Sunday, 2 September 2007

ಕೊಡಚಾದ್ರಿ -4

ಸರತಿಯ ಬಟವಾಡೆಯಾದ ಮೇಲೆ ನಮ್ಮಲ್ಲಿ ಉಳಿದಿದ್ದ ಊಟ ಎಷ್ಟು ಎಂದು ಲೆಕ್ಕಹಾಕಲು ಕೂತೆವು. ಕೆಲವು ಕಾಯಿ ಹೋಳಿಗೆ ಮತ್ತು ಚಪಾತಿಗಳು, ೨ ಇಲ್ಲವೇ ೩ ಪ್ಯಾಕ್ ಬ್ರಿಟಾನಿಯ ಕೇಕು, ಕೆಲವು ಬ್ರಿಟಾನಿಯ ಬಿಸ್ಕೆಟ್ ಪ್ಯಾಕ್ ಮತ್ತು ಸ್ವಲ್ಪ ಚಾಕೋಲೇಟುಗಳು. ಇಷ್ಟಲ್ಲದೇ ಅಶೋಕನು ತಂದಿದ್ದ ಎರಡು ದೊಡ್ಡ ಫಾಮಿಲಿ ಪ್ಯಾಕ್ ಪಾರ್ಲೇಜೀ ಬಿಸ್ಕೇಟುಗಳು ಉಳಿದಿದ್ದವು. ಇವು ಬರಿಯ ದೊಡ್ಡವು ಎಂದರೆ ಇವು ಎಷ್ಟು ದೊಡ್ಡ ಪ್ಯಾಕುಗಳು ಎಂದು ಓದುತ್ತಿರುವ ನಿಮಗೆ ತಿಳಿಯದಿರಬಹುದು. ಒಂದಂದು ಪ್ಯಾಕಿನಲ್ಲೂ ೧೪ ಇಲ್ಲವೇ ೧೬ ಬಿಸ್ಕೆಟುಗಳನ್ನೊಳಗೊಂಡ ೧೨ ಸಣ್ಣ ಸಣ್ಣ ಪ್ಯಾಕುಗಳು. ಈ ಎರಡು ಫ್ಯಾಮಿಲಿ ಪ್ಯಾಕುಗಳನ್ನು ಕೂಡಿಸಿದರೆ ಒಂದು ಸಣ್ಣ ಪ್ರೈಮರಿ ಸ್ಕೂಲಿಗೆ ಹಂಚುವಷ್ಟು ಬಿಸ್ಕೆಟ್ಟುಗಳಾಗುತ್ತಿದ್ದವು. ಇವನ್ನು ಬೆಳಗ್ಗೆಯಿಂದ ಯಾರೂ ಮುಟ್ಟಿ ನೋಡಿರಲಿಲ್ಲ. ಈಗ ನಮ್ಮಲ್ಲಿ ಉಳಿದಿದ್ದ ಊಟವನ್ನು ನೋಡಿದರೆ ನಾಳಿನ ಒಂದು ದಿನ ಪೂರ್ತಿ ಮಾಡಲು ಅಶೋಕನ ಪಾರ್ಲೇಜೀಗಳೇ ಗತಿ ಎನ್ನುವಂತಾಗಿತ್ತು. ಆದಷ್ಟು ಪ್ಯಾಕೇಜ್ ಫುಡ್ಡನ್ನು ನಾಳೆಗೆ ಉಳಿಸಿ ಕೊಂಡು, ಚಪಾತಿ ಮತ್ತು ಹೋಳಿಗೆಯನ್ನು ತಿಂದು ಮುಗಿಸಲು ಕೂತೆವು. ಸಂಜೆ ಸಿಕ್ಕಿದ್ದ ತೊರೆಯ ಹತ್ತಿರ ನೀರನ್ನು ತುಂಬಿಸಿ ಕೊಂಡ ನಂತರ ನಮಗೆ ಮತ್ತೆ ನೀರು ಸಿಕ್ಕಿರಲಿಲ್ಲ. ನಮ್ಮ ಬಾಟಲಿಗಳಲ್ಲಿದ್ದ ನೀರಿನಲ್ಲಿ ರಾತ್ರಿ ಕಳೆಯಲು ತೊಂದರೆ ಇರಲಿಲ್ಲವಾದರೂ ಬೆಳಗ್ಗೆ ಬೇಗ ನೀರಿನ ಒರತೆ ಸಿಗದಿದ್ದರೆ ನಾವುಗಳು ತೊಂದರೆಗೊಳಗಾಗುವಂತಿತ್ತು.

