Thursday 3 January, 2008

ಚಿಕ್ಕ ಊರಿಗೆ ಹೊರಟ


ಚಿತ್ರ: ನಮ್ಮೂರಲ್ಲಿ ಓಡಾಡೋ ಖಲೀಲ್ ಬಸ್ಸಲ್ಲಿ ಹಾಕಿದ್ದ ಫೋಟೋ

ವಿಶಾಲಾಕ್ಷಮ್ಮನವರು ಚಿಕ್ಕನನ್ನು ಒಬ್ಬಂಟಿಯಾಗಿ ಯಾವ ಊರಿಗೂ ಕಳಿಸಿರಲಿಲ್ಲ. ಒಬ್ಬಂಟಿಯಿರಲಿ ತಮ್ಮೊಟ್ಟಿಗೆ ಯಾವುದೇ ಮದುವೆ, ನಾಮಕರಣಗಳಿಗೆ ನೆಂಟರ ಮನೆಗೆ ಕರೆದುಕೊಂಡು ಹೋಗಿದ್ದರೂ ತಮ್ಮೊಡನೆಯೇ ಹಿಂದಕ್ಕೆ ಕರೆದುಕೊಂಡು ಬರುತ್ತಿದ್ದರು. ನೆಂಟರ ಮನೆಗಳಲ್ಲಿ ತನ್ನ ಓರಗೆಯವರೊಂದಿಗೆ ಆಡುತಿದ್ದ ಆಟಗಳನ್ನು ಅರ್ಧಕ್ಕೇ ಬಿಟ್ಟು ಹೋರಡುವಾಗಲಂತೂ ಚಿಕ್ಕನಿಗೆ ಜೀವವೇ ಹೋದಂತಾದರೂ ಅಮ್ಮನ ಹಿಂದೆ ಹೊರಡದೆ ಬೇರೆಯ ದಾರಿಯಿರುತ್ತಿರಲಿಲ್ಲ. ಆದರೆ ಈ ಬಾರಿ ಒಬ್ಬನೇ ದೊಡ್ಡಮ್ಮನ ಮನೆಗೆ ಹೊರಟಿದ್ದರಿಂದ ತಾನೂ ದೊಡ್ಡವನಾದೆನೆಂಬ ವೀರತ್ವದ ಭಾವ ಚಿಕ್ಕನನ್ನು ಆವರಿಸಿಕೊಂಡಿತ್ತು.

ಕಚೇರಿಗೆ ಹೊರಟಿದ್ದ ಚಿಕ್ಕನ ಅಪ್ಪ ದಾರಿಯಲ್ಲಿ ಇವನನ್ನು ಬಸ್ಸಿನಲ್ಲಿ ಕೂರಿಸಿ ಡ್ರೈವರ್ ರುದ್ರಯ್ಯನಿಗೆ ಹೇಳಿಹೋಗುವವರಿದ್ದರು. ಇವರು ಬಸ್ಟ್ಯಾಂಡಿಗೆ ಹೋಗುವ ಹೊತ್ತಿಗೆ ಸರಿಯಾಗಿ ರುದ್ರಯ್ಯನ ವಿರೂಪಾಕ್ಷ ಬಸ್ಸು ಬಂದಿತು. ಚಿಕ್ಕನನ್ನು ಬಸ್ಸಿನಲ್ಲಿ ಕೂರಿಸಿ ರುದ್ರಯ್ಯನಿಗೆ "ಇವನ ದೊಡ್ಡಪ್ಪಬಂದು ಇಳಿಸಿಕೊಳ್ಳುತ್ತಾರೆ" ಎಂದು ಹೇಳಿ, ಚಿಕ್ಕನಿಗ ಟಾಟಾ ಮಾಡಿ ಹೋದರು. ಹೋದಸಾರಿ ಊರಿನಲ್ಲಿ ದೊಡ್ದಮ್ಮನ ಮಕ್ಕಳೊಂದಿಗೆ ಬಾಡಿಗೆ ಸೈಕಲ್ಲಿನಲ್ಲಿ ಮಾವಿನ ತೋಪಿಗೆ ಹೋಗಿದ್ದನ್ನು, ವಾಪಸ್ಸು ಬಂದಾಗ ಅಮ್ಮ ಝಾಡಿಸಿದ್ದನ್ನೂ ಜ್ಞಾಪಿಸಿಕೊಂಡ. ಈ ಸಾರಿ ಅಮ್ಮ ಇಲ್ಲದಿದ್ದರಿಂದ ಮಾವಿನ ತೋಪಿನಲ್ಲಿ ಪೂರ್ತಿದಿನ ಕಳೆಯಬೇಕೆಂದುಕೊಂಡ.

