Tuesday 24 July, 2007

ಚಿಕ್ಕವನು

ಇವನ ಹೆಸರು ಜಯಂತ ಎಂದಿದ್ದರೂ ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವನಾಗಿದ್ದ ಕಾರಣ ಎಲ್ಲರೂ ಇವನನ್ನು ಚಿಕ್ಕವನೇ, ಚಿಕ್ಕವನೇ ಎಂದೇ ಕರೆಯುತಿದ್ದರು. ಬರು ಬರುತ್ತಾ ಚಿಕ್ಕವನಾದ ಜಯಂತನ ಹೆಸರು ಚಿಕ್ಕದಾಗುತ್ತಾ 'ಚಿಕ್ಕ' ಎನ್ನುವಲ್ಲಿಗೆ ನಿಂತಿತ್ತು. ಮಳೆಗಾಲವಾದ್ದರಿಂದ ಚಿಕ್ಕನ ಅಮ್ಮನಾದ ವಿಶಾಲಕ್ಷಮ್ಮನವರು ಇವನನ್ನು ಹೊರಗೆ ಆಡಲು ಹೊಗಲು ಬಿಡದೆ, ಓದುವುದಕ್ಕೆ ಕೂರಿಸಿದ್ದರು. ಚಿಕ್ಕ, ಗೆಳೆಯರೊಂದಿಗೆ ಹೊರಗೆ ಆಡಲು ಹೊದನೆಂದರೆ ಸಂಜೆ ಏಳರ ಮುಂಚೆ ತಿರುಗಿ ಬಂದವನಲ್ಲ. ಅದರಲ್ಲೂ ಮಳೆಯಿಂದಾಗಿ ತನ್ನ ಶನಿವಾರ ಮಧ್ಯಾಹ್ನದ ವಾಲಿಬಾಲ್ ಮ್ಯಾಚ್ ತಪಿದ್ದಕ್ಕೆ ಮಳೆಯ ಮೇಲೂ ಹಾಗೂ ಶಾಲೆಯಿಂದ ಬಂದು ಊಟವಾದೊಡನೆ ಓದಲು ಕೂರಿಸಿದ್ದ ಅಮ್ಮನ ಮೇಲೂ ಸಿಟ್ಟಾಗಿದ್ದ. ಚಿಕ್ಕ 'ಪುರದ ಪುಣ್ಯಂ ಪುರುಷ ರೂಪಿಂದೆ ಪೊಗುತಿದೆ' ಪದ್ಯ ಓದುತಿದ್ದಾಗ ಅಜ್ಜ, ಕಾಲೇಜಿಗೆ ಹೊಗುವ ತನ್ನ ಹಿರಿಯ ಮೊಮ್ಮಗನ ಕೈಯಲ್ಲಿ ತರಿಸಿಕೊಂಡು ಬಿ.ಪಿ.ಎಲ್ 2-ಇನ್-1 ನಲ್ಲಿ ಹಾಕಿದ್ದ ಶ್ರೀ. ಗುರುರಾಜಲು ನಾಯ್ಡುರವರ ಭೀಮ ಜರಾಸಂಧ ಹರಿಕಥೆ ಕಿವಿ ಮೇಲೆ ಬಿದ್ದಿತ್ತು. ಹರಿಕಥೆ ಕೇಳುತಿದ್ದ ಅಜ್ಜನೆಡೆಗೆ ಮೆಲ್ಲನೆ ಸರಿದ ಚಿಕ್ಕ, ಪದ್ಯ ಓದುತಿದ್ದಂತೆ ನಟಿಸುತಿದ್ದರೂ ಕಿವಿ ಮತ್ತು ಮನಸ್ಸೆಲ್ಲಾ ಭೀಮ ಜರಾಸಂದರ ಯುದ್ದದಲ್ಲೇ ಮುಳುಗಿ ಹೊಗಿದ್ದವು.