ಊಟವಾದ ಮೇಲೆ ಮೊದಲಿನ ಸರತಿಯವರಿಗೆ ಬೆಂಕಿಯ ಜವಾಬ್ದಾರಿಯನ್ನು ಕೊಟ್ಟು ನಾನು ಮಲಗಲು ತಯಾರಾದೆ. ನನ್ನ ಬ್ಯಾಗನ್ನು ತಲೆದಿಂಬಾಗಿ ಇಟ್ಟು, ನೆಲಕ್ಕೆ ಊರಿಂದಲೇ ತೆಗೆದು ಕೊಂಡು ಹೋಗಿದ್ದ ನ್ಯೂಸ್ ಪೇಪರನ್ನು ಹಾಸಿ ಶಾಲನ್ನು ಹೊದ್ದು ಕಾಲು ಚಾಚಿದೆ. ಬೆಳಗಿನಿಂದ ಸತತವಾಗಿ ನೆಡೆದು ಸುಸ್ತಾಗಿದ್ದ ನನಗೆ ನಿದ್ರೆ ಆವರಿಸ ತೊಡಗಿತು. ಹರೀಶ, ಜಗದೀಶ ಮತ್ತು ಚಂದ್ರ ಮಹೇಶ ನಾಳೆಯ ಬಗ್ಗೆ ಪ್ಲಾನ್ ಮಾಡುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಲೇ ನಿದ್ರೆಗೆ ಶರಣಾದೆ.

ನಿದ್ದೆಯ ಮಧ್ಯದಲ್ಲಿ ಯಾರದೋ ಮಾತುಗಳನ್ನು ಕೇಳಿ ಎಚ್ಚರವಾಯಿತು. 'ನೋಡ್ರಪ್ಪ ಯೊಚನೆ ಮಾಡ್ರಿ...' ಎಂದ ಚಂದ್ರ, ಮೊದಲನೇ ಸರತಿಯನ್ನು ಮುಗಿಸಿ ಇನ್ನೂ ನಿದ್ದೆ ಬಾರದೆ ತಮ್ಮ ತಮ್ಮ ಬೆಡ್-ಶೀಟ್ ಒಳಗೆ ಕೂತು ಬೆಂಕಿ ಕಾಯಿಸಿಕೊಳ್ಳುತಿದ್ದವರಿಗೆ ಮತ್ತು ತನ್ನ ಸರತಿಯವರಿಗೆ ಚಂದ್ರ ಏನನ್ನೋ ಹೇಳುತ್ತಿದ್ದ. ಆಗ ಸಮಯ ಮಧ್ಯರಾತ್ರಿ ಸುಮಾರು ೧-೧.೧೫ರ ಮಧ್ಯೆ. ಎರಡರಿಂದ ನಾಲ್ಕು ಗಂಟೆಯವರೆಗೆ ನನ್ನ, ಮಿಲ್ಟ್ರಿಯ ಮತ್ತು ಷಿರೀಶನ ಕಾವಲು ಸರತಿ ಇತ್ತು. ಚಂದ್ರನ ಮಾತುಗಳನ್ನು ಕೇಳಿ ನನ್ನ ಸರತಿಯ ಹೊತ್ತಿಗಿಂತಲೂ ಮುಂಚೆಯೇ ನನಗೆ ಎಚ್ಚರವಾಗಿತ್ತು. ನಾನು ಸ್ಟೋರಿ ಏನು ಎಂದು ಕೇಳಿದಾಗ ಚಂದ್ರ 'ನೋಡ್ರಪ್ಪ ನಮ್ಮ ಹತ್ತಿರ ಇರೋ ಊಟ ಇನ್ನ ಒಂದು ದಿನಕ್ಕೆ ಮಾತ್ರ ಸಾಕಾಗುತ್ತೆ, ನಮ್ಮ ಹತ್ತಿರ ಜಾಸ್ತಿ ನೀರು ಸಹ ಇಲ್ಲ. ಈಗ ನಮ್ಮ ಎದುರಿಗೆ ಎರಡು ದಾರಿಗಳು ಇವೆ. ಒಂದು ಬೆಳಗ್ಗೆಯಿಂದ ನಾವು ನೆಡೆದು ಬಂದಿದ್ದು. ಇನ್ನೊಂದು ಇದುರಿಗೆ ಕಾಣಿಸ್ತಿರೋದು. ನಾವು ಬಂದಿದ್ದ ದಾರಿ ಹೇಗಿದೆ, ಎಲ್ಲೆಲ್ಲಿ ನೀರು ಸಿಕ್ಕುತ್ತೆ, ಆ ದಾರಿ ಪೂರ್ತಿ ಸವೆಸೋಕೆ ಎಷ್ಟು ಹೊತ್ತು ಬೇಕು ನಮಗೆ ಇದೆಲ್ಲಾ ಗೊತ್ತು. ಇನ್ನೊಂದು ಎದುರಿಗಿರೋದು, ನಾವು ಏನು ಸಂಜೆಯಿಂದ ಘಾಟಿರಸ್ತೆ ಕೂಡಿಕೊಳ್ಳುತ್ತೆ ಅಂದುಕೊಂಡು ನೆಡೆದುಕೊಂಡು ಬಂದಿರೋದು. ಇದರಲ್ಲಿ ಹೋದರೆ ನಮಗೆ ಬೆಳಿಗ್ಗೆ ನೀರು ಎಲ್ಲಿ ಸಿಕ್ಕುತ್ತೆ ಅಂತ ಗೊತ್ತಿಲ್ಲ, ಬೆಳಿಗ್ಗೆ ಬೇಗನೇ ನಮಗೆ ನೀರು ಸಿಕ್ಕಬೇಕು ನಮ್ಮ ಹತ್ತಿರ ಇರ್‍ಓ ನೀರು ಜಾಸ್ತಿಹೊತ್ತು ಬರೋದಿಲ್ಲ. ಆಮೇಲೆ ಈ ದಾರಿಯಲ್ಲಿ ಇನ್ನು ಏಷ್ಟು ಹೊತ್ತು ನೆಡೆದ ಮೇಲೆ ಘಾಟಿ ರಸ್ತೆ ಸಿಕ್ಕುತ್ತೆ ಅಂತಲೂ ಗ್ಯಾರಂಟಿ ಇಲ್ಲ. ಸಂಜೆ ಆದರೂ ನಾಮಗೆ ಈ ಕಾಡಿಂದ ಹೊರಗೆ ಹೋಗೊಕೆ ಒಂದು ದಾರಿ ಸಿಗದಿದ್ದರೆ ಊಟವೂ ಇಲ್ಲದೇ ಹೊರಗೆ ಹೋಗೋಕೆ ದಾರಿನೂ ಇಲ್ಲದೇ ಭಯಂಕರವಾಗಿ ಇಲ್ಲಿ ಸಿಕ್ಕಿಹಾಕಿಕೊಳ್ಳುತ್ತೀವಿ. ಅದುಕ್ಕೇ ಹೇಳ್ತಿದಿನಿ ಯೋಚನೆ ಮಾಡಿ ನೋಡ್ರಿ' ಎಂದ.