"ಈಶ, ಹತ್ತಲಾ ಬೇಗ, ಮೂರ್ ಜನ ಕೂರೋ ಸೀಟ್ ಮ್ಯಾಗೆ ಟವೆಲ್ ಪೂರ್ತಿ ಹಳ್ಡು" ಎಂದು ಒಬ್ಬಳು ತಾಯಿ, ಜನಗಳ ಮಧ್ಯೆ ತೂರಿ ಸೀಟು ಮಾಡಲು ತನ್ನ ಮಗನನ್ನು ಪ್ರಚೋದಿಸುತ್ತಿದ್ದಳು. ಡ್ರೈವರ್ ರುದ್ರಯ್ಯನ ಕಡೆಯಿಂದ ಚಿಕ್ಕನಿಗೆ ಒಂದು ಸೀಟು ಸಿಕ್ಕಿತು. ಈಶ ಹಿಡಿದ್ದಿದ್ದ ಸೀಟಿನ ಅಡಿಯಲ್ಲಿ ಅವನಮ್ಮ ಸಾಮಾನುಗಳನ್ನು ತುಂಬಿಸಿದಳು. ಸೀಟು ಸಿಗದವರು ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ಹೇಳಿದ್ದಕ್ಕೆ ಅವರೀಗೂ ಅರ್ಧ ಟಿಕೇಕು ಮಾಡಿಸುವುದಾಗಿ ವಾದಮಾಡಿ ಯಾರಿಗೂ ಸೀಟು ಬಿಡಬಾರದೆಂದು ಈಶನಿಗೆ ಹೇಳಿದಳು. ಅವಳೊಡನೆ ವಾದ ಮಾಡಲಾಗದವರು ಗೊಣಗಿಕೊಂಡು ಸುಮ್ಮನಾದರು.

ಚಿಕ್ಕನಿಗಿಂತ ಸಣ್ಣವನಂತೆ ಕಾಣುತಿದ್ದ ಹುಡುಗನೊಬ್ಬ ಒಂದು ನಾಯಿಮರಿಯನ್ನು ಬಸ್ಸಿಗೆ ಹತ್ತಿಸಿ ಅದರ ಕುತ್ತಿಗೆಗೆ ಕಟ್ಟಿದ್ದ ಹುರಿಯನ್ನು ಭದ್ರವಾಗಿ ಹಿಡಿದು ನಿಂತಿದ್ದ.

