಯಲ್ಲಿ ಒಂದು ಧೂಳೋ ಧೂಳು. ಸತತವಾಗಿ ಒಳ್ಳೆಯ ವೇಗದಲ್ಲಿ ಒಂದು ಗಂಟೆನೆಡೆದು ಸೊನಾಲಿಮ್ ಎನ್ನೋ ಒಂದೆರಡು ಮನೆಗಳ ಹಳ್ಳಿ ತಲುಪಿದೆವು. ಅಲ್ಲಿ ಒಂದು ಸಣ್ಣ ಅಂಗಡಿಯಲ್ಲಿ ಕುಡಿಯಲು ಬೇಕಾದ್ದು ಸಿಗುತಿತ್ತು. ಆಲ್ಲಿದ್ದ ಹುಡುಗ ಜೀಪ್ ದಾರಿಯಲ್ಲಿ ಹೋದರೆ ಸ್ವಲ್ಪ ಸುತ್ತಾಗುತ್ತೆ, ಮುಂದೆ ಒಂದುಕಡೆ ದಾರಿ ರೈಲು ಹಳಿಗಳ ಪಕ್ಕ ಹೋಗುತ್ತದೆ ಅಲ್ಲಿ ರೈಲ್ವೆ ಹಳಿ ಸೇರಿಕೊಂಡು ಮುಂದೆ ಹೋಗಿ ಎಂದ. ಸೊನಾಲಿಂನಿಂದ ಸ್ವಲ್ಪ ದೂರಬಂದ ಮೇಲೆ ಎರಡು ಎಮ್ಮೆಗಳು ಕಾಣಿಸಿದವು. ಕಾಡೆಮ್ಮೆನೋ ಇಲ್ಲ ನಾಡೆಮ್ಮೆನೋ ಗೊತ್ತಿಲ್ಲ, ಕಾಡು ದಾರಿಯಾಗಿದ್ದರಿಂದ ಮತ್ತು ನಮ್ಮ ಸಂತೋಷಕ್ಕೆ ಅವುಗಳನ್ನು ಕಾಡೆಮ್ಮೆ ಎಂದೇ ಅಂದುಕೊಳ್ಳೋಣ. ನಮ್ಮ ಸದ್ದು ಸ್ವಲ್ಪ ಆಗುತ್ತಲೆ ಅವು ಗಿಡಗಳ ಮರೆಗೆ ಸರಿದವು.

ಮುಂದೆ ಜೀಪ್ ದಾರಿಯ ಎಡಕ್ಕೆ ರೈಲ್ವೇ ಹಳಿ ಕಾಣಿಸಿತು, ಮತ್ತೆ ಹಳಿ ಸೇರಿದೆವು. ಅಲ್ಲಿದ್ದ ಒಬ್ಬ ಗ್ಯಾಂಗ್ ಮನ್ ಕೊಲ್ಲೆಂಗೆ 4 kmಎಂದು ತಿಳಿಸಿದ. ಈತನೂ ಕನ್ನಡದಲ್ಲಿ ಮಾತಾಡಿದ. ಸರಸರನೆ ಹೆಜ್ಜೆ ಹಾಕ ತೊಡಗಿದೆವು. ಹೌರಾ-ವಾಸ್ಕೊ ರೈಲು ನಮ್ಮನ್ನು ದಾಟಿ ಹೋಯಿತು. ಮಧ್ಯಾನ್ಹ ಎರಡರ ಸುಮಾರಿಗೆ ಕೊಲ್ಲೆಮ್ ತಲುಪಿದೆವು. ಅಲ್ಲಿ ಸಿಗ್ನಲ್ ರೂಮಿನಲ್ಲಿದ್ದ ಒಬ್ಬರನ್ನು ಹೋಟೆಲ್ ಮತ್ತು ಮೊಲ್ಲೆಂಗೆ ಹೋಗುವ ಬಸ್ಸಿನ ಬಗ್ಗೆ ವಿಚಾರಿಸಿದೆವು. ಮೊಲ್ಲೆಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಿದ್ದರಿಂದ ಹುಬ್ಬಳ್ಳಿಗೆ ಬಹಳಷ್ಟು ಬಸ್ಸುಗಳು ಸಿಗುತ್ತವೆ ಎಂದು ತಿಳಿಸಿದ. ಈತ ಬಾಗಲಕೋಟೆಯವನು.