ಈ ಬಗ್ಗೆ ಏನೂ ಯೋಚನೆ ಮಾಡದೆ, ಚೆನ್ನಾಗಿ ಮಲಗೆದ್ದಿದ್ದ ನನಗೆ ತಕ್ಷಣಕ್ಕೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಮಿಲ್ಟ್ರಿ ಎದ್ದಿದ್ದಾನಾ ಇಲ್ಲಾ ಮಲಗಿದ್ದಾನ ಎಂದು ನೋಡಿದೆ. ಅವನು ಎದ್ದಿದೀನಿ ಮಗ, ಚಂದ್ರ ಹೇಳೋದುನ್ನ ಕೇಳಿಸಿಕೊಂಡೆ ಅಂದ. ಅಷ್ಟರಲ್ಲಿ ನನ್ನ ಸರದಿಯಲ್ಲಿ ಕಾವಲು ಕಾಯಬೇಕಿದ್ದ ಷಿರೀಷನೂ ಎದ್ದು, 'ಚಂದ್ರ ಹೇಳ್ತಿರೊದೇ ಸರಿ ಬೆಳಿಗ್ಗೆ ಎದ್ದು ನಾವು ಬಂದಿದ್ದ ದಾರಿಲೇ ನೆಡೆದು ಹೋಗೋಣ. ಎರಡು ಗಂಟೆ ನೆಡೆಯುವುದರಲ್ಲಿ ನೀರು ಸಿಕ್ಕುತ್ತೆ.' ಎಂದು ಹೇಳಿ ತೀರ್ಪು ಕೊಟ್ಟ. ಷಿರೀಷನ ಮಾತುಗಳನ್ನು ರಾಘವೇಂದ್ರ ಮತ್ತು ಜಯಂತ ಇಬ್ಬರೂ ಅನುಮೋದಿಸಿದರು. ಇವನ ಮಾತುಗಳಿಂದ ನಿದ್ದೆ ಇಳಿದು ಹೋಗಿ ಯೋಚಿಸುವಂತಾಯಿತು.