ಬಿಳಿ ಪಂಚೆ, ಬಿಳಿ ಶರಟು, ಹಸಿರು ಟವೆಲ್ ಹೊದ್ದ ಯಜಮಾನರೊಬ್ಬರು ನಿಧಾನವಾಗಿ ಬಸ್ಸುಹತ್ತಿ ಯಾವುದಾದರೂ ಸೀಟಿದಿಯಾ ಎಂದು ಸುತ್ತಲೂ ಕಣ್ಣಾಡಿಸಿದರು. ಮುಂದಿನಿಂದ ಮೂರನೇ ಸೀಟಿನಲ್ಲಿ ಇವರಂತೆಯೇ ಹಸಿರು ಟವೆಲ್ ಹೊದ್ದಿದ್ದವನೋಬ್ಬನನ್ನು ನೋಡಿ
"ನಂಟ, ಏನೋ ಗಾಡನೇ ಹತ್ತಿ ಸೀಟ್ ಹಿಡಿದಿಯಾ, ನಂಗು ಒಂದು ಸೀಟ್ ಮಾಡದಲ್ಲೇನೋ" ಎಂದರು.
"ಸಂತೆ ಮುಗಿಸಿಕೊಂಡು ನೆನ್ನೆನೆ ಹೋಗಿರ್ತಿಯ ಅಂದುಕೊಂಡಿದ್ನಪ್ಪ. ಇನ್ನೂ ಇಲ್ಲೇ ಇದ್ದಿಯ ಅಂತ ನಂಗೇನು ಗೊತ್ತಿತ್ತು" ಎಂದು ರಾಗ ಎಳೆದ.
ಸೀಟಿ ಹೊಡೆಯುತ್ತಾ ಮೇಲೆ ಹತ್ತಿದ ಕಂಡಕ್ಟರ್ "ಮುಂದೆ ನಡಿರಿ ಪಂಚಾಯತಿನೆಲ್ಲಾ ಊರಿಗೆ ಹೊಗಿ ಮಾಡಿದ್ರಾಯಿತು" ಎಂದು ಒಳಗೆ ಕಳಿಸುತ್ತಾ ಇವರ ಮಾತುಗಳನ್ನು ತುಂಡರಿಸಿದ.
ಕಂಡಕ್ಟರನ ದೃಷ್ಟಿ ನಾಯಿಮರಿಯ ಮೇಲೆ ಬಿದ್ದಿತು. "ಯಾರುದ್ರಿ ಇದು ನಾಯಿಮರಿ" ಎಂದು ಅಬ್ಬರಿಸಿ "ನಿಂದೆನೋ?" ಎಂದು ಹುಡುಗನ ಕಡೆ ನೋಡಿದ.
"ಹೂ ಕಣ್ಣಣ್ಣ ನಂದೆಯ" ಎಂದ ಹುಡುಗ.
"ನಾಯಿ, ಕೋಳಿ, ಕುರಿನೆಲ್ಲ ಹತ್ತಿಸಲ್ಲ ಅಂತ ಗೊತ್ತಿಲ್ಲೇನೋ? ನಾಯಿ ತಗಂಡೋಗೋಹಂಗಿದ್ರೆ ಏಳ್ ಗಂಟೆ ಸಿದ್ರಾಮಕ್ಕ್ ಹೋಗು" ಎಂದು, ನಾಯಿ ಮತು ಹುಡುಗನನ್ನು ಇಳಿಸಲು ನೋಡಿದ.
"ಸುಂಕಿರಪ ಸಾಕು, ನಿನ್ ಬಸ್ಸೊಳಗೆ ಅರ್ದ ಗಂಟೆ ನಾಯಿಯಿದ್ರೆ ಏನು ಆಗಕಿಲ್ಲ. ನೋಡಕೆ ನಿನ್ಕಿಂತ ಅದೇ ಕ್ಲೀನಾಗಿ ಕಾಣ್ತಾಅಯ್ತಿ" ಎಂದು ಒಂದು ಮುದುಕಿ ಕಂಡಕ್ಟರಿಗೆ ತಗುಲಿಕೊಂಡಳು.
"ಓ ಭಾರಿ... ಅದು ಏನಾರ ಮಾಡಿಕೊಂಡ್ರೆ ನಿನ್ ಕೈಲೇ ಬಾಚುಸ್ತಿನಿ" ಎನ್ನುತ್ತಾ "ನಡಿರಿ ಮುಂದೆ" ಎನ್ನುತ್ತಾ ಒಳ ನಡೆದ.
ಚಿಕ್ಕ, ಊರಿಂದ ವಾಪಸ್ಸು ಬರುವಾಗ ಪಮ್ಮಿ ಮನೆಯಿಂದ ನಾಯಿಮರಿ ತರಬೇಕು ಎಂದು ಕೊಂಡಿದ್ದ. ಇವ್ರು ಬಸ್ಸಿಗೆ ಹತ್ತಿಸ್ದಿದ್ರೆ ಕಷ್ಟ, ದೊಡ್ಡಪ್ಪಂಗೆ ಹೇಳಿ ಡ್ರೈವರ್ ರುದ್ರಯ್ಯಂಗೆ ಹೇಳೋಕೆ ಹೇಳಬೇಕು ಎಂದು ಕೊಂಡ.

