Monday 15 December, 2008
ಮುಕ್ತಿ ಹೊಳೆ
ತುಂಬಾ ದಿನಗಳಿಂದ ಬ್ರಹ್ಮಗಿರಿಗೆ ಹೋಗಬೇಕು ಅನ್ಕೊಂಡಿದ್ವಿ. ಈ ಸಾರಿ 15 ದಿನ ಮುಂಚಿತವಾಗಿ ಬ್ರಹ್ಮಗಿರಿಗೆ ಹೊಗೊ ವ್ಯವಸ್ತೆ ಮಾಡಿಕೊಂಡು ತಯಾರಾಗಿದ್ದೆವು. ಆದರೆ ಹೊರಡೋ 3 ದಿನಗಳ ಮೊದಲು ಬ್ರಹ್ಮಗಿರಿಗೆ ಫೋನಾಯಿಸಿದಾಗ "ಸಾರ್ ನೀವು ಮತ್ತೆ ಫೊನ್ ಮಾಡಲಿಲ್ಲವಲ್ಲ ಅದುಕ್ಕೆ ಬೇರೆಯವರಿಗೆ ಬುಕ್ಕಿಂಗ್ ಮಾಡಿದ್ದೀವಿ. ನೀವು ಮುಂದಿನ ವಾರ ಬನ್ನಿ" ಎಂದು ನಿರಾಯಸವಾಗಿ ಹೇಳಿ ನಮ್ಮ ಉತ್ಸಾಹಕ್ಕೆ ಕಲ್ಲೇಟು ಹಾಕಿದ್ದ ಅಲ್ಲಿನ ಅರಣ್ಯಾಧಿಕಾರಿ.
ಬರಗಾಲದಲ್ಲಿ ಅಧಿಕ ಮಾಸ - ನಾವು ಮೊದಲೇ 3 ತಿಂಗಳಿಂದ ಎಲ್ಲೂ ಹೊಗಿಲ್ಲ, ಹಾಗಾಗಿ ಈ ಮಾಸ್ಟರ್ ಪ್ಲಾನ್ ಹಾಕ್ಕಿದ್ರೆ ಇದೂ ಉಲ್ಟಾ ಹೊಡಿತಲಪ್ಪ. ಮುಂದೇನು ಅಂತ ಜಗದೀಶ ಮತ್ತು ಲವ್ಸ್ಯೂ ರಾಘವೇಂದ್ರನಿಗೆ ಫೋನ್ ಮಾಡಿ ನವೆಂಬರ್ 15-16 ತಾರಿಖು ಬಹಳ ಮುಂಚೆನೇ ಗೊತ್ತು ಮಾಡಿರೊದ್ರಿಂದ ಬೇರೆ ಎಲ್ಲಾದರೂ ಹೋಗೋಣ ಎಂದೆ. ಜಗದೀಶ ಮುಕ್ತಿ ಹೊಳೆಗೆ ಈ ಮುಂಚೆ ಒಂದು ಸಾರಿ ಹೊಗಿದ್ದರಿಂದ ಅಲ್ಲಿಗೆ ಹೋಗೋ ನಿರ್ಧಾರ ಮಾಡಿದೆವು.
ಆ ಬ್ಲಾಗು ಈ ಬ್ಲಾಗು ಓದಿ ಮುಕ್ತಿ ಹೊಳೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಎಲ್ಲಾ ಬ್ಲಾಗುಗಳಲ್ಲೂ, ದಾರಿ ಸಿಗದೆ ಕಳೆದು ಹೊಗೋ ಸಾಧ್ಯತೆಗಳು ಇದೆ ಸ್ವಲ್ಪ ಹುಷಾರು ಎಂದು ಎಚ್ಚರಿಸಿದ್ದರು. ಬ್ಲಾಗ್ ಬರೆದವರೆಲ್ಲಾ ಅಲ್ಲಿ ಉಳಿದುಕೊಳ್ಳೊಕೆ ಮಹದೇವ ನಾಯಕರ ಮನೆಗೆ ಹೊಗಿದ್ದರು. ಜಗದೀಶನೂ ಮುಕ್ತಿಹೊಳೆಗೆ ಹೋದಾಗ ಅಲ್ಲೇ ಉಳಿದಿದ್ದ ಆದರೆ ಅವರ ಫೋನ್ ನಂಬರ್ ಎಲ್ಲೂ ಸಿಗಲಿಲ್ಲ. ಹಾಗಾಗಿ ಮುಕ್ತಿಹೊಳೆ ಹೋಗುವ ಮೊದಲು ಮಹದೇವ ನಾಯಕರಿಗೆ ಫೋನಾಯಿಸಿ ನಮಗೆ ಗೈಡ್ ವ್ಯವಸ್ತೆ ಮಾಡಿಕೊಳ್ಳಲಾಗಿರಲಿಲ್ಲ. ಆರು ಜನ ಹೊರಡೋದು ಅಂತ ನಿರ್ಧಾರ ಆಗಿತ್ತು ಆದರೆ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಇನ್ನೂ 3 ಮೂರು ಜನ ಸೇರಿಕೊಂಡು ಒಂಬತ್ತು ಜನರಾದೆವು.