ಇಷ್ಟರಲ್ಲಾಗಲೇ ಕೃಷ್ಣಪಕ್ಷದ ಚಂದ್ರ ತಲೆಯಮೇಲೆ ಬಂದು ನಾವುಗಳು ತಂಗಿದ್ದ ಬಯಲನ್ನು ಸಣ್ಣಗೆ ಬೆಳಗುತ್ತಿದ್ದ. ನಾನು ಎದ್ದು ಕೂತು ಬೆಂಕಿಗೆ ಸೌದೆ ತಳ್ಳತೊಡಗಿದೆ. ಚಂದ್ರ, ಅಶೋಕ ಮತ್ತು ಸಂಗಮೇಶರನ್ನು ಮಲಗಲು ಹೇಳಿ ನಮ್ಮ ಸರದಿಗಿಂತ ಸ್ವಲ್ಪ ಮೊದಲೇ ನಾನು, ಮಿಲ್ಟ್ರಿ ಮತ್ತು ಷಿರೀಷ ಕಂಟ್ರೋಲ್ ತೆಗೆದು ಕೊಂಡೆವು. ನಾನು ಬೆಂಕಿಯ ಬಳಿಯಲ್ಲಿ ಕೂತು ಸುತ್ತಲು ಟಾರ್ಚ್ ಬೆಳಕನ್ನು ಬಿಡತೊಡಗಿದೆ. ಕ್ಷಣ ಕಳೆದಂತೆ ಚಂದ್ರ ಹೇಳುತ್ತಿರುವುದು ಸರಿ ಎನಿಸ ತೊಡಗಿತು. ನಾನು 'ಮಿಲ್ಟ್ರಿ ಏನಪ್ಪ ಮಾಡೋದು?' ಅಂದಾಗ, 'ನಾನು ಅದುನ್ನೇ ಯೋಚನೆ ಮಾಡ್ತಿದೀನಿ, ನೆನ್ನೆ ಒಂದು ದಿನ ಪೂರ್ತಿ ನೆಡೆದಿದ್ದೀವಿ, ಸುಮಾರು ೧೨ ಗಂಟೆಗಳಷ್ಟು ನೆಡೆದಿದ್ದೇವೆ. ಬೆಳಿಗ್ಗೆ ೬ ಗಂಟೆಗೆ ಎದ್ದು ನೆಡೆಯೋಕೆ ಶುರು ಮಾಡಿದರೆ ನಾಳೆ ಸಾಯಂಕಾಲ ೬ಕ್ಕೆ ನಾವು ಬಸ್ಸು ಇಳಿದಿದ್ದ ಟಾರ್ ರಸ್ತೆ ಸೆರುತ್ತೇವೆ. ಬೆಳಗ್ಗೆ ಸ್ವಲ್ಪ ಬೇಗ ಬೇಗ ಹೆಜ್ಜೆ ಹಾಕಿದರೆ ಬೇಗ ಟಾರ್ ರೋಡ್ ಸೇರಬಹುದು' ಎಂದ.