ಡ್ರೈವರ್ ರುದ್ರಯ್ಯನೂ ಬಸ್ಸು ಹತ್ತಿ, ಎರಡು ಸಾರಿ ಹಾರೆನ್ ಹೊಡೆದು, ಬಸ್ಸು ಸ್ಟಾರ್ಟ್ ಮಾಡಿದ. ನಿಧಾನವಾಗಿ ಬಸ್ಸು ಸರ್ಕಲ್ ಬಿಟ್ಟು ಕ್ಯಾಂಪಿನ ಕಡೆಗೆ ಹೊರಟಿತು.
ಟಿಕೇಟು ಮಾಡಿಕೊಂಡು ಕಂಡಕ್ಟರ್ ಈಶ, ಅವನಮ್ಮ ಕೂತಿದ್ದ ಸೀಟಿಗೆ ಬಂದ. "ಒಂದು ಫುಲ್, ಎಳ್ಡ್ ಆಫ್ ಎಂದು" ಈಶ ಮತ್ತು ಇನ್ನೋಬ್ಬ ಮಗನನು ತೋರಿಸಿದಳು.
"ಹೈಸ್ಕೂಲಿಗೆ ಹೋಗೋ ಹುಡುಗ್ರಿಗೆ ಫುಲ್ ಮಾಡಿಸ್ ಬೇಕು ಕಣಮ್ಮ" ಎಂದ ಕಂಡಕ್ಟರಿಗೆ, "ಸ್ಕೂಲ್ ಹೋಗ್ದೇ ಇರ್‍ಓ ಹುಡುಗ್ರಿಗೇನು ಪುಗ್ಸಟ್ಟೆ ಕರ್ಕೊಂಡು ಹೋಗ್ತಿಯಾ" ಎಂದು ಸವಾಲೆಸೆದಳು.
ಅಷ್ಟರಲ್ಲಿ ಬಸ್ಸು ಕ್ಯಾಂಪಿಗೆ ಬಂದಿದ್ದರಿಂದ ಹಾರನ್ ಮಾಡುತ್ತಾ ನಿಂತಿತು. ಓಡೊಡಿ ಬಸ್ಸು ಹತ್ತಿದ ಹುಡುಗನೋಬ್ಬ ಈಶ ಮತ್ತು ಅವರಮ್ಮನನ್ನು ನೋಡಿ "ಅತ್ತೆಮ್ಮ, ಅಮ್ಮ ಇನ್ನು ರೆಡಿಯಾಗಿಲ್ಲ ೧೦ ಗಂಟೆ ಬಸ್ಸಿಗೆ ಹೋಗೋದಂತೆ, ನೀನು ಇಳಿಬೇಕಂತೆ" ಎಂದು ಕೂಗಿ ಕೆಳಗಿಳಿದ. ಈ ತಾಯಿ ಅವಸರಮಾಡುತ್ತಾ ಈಶನಿಗೆ ೨ ಬ್ಯಾಗು ಕೊಟ್ಟು ಉಳಿದ ಬ್ಯಾಗುಗಳನ್ನು ಹಿಡಿದು ಇನ್ನೊಬ್ಬ ಮಗನನ್ನು ತಳ್ಳಿಕೊಂದು ಹತ್ತುತ್ತಿರುವವರಿಗೆ ಎದುರಾಗಿ ಇಳಿಯತೊಡಗಿದಳು. "ಸರ್ಕಲ್ಲಿಂದ ಕ್ಯಾಂಪಿಗೆ ಬರೋಕೆ ಇಷ್ಟೋಂದು ರಂಪ ಮಾಡಿದ ನೀನು, ಒಬ್ಬೊಬ್ಬರಿಗೆ ಎರೆಡೆರಡು ರುಪಾಯಿ ತೆಗಿ" ಎಂದ ಕಂಡಕ್ಟರನಿಗೆ ೫ ರೂಪಾಯಿ ಕೊಡುತ್ತಾ "ನೀನೆ ಇನ್ನು ೧ ರುಪಾಯಿ ಚಿಲ್ಲರೆ ಕೊಡಬೇಕು" ಎಂದಳು. "ಇನ್ನೇನು ಬ್ಯಾಡವೆ?" ಎಂದು ಚಿಲ್ಲರೆ ಕೊಡದೆ ರೈಟ್ ಹೇಳಿ "ರುದ್ರಣ್ಣ, ಸರ್ಕಲ್ಲಿಂದ ಕ್ಯಾಂಪಿಗೆ ಯಾರುನ್ನೂ ಹತ್ತಿಸೋದು ಬ್ಯಾಡಕಣ್ಣಣ್ಣ ಇನ್ನ್ ಮೇಲೆ" ಎನ್ನುತ್ತ ಟಿಕೇಟ್ ಮಾಡುತ್ತಾ ಮುಂದೆ ಹೋದನು.