ನಾವು ಗೊತ್ತು ಮಾಡಿದ್ದ ಟೆಂಪೋ ಟ್ರಾವೆಲ್ಲರಿನಲ್ಲಿ ಬೆಂಗಳೂರು ಬಿಟ್ಟಾಗ ರಾತ್ರಿ 11 ಗಂಟೆ. ಮುಕ್ತಿಹೊಳೆ ಹೊನ್ನಾವರದ ಹತ್ತಿರ ಇದೆ. ಬೆಂಗಳೂರಿನಿಂದ ಹೊನ್ನಾವರ ಸುಮಾರು 450 ಕೀ.ಮೀ. ಮುಕ್ತಿಹೊಳೆ ತಲುಪಲು ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ (B H Road NH-206) ಹೊನ್ನಾವರದ ಹತ್ತಿರ ಇರುವ ಹಡಿನಬಾಳದಿಂದ ಬಲಕ್ಕೆ ತಿರುಗಬೇಕು. ಮೊದಲು ಗುಂಡಬಾಳ ಎನ್ನುವ ಊರು ಸಿಗುತ್ತದೆ. ಹಡಿನಬಾಳದಿಂದ ಸುಮಾರು 15 ಕೀ.ಮೀ. ದೂರದಲ್ಲಿ ಹಿರೇಬೈಲು ಎಂಬುವ ಊರಿದೆ. ಮಹದೇವ ನಾಯಕರ ಮನೆ ಇರುವುದು ಇಲ್ಲೇ. ಊರು ಅಂದಾಕ್ಷಣ ಬಯಲುಸೀಮೆಯ ಕಡೆಯ ಊರುಗಳನ್ನ ಕಲ್ಪಿಸಿಕೊಳ್ಳ ಬೇಡಿ. ಹಿರ್‍ಏಬೈಲಿನಲ್ಲಿ ನಮಗೆ ಕಾಣಿಸಿದ್ದು ಒಂದೇ ಮನೆ. ಹಿರೇಬೈಲು ತಲುಪಲು KSRTC ಬಸ್ಸುಗಳೂ ಇವೆ. ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಹಡಿನಬಾಳದಿಂದ ಒಂದು ಬಸ್ಸು ಹಿರೇಬೈಲಿಗೆ ಬರುತ್ತದೆ. ಮಳೆ ಇಲ್ಲದಿದ್ದರೆ ಮಾತ್ರ ಬಸ್ಸು ಹಿರೇಬೈಲಿಗೆ ಬರುತ್ತದೆ ಇಲ್ಲದಿದ್ದರೆ ಇಲ್ಲ. ಹಡಿನಬಾಳದಿಂದ ಹಿರೇಬೈಲಿಗೆ 15 ಕೀ.ಮೀ. ದಾರಿ ಸವೆಸಲು ನಮಗೆ ಒಂದು ಗಂಟೆಯೇ ಹಿಡಿಯಿತು. ನಾವು ಹಡಿನಬಾಳದಲ್ಲಿ ತಿಂಡಿ ತಿಂದು, ಅದಕ್ಕೂ ಮುಂಚೆ ಗೇರುಸೊಪ್ಪ ಜಲಪಾತದ ತಪ್ಪಲಿನಲ್ಲಿ ನಿತ್ಯಕರ್ಮಗಳನ್ನು ಮುಗಿಸಿ ಬಂದಿದ್ದೆವು. ನಾವುಗಳು ಈ ಕಾರಣಕ್ಕಾಗಿ ಗೇರುಸೊಪ್ಪಕೆ ಹೋಗಿದ್ದು ಇದು ಮೂರನೇ ಬಾರಿ.
ಮಚ್ಚೆ ಎಲ್ಲಿದೆ!? ತಂಡ ಮಹದೇವ ನಾಯಕರ ಮನೆ ತಲುಪಿದಾಗ ಬೆಳಗ್ಗೆ ಹನ್ನೊಂದು ಗಂಟೆಗಳಾಗಿದ್ದವು. ಮಹದೇವ ನಾಯಕರು ಹಾಗು ಅವರ ಮಗ ಮನೆಯಲ್ಲಿಯೇ ಇದ್ದರು. ನಾವು ಹೀಗೆ ಮುಕ್ತಿ ಹೊಳೆ ನೋಡಲು ಬಂದಿರುವುದಾಗಿ ತಿಳಿಸಿ, ಯಾರದರು ನಮಗೆ ಗೈಡ್ ಸಿಗುತ್ತಾರೆಯೇ ಎಂದು ವಿಚಾರಿಸಿದೆವು. ಮುಂಚಿತವಾಗಿ ತಿಳಿಸಿ ಬಂದಿದ್ದರೆ ವ್ಯವಸ್ತೆ ಮಾಡಬಹುದಿತ್ತು ಆದರೆ ಈಗ ಕಷ್ಟ ಎಂದರು. ನಮ್ಮ ಜಗದೀಶ ಈ ಮೊದಲು ಮುಕ್ತಿಹೊಳೆಗೆ ಹೋಗಿ ಬಂದಿದ್ದರಿಂದ ನಮಗೆ ಸ್ವಲ್ಪ ದಾರಿ ಹೇಳಿ ನಾವುಗಳೇ ಹೊಗುತ್ತೇವೆ ಎಂದೆವು. ಮಹದೇವ ನಾಯಕರು ಮತ್ತು ಅವರ ಮಗ ಮೊದಲು ಅನುಮಾನಿಸಿದರೂ ನಂತರ ಒಪ್ಪಿದರು. ಮುಕ್ತಿಹೊಳೆಗೆ ಹೋಗಲು ಮಹದೇವ ನಾಯಕರ ಮನೆಯಿಂದ ಹೊರಟು ಎದುರಿಗಿರುವ ಗುಡ್ಡದಲ್ಲಿ ಏರು ಮುಖವಾಗಿ ಹೋಗಬೇಕು. ನಂತರ ಒಂದು ಜಾಗದಲ್ಲಿ ಬಲಕ್ಕೆ ತಿರುಗಿ ಗುದ್ದಡ ಇನ್ನೊಂದು ಬದಿಗೆ ಇಳಿಯಬೇಕು. ಈ ಬಲತಿರುವನ್ನು ಗುರುತಿಸುವುದೇ ಅತ್ಯಂತ ಕಷ್ಟ. ಅಲ್ಲಿ ಯಾವುದೇ ದಾರಿ ಸೂಚಕಗಳಿಲ್ಲ. ಮುಂಚಿತವಾಗಿ ನೋಡಿದ್ದರೂ ಈ ತಿರುವನ್ನು ಗುರುತಿಸುವುದು ಕಷ್ಟವೇ. ಈ ಗುಡ್ಡವನ್ನು ಇಳಿದರೆ ಸಿಗುವ ಕಣಿವೆಯಲ್ಲಿ ಮುಕ್ತಿಹೊಳೆ ಹರಿಯುತ್ತದೆ. ಅಲ್ಲಿಂದ ಸುಮಾರು ಒಂದು ಗಂಟೆಗೂ ಮೀರಿ ನೀರಿನ ಹರಿವಿನ ವಿರುದ್ದವಾಗಿ ನೆಡೆದರೆ ಮುಕ್ತಿಹೊಳೆ ಜಲಪಾತ ಸಿಗುತ್ತದೆ.