ಸರಿ, ಬೆಳಗೆದ್ದು ಈ ಪ್ಲಾನಿನಂತೆ ೬ ಗಂಟೆಗೆ ನೆಡೆಯೋಕೆ ಶುರು ಮಾಡೊಣ ಅಂದುಕೊಂಡೆವು. ನಾಲ್ಕು ಗಂಟೆಯಿಂದ ತಮ್ಮ ಸರತಿಯನ್ನು ಆರಂಭಿಸಬೇಕಿದ್ದ ಜಗದೀಶ, ಚಂದ್ರ ಮಹೇಶ ಮತ್ತು ಹರೀಶನಿಗೆ ಈ ವಿಷಯ ತಿಳಿಸಿ, ಬೆಳಗ್ಗೆ ೬ ಗಂಟೆಗೆ ಹೊರಡೋಣ, ನೀವು ೫-೩೦ಕ್ಕೆ ಎಲ್ಲರನ್ನೂ ಏಳಿಸಿ ಬಿಡಿ ಎಂದೆವು. ಆದರೆ ಈ ಮೂವರು ವಾಪಸ್ ಹೋಗುವ ನಮ್ಮ ಯೋಚನೆಗೆ ಒಪ್ಪುವ ಹಾಗೆ ಕಾಣಲಿಲ್ಲ. ಇಷ್ಟು ದೂರ ಬಂದಿದ್ದೇವೆ, ಇಲ್ಲೇ ಎಲ್ಲಾದರೂ ಹೊರ ಹೋಗಲು ದಾರಿ ಇದ್ದೇ ಇರುತ್ತೆ. ಇದನ್ನ ಬಿಟ್ಟು ಮತ್ತೆ ನೆಡೆದು ಬಂದಷ್ಟೇ ದೂರ ನೆಡೆದು ಹೋಗೋದು ಯಾಕೆ ಎಂದು ತಕರಾರು ತೆಗೆದರು. ವಾಪಸ್ ಹೋಗುವುದಕ್ಕೆ ಇವರ ಒಪ್ಪಿಗೆ ಇರಲಿಲ್ಲ. ೬ ಗಂಟೆಗೆ ಹೊರಡುವ ಬದಲು ಏಳಕ್ಕೆ ಹೊರಡೋಣ ಅಷ್ಟರಲ್ಲಿ ನಾವು ೩೦-೪೦ ನಿಮಿಷ ಮುಂದೆ ನೆಡೆದು ಹೋಗಿ ಎಲ್ಲಾದರು ಟಾರ್ ರಸ್ತೆ ಸಿಗುತ್ತದೆಯೇ ನೋಡುತ್ತೇವೆ, ಸಿಕ್ಕರೆ ಅಷ್ಟು ದೂರ ನೆಡೆಯುವುದು ತಪ್ಪುತ್ತದೆ ಎಂದರು. 'ದಾರಿ ಸಿಕ್ಕರೆ ಸರಿ, ಸಿಗದಿದ್ದರೆ? ನೀವು ಸುಮ್ಮನೆ ೧-೨ ಗಂಟೆ ವ್ಯರ್ಥ ಮಾಡಿದರೆ ಮತ್ತೆ ನಾವು ಸಂಜೆಯ ಕತ್ತಲೆಯಲ್ಲಿ ನೆಡೆಯಬೇಕಾಗುತ್ತದೆ.' ಎಂದು ಎಚ್ಚರಿಸಿದೆವು. ಆದರೂ ಹಟಕ್ಕೆ ಬಿದ್ದವರಂತೆ ನಾವು ಮುಂದೆ ಹೋಗಿ ನೋಡಿ ಬರುತ್ತೇವೆ ಎಂದರು. ಸರಿ ಎಂದು ನಾನು ಮಿಲ್ಟ್ರಿ ಷಿರೀಷ ಮಲಗಿ ಕೊಂಡೆವು.

ನಾನು ಬೆಳಗ್ಗೆ ಏಳುವಹೊತ್ತಿಗೆ ೬ ಗಂಟೆಯಾಗಿತ್ತು. ಎಲ್ಲರೂ ಎದ್ದು ಬೆಂಕಿ ಕಾಯಿಸುತ್ತಿದ್ದರು. ಚಂದ್ರ ಮಹೇಶ, ಜಗದೀಶ ಮತ್ತು ಹರೀಶ ಮೂವರೂ ಹಿಂತಿರುಗಿ ಹೋಗುವುದಕ್ಕೆ ಒಪ್ಪದೆ ಮುಂದೆ ಎಲ್ಲಾದರೂ ದಾರಿ ಸಿಗುತ್ತದೆಯೆ ಎಂದು ನೋಡಲು ಹೋಗಿದ್ದರು. ನಿತ್ಯ ಕರ್ಮಗಳನ್ನು ಪೊರೈಸಲು ಹತ್ತಿರದಲ್ಲಿ ಎಲ್ಲೂ ನೀರಿಲ್ಲ. ಬಾಟಲಿಯಲ್ಲಿ ಇರುವ ನೀರು ಕುಡಿಯಲು ಬೇಕು. ಆದ್ದರಿಂದ ಮುಂದೆ ನೀರು ಸಿಗುವ ತನಕ ನೆಡೆಯೋಣ ಎಂದು ಕೊಂಡೆವು. ಆದರೆ ರಾಘವೇಂದ್ರನ ಇರಾದೆ ಬೇರೆಯದೇ ಆಗಿತ್ತು. 'ಅಯ್ಯೋ ಮುಂದೆ ನೀರು ಸಿಗುವ ತನಕ ಕಾಯಲು ನನಗೆ ಆಗೊಲ್ಲ, ಬೆಳಿಗ್ಗೆ ಎದ್ದ ಕೂಡಲೇ ನಾನು ಹಗುರಾಗ ಬೇಕು ಎಂದು ಹೇಳಿ, ನ್ಯೂಸ್ ಪೇಪರ್ ಹಿಡಿದು ಸ್ವಲ್ಪ ಕೆಳಗೆ ಹೋದ. ಹೋಗಿ ೫ ನಿಮಿಷಕ್ಕೆ ಕೂಗಿ ಕೊಂಡು ವಾಪಸ್ ಬಂದ.