ಕಂಡಕ್ಟರ್ ಹಸಿರು ಟವೆಲ್ ಯಜಮಾನರ ಬಳಿ ಬಂದು ಟಿಕೆಟ್, ಟಿಕೆಟ್ ಎಂದಾಗ "ನಂಟ ನಂದೂ ತಗಂಡಿದಿಯ ಅಲ್ಲೇನೋ?" ಎಂದು ಖಾತ್ರಿಯಾಗಿ ಕುಳಿತಿದ್ದ ಹಸಿರು ಟವೆಲ್ಲಿನವರ ಕಡೆಗೆ ನೋಡಿದರು, "ಯಾಕಪ್ಪ? ನೀನು ರಾತ್ರೆಲ್ಲ ಆಟ ಆಡಿ ದುಡ್ಡು ಕಳಕಂಡು ಬಂದಿದಿಯಾ ಅಂತ ನನಗೇನು ಗೊತ್ತಾಗಬೇಕು" ಎಂದು ತಣ್ಣಗೆ ಮರ್ಯಾದೆ ತೆಗೆಯಲು ಶುರು ಮಾಡಿದ್ದರಿಂದ ಗೊಣಗಿಕೊಳ್ಳುತ್ತಾ ಟಿಕೇಟಿಗೆ ದುಡ್ಡು ಕೊಡತೊಡಗಿದರು.

"ದೇವರಳ್ಳಿಗೆ ನಾಕುವರೆಗೆ ಕಮ್ಮಿ ಇಲ್ಲ... ಸರಿಯಾಗಿ ಕೊಡು ಇದೇನು ಸಂತೆ ವ್ಯಾಪಾರ ಕೆಟ್ಟೋತೆ? " ಎಂದು ಕಂಡಕ್ಟರ್ ಒಂದು ಮುದುಕಿಯ ಮೇಲೆ ರೇಗತೊಡಗಿದಾದ ಚಿಕ್ಕನ ಗಮನ ಆ ಕಡೆಗೆ ಹರಿಯಿತು. "ಸುಂಕೆ ಇಟ್ಟ್ಗಳಪ್ಪ ಒಂದು ರುಪಾಯಗೆ ಯಾರು ಎನ್ ಮನೆ ಕಟ್ಟಿ ಮದುವೆ ಮಾಡಕಿಲ್ಲ" ಎಂದಳು ಘಾಟಿ ಮುದುಕಿ.
"ಸಾರಿಯಾಗಿ ದುಡ್ಡು ತೆಗೆ, ಇಲ್ಲಾಂದ್ರೆ ಇಲ್ಲೇ ಇಳಿಸಿ ಹೋಗ್ತಿನಿ ನೋಡು" ಎಂದ ಕಂಡಕ್ಟರ್ ಎಂದರೂ ಮುದುಕಿ ಬಗ್ಗುವಂತೆ ಕಾಣಲಿಲ್ಲ. "ರುದ್ರಣ್ಣ ಗಾಡಿ ಸೈಡಿಗೆ ನಿಲ್ಲಿಸು ಈವಮ್ಮನ್ನ ಇಲ್ಲೇ ಇಳಿಸಿ ಹೋಗೋಣ... ಇವರತ್ರ ಯಾವನ್ ಬಡ್ಕ್ಂತನೆ" ಎಂದಿದ್ದಕ್ಕೆ, "ತಗಳೋ ಮಾರಯ, ಒಂದ್ ರುಪಾಯಿ ಮಕಾನೆ ಕಂಡಿಲ್ದಂಗೆ ಆಡ್ತನೆ ಇವನು" ಎಂದು ತನ್ನ ಎಲೆ ಚೀಲದಿಂದ ಒಂದು ರೂಪಾಯಿ ತೆಗೆದು ಕುಕ್ಕಿದಳು.