ನಾವು ಮಹದೇವ ನಾಯಕರ ಮನೆ ಬಿಟ್ಟಾಗ ಸುಮಾರು 11.30. ಮಹದೇವ ನಾಯಕರ ಮನೆಯ ಹತ್ತಿರದಿಂದ ಹೊರಡುವ ಕಾಲು ದಾರಿಯಲ್ಲಿ ಹೊರಟೆವು. ಸುಮಾರು ಅರ್ಧ ಗಂಟೆಗೂ ಮೀರಿ ನೆಡೆದರೂ ನಾವುಗಳು ಬೆಟ್ಟವನ್ನು ಏರದೇ ಅದನ್ನು ಬಳಸಿ ಬರುತ್ತಿದ್ದೇವೆ ಅನ್ನಿಸುತಿತ್ತು. ದಾರಿಯಲ್ಲಿ ನಮಗೆ ಒಂದು ಮನೆ ಕಾಣಿಸಿತು. ಒಂದಿಬ್ಬರು ಒಳಗೆ ಹೋಗಿ ಮುಕ್ತಿಹೊಳೆಯ ದಾರಿ ಕೇಳಿಕೊಂಡು ಬಂದರು. ಬೆಟ್ಟದ ಮೇಲಕ್ಕೆ ಹತ್ತುವ ದಾರಿಯನ್ನು ನಾವುಗಳು ಈ ಹಿಂದೆಯೇ ಬಿಟ್ಟು ಬಂದಿರುವೆವು ಮತ್ತು ನಮ್ಮ ಎದುರಿಗಿರುವ ಏರು ರಸ್ತೆಯಲ್ಲಿ ಹೋದರೆ ದಾರಿ ಮುಂದೆ ಒಂದು ಕಡೆ ಕವಲಾಗುತ್ತದೆ ಅಲ್ಲಿ ಬಲಕ್ಕೆ ಹೋದರೆ ಮಹದೇವ ನಾಯಕರ ಮನೆಯಿಂದ ಮುಕ್ತಿಹೊಳೆಗೆ ಹೋಗುವ ಕಾಲು ದಾರಿ ಕೋಡಿಕೊಳ್ಳುತ್ತೇವೆ ಎಂದು ಆ ಮನೆಯಲ್ಲಿದ್ದವರು ತಿಳಿಸಿದ್ದರು. ನಾವು ನೆಡೆದ ಅರ್ಧ ಗಂಟೆಯ ದಾರಿಯು ಒಣಗಿದ ತರಗೆಲೆಗಳಿಂದ ಕೂಡಿತ್ತು. ನವೆಂಬರಿನ ಒಣಹವೆ ಎದ್ದು ಕಾಣುತಿತ್ತು. ಆದರೂ ನನಗೆ ಒಂದೆರೆದು ಜಿಗಣೆಗಳು ಅಮರಿಕೊಂಡಿದ್ದವು. ಒಂದು ಜಿಗಣೆಯಂತು ಕಾಲು ಬೆರಳಿನ ಸಂದಿಯಲ್ಲಿ ಕೂತು ಚೆನ್ನಾಗಿಯೇ ರಕ್ತ ಕುಡಿದಿತ್ತು. ಜಿಗಣೆಗಳು ಚಂದ್ರನಿಗೂ ಕಚ್ಚಿದ್ದವು. ನಾವಿಬ್ಬರು ಜಿಗಣೆಗಳನ್ನು ಕೀಳುವುದನ್ನು ಕಂಡು ಉಳಿದವರೂ ಒಮ್ಮೆ ತಮ್ಮ ಕೈ ಕಾಲುಗಳನ್ನು ನೋಡಿಕೊಂಡರು.