'ಅಜ್ಜಾ ಇಲ್ಲೇ ಕೆಳಗೆ ನೀರು ಹರೀತಿದೆ!' ಎಂದು ಕೂಗಿ ಕೊಂಡು ಬಂದ. ಒಬ್ಬೊಬ್ಬರೇ ಎದ್ದು ರಾಘವೇಂದ್ರ ನೀರಿದೆ ಎಂದು ಕೈ ತೋರಿಸಿದ ಕಡೆಗೆ ಹೊರಟೆವು. ನಾವು ಮಲಗಿದ್ದ ಜಾಗದಿಂದ ೨೦ ಮೀಟರ್ ದೂರದಲ್ಲಿ ಒಂದು ಸಣ್ಣ ತಗ್ಗು, ಆ ತಗ್ಗಿನ್ನಲ್ಲಿ ನೀರು ಹರಿಯಲೋ ಇಲ್ಲ ನಿಲ್ಲಲೋ ಎಂದು ಸಂಶಯಿಸುತ್ತ ಹರಿಯುವಂತಿತ್ತು. ಇಲ್ಲಿ ನೀರು ಎಷ್ಟು ಸಣ್ಣಗೆ ಹರಿಯುತ್ತಿತ್ತೆಂದರೆ ನೋಡಿದ ತಕ್ಷಣಕ್ಕೆ ಇದು ಹರಿಯುತ್ತಿದೆಯೇ ಇಲ್ಲ ನಿಂತಿದೆಯೇ ಎಂದು ಹೇಳುವುದು ಕಷ್ಟವಾಗುತಿತ್ತು. ನಿಧಾನವಾಗಿ ಹರಿಯುತ್ತಿದ್ದ ನೀರಾದರೂ ಅದನ್ನು ನೋಡಿ ಎಲ್ಲರೂ ಹರ್ಷಗೊಂಡರು. ನನಗೆ ಅಯ್ಯೋ ನಾವು ಇಡೀ ರಾತ್ರಿಯನ್ನು ಎಂತಹ ಜಾಗದಲ್ಲಿ ಕಳೆದಿದ್ದೇವೆ ಎಂದು ದಿಗಿಲಾಯ್ತು. ರಾತ್ರಿ ಈ ಜಾಗವನ್ನು ಆರಿಸಿಕೊಂಡಾಗ ಹತ್ತಿರದಲ್ಲಿ ಯಾವುದೇ ನೀರಿನ ಒರತೆಗಳಿಲ್ಲ, ಆದ್ದರಿಂದ ಕಾಡು ಪ್ರಾಣಿಗಳು ಈ ಕಡೆ ಬರುವುದು ಕಡಿಮೆಯೇ ಎಂದು ಕೊಂಡಿದ್ದೆವು. ಆದರೆ ನಮ್ಮ ಎಣಿಕೆ ತಪ್ಪಾಗುವಂತೆ ಹತ್ತಿರದಲೇ ನೀರು ಹರಿಯುತ್ತಿದೆ. ಸದ್ದಿಲದೆ ಹರಿಯುತ್ತಿದ್ದರಿಂದ ಇದರ ಇರುಹು ನಮಗೆ ತಿಳಿಯದಾಗಿತ್ತು. ನೀರಿನ ಹತ್ತಿರ ಹೋದಾಗ ಗೊರಸುಗಳು ಕೆಸರಿಲ್ಲಿ ಹೂತು ಅಚ್ಚುಗಳಾಗಿದ್ದು ಕಾಣಿಸಿತು. ಆ ಅಚ್ಚುಗಳಲ್ಲಿ ನೀರು ಆಗತಾನೆ ತುಂಬುತ್ತಿತ್ತು. ಇವು ದನ ಇಲ್ಲವೇ ಎಮ್ಮೆಗಳ ಕಾಲಿನ ಗೊರಸುಗಳೆಂದು ನೋಡಿದ ಕೂಡಲೇ ಹೇಳಬಹುದಿತ್ತು. 'ನೀರು ಹತ್ತಿರ ಇದ್ದರೂ ಸಧ್ಯ ಕಾಡಿನ ಯಾವುದೇ ಬೇಡದ ಅಥಿಥೇಯರ ಭೇಟಿಯಾಗಲಿಲ್ಲ ಎಂದೆ' ಎಲ್ಲಾ ತಲೆಯಾಡಿಸಿದರು. ಹರಿಯುತ್ತಿದ್ದ ಆ ತೊರೆಯಲ್ಲಿ ಯಾರು ಯಾರು ಏನೇನು ತೊಳಕೊಳ್ಳ ಬೇಕು ಎಂದುಕೊಂಡರೂ ಅದನ್ನೆಲ್ಲಾ ತೊಳಕೊಂಡು ಸಜ್ಜಾದರು. ಹಿಂದಿನ ದಿನ ಅರಿಷಿನ ಗುಂಡಿಯಲ್ಲಿ ಮಿಂದಾದಮೇಲೆ ಚಂದ್ರ, ಅಶೋಕ, ರಾಘವೇಂದ್ರ, ಜಯಂತ, ಹರೀಶ ಇವರೆಲ್ಲಾ ಸೌಂದರ್ಯ ಸಾಧನಗಳನ್ನ ಹಾಕಿಕೊಳ್ಳುತಿದ್ದರು. ಇದನ್ನ ನೋಡಿ 'ಏನ್ರೋ ಇಲ್ಲೇನು ಯಾವದಾದರು ಕಾಡುಪಾಪಕ್ಕೆ ಲೈನ್ ಹೋಡಿಯೋ ಪ್ಲಾನ್ ಹಾಕಿದಿರೇನ್ರೋ?' ಎಂದು ಕೇಳಿದ್ದನ್ನ ಜ್ನಾಪಿಸಿಕೊಂಡೆ. ಇವತ್ತು ಯಾರಿಗೂ ಬ್ರಿಲ್ ಕ್ರೀಮಾಗಲಿ ಅಥವ ಇನ್ನೊಂದಾಗಲಿ ಹಚ್ಚುವುದು ಬೇಡಾಗಿತ್ತು. ಅಲ್ಲಿ ಹರಿಯುತ್ತಿದ್ದ ನೀರುನ್ನು ಬಾಟಲಿಗಳಲ್ಲಿ ತುಂಬಿಸಿಕೊಂಡು ಹೋಗಿ ಬೆಂಕಿ ಆರಿಸತೊಡಗಿದೆವು. ಬೆಂಕಿ ಪೂರ್ತಿಯಾಗಿ ನಂದಿ ಬೂದಿಮಾತ್ರ ಉಳಿಯಿತು. ಆರಿದ್ದ ಕೆಂಡ ಮತ್ತು ಬೂದಿಯಮೇಲೆ ಮಣ್ಣು ಸುರಿದು ಅದು ಮತ್ತೆ ಹತ್ತಿಕೊಳ್ಳುವುದಿಲ್ಲವೆಂದು ಖಾತ್ರಿಮಾಡಿಕೊಂಡೆವು.

