Monday 23 July, 2007

ಚದುರಂಗ... ಇಲ್ಲ ರಣರಂಗ?

ಮಳೆಗಾಲದ ಒಂದು ಶನಿವಾರ. ಜುಲೈ ತಿಂಗಳು ಶುರುವಾದರೂ ಬೆಂಗಳೂರಿನಲ್ಲಿ ಮಳೆ ಸರಿಯಾಗಿ ಆಗಿಲ್ಲ. ಮೋಡಗಳ ಆಟ ದಿನವೂ ಇದ್ದದ್ದೆ, ಮಳೆ ಮಾತ್ರ ಇಲ್ಲ! ಬೆಳಗಿನ ಚುಮು ಚುಮು ಚಳಿಯಲ್ಲಿ ಹೊದ್ದು ಮಲಗಿದರೆ ಏಳುವುದೇ ಕಷ್ಟ, ಅದರಲ್ಲೂ ವೀಕೆಂಡ್ ಆದರಂತೂ ಮಲಗೋಕೆ ಯಾವ ಅಡ್ಡೀನು ಇರೊಲ್ಲ.
ಚೆನ್ನಾಗಿ ಮಲಗುವುದಕ್ಕೆ ರಂಗ ಸಜ್ಜಾಗಿತ್ತು. ಅಂತಹ ಶನಿವಾರದ ದಿನ ಬೆಳಿಗ್ಗೆ ಏಳಕ್ಕೇ ಫೊನಾಯಿಸಿದ ಶನಿರಾಯನಾರಪ್ಪ ಇದು ಎಂದು ಫೊನೆತ್ತಿದ್ದಾಗ, ದಿನದ ಪ್ಲಾನ್ ಕೇಳುತಿತ್ತು ಆ ತುದಿಯಲ್ಲಿ ಗೆಳೆಯನ ದ್ವನಿ. ಹಿಂದಿನ ದಿನ ಮೈಲ್ ಮಾಡಿ ಎಲ್ಲರಿಗೂ ಪ್ಲಾನ್ ಮಾಡೊಣ ಅಂದವನು ಇನ್ನೂ ಹಾಸಿಗೆ ಮೇಲೆ ಇದ್ದೆ. ಢಡಕ್ಕನೆ ಎದ್ದೆ, ೧೦ ಗಂಟೆಗೆ ಅವನ ಮನೆ ಹತ್ತಿರ ಸಿಗುತ್ತೇನೆ ಎಂದು ಹೇಳಿದೆ. ಚಿಕ್ಕನ ಗಾಡಿಯಲ್ಲಿ ಅರ್ದ ಬೆಂಗಳೂರು ನೊಡಲಿದ್ದೆವು ನಾವು. ಹತ್ತಕ್ಕೆ ನಮ್ಮ ಪ್ರಯಾಣ ಶುರುವಾದದ್ದು ವಿಜಯನಗರದಿಂದ. ಇಲ್ಲಿಂದ ಮಹಾಲಕ್ಷ್ಮೀ ಲೇಔಟಿನಲ್ಲಿ ಕರಿಯನ್ನು ಹತ್ತಿಸಿಕೊಂಡ್ವಿ. ಮುಂದೆ ಜೆ.ಸಿ.ನಗರದಲ್ಲಿ ಜಾನಕಿರಾಮ ಹತ್ತಿದಾಗ ಕಾರು ಪೂರ್ತಿಯಾಯಿತು.

ಹೆಬ್ಬಾಳದ ಜಾನಕಿರಾಮ ಕಳೆದವಾರ ತನ್ನ ೮೭ನೇ ಇಸವಿಯ ಯಮಹ ಬೈಕಿಗೆಂದು ಹೊಸ ಪೆಟ್ರೋಲ್ ಟ್ಯಾಂಕ್ ಕೊಂಡಿದ್ದ. ಶಿವಾಜಿ ನಗರದಲ್ಲಿ ೩೦೦ ರೂಪಾಯಿಗೆ ಕೊಂಡ ಟ್ಯಾಂಕಿಗೆ ಜೆ.ಸಿ.ನಗರದಲ್ಲಿ ೫೦೦ ರೂಪಾಯಿಯ ಬಣ್ಣ ಹೊಡೆಸುತ್ತಿದ್ದಕ್ಕೆ ಕರಿ ಅವನನ್ನು ಚೆನ್ನಾಗಿ ರೇಗಿಸುತಿದ್ದ. "ಏನೇ ಬಣ್ಣ ಹೊಡೆಸಿದರೂ ಮುದುಕಿಯಾದ ನಿನ್ನ ಬೈಕು ಹುಡುಗಿ ಆಗೊಲ್ಲ" ಎನ್ನುವುದು ಕರಿಯ ವಾದ. ಹೆಚ್ಚೆಸ್ಸಾರ್ ಲೇಔಟಿಗೆ ಹೊರಟಿದ್ದ ನಮಗೆ ಇವರಿಬ್ಬರ ಜಗಳದಿಂದಾಗಿ ಒಳ್ಳೆಯ ಟೈಮ್ ಪಾಸ್ ಆಗಿತ್ತು. ನಾವು ಜೆ.ಸಿ.ನಗರದಿಂದ ಹೆಚ್ಚೆಸ್ಸಾರ್ ಲೇಔಟಿಗೆ ಕ್ವೀನ್ಸ್ ರಸ್ತೆ, ಎಮ್.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೊರಮಂಗಲದ ಮೂಲಕ ಹಾದು ಹೊಗುವವರಿದ್ದೆವು.