ಇಲ್ಲಿಂದ ಮುಂದೆ ಏರು ರಸ್ತೆಯಲ್ಲಿ ಒಂದೇ ಸಮನೆ ನೆಡೆಯತೊಡಗಿದೆವು. ಒಂದುಕಡೆ ದಾರಿ ಕವಲಾಯಿತು. ನಾವು ಬಲಗಡೆಗೆ ಹೊರಳಿಕೊಂಡೆವು. ಈ ದಾರಿ ಮುಂದೆ ಹೋಗಿ ಇನ್ನೊಂದು ಕಲ್ದಾರಿಯನ್ನು ಸೇರಿಕೊಂಡಿತು- ಇದೇ ಮಹದೇವ ನಾಯಕರ ಮನೆಯ ಕಡೆಯಿಂದ ಬರುವ ದಾರಿ. ಹೀಗೆ ಏರು ದಾರಿಯಲ್ಲಿ ಒಂದು ಗಂಟೆ ನೆಡೆದಮೇಲೆ ನಾವು ಬೆಟ್ಟದ ತುದಿ ತಲುಪಿದ್ದೇವೆ ಅನ್ನಿಸತೊಡಗಿತು. ಇಲ್ಲಿಂದ ಮುಂದೆ ದಾರಿ ಸಣ್ಣದಾಗಿ ಇಳಿಯತೊಡಗಿದಾಗ ಬಲಕ್ಕೆ ಕಣಿವೆಯ ಕಡೆಗೆ ಇಳಿಯುವ ಕಾಲುದಾರಿಯನ್ನು ಹುಡುಕುತ್ತ ಮುಂದೆ ನೆಡೆದೆವು. ಒಂದು ಕಡೆ ಮರದ ಬಡ್ಡೆಯೊಂದಕ್ಕೆ ಮಚ್ಚಿನಿಂದ ಹೊಡೆದು ಗುರುತು ಮಾಡಲಾಗಿತ್ತು. ಇದೇ ಕಣಿವೆಗೆ ಇಳಿಯುವ ದಾರಿಯೆಂದು ಜಗದೀಶ ಹೇಳಿದ. ನಾವು ಗಮನಕೊಟ್ಟು ಹುಡುಕಿಕೊಂಡು ಬರದಿದ್ದಲ್ಲಿ ಈ ಕಾಲ್ದಾರಿಯನ್ನು ಗುರುತಿಸಲು ಸಾಧ್ಯವೇ ಇರಲಿಲ್ಲ. ಈ ಕಾಲ್ದಾರಿಯನ್ನು ಗುರುತಿಸದೆ ಮುಂದೆ ಆರೇಳು ಕೀಲೋ ಮೀಟರಿನಷ್ಟು ಮುಂದೆ ನೆಡೆದರೆ ಕೋಡಿಗದ್ದೆಯೆಂಬ ಊರು ಸಿಗುತ್ತದೆ. ಅಲ್ಲಿಂದ ಸಿದ್ದಾಪುರ-ಕುಮಟ ರಸ್ತೆಯನ್ನು ಸೇರಬಹುದು. ಗುಡ್ಡವನ್ನು ಏರುತ್ತಿದ್ದಂತೆ ಕಾಡು ದಟ್ಟವಾಗತೊಡಗಿತ್ತು. ಈಗ ನಾವುಗಳು ಇಳಿಯುತ್ತಿದ್ದ ದಾರಿಯಂತೂ ಬಹಳ ಕಡಿದಾಗಿದ್ದು ಜಾರುತಿತ್ತು. ಇಲ್ಲಿ ಸೂರ್ಯನ ಬೆಳಕು ನೆಲಮುಟ್ಟುವುದು ಕಷ್ಟವೆನ್ನಿಸುವಷ್ಟು ಕಾಡು ದಟ್ಟವಾಗಿತ್ತು. ಇಲ್ಲಿ ಹೆಚ್ಚಾಗಿ ರಬ್ಬರ್ ಮರಗಳು ಕಂಡವು. ಈ ದಾರಿಯಲ್ಲಿ ಜನ ತಿರುಗಾಡದ ಕಾರಣ ಬಹಳ ಗಿಡ ಬಳ್ಳಿಗಳು ದಾರಿಗೆ ಅಡ್ಡವಾಗಿ ಬೆಳೆದಿದ್ದವು. ಎಲ್ಲೂ ನಿಲ್ಲದೆ ಸತತವಾಗಿ ಅರ್ಧಗಂಟೆ ಇಳಿದಮೇಲೆ ನಾವು ಕಣಿವೆಯನ್ನು ಸೇರಿದೆವು.
ಮಹದೇವ ನಾಯಕರ ಮನೆಯಿಂದ ಹೊರಟು ಕಣಿವೆ ಸೇರಲು ನಮಗೆ ಸುಮಾರು ಎರಡು ಗಂಟೆಗಳೇ ಹಿಡಿದಿದ್ದವು. ಕೆಲಕಾಲ ಹರಿಯುತ್ತಿದ್ದ ನೀರಿನಲ್ಲಿ ಕಾಲು ಮುಳುಗಿಸಿಕೊಂಡು ಕೂತೆವು. ಸಮಯ ಆಗಲೇ ಮಧ್ಯಾಹ್ನ 1.30 ಆಗಿತ್ತು. ಮಹದೇವ ನಾಯಕರು ಕಣಿವೆಗೆ ಇಳಿದಮೇಲೆ ಜಲಪಾತ ತಲುಪತು ಸುಮಾರು ಒಂದು ಗಂಟೆಯಷ್ಟು ನೆಡೆಯಬೇಕು ಎಂದಿದ್ದರು. ನಾವು ಹೋಗುತ್ತಿದ್ದ ಗತಿಯಲ್ಲಿ ನಮಗೆ ಕನಿಷ್ಟ ಒಂದೂವರೆ ಗಂಟೆಗಳಾದರೂ ಬೇಕಿತ್ತು. 3 ಗಂಟೆಗೆ ಸರಿಯಾಗಿ ಜಲಪಾತ ತಲುಪಿದರೂ ಮತ್ತೆ ವಾಪಸ್ಸು ಮಹದೇವ ನಾಯಕರ ಮನೆ ತಲುಪಲು ನಾಲ್ಕು ಗಂಟೆಗಳೇ ಬೇಕು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ತಿನ್ನಲು ಬೇಕಾದ್ದನ್ನು ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಗಾಡಿಯಲ್ಲಿಯೇ ಬಿಟ್ಟು ಬಂದಿದ್ದರಿಂದ, ನಾವುಗಳು ಯಾವುದೇ ಕಾರಣಕ್ಕೂ ಕಾಡಿನಲ್ಲಿ ರಾತ್ರಿ ಕಳೆಯುವ ಸ್ಥಿತಿಯಲ್ಲಿ ಇರಲಿಲ್ಲ.