ಸಮಯ ಬೆಳಗಿನ ಏಳು ಗಂಟೆಯಾಗುತ್ತಿತ್ತು, ಇಲ್ಲಿ ಇದ್ದವರೆಲ್ಲಾ ಹೊರಡಲು ತಯಾರಾಗಿದ್ದರು ಆದರೆ ಮುಂದೆ ದಾರಿ ಹುಡುಕುತ್ತೇವೆಂದು ಹೋಗಿದ್ದ ಮೂವರು ಇನ್ನೂ ಹಿಂದಿರುಗಿರಲಿಲ್ಲ. ಅವರು ಹೋಗಿ ಆಗಲೇ ಒಂದು ಗಂಟೆಗೂ ಮೇಲಾಗಿತ್ತು. ೧೨ ಗಂಟೆಗಳಷ್ಟು ಕಾಲ ನೆಡೆಯಬೇಕೆಂದು ತಿಳಿದಿದ್ದರಿಂದ ತಡವಾಗಿ ಹೊರಟರೆ ಮತ್ತೆ ಸಂಜೆಕತ್ತಲಲ್ಲಿ ನೆಡೆಯ ಬೇಕಾಗುತ್ತಿತ್ತು. ತಿಳಿದೂ ತಿಳಿದೂ ತಡಮಾಡುತ್ತಿದ್ದ ಮೂವರ ಮೇಲೂ, ಕಾಯುತ್ತಾ ಕೂತಿದ್ದ ನಮಗೆಲ್ಲಾ ಅಸಮಾಧಾನವಾಗಿತ್ತು. ಜಗದೀಶ, ಹರೀಶ ಮತ್ತು ಚಂದ್ರ ಮಹೇಶರು ೭-೩೦ರ ಸುಮಾರಿಗೆ ಹಿಂತಿರುಗಿದರು. ಬಂದವರೇ -ಈ ರಸ್ತೆ ಮುಂದೆ ಹೋಗಿ ಎಲ್ಲೂ ಟಾರ್ ರಸ್ತೆ ಕೂಡಿಕೊಳ್ಳುವ ಸೂಚನೆಗಳು ನಮಗೆ ಸಿಗಲಿಲ್ಲ. ಒಂದು ಜಾಗದಲ್ಲಿ ಮೊಬೈಲ್ ಸಿಗ್ನಲ್ ಸಿಕ್ಕಿತ್ತು, ನಾವು ಅಲ್ಲಿಂದ ಭಟ್ಟರ ಮನೆಗೆ ಫೋನಾಯಿಸಿದ್ವಿ, ಭಟ್ಟರಿಗೆ ನಾವು ಇರ್‍ಓ ಜಾಗದ ಸುಳಿವು ಕೊಡೋಕೆ ಪ್ರಯತ್ನಿಸಿದ್ವಿ, ಆದರೆ ಅವರಿಗೆ ನಾವು ಎಲ್ಲಿದ್ದೇವೆ ಅಂತ ಹೇಳೋಕೆ ಆಗಲಿಲ್ಲ. ಅವರು 'ನೀವು ನೆನ್ನೆಯಿಂದ ಬಂದ ದಾರಿ ನಿಮಗೆ ಚೆನ್ನಾಗಿ ಗುರುತಿದಿಯಾ?' ಎಂದು ಕೇಳಿದರು, ನಾವು ಹೂಂಗುಟ್ಟಿದ್ವಿ. 'ಸರಿ ಹಾಗಿದ್ರೆ ನೀವುಗಳು ಅದೇ ದಾರಿಯಲ್ಲಿ ವಾಪಸ್ಸು ಬರೋದು ಬೆಸ್ಟ್, ಮತ್ತೆ ಅಲ್ಲಿ ಇಲ್ಲಿ ದಾರಿ ಹುಡುಕೋದಿಕ್ಕೆ ಹೋಗಬೇಡಿ ನೆನ್ನೆಯಿಂದ ಬಂದ ದಾರಿಯಲ್ಲೇ ಬಂದು ಕೊಲ್ಲೂರಿಗೆ ಹೋಗೋ ಟಾರ್ ರಸ್ತೆ ಸೇರಿಕೊಳ್ಳಿ' ಅಂತ ಹೇಳಿದ್ರು- ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು. ಸಧ್ಯ ಇವರು ವಾಪಸ್ ಬಂದರಲ್ಲ ಎಂದು ನಿಟ್ಟುಸಿರು ಬಿಟ್ಟು, ಇಲ್ಲೇ ಪಕ್ಕದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮುಗಿಸಿಕೊಳ್ಳಿ ಎಂದೆವು.