ಇಷ್ಟರಲ್ಲಿ ಹಿಂದಿನ ಬಾಗಿಲಿನ ಬಳಿ ನೆಡೆಯುತ್ತಿದ್ದ ಕುತೂಹಲಕಾರಿ ಮಾತುಕತೆಗಳ ಕಡೆಗೆ ಚಿಕ್ಕನ ಕಿವಿ ತಿರುಗಿದವು
ಒಂದು ಧ್ವನಿ "ಲೋ ಲೌಡೆ!! ಆವಾಗಿಂದ ಕಾಣ್ದಂಗೆ ಎಲ್ಲಿ ನಿಂತಿದ್ದೆ?" ಎಂದರೆ, "ಓ ನೀನು, ಏನ್ ಹೇಳಪ್ಪ" ಎಂದು ಇನ್ನೊಂದು ಧ್ವನಿ ಉತ್ತರಿಸಿತು.
"ನಾಳೆ ಗಿರೀಲಿ ನನ್ನ ಮದುವೆ, ಬರಬೇಕು ನೀನು"
"ಏ ಇದೇನೋ ಇದು ಇದ್ದುಕಿದ್ದಂಗೆ?"
"ಯಾಕೆ ನಂಗೇನು ಮೀಸೆ ಬಂದಿಲ್ವ, ಇಲ್ಲ ತೊಡೆ ಬಲ್ತಿಲ್ವ?"
"ಹಂಗಲ್ಲ ಕಣಲೆ, ಸಡನ್ ಆಗಿ ಹೇಳ್ತಿದಿಯಲ್ಲ ಅದುಕ್ಕೆ ಕೇಳಿದ್ದು"

"ದೇವರಳ್ಳಿ, ದೇವರಳ್ಳಿ ಯಾರ್ರಿ? ಇಳಿಯವ್ರು ಬರ್ರೀ ಬೇಗ" ಎಂದು ಕಂಡಕ್ಟರ್ ಕೂಗಿದಾಗ ಮದುವೆಗೆ ಕರೆಯುತ್ತಿದ್ದ ಮದಲಿಂಗ "ಮರಿದಲೆ ಬರಬೇಕಲೇ" ಎಂದು ಹೇಳಿ ಇಳಿದು ಹೋದ.

"ರೈಟ್ ರೈಟ್" ಎಂದೊಡನೆ ಬಸ್ಸು ಮುಂದಕ್ಕೆ ಹೊರಟಿತು, ಹಿಂದಿನ ಬಾಗಿಲಿನ ಬಳಿಯಿಂದ ಧ್ವನಿಗಳು ಬರುತ್ತಲೇ ಇದ್ದವು,
"ಮೂರು ಪ್ಯಾಕೆಟ್ ಹೊಡೆದ ಮೇಲೆ ನೆಟ್ಟಗೆ ನಿಂತ್ಗಳಕೆ ಬರಲ್ಲ ಇವ್ರಿಗೆಲ್ಲ ಮದುವೆ"
"ಬಿಡಲೆ, ಎಲ್ಲಾರಿಗೂ ಆಗ್ತಾಯ್ತಿ... ಇವ್ನಿಗೂ ಆಗ್ಲಿ... ನೀನು ಹೋಗಿ ಲಾಡ್ ತಿಂದ್ ಬಾ..."
"ಲಾಡ್ ಎಲ್ಲೆದು, ಪಾಯ್ಸ ಇದ್ದಾತು ಅಷ್ಟೆಯ"
"ಅಷ್ಟೆ ಅಂತಿಯ?"
"ಕಣಿ ಕೇಳು"

ಚಿಕ್ಕನಿಗಾಗಲೆ ಸಣ್ಣಗೆ ತೂಕಡಿಕೆ ಶುರುವಾಗಿದ್ದರಿಂದ, ಕಿಟಕಿಗೆ ಒರಗಿ ಕೊಂಡ.

1 comment:

raghavendra C.V. said...

Maga a kaleel transport photo mastu. Mathye Chicka yavaga urige hogthane??