ಅಲ್ಲೊಂದು ಇಲ್ಲೊಂದು ಫೋಟೊಗಳನ್ನು ತೆಗೆಯುತ್ತಿದ್ದರೂ ಸರಸರನೆ ಹೆಜ್ಜೆಹಾಕತೊಡಗಿದೆವು. ದಾರಿಯಲ್ಲಿ ಬಹಳಷ್ಟು ಹಾವಿನ ಪೊರೆಗಳು ನೋಡಲು ಸಿಕ್ಕಿದವು. ಹರೀಶ ಮತ್ತು ಗಿರೀಶರ ನಕ್ಷತ್ರ ಚೆನ್ನಗಿದ್ದಿದ್ದರಿಂದ ಅವರಿಗೆ ಜೀವಂತ ಹಾವೆ ಕಾಣಿಸಿತು. ಮಳೆಗಾಲ ಮುಗಿದಿದ್ದರಿಂದ ನೀರಿನ ಹರಿವು ಕಡಿಮೆಯಾಗಿತ್ತು. ಈ ಹೊಳೆಯಲ್ಲಿ ಬಹಳ ರಭಸದಿಂದ ನೀರು ಹರಿಯುವುದರಿಂದ ದಡಗಳಲ್ಲಾಗಲಿ ಇಲ್ಲವೆ ಹೊಳೆಯಲ್ಲಾಗಲಿ ಸ್ವಲ್ಪವೂ ಮಣ್ಣು ಇರದೆ ಶುಭ್ರವಾಗಿದೆ. ಹೊಳೆಯ ದಡದಲ್ಲಿ ಬರೀ ಬಂಡೆಗಳೇ ಇವೆ. ಒಂದು ಬಂಡೆಯಿಂದ ಇನ್ನೋಂದು ಬಂಡೆಗೆ ನೆಗೆಯುತ್ತಾ, ಎಡ ದಂಡೆಯಲ್ಲಿ ಮುಂದೆ ಹೋಗಲು ಸಾಧ್ಯವೆ ಇಲ್ಲ ಎಂದಾಗ ಹೊಳೆದಾಟಿ ಬಲ ದಂಡೆಗೆ ಹೋಗಿ ಅಲ್ಲಿಂದ ಮುಂದೆ ನೆಡೆಯ ತೊಡಗಿದೆವು. ಹೀಗೆ ಎಡದಂಡೆಯಿಂದ ಬಲದಂಡೆಗೆ ಮತ್ತು ಬಲದಿಂದ ಎಡಕ್ಕೆ ದಾಟಿಕೊಳ್ಳುತ್ತಾ ಮುಂದುವರೆದೆವು. ಒಂದೇ ಒಂದು ಮಳೆ ಬಂದರೂ ಇಲ್ಲಿ ನೆಡೆಯುವುದು ದುಸ್ತರ. ಹೊಳೆಬಿಟ್ಟು ಸ್ವಲ್ಪ ಮೇಲೆ ಹತ್ತಿದರೂ ಜೀವ ತಿನ್ನುವಷ್ಟು ಜಿಗಣೆಗಳಿರುತ್ತವೆ. ಮಳೆಗಾಲದಲ್ಲಿ ಈ ಜಾಗಕ್ಕೆ ಬರುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಈ ಮುಂಚೆ ಜಗದೀಶ ಏಪ್ರಿಲ್ ತಿಂಗಳಿನಲ್ಲಿ ಇಲ್ಲಿಗೆ ಬಂದಿದ್ದಾಗ ಒಂದೇ ಒಂದು ಅಡ್ಡಮಳೆ ಹೊಡೆದಿದ್ದರಿಂದ ಈ ಕಣಿವೆಯವರೆಗೆ ಬಂದು ಇಲ್ಲಿಂದ ಮುಂದೆ ಹೋಗಲಾರದೆ ಹಿಂತಿರುಗಿದ್ದರು.
pic: GPS ನಿಂದ ಹಿಡಿದ ಚಾರಣದ ಜಾಡು
ಈಗಾಗಲೆ ಹೊಳೆಯ ದಡದಲ್ಲಿ ಒಂದು ಗಂಟೆ ಸತತವಾಗಿ ನೆಡೆದಿದ್ದರೂ ಜಲಪಾತದ ಸುಳಿವು ಸಿಕ್ಕಿರಲಿಲ್ಲ. ನಮ್ಮ ಲವ್ಸ್ಯೂ ’ಋಷಿ ಮೂಲ ನದಿ ಮೂಲ ಹುಡುಕಬಾರದು ಅದುಕ್ಕೆ ನಮಗೆ ಈ ಜಲಪಾತ ಸಿಗ್ತಿಲ್ಲ ಮೂರು ಗಂಟೆ ಒಳಗೆ ಇದು ಸಿಕ್ಕಲಿಲ್ಲಂದ್ರೆ ವಾಪಸ್ ಹೊಗೋಣ’ ಎಂದ. ಚಂದ್ರ, ಜಗದೀಶ, ಗಿರೀಶ ಎಲ್ಲರಿಗಿಂತ ಮುಂದಿದ್ದರೆ... ನಾನು ಹರೀಶ ಮತ್ತು ಲವ್ಸೂ ರಾಘವೇಂದ್ರವೇಂದ್ರ ಮಧ್ಯದಲ್ಲಿ ಇದ್ದೆವು. ವರುಣ್ ಸುಸ್ತಾಗಿದ್ದ ಅವನ ಗತಿ ಇಳಿದಿತ್ತು ಅವನ ಜೊತೆಗೆ ರಂಗ ಇದ್ದ. ಸಮಯ 3 ಗಂಟೆಯಾಗಿತ್ತು, ಹೊಳೆ ಬಹಳ ತಿರುವುವುಗಳನ್ನ ತಗೊಂಡಿತ್ತು... ಎದುರಿಗೆ ಕಾಣುತ್ತಿರುವ ತಿರುವೇ ಕೊನೆಯದು ಜಲಪಾತ ಸಿಗದಿದ್ದರೆ ವಾಪಸ್ ಹೊರಡೋಣ ಅಂದುಕೊಂಡು ಆ ತಿರುವು ದಾಟಿದರೆ ಅಲ್ಲೇ ಇತ್ತು ಮುಕ್ತಿ ಹೊಳೆ ಜಲಪಾತ. ಮುಕ್ತಿಹೊಳೆ ಜಲಪಾತ ಮೂರು ಹಂತದಲ್ಲಿ ಕೆಳಗಿಳಿಯುತ್ತದೆ. ಮೊದಲನೆಯದು ಚೆನ್ನಾಗಿ ಕಾಣುತ್ತದೆ, ಎರಡನೆಯದು ಅಷ್ಟು ಚೆನ್ನಾಗಿ ಕಾಣುವುದಿಲ್ಲ. ಕೊನೆಯ ಮತ್ತು ಮೂರನೆಯ ಹಂತವೇ ಉಳಿದವುಗಳಿಗಿಂತ ಜೋರಾಗಿ ಬೀಳುತ್ತದೆ. ಮುಕ್ತಿಹೊಳೆ ಜಲಪಾತದಿಂದ ಧುಮುಕುತಿದ್ದ ನೀರು ಹಾಲಿನಷ್ಟು ಶುಭ್ರವಾಗಿ ಕಾಣುತಿತ್ತು. ನೀರು ಧುಮುಕಿ ಕೆಳಗೆ ಒಂದು ಸಣ್ಣ ಹೊಂಡ ನಿರ್ಮಾಣವಾಗಿದೆ.