ಈ ಮೂವರು ಸಜ್ಜಾಗುವವರೆಗೆ ಮತ್ತೆ ಇಲ್ಲೇ ಕಾದು ಸಮಯ ಹಾಳು ಮಾಡುವುದು ಬೇಡ ಬಿಸಿಲು ಏರುವುದರೊಳಗೆ ಆದಷ್ಟು ದೂರ ನೆಡೆದು ಬಿಡೋಣ ಎಂದು ಕೊಂಡು, ಈ ಮೂವರಿಗೂ ಹಿಂದಿನಿಂದ ನಮ್ಮನ್ನು ಕೂಡಿಕೊಳ್ಳಲು ಹೇಳಿ ಉಳಿದವರು ನೆನ್ನೆ ಬಂದಿದ್ದ ದಾರಿಯನ್ನು ಹಿಡಿದು ವಾಪಸ್ ಹೊರಟೆವು.

1 comment:

Harisha - ಹರೀಶ said...

ಛೆ! ಅಷ್ಟು ದೂರ ನಡೆದು ಮತ್ತೆ ಹಿಂದಿರುಗಿ ಹೋಗುವುದೆ?

ಕೊಡಚಾದ್ರಿಗೆ ಹೋಗಲೇ ಇಲ್ಲವೆ?