ಕೊಲ್ಲೆಂನಲ್ಲಿ ಊಟ ಮಾಡಿ ಮೊಲ್ಲೆಮ್ ತಲುಪಿ ಅಲ್ಲಿಂದ ಹುಬ್ಬಳ್ಳಿ ಬಸ್ ಹತ್ತಿದೆವು. ನಾವುಗಳೆಲ್ಲ ನಿದ್ರೆಗೆ ಜಾರಿದ್ದೆವು, ಮಧ್ಯದಲ್ಲಿ ಎಲ್ಲೋ ಬಸ್ ನಿಂತಿತ್ತು. ಕಡ್ಲೆಗಿಡ ಮಾರುವವರು ಮತ್ತು ಗೋವಾ ಇಂದ ತಂದಿರೋ ಎಣ್ಣೆ ಹಿಡಿಯುವ ಜೋಶಿನಲ್ಲಿ ಪೋಲೀಸರು ಬಸ್ಸು ಹತ್ತಿದ್ದರು. ಪೋಲೀಸ್ ಲವ್ಸೂ ಬ್ಯಾಗ್ ಹಿಡಿದು ’ಯಾರದ್ರಿ, ಈ ಬ್ಯಾಗ್ ತೆಗಿರೀ ಸ್ವಲ್ಪ ಅಂತಿದ್ದರು’ ಆ ಕೂಗು ಕೇಳದೇ ಮಗಲಿದ್ದ ಇವನಿಗೆ ಕೇಳಿದ್ದು ಕಡ್ಲೆ ಗಿಡವನ ಕೂಗು. ಚ್ಂಗನೆ ಎದ್ದು ವ್ಯಾಪಾರಕ್ಕೆ ನಿಂತ. ಪೋಲೀಸು ಇವನನ್ನ ಹಿಡಿದು ಕೇಳಿದ ಮೇಲೆ ಬ್ಯಾಗ್ ತೆಗೆದು ತೋರಿಸಿ ಪೋಲೀಸರಿಗೆ ದೂಧ್ ಸಾಗರಕ್ಕೆ ಹೋಗಿದ್ದ ಕತೆ ಹೇಳಿದ ಉಪಕತೆ ಗೋವಿಂದು ಅಲಿಯಾಸ್ ಲವ್ಸ್ಯೂ ರಾಘವೇಂದ್ರ. ರಾತ್ರಿ ಎಂಟರ ಸುಮಾರಿಗೆ ಹುಬ್ಬಳ್ಳಿ ಸೇರಿ ಬಸವೇಶ್ವರ ಖಾನಾವಳಿಯಲ್ಲಿ ಊಟಮಾಡಿ ಬೆಂಗಳೂರಿಗೆ ಬಸ್ಸು ಹಿಡಿದೆವು. ಬಸ್ಸಿನಲ್ಲಿ ಕೂತು ಮಳೆಗಾಲದಲ್ಲಿ ಮತ್ತೆ ದೂಧ್ ಸಾಗರ್ ನೋಡಲು ಬರಲು ಪ್ಲಾನ್ ಮಾಡತೊಡಗಿದೆವು.

6 comments:

Anonymous said...

waav...super

Lokesh said...

santosh kumar ??

naanu wrong alla andre taavu Cisco santosh taane (spn) Sequia National Park Trip :)

Anonymous said...

ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

ಶುಭವಾಗಲಿ,
- ಶಮ, ನಂದಿಬೆಟ್ಟ

ಹರಟೆ ಮಲ್ಲ said...

howdappa nane santhosh, Cisco Santhosh

ಗೌತಮ್ ಹೆಗಡೆ said...

:):)

Govinda Nelyaru said...

ನನ್ನ ನೆನಪಿನಲ್ಲಿ ದೂದ್ ಸಾಗರ್ ಹೆಸರಿನ ಪಾಳು ಬಿದ್ದ ರೈಲು ನಿಲ್ದಾಣವಿದೆ. ಮೂವತ್ತು ವರ್ಷ ಹಿಂದೆ ಚಾರಣ ಸಮಯ ಅಲ್ಲಿ ಮಲಗಿದ ನೆನಪು. ನೀವು ಡೇರೆ ಕೊಂಡೋಯ್ಯುವ ಅಗತ್ಯ ಇರಲಿಲ್ಲವೇನೋ.