ಸ್ವಲ್ಪ ಹೊತ್ತು ಕೂತು ಜಲಪಾತವನ್ನು ನೋಡಿದೆವು. ಕೆಲವರು ಬಟ್ಟೆ ಕಳಚಿ ನೀರಿಗೆ ಇಳಿದರು. ಉಳಿದವರು ಊಟಕ್ಕ ಕೈ ಹಚ್ಚಿದರು. ಬೆಂಗಳೂರಿನಿಂದ ತಂದಿದ್ದ ಚಪಾತಿ, ಹೊಳಿಗೆ, ಚಕ್ಕುಲಿ, ಕೋಡುಬಳೆಗಳ ಸೇವನೆ ಆಯಿತು. ಸಮಯ ಆಗಲೆ ನಾಲ್ಕು ಗಂಟೆಯ ಸಮೀಪ ಬಂದಿದ್ದರಿಂದ ಹೊರಡಲು ತಯಾರಾದೆವು. ಸುಮಾರು ನಾಲ್ಕು ಗಂಟೆಗಳಷ್ಟು ಕಾಲ ನೆಡೆದು ಬಂದಿದ್ದರೂ ಜಲಪಾತದ ಬಳಿ ಹೆಚ್ಚು ಸಮಯ ಕಳೆಯಲಾಗದಿದ್ದುದ್ದಕ್ಕೆ ಎಲ್ಲರಿಗೂ ಬೆಜಾರಿತ್ತು. ಮರಳಿ ಮಹದೇವ ನಾಯಕರ ಮನೆ ತಲುಪಲು ಮತ್ತೆ ಸುಮಾರು ನಾಲ್ಕು ಗಂಟೆಗಳಷ್ಟು ನೆಡೆಯಬೇಕು ಎನ್ನುವುದು ಎಲ್ಲರಿಗೂ ತಿಳಿದಿತ್ತು. ಕಣಿವೆಯಿಂದ ಬೆಟ್ಟದ ತುದಿಗೆ ಹತ್ತಬೇಕಿದ್ದ ಏರಿನ ಬಗ್ಗೆ ಎಲ್ಲರಿಗೂ ಹೆದರಿಕೆ ಇತ್ತು. ಕತ್ತಲಾಗುವುದಕ್ಕೆ ಮುಂಚೆ ಈ ಏರುದಾರಿಯನ್ನು ದಾಟಬೇಕೆಂದುಕೊಂಡಿದ್ದೆವು. ನಾನು, ಚಂದ್ರ, ರಾಘವೇಂದ್ರ ಹಾಗೂ ಗಿರೀಶ ಸರಸರನೇ ಹೆಜ್ಜೆ ಹಾಕತೊಡಗಿದೆವು. ಲವ್ಸೂ ರಾಘವೇಂದ್ರ ’ವೆಂಕು ಪೆಣಂಬೂರಿಗೆ’ ಹೋದ ಹಾಗೆ ತಲೆ ಬಗ್ಗಿಸಿಕೊಂಡು ಮುಂದೆ ಹೋಗುತಿದ್ದ. ಹೋಗುವಾಗ ಒಂದೂವರೆ ಗಂಟೆ ತೆಗೆದುಕೊಂಡಿದ್ದ ದಾರಿಯನ್ನು ಒಂದು ಗಂಟೆಯಲ್ಲಿ ಪೂರೈಸಿದೆವು. 5 ಗಂಟೆಯ ಹೊತ್ತಿಗೆ ನಾವು ಬೆಟ್ಟದಿಂದ ಇಳಿದು ನದಿ ದಡ ಸೇರಿದ್ದ ಜಾಗ ತಲುಪಿದೆವು. ಇಳಿಯುವಾಗಲೆ ಮತ್ತೆ ಗುರುತಿಸಲು ಸುಲಭವಾಗುವಂತೆ ನೀರಿನ ಬಾಟಲಿಗಳನ್ನು ಕಟ್ಟಿದ್ದೆವು. ಹೀಗೆ ಕಟ್ಟಿದ್ದು ಬಹಳ ಸಹಾಯ ಆಯಿತು. ಅವುಗಳಿಲ್ಲದಿದ್ದರೆ ಮತ್ತೆ ಮೇಲೆ ಹತ್ತುವ ದಾರಿ ಗುರುತು ಹಿಡಿಯುವುದು ಕಷ್ಟವಿತ್ತು.