ಎಲ್ಲೆಲ್ಲೂ ಟ್ರಾಫಿಕ್ ಇತ್ತು ಎಂದು ನಾನೇನು ಹೇಳ ಬೇಕಾಗಿಲ್ಲ. ಇದು ಇದ್ದದ್ದೇ, ಆದರೆ ನನ್ನ ಗಮನಕ್ಕೆ ಬಂದದ್ದು ಜನರ ತುರಾತುರಿ. ಯಾರೊಬ್ಬರೂ ಬೆರೆಯವರಿಗೆ ದಾರಿ ಬಿಟ್ಟು ಕೊಡರು. ರಸ್ತೆಯ ಮೇಲೆ ಒಂದೊಂದು ಇಂಚಿಗೂ ಜಗ್ಗಾಟ. ಎಲ್ಲರೂ ಯುದ್ಧದಲ್ಲಿನ ಸೈನಿಕರಂತೆ "holding the fort" ಅಂತ ಹೇಳುತ್ತಾರಲ್ಲ ಹಾಗೆ ಪ್ರತಿಯೊಂದು ಇಂಚನ್ನೂ ಬಿಟ್ಟು ಕೊಡದೆ ಮುನ್ನುಗ್ಗುವವರು.
ನಾವು ಹೊರಟಿದ್ದು ಹೆಚ್ಚೆಸ್ಸಾರಿಗಾದರೂ ನನ್ನ ಯೊಚನಾ ಲಹರಿ ಹೀಗೆ ಹೊರಟಿತ್ತು- ಇಡೀ ಟ್ರಾಫಿಕ್ ವ್ಯವಸ್ತೆಯನ್ನ ಯುದ್ದಕ್ಕೆ ಹೊಲಿಸಬಹುದು. ಬೈಕಿನವರು ಕಾಲಾಳುಗಳು -ಪದಾತಿದಳ ಅಂತಲೂ ಕರೆಯಬಹುದು. ಇವು ಎಲ್ಲಾ ಸಂದಿ ಗೊಂದಿಗಳಲ್ಲೂ ನುಗ್ಗುತ್ತವೆ, ಸಣ್ಣಪುಟ್ಟ ಗುಂಡಿಗಳನ್ನೆಲ್ಲಾ ಹಾರುತ್ತವೆ ಹಾಗು ಎಲ್ಲಾ ಸಿಗ್ನಲ್ ಗಳಲ್ಲೂ ಮುಂದಿನ ಸಾಲಿನಲ್ಲಿರುತ್ತವೆ. ಕಾಲ್ ಸೆಂಟರ್ ಕ್ಯಾಬ್ ಗಳದ್ದೇ ಒಂದು ಗುಂಪು ಇದೆ. ಟಾಟಾ ಸುಮೋ, ಕ್ವಾಲಿಸ್, ಟೆಂಪೊ ಟ್ರಾವೆಲ್ಲರ್ ಇವುಗಳನ್ನೆಲ್ಲ ಈ ಜಾತಿಗೆ ಸೇರಿಸ ಬಹುದು. ಕಾಲ್ ಸೆಂಟರ್ ಕ್ಯಾಬ್ ಮತ್ತು ಆಟೊಗಳು ಸೇರಿದರೆ ಅಶ್ವದಳ. ಇವು ಅಶ್ವದಳವೇ ಯಾಕೆ ಎಂದರೆ ರಸ್ತೆ ಮೇಲೆ ನೆಗೆಯುವ ಮತ್ತು ಕೆನೆಯುವ ಸಾಮರ್ಥ್ಯ ಇರುವುದು ಇವಕ್ಕೇ. ಇನ್ನು ಬಿ.ಎಮ್.ಟಿ.ಸಿ ಬಸ್ಸುಗಳಲ್ಲಿ ವೊಲ್ವೊ ಒಂದನ್ನ ಹೊರತುಪಡಿಸಿ ಉಳಿದೆಲ್ಲವನ್ನೂ ಒಂಟೆ ಸೈನ್ಯ ಎಂದು ಕರೆಯಬಹುದು. ಇವುಗಳು ಪೂರ್ತಿಯಾಗಿ ತುಂಬಿದ್ದಾಗ ಒಂದು ಕಡೆಗೆ ವಾಲಿಕೊಂಡು ಹೊಗೊ ದೃಶ್ಯ ಎಲ್ಲರಿಗೂ ಕಣ್ಣು ಕಟ್ಟಿದ ಹಾಗಿರಬೇಕು. ಭಾರದ ಸೆಳೆತಕ್ಕೆ ಚದುರಂಗದಾಟದಲ್ಲಿನ ಒಂಟೆಯ ನಡಿಗೆಯಂತೆಯೆ ಬಿ.ಎಮ್.ಟಿ.ಸಿ ಬಸ್ಸುಗಳ ನಡಿಗೆ ಒಂದು ದಿಕ್ಕಿಗೆ ವಾಲಿ ಕೊಂಡಿರುತ್ತದೆ. ರಸ್ತೆಯಲ್ಲಿ ಸುಂದರವಾಗಿ ಕಾಣೊ ಕಾರುಗಳು ಹೋಸ ಸಾರೋಟುಗಳಾದರೆ, ಹಳೆಯ ಮಾರುತಿ ಮತ್ತು ಫಿಯಟ್ ಕಾರುಗಳನ್ನ ಏನೇಂದು ಕರೆಯೊಣ? ಹಳೆಯ ಮತ್ತು ಹೊಸಬಗೆಯ ಲಾರಿಗಳೆಲ್ಲವೂ ಗಜದಳವಿದ್ದಂತೆ. ಈ ಟ್ರಾಫಿಕ್ ಸೈನ್ಯಕ್ಕೆ ಸೇನಾಧಿಪತಿ ಐರಾವತ. ಐರಾವತ - ವೊಲ್ವೊ ಬಸ್ಸು. ಈ ಬಸ್ಸಿನ ಗಾಂಭೀರ್ಯತೆ ಒಂದರಿಂದಲೇ ಇದಕ್ಕೆ ಸೇನಾಧಿಪತಿಯ ಸ್ಥಾನ ಕೊಡ ಬಹುದಾದರು ಇದರ ಗುಣಗಳು ಇನ್ನೂ ಇವೆ.

ಇದೆಲ್ಲಾ ಸೈನ್ಯವಾದರೆ ಯುದ್ದ ಎಲ್ಲಿ ಎನ್ನುವಿರ? ಯಾವುದೇ ನಾಲ್ಕು ರಸ್ತೆ ಕೂಡುವ ಜಾಗದಲ್ಲಿ ನೀವು ಯುದ್ದ ನೋಡ ಬಹುದು. ಸಿಗ್ನಲ್ ಹಾಳಾಗಿ ಪೋಲೀಸಿನವರೂ ಇಲ್ಲದಿದ್ದರೆ ಈ ಟ್ರಾಫಿಕ್ ಯುದ್ದವನ್ನು ಕುರುಕ್ಷೇತ್ರಕ್ಕೇ ಹೊಲಿಸಬಹುದು. ಸಿಲ್ಕ್ ಬೋರ್ಡ್, ನಾಗವರ ಸರ್ಕಲ್, ಮಾರತ ಹಳ್ಳಿ ಬ್ರಿಡ್ಜ್ ಹೀಗೆ ದಿನವೂ ಕುರುಕ್ಷೇತ್ರಗಳಾಗುವ ಜಾಗಗಳು ಬೆಂಗಳೂರಿನಲ್ಲಿ ಬಹಳಷ್ಟಿವೆ. ಪದಾತಿದಳವಾದ ಬೈಕು ಮತ್ತು ಅಶ್ವದಳ ಈ ಯುದ್ದದ್ದಲ್ಲಿ ಬಹು ಚಾಣಾಕ್ಷರು. ಆದರೂ ಸಾವು ನೋವುಗಳು ಹೆಚ್ಚಿಗೆ ಸಂಭವಿಸುವುದೂ ಈ ದಳದಲ್ಲೆ, ಅದರಲ್ಲೂ ಪದಾತಿದಳದಲ್ಲೇ ಹೆಚ್ಚು. -ಚಿಕ್ಕ ಧಢಕ್ಕನೆ ಬ್ರೇಕ್ ಹಾಕಿದಾಗ ನನ್ನ ಯೋಚನಾ ಲಹರಿಯಿಂದ ಹೊರಬಂದು ಇವನು ಬ್ರೇಕ್ ಹೊಡೆಯದಿದ್ದರೆ ಆಗುತಿದ್ದ ಅನಾಹುತದೆಡೆಗೆ ಮನ ಹರಿದಿತ್ತು.

1 comment:

Ashok said...

Kya miya,,salam alekum. kya ba tum loga...bahut ahcha baa tumara blog...dil kush hogaya baa....aisa hi likna...
........
........ Farah hain??? :-)