ಗುರುರಾಜುಲು ನಾಯ್ಡುರವರ ಕಂಠ ಸಿರಿಯಿಂದ ಜೊಗುಳದಂತೆ ಹರಿಯುತ್ತಿದ್ದ ಹರಿಕಥೆಯ ಮದ್ಯದಲ್ಲಿ, ಧುತ್ತನೆ ಜೋರಾದ ಹಿಮ್ಮೇಳದೊಂದಿಗೆ 'ಮೆರೆವ ಪುರದೊಳಗೆ ಪಿರಿಯವನೆನಿಸಿದ ಹರಿಯ ಮಹಿಮೆಯನು ಪಾಡಿ ಪೊಗಳಲು...' ಎಂದು ಶುರುವಾದ ಹಾಡಿಗೆ ಚಿಕ್ಕನು ಅಡುಗೆ ಮನೆಯಲ್ಲಿಟ್ಟ ಬಾಟಲಿಯಿಂದ ಕದ್ದು ಹಾರ್ಲಿಕ್ಸ್ ತಿನ್ನುತ್ತಿದ್ದಾಗ ಹಿಂದಿನಿಂದ ಅಮ್ಮನ ಧ್ವನಿ ಕೇಳಿದಾಗ ನಡುಗುವಂತೆ ನಡುಗಿದ. ಚಿಕ್ಕನು ನಡುಗಿದಾಗ ಅವನೆಡೆಗೆ ನೋಡಿದ ಅಜ್ಜ, ಚಿಕ್ಕನನ್ನು ಅವನೊಟ್ಟಿಗೆ ಮಂಚದ ಮೇಲೆ ಬಂದು ಕೂರುವಂತೆ ಸನ್ನೆ ಮಾಡಿ ಕರೆದ. ಪುರದ ಪುಣ್ಯವನ್ನು ಅಲ್ಲೇ ಬಿಟ್ಟ ಚಿಕ್ಕ, ಮೆಲ್ಲನೆ ಎದ್ದು ಅಜ್ಜನ ಶಾಲಿನೊಳಗೆ ತೂರಿಕೊಂಡ. ಕಿವಿಯೆಲ್ಲಾ ಹರಿಕಥೆಯ ಮೇಲಿದ್ದರೂ ದೃಷ್ಟಿ ಮಾತ್ರ ಅಮ್ಮ ಏಲ್ಲಿ ಬಂದು ಬಿಡುವಳೋ ಎಂಬ ಆತಂಕದಿಂದ ಬಾಗಿಲಿನ ಮೇಲೇ ನೆಟ್ಟಿದ್ದವು. ಗುರುರಾಜಲುರವರ ಸ್ವರದೊಳಗೆ ಲೀನವಾದ ಚಿಕ್ಕ ಅಮ್ಮನನ್ನಷ್ಟೇ ಅಲ್ಲದೇ ಪಕ್ಕದಲ್ಲಿದ್ದ ಅಜ್ಜನನ್ನೂ ಮರೆತಿದ್ದ.

ಯಾಂತ್ರಿಕವಾಗಿ ಬಾಗಿಲಿನೆಡೆಗೆ ನೆಟ್ಟಿದ್ದ ದೃಷ್ಟಿ ಈಗ ಗೊಡೆಯ ಮೇಲೆ ಮಳೆಯ ನೀರಿನಿಂದಾಗಿದ್ದ ಕಲೆಗಳೆಡೆಗೆ ಹೊರಳಿತ್ತು. ದಕ್ಷಿಣದ ಕಡೆಗಿದ್ದ ಗೋಡೆಗೆ ಒರಗಿ ಕುಳಿತಿದ್ದ ಚಿಕ್ಕನ ಎದುರಿಗೆ ಉತ್ತರಾಭಿಮುಖವಾಗಿ ಬಾಗಿಲಿದ್ದರೆ ಅದರ ಪಕ್ಕದಲ್ಲಿ ಪಶ್ಚಿಮಾಭಿಮುಖವಾಗಿ ಗೋಡೆ ಇತ್ತು. ತೀರ ಸಾಗರಗಳಿಂದ ಬಂದು ಅಪ್ಪಳಿಸುವ ಮಳೆಗೆ ಮೈಕೊಟ್ಟು ನೆನೆದು ಮತ್ತೆ ಬಿಸಿಲಲ್ಲಿ ಒಣಗಿ, ಕಳೆದ ಬೇಸಿಗೆಯಲ್ಲಷ್ಟೇ ಸುಣ್ಣ ಕಂಡಿದ್ದ ಗೋಡೆಯ ಮೇಲೆಲ್ಲಾ ಕಪ್ಪು ಕಲೆಗಳ ಚಿತ್ತಾರಗಳಾಗಿದ್ದವು. ಇವುಗಳನ್ನೇ ದಿಟ್ಟಿಸುತ್ತಿದ್ದ ಚಿಕ್ಕನಿಗೆ ಕೆಲವು ಕಲೆಗಳು ಹಾರುವ ಹಕ್ಕಿಗಳಂತೆ ಕಂಡರೆ ಕೆಲವು ಬಾಯಿ ತೆಗೆದ ಆಕಳಿನ ರುಂಡದಂತೆ ಕಂಡವು. ಕೆಲವಕ್ಕೆ ಕೊಂಬು ನೆಟ್ಟಗಿದ್ದರೆ ಕೆಲವಕ್ಕೆ ಗಿಡ್ಡ ಕೊಂಬು, ಇನ್ನೂ ಕೆಲವಕ್ಕೆ ಕೊಂಬೇ ಇಲ್ಲವೆಂದು ಗಮನಿಸಿದ. ಇವುಗಳ ಮೇಲೆಲ್ಲೋ ಒಂದು ಆಕೃತಿ ಕೊಳಲು ಹಿಡಿದು ದನ ಮೇಯಿಸುತ್ತಿರುವಂತೆ ಕಂಡಿತು. ಅವುಗಳ ಬದಿಯಲ್ಲೇ ಭೀಮ ಜರಾಸಂದರಂತೆ ಎರಡು ದೊಡ್ಡ ದೇಹಗಳು ಕಾಣಿಸಿದವು. ಅಜ್ಜನ 2-ಇನ್-1 ನಿಂದ ಹೊರಡುತಿದ್ದ ಹರಿಕಥೆ ಈಗ ಚಿಕ್ಕನಿಗೆ ತಮ್ಮ ಮನೆಯ ಗೋಡೆಯ ಮೇಲೆ ನಡೆಯುತ್ತಿರುವಂತೆ ಭಾಸವಾಗುತಿತ್ತು. ಗೋಡೆಯಿಂದ ಹೊರಬಂದ ಭೀಮ ಜರಾಸಂದರಿಬ್ಬರೂ ತಮ್ಮ ನಡುಮನೆಯಲ್ಲೇ ಮಲ್ಲಯುದ್ಧ ಮಾಡುತ್ತಿರುವಂತೆ ತೋರಿತು. ನೋಡು ನೋಡುತ್ತಿದ್ದಂತೆ ಭೀಮ ಜರಾಸಂದನನ್ನು ಇಬ್ಭಾಗವಾಗಿ ಸಿಗಿದು ಹಾಕಿ ಗೋಡೆಯೊಳಗಿದ್ದ ಕೃಷ್ಣನೆಡೆಗೆ ನೊಡಿದ. ಅಷ್ಟರಲ್ಲಿ ಇಬ್ಬಾಗವಾಗೊದ್ದ ಜರಾಸಂದನ ದೇಹ ಮತ್ತೆ ಕೂಡಿಕೊಳ್ಳುವುದನ್ನು ನೋಡತಿದ್ದ ಚಿಕ್ಕನು ಸಣ್ಣಗೆ ಬೆದರಿ ಅಜ್ಜನ ತೋಳಿನೊಳಗೆ ಕೈಹಾಕಿ ಗಟ್ಟಿಯಾಗಿ ಹಿಡಿದುಕೊಂಡ. ಕೃಷ್ಣನು ಧರ್ಬೆಯನ್ನು ಸಿಗಿದು ವಿರುದ್ಧ ದಿಕ್ಕಿಗೆ ಎಸೆದು ತೋರಿಸಿ ಕೊಟ್ಟಂತೆಯೇ ಭೀಮ ಜರಾಸಂದನನ್ನು ಸಿಗಿದು ದೇಹಗಳನ್ನು ವಿರುದ್ಧ ದಿಕ್ಕಿನಲ್ಲಿ ಎಸೆದ.