ಹಿಂದಿದ್ದ ಗುಂಪಿನಲ್ಲಿ ವರುಣ್ ಬಹಳ ಸುಸ್ತಾಗಿದ್ದ. ಅವರು ನಮ್ಮನ್ನು ಬಂದು ಸೇರುವ ಹೊತ್ತಿಗೆ 5.30 ಆಗಿತ್ತು. ನೇತುಹಾಕಿದ್ದ ಬಾಟಲಿಗಳನ್ನು ಬಿಚ್ಚಿಕೊಂಡು ನೀರು ತುಂಬಿಸಿಕೊಂಡೆವು. ಇಲ್ಲಿಯವರೆಗೆ ನದಿಯದಂಡೆಯಲ್ಲಿಯೇ ನೆಡೆಯುತ್ತಿರುವುದರಿಂದ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೊಗುವ ಅಗತ್ಯ ಇರಲಿಲ್ಲ. ಸಂಜೆಗತ್ತಲು ಆವರಿಸುತಿತ್ತು ಪೂರ್ತಿ ಕತ್ತಲಾಗುವ ಹೊತ್ತಿಗೆ ಬೆಟ್ಟದ ತುದಿ ತಲುಪಬೇಕಿತ್ತು. ಇಲ್ಲಿಂದ ಮುಂದೆ ತಂಡ ಹೊಡೆದು ಹೋಗದೆ ಒಟ್ಟಿಗೆ ನೆಡೆಯತೊಡಗಿದೆವು. UP ಜಾಸ್ತಿ ಇದ್ದಿದ್ದರಿಂದ ಕೆಲ ಹೆಜ್ಜೆ ಇಟ್ಟೊಡನೆ ಸುಸ್ತಾಗಿ ನಿಂತೆವು. ಏರು ದಾರಿಯಲ್ಲಿ ಸ್ವಲ್ಪ ದೂರ ನೆಡೆಯುವುದು ನಿಲ್ಲುವುದು ಮಾಡುತ್ತಾ ನೆಡೆಯತೊಡಗಿದೆವು. ಅಂದುಕೊಂಡಂತೆ ಪೂರ್ತಿ ಕತ್ತಲಾಗುವದೊರೊಳಗೆ ಮೇಲೆ ಹತ್ತಿದ್ದೆವು. ಇಲ್ಲಿಂದ ಮುಂದೆ ಇಳಿಜಾರು. ಟಾರ್ಚ್ ಗಳನ್ನು ಹೊತ್ತಿಸಿಕೊಂಡು ನೆಡೆಯತೊಡಗಿದೆವು. ಸತತವಾಗಿ ಒಂದೂವರೆಗಂಟೆ ನೆಡೆದ ಮೇಲೆ ಸುಮಾರು ಎಂಟುಗಂಟೆಯ ಸುಮಾರಿಗೆ ಮಹದೇವ ನಾಯಕರ ಮನೆ ತಲುಪಿದೆವು.
ವರುಣನ ಕಾಲಿಗೆ ಬಹಳಷ್ಟು ಜಿಗಣೆಗಳು ಹತ್ತಿದ್ದವು. ಅವನು ಎಷ್ಟು ಸುಸ್ತಾಗಿದ್ದನೆಂದರೆ ಕೈ ಹಾಕಿ ಜಿಗಣೆಗಳನ್ನೂ ಕಿತ್ತು ಕೊಂಡಿರಲಿಲ್ಲ. ಉಳಿದವರೂ ಜಿಗಣೆಗಳನ್ನು ಹುಡುಕಿ ಕಿತ್ತುಕೊಂಡೆವು. ಮಹದೇವ ನಾಯಕರ ಮನೆಯ ಬಳಿಯೇ ಒಂದು ಸಣ್ಣ ಕಾಲುವೆ ಇದೆ. ಅಲ್ಲಿಗೆ ಹೋಗಿ ಕೈ ಕಾಲು ತೊಳೆದುಕೊಂಡು ಬಂದು ಜಗುಲಿಯಲ್ಲಿ ಕೂತೆವು. ಮುಕ್ತಿ ಹೊಳೆಗೆ ಹೋಗುವ ಮೊದಲೆ ರಾತ್ರಿ ಊಟಕ್ಕೆ ಮಹದೇವ ನಾಯಕ ಮನೆಯಲ್ಲಿ ಹೇಳಿ ಹೋಗಿದ್ದೆವು. ಬಿಸಿ ಬಿಸಿ ಅನ್ನ, ತೆಂಗಿನ ಕಾಯಿನ ಚಟ್ನಿ ಜೊತೆಗೆ ಮಜ್ಜಿಗೆ ಹುಳಿ ಬೆರೆಸಿಕೊಂಡು ಎರಡು ಪಾತ್ರೆ ಅನ್ನ ಮುಗಿಸಿದೆವು. ಆವರ ಮನೆಯ ಜಗುಲಿಯಲ್ಲಿ ರಾತ್ರಿ ಮಲಗಿದ್ದು ಬೆಳಗೆದ್ದು ಅವರು ಕೊಟ್ಟ ಚಹ ಕುಡಿದು ಅವರ ಸಹಾಯಕ್ಕೆ ವಂದಿಸಿ ಹೊನ್ನಾವರದ ಕಡೆಗೆ ಹೊರಟೆವು.
ಹೊನ್ನಾವರದಲ್ಲಿ ತಿಂಡಿ ತಿಂದು ಶರಾವತಿ ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ಹೊರಟೆವು. ಒಂದು ’ಡಿಂಗಿ’ ಬಾಡಿಗೆಗೆ ಹಿಡಿದು ಸುಮಾರು ಎರಡು ಗಂಟೆಗಳಕಾಲ ಸುತ್ತಿದೆವು. ನಾನು, ರಾಘವೇಂದ್ರ ಮತ್ತು ದೋಣಿ ಚಲಾಯಿಸುವುದನ್ನೂ ಒಂದು ಕೈ ನೋಡಿದೆವು. ಅಲ್ಲಿಂದ ಅಪ್ಸರ ಕೊಂಡಕ್ಕೆ ಹೋಗಿ ಬೀಚಿನಲ್ಲಿ ಆಟವಾಡಿ ಕೊಂಡದಲ್ಲಿ ಮಿಂದು ಊಟಕ್ಕೆ ಹೊರಟೆವು. ಕಾಮತ ಹೋಟೆಲಿನಲ್ಲಿ ಊಟ ಮುಗಿಸಿ 4 ಗಂಟೆ ಸುಮಾರಿಗೆ ಬೆಂಗಳೂರಿನ ದಾರಿ ಹಿಡಿದೆವು.
Subscribe to:
Post Comments (Atom)
7 comments:
ಮಗ, ಗೇರುಸೊಪ್ಪ ಜಲಪಾತ ನೀರನ್ನ ಚೆನ್ನಾಗೆ ಬಳಸುತ್ತಾ ಇದ್ದೀರಾ... ;-)
ಸ್ಥಳಿಯರ ಸಹಾಯವಿಲ್ಲದೆ ನೀವೇ ಹೋಗಿ ಬಂದಿದ್ದಿರಾ ಅಂದ್ರೆ ಗ್ರೇಟ್ ಕಣೋ.....ಅಲ್ಲಿ ಸಕತ್ ಕಾಂಫುಸಿಂಗ್
ಹೋದ ಸಲ ನಾವು ಹೋದಾಗ, ಅದೇ ಊರಿನವನು ಒಬ್ಬ ಜೊತೆಗೆ ಬಂದಿದ್ದ. ಅದು ಒಳ್ಳೆ ಮಳೆಗಾಲ ಬೇರೆ, ಕಾಲ್ದಾರಿಗಳು ಕಾಣದಂತೆ ಗಿಡಗಳು ದಟ್ಟವಾಗಿ ಬೆಳದಿದ್ದವು. ಅವನು ಮಚ್ಚಿನಿಂದ ಗಿಡಗಳನ್ನು ಕಾತರಿಸಿ ದಾರಿ ಮಾಡುತಿದ್ದ. ಒಂದು ೧೦ ನಿಮಿಷ ನಡೆದ ಮೇಲೆ, ಈ ದಾರಿ ಅಲ್ಲ ಅಂತ ಮತ್ತೆ ಬೇರೆ ದಿಕ್ಕಿನಲ್ಲಿ ಹೋಗುತಿದ್ದ. ಹುಲಿ ಬೇರೆ ಇದೆ ಅಂತ ಬಯಪಡುಸುತಿದ್ದ ;). ಹೊಳೆ ಸಿಕಿತ್ತು ಅಂತ ಅನ್ಕೊಂಡ್ರೆ...ಮತ್ತೆ ಅಲ್ಲಿಂದ ಒಂದು ತಾಸು ನಡಿಬೇಕು ಅಂದ. ಒಂದು ಕಡೆ ಜೋರಾದ ಮಳೆ, ಇನ್ನೊಂಡೆದೆ ಜಿಗಣೆ, ಜಾರಿದರೆ ಹೊಳೆಯಲ್ಲಿ ಕೊಚ್ಹಿ ಹೋಗುವ ಬೀತಿ.
ಒಂದುವರೆ ಗಂಟೆ ನಡೆದ ನಂತರ ಜಲಪಾತದ ಶಬ್ದ ಕೆಳುಸುತಿತ್ತು....ಆದರೆ ನಾವು ನಿಂತಿದ್ದ ಜಾಗದಿಂದ ಅಲ್ಲಿಗೆ ಹೋಗಲ ಹೊಳೆಗೆ ಇಳಿಯಲೇ ಬೇಕಿತ್ತು. ಹೋಗೋಣ ಮಗ ಅಂದ ಜಗ್ಗ.....ಅದರ ಬೇರೆ ಅವ್ರು ಆಗಲೇ ಟುಸ್ಸ್ ಆಗಿದ್ರು. ಕೆಲವರು ಫಾಲ್ಸ್ ಬೇಡ...ಆದಸ್ಟು ಬೇಗ ಹೋಗಿ ನಾಯಕರ ಮನೆ ಸೇರ್ಕೊಲ್ಬೇಕು ಅಂತ ಇದ್ರೂ.
ಕೊನೆಗೆ ಮುಕ್ತಿ ಹೊಳೆ ನೋಡಲೇ ಇಲ್ಲಾ....ಆದರ ಆ ಚಾರಣದ ನೆನಪುಗಳು ಸೂಪೆರು....
hey, good one. thank u.
ನಿಮ್ಮ ಪ್ರಯಾಣದ ಅನುಭವ ಸುಂದರವಾಗಿ ಮೂಡಿಬಂದಿದೆ..
yake istondu details kodteera?! sik sikkoru hogi jaga haL maDbiDtaare:( asakati iroru thave hudkkond hogbeku,spoon feeding madbardu:)
ಈ ಚಾರಣದ ವಿವರಣೆಯೂ ತುಂಬಾ ಚೆನ್ನಾಗಿದೆ.
ಅಂದ ಹಾಗೆ ಫೆಬ್-2009 ನಲ್ಲಿ ನಿಮಗೆ ಮೊದುವೆ ಆಗಿ ಹೋಯಿತಾ?
ಯಾಕಂದ್ರೆ ವರ್ಷ ಕಳಿತಾ ಬಂದರೂ ಒಂದೂ ಹೊಸ ಕಾಡು ಹರಟೆಯೂ ಇಲ್ಲ? :-)
ಇಂತಿ,
ಶ್ರೀನಿವಾಸ
@ Srinidhi --> Point taken...
@ Srinivas --> Feb-09 ನಲ್ಲಿ ಮದುವೆ ನಿಶ್ಚಯ ಆಯ್ತು... ಅಲ್ಲಿಂದ ಏನೂ ಬರಿಯೋಕೆ ಆಗಿಲ್ಲ... ಆದರೆ ಈ ಸಮಯದಲ್ಲಿ ಬ್ರಮ್ಹಗಿರಿ, ಚೆಂಬರ (ಕೇರಳ), ತಡಿ ಯೆಂಡ ಮೊಳೆ ಮತ್ತು ಇನ್ನೊದು ಬಾರಿ ಸರಿ ದಾರಿಯಲ್ಲಿ ಕೊಡಚಾದ್ರಿ ಚಾರಣ ಮಾಡಿದ್ವಿ... ಆದರೆ ಬರಿಯೋಕೆ ಸಮಯ ಸಿಗ್ತಿಲ್ಲ...
ಒಳ್ಳೇ ಸಾಹಸ ಮಾಡಿದ್ದೀರಿ.
ಅಂದಹಾಗೆ, ಡಿಂಗಿ ಅಂದರೆ ಏನು?
Post a Comment