ಜರಾಸಂದನ ದೇಹಗಳು ವಿರುದ್ದ ದಿಕ್ಕಿನಿಂದ ಒಂದಕ್ಕೋಂದು ಹತ್ತಿರ ಬಂದು ಕೂಡಿಕೊಳ್ಳಲಾಗದೆ ಪ್ರಾಣವನ್ನು ಬಿಡುತ್ತಿರುವಾಗ ವಿಷಾಲಾಕ್ಷಮ್ಮನವರ ಆಗಮನವಾಯಿತು. ಮಗ ಓದುತ್ತಾ ಇದ್ದಾನೆ ಎಂದು ಭಾವಿಸಿ ಅವನಿಗೆ ತಿನ್ನಲು ಮರಳಿನಲ್ಲಿ ಹುರಿದ ಕಡಲೇ ಕಾಯಿ ತಂದ ವಿಷಾಲಾಕ್ಷಮ್ಮನವರು ಮಗ ಪುಸ್ತಕ ಕೆಳಗೆ ಬಿಟ್ಟು ಅಜ್ಜನೊಡನೆ ಬೆಚ್ಚಗೆ ಹರಿಕಥೆ ಕೇಳುತ್ತಿರುವುದನ್ನು ನೋಡಿ ಮಗನನ್ನು ಕಣ್ಣಿನಲ್ಲೇ ಗದರಿಕೊಂಡರು. ನಮ್ಮ ಚಿಕ್ಕನಿಗೆ ಅವನ ಅಜ್ಜನದೇ ಮುದ್ದು, ಹೊದಸಾರಿ ಇವರು ಚಿಕ್ಕನ ಪರೀಕ್ಷೆಯ ವೇಳೆಯಲ್ಲಿ ಯಾವಾಗಲೂ ಟಿ.ವಿ. ಹಾಕುತ್ತಿದ್ದುದರಿಂದಲೆ ಚಿಕ್ಕನಿಗೆ ಡಿಸ್ಟಿಂಕ್ಷನ್ ಬರಲಾಗಲಿಲ್ಲ ಎಂದು ಕರುಬಿದರು. ಅಜ್ಜನಿಗೆ ಏನೂ ಹೇಳಲಾಗದೆ ನಡುಮನೆಯಿಂದ ಜಗುಲಿಗೆ ನಡೆದು ಮನೆಯ ಮೈನ್ ಸ್ವಿಚ್ ಆರಿಸಿ ಬಿಟ್ಟರು. ಹರಿಕಥೆಯ ಮದ್ಯದಲ್ಲೇ ಕರೆಂಟ್ ಹೋದದ್ದರಿಂದ ಅಜ್ಜನೇ 'ಮಂಗಳವಾಗಲಿ ಸರ್ವರಿಗೆ ಶುಭಮಂಗಳವಾಗಲಿ ...' ಎಂದು ಮಂಗಳವಾಡಿ ಮುಗಿಸಿದರು.